Site icon Vistara News

Dandruff control | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ಈ ಆಹಾರಗಳನ್ನು ಸೇವಿಸಿ!

dandruff control

ಚಳಿಗಾಲದಲ್ಲಿ ಕಾಡುವ ಬಹುದೊಡ್ಡ ಕೂದಲ ಸಮಸ್ಯೆ ಎಂದರೆ ತಲೆಹೊಟ್ಟು ಅಥವಾ ಡ್ಯಾಂಡ್ರಫ್‌. ನೆತ್ತಿ ಮುಟ್ಟಿದರೆ ಸಾಕು, ಒಣ, ತುರಿಕೆಯುಕ್ತ, ಜಿಡ್ಡುಜಿಡ್ಡಾದ, ತುರಿಸಿದರೆ, ರಕ್ತ ಒಸರಿಬಿಡುವಂಥ ತಲೆಹೊಟ್ಟಿನ ಸಮಸ್ಯೆ ಚಳಿಗಾಲ ಬರುತ್ತಿದ್ದ ಹಾಗೆ ದಿಢೀರನೆ ವಕ್ಕರಿಸುತ್ತದೆ. ಇಷ್ಟರವರೆಗೆ ಯಾವ ಸಮಸ್ಯೆಯೂ ಇಲ್ಲದೆ, ಗಾಳಿಯಲ್ಲಿ ನಯವಾಗಿ ಹಾರುತ್ತಿದ್ದ ಕೂದಲು ಚಳಿಗಾಲ ಬಂದ ಕೂಡಲೇ ಕರೆಂಟ್‌ ಹೊಡೆದಂತಾಗಿ, ಕಳೆಯೇ ಇಲ್ಲದಂತೆ ಕಾಣಲಾರಂಭಿಸುತ್ತದೆ. ಬಿಳಿಯಾದ ಒಣಗಿದ ಪುಡಿ ಪುಡಿ ಚರ್ಮ ನೆತ್ತಿಯಿಂದ ಬೀಳಲಾರಂಭಿಸುತ್ತದೆ. ಈಗಷ್ಟೇ ಹೊರಗೆಲ್ಲೋ ಹೊರಟು ನಿಂತು ಹೊಸ ಅಂಗಿ ಹಾಕಿ ಬಂದು ಹೆಗಲು ನೋಡಿದರೆ, ಬಿಳಿ ಪುಡಿಯು ನಿಮ್ಮ ಮೂಡನ್ನೇ ಹಾಳು ಮಾಡಬಹುದು. ಮಾರುಕಟ್ಟೆಯಲ್ಲಿ ಸಿಗುವ ಆಂಟಿ ಡ್ಯಾಂಡ್ರಫ್‌ ಶಾಂಪೂ ತಂದು ಸ್ನಾನ ಮಾಡಿದಾಗ ಒಮ್ಮೆ ನೆಮ್ಮದಿಯೆನಿಸಬಹುದು. ಆದರೆ ಪರಿಸ್ಥಿತಿ ಮತ್ತೆ ಹಾಗೇ ಮುಂದುವರಿಯಬಹುದು. ಹಾಗಾದರೆ ಇದರಿಂದ ಮುಕ್ತಿ ಹೇಗೆ? ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಂಡರೆ, ಇದಕ್ಕೆ ಪರಿಹಾರ ಸಿಗಬಹುದೇ ನೋಡೋಣ.

೧. ಸೂರ್ಯಕಾಂತಿ ಬೀಜ: ತಲೆಹೊಟ್ಟಿನ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಆಹಾರ ಎಂದರೆ ಸೂರ್ಯಕಾಂತಿ ಬೀಜ. ನಿತ್ಯದ ಆಹಾರಕ್ರಮದಲ್ಲಿ ಸೂರ್ಯಕಾಂತಿ ಬೀಜಗಳನ್ನು ಉಪಯೋಗಿಸುತ್ತಾ ಬಂದಲ್ಲಿ ಖಂಡಿವಾಗಿಯೂ ಕೆಲವೇ ವಾರಗಳಲ್ಲಿ ಫಲ ಕಾಣಿಸಬಹುದು. ಇದು ಕೂದಲ ಬುಡಕ್ಕೆ ಬೇಕಾಗುವ ಶಕ್ತಿಯನ್ನು ನೀಡುವುದಲ್ಲದೆ, ತಲೆಹೊಟ್ಟಿನಿಂದ ಮುಕ್ತಿ ನೀಡುತ್ತದೆ. ಇದರಲ್ಲಿ ಝಿಂಕ್‌ ಹಾಗೂ ವಿಟಮಿನ್‌ ಬಿ೬ ಹೇರಳವಾಗಿದ್ದು, ಇದು ಸೆಬಮ್‌ ಉತ್ಪತ್ತಿಯನ್ನೂ ಸಮತೋಲನದಲ್ಲಿಡುತ್ತದೆ. ಇಷ್ಟೇ ಅಲ್ಲದೆ, ಜೀರ್ಣಕ್ರಿಯೆಯನ್ನು ವೃದ್ಧಿಸುವ ಕೆಲಸವನ್ನೂ ಮಾಡುತ್ತದೆ.

೨. ಶುಂಠಿ: ಶುಂಠಿಯನ್ನು ದಿನನಿತ್ಯ ಬಳಸುವುದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ, ತಲೆಯಲ್ಲಿ ಹೊಟ್ಟುಗಳೇಳದಂತೆ ಇದು ತಡೆಯುವಲ್ಲಿ ಸಹಾಯ ಮಾಡುತ್ತದೆ. ಹೊಟ್ಟೆಯ ಸಂಬಂಧೀ ಸಮಸ್ಯೆಗಳನ್ನು ಇದು ಸರಿಪಡಿಸುವುದರಿಂದ ದುರ್ಬಲ ಪಚನಕ್ರಿಯೆಯನ್ನ ಹೊಂದಿರುವ ಕಾರಣದಿಂದ ಹೊಟ್ಟಿನ ಸಮಸ್ಯೆಗೀಡಾಗುವ ಮಂದಿಯೂ ಪ್ರಯೋಜನಪಡೆಯುತ್ತಾರೆ. ಬ್ಯಾಕ್ಟೀರಿಯಾ ಹಾಗೂ ಫಂಗಸ್‌ ಸಮಸ್ಯೆ ಹೊಂದಿರುವ ಮಂದಿಗೂ ಇದು ಒಳ್ಳೆಯ ಮನೆಮದ್ದು.

೩. ಪಪ್ಪಾಯಿ: ಪಪ್ಪಾಯಿಯಲ್ಲಿ ಪಾಪೈನ್‌ ಎಂಬ ಎನ್‌ಝೈಮ್‌ ಇದ್ದು, ಅದು ತಲೆಹೊಟ್ಟಿಗೆ ಕಾರಣವಾಗುವ ತಲೆಕೂದಲ ಬುಡದಲ್ಲಿರುವ ಹೆಚ್ಚುವರಿ ಜಿಡ್ಡು ಹಾಗೂ ರಾಸಾಯನಿಕ ಉಳಿಯುವುದನ್ನು ತಪ್ಪಿಸುತ್ತದೆ. ಆಗಾಗ ತಲೆಹೊಟ್ಟಿನ ಸಮಸ್ಯೆ ಇದ್ದವರು, ಖಂಡಿತವಾಗಿ ಪಪ್ಪಾಯಿಯನ್ನು ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಿ.

೪. ಬೆಳ್ಳುಳ್ಳಿ: ಅಲಿಸಿನ್‌ ಎಂಬ ನೈಸರ್ಗಿಕ ಆಂಟಿಫಂಗಲ್‌ ರಾಸಾಯನಿಕವೊಂದು ಬೆಳ್ಳುಳ್ಳಿಯಲ್ಲಿ ಹೇರಳವಾಗಿರುವುದರಿಂದ ಇದು ತಲೆಹೊಟ್ಟಿಗೆ ಉತ್ತಮ ಪರಿಹಾರ ನೀಡುತ್ತದೆ. ಪ್ರತಿನಿತ್ಯ ಬೆಳ್ಳುಳ್ಳಿ ತಿನ್ನುವುದರಿಂದ ತಲೆಹೊಟ್ಟಿನ ಸಮಸ್ಯೆ ಖಂಡಿತಾ ಬರುವುದಿಲ್ಲ. ಮೂರ್ನಾಲ್ಕು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದರ ರಸವನ್ನು ತಲೆಯ ಬುಡಕ್ಕೆ ಹಚ್ಚಿ ೧೫ ನಿಮಿಷ ಬಿಟ್ಟು ತೊಳೆದರೆ ತಲೆಹೊಟ್ಟು ಇಲ್ಲವಾಗುತ್ತದೆ.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

೫. ಕಡಲೆಕಾಳು: ಕಡಲೆಕಾಳು (ಚನ್ನಾ) ಹೇರಳವಾಗಿ ಝಿಂಕ್‌ ಹಾಗೂ ವಿಟಮಿನ್‌ ಬಿ೬ನ್ನು ಹೊಂದಿದೆ. ಇವೆರಡು ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣವಾದ್ದರಿಂದ ಕಡಲೆಕಾಳು ಕೂಡಾ ತಲೆಹೊಟ್ಟಿನ ಸಮಸ್ಯೆಯಿದ್ದವರಿಗೆ ಒಳ್ಳೆಯದೇ. ಕೇವಲ ಇದನ್ನು ಸೇವಿಸುವುದರಿಂದ ಮಾತ್ರವಲ್ಲದೆ, ಇದನ್ನು ನೆನೆಹಾಕಿ, ಪೇಸ್ಟ್‌ ಮಾಡಿ ತಲೆಗೆ ಹಚ್ಚಿಕೊಳ್ಳುವುದರಿಂದಲೂ ಪರಿಹಾರ ಕಾಣಬಹುದು. ಕಡ್ಲೆ ಹುಡಿ, ಮೊಸರು ಹಾಗೂ ನೀರನ್ನು ಸೇರಿಸಿ ಮಾಡಿದ ಪೇಸ್ಟನ್ನು ಸಹ ತಲೆಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಬಹುದು.

೬. ಮೊಟ್ಟೆ: ಮೊಟ್ಟೆಯಲ್ಲಿ ಝಿಂಕ್‌ ಹಾಗೂ ಬಯೋಟಿನ್‌ ಸಾಕಷ್ಟಿದೆ. ಹಾಗಾಗಿ ತಲೆಹೊಟ್ಟು ಹಾಗೂ ಕೂದಲ ಸಮಸ್ಯೆಯಿದ್ದವರಿಗೆ ಒಳ್ಳೆಯ ಪರಿಹಾರ ನೀಡುತ್ತದೆ. ಇದು ಸೆಬಮ್ ಉತ್ಪತ್ತಿಯನ್ನು ಸಮತೂಕದಲ್ಲಿರಿಸುವ ಕೆಲಸವನ್ನು ಮಾಡುವುದರಿಂದ ತಲೆಬುಡದಲ್ಲಿ ನೈಸರ್ಗಿಕವಾಗಿ ಇರಬೇಕಾದ ಎಣ್ಣೆಯಂಶವನ್ನು ಹಾಗೆಯೇ ಇರಬಿಡುತ್ತದೆ. ಮೊಟ್ಟೆಯ ಸೇವನೆ ಹಾಗೂ, ತಲೆಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟಿಗೆ ಒಳ್ಳೆಯ ಫಲವನ್ನು ಕಾಣಬಹುದು.

ಅಂದಹಾಗೆ, ಕೇವಲ ಇಷ್ಟೇ ಅಲ್ಲ, ಝಿಂಕ್‌ ಹಾಗೂ ಬಯೋಟಿನ್‌ ಇರುವ ಆಹಾರಗಳೆಲ್ಲವೂ ತಲೆಹೊಟ್ಟಿನ ಸಮಸ್ಯೆಗೆ ಉತ್ತಮ ಹರಿಹಾರ ನೀಡುತ್ತವೆ ಎಂಬುದನ್ನು ನೆನೆಪಿನಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ | Sudden cardiac death | ಮೊದಲೇ ತಿಳಿಯುವುದು, ತಪ್ಪಿಸುವುದು ಹೇಗೆ?

Exit mobile version