Site icon Vistara News

Dark Circle: ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ರಸ್ತೆ, ನಿವಾರಣೆಗೆ ಮಾಡಿ ಈ ಪೋಷಕಾಂಶಗಳ ವ್ಯವಸ್ಥೆ!

dark circle

ಬೆಳಗ್ಗೆ ಎದ್ದು ಕನ್ನಡಿ ಮುಂದೆ ನಿಂತಾಗ, ಕಣ್ಣುಗಳ ಕೆಳಭಾಗ ಊದಿಕೊಂಡಂತಿರುವುದೋ ಅಥವಾ ಕಪ್ಪು ವರ್ತುಲಗಳೋ (Dark Circle) ನಿಮ್ಮನ್ನು ಬಾಧಿಸಿದರೆ, ಅದಕ್ಕೆ ನಿಮ್ಮ ಎಡೆಬಿಡದ ಕೆಲಸದೊತ್ತಡ, ನಿದ್ದೆಗೆಟ್ಟಿರುವುದು ಮಾತ್ರ ಕಾರಣವಲ್ಲ. ನಿಮ್ಮ ದೇಹಕ್ಕೆ ಪೋಷಕಾಂಶಗಳ ಕೊರತೆಯಿದೆ( health tips) ಎಂದೂ ಅರ್ಥ. ಕಣ್ಣುಗಳ ಸುತ್ತಲಿನ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಲು (Dark Circle remedy) ನಾನಾ ಬಗೆಯ ಮನೆಮದ್ದುಗಳನ್ನೋ, ಅಥವಾ ಹೊರಗೆ ಹೋಗುವಾಗ ಅವುಗಳು ಕಾಣದಂತೆ ಮಾಡಲು ಕನ್ಸೀಲರುಗಳಂತಹ ಸೌಂದರ್ಯ ಉತ್ಪನ್ನಗಳ ಮೂಲಕ ಪರಿಹಾರ ಪಡೆಯಲು ನೀವು ಪ್ರಯತ್ನಿಸಬಹುದು. ತಾತ್ಕಾಲಿಕ ಪರಿಹಾರ ನಿಮಗೆ ಇದರಿಂದ ಸಿಕ್ಕರೂ, ದೇಹಕ್ಕೆ ಬೇಕಾದ ಪೋಷಕಾಂಶಗಳ ಪೂರೈಕೆಯಿಂದ ಮಾತ್ರ ನಿಮಗೆ ಇದರಿಂದ ಶಾಶ್ವತ ಪರಿಹಾರ ಸಿಗಬಹುದು. ಹಾಗಾದರೆ ಬನ್ನಿ, ಯಾವೆಲ್ಲ ಪೋಷಕಾಂಶಗಳ (Nutients) ಕೊರತೆಯಾದರೆ ನಿಮ್ಮ ಕಣ್ಣಿನ ಸುತ್ತ ಕಪ್ಪು ವರ್ತುಲಗಳೇಳಬಹುದು, ಏನು ತೆಗೆದುಕೊಂಡರೆ ಕಡಿಮೆಯಾಗಬಹುದು ಎಂಬುದನ್ನು ನೋಡೋಣ.

1. ವಿಟಮಿನ್‌ ಎ: ವಿಟಮಿನ್‌ ಎ ಆಂಟಿ ಏಜಿಂಗ್‌ನಂತೆ ವರ್ತಿಸುತ್ತದೆ. ಚರ್ಮ ಸುಕ್ಕಾಗದಂತೆ, ಕಪ್ಪು ವರ್ತುಲ ಉಂಟಾಗದಂತೆ ಹಾಗೂ ಚರ್ಮದ ಹೊಳಪಿಗೆ ವಿಟಮಿನ್‌ ಎ ಬಹಳ ಮುಖ್ಯ. ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್‌ ಎ ಹೆಚ್ಚು ಪ್ರಮಾಣದಲ್ಲಿದೆ. ಮಾವಿನಹಣ್ಣು, ಕೆಂಪು ಹಾಘೂ ಹಳದಿ ಬಣ್ಣದ ದೊಣ್ಣೆ ಮೆಣಸು, ಪಾಲಕ್‌ ಸೊಪ್ಪು, ಪಪ್ಪಾಯಿ ಸೇರಿದಂತೆ ಹಲವು ಹಣ್ಣು ತರಕಾರಿಗಳ ಸೇವನೆಯ ಮೂಲಕ ವಿಟಮಿನ್‌ ಎ ಪಡೆಯಬಹುದು.

2. ವಿಟಮಿನ್‌ ಸಿ: ವಿಟಮಿನ್‌ ಸಿ ಒಂದು ಆಂಟಿ ಆಕ್ಸಿಡೆಂಟ್‌ ಆಗಿರುವುದರಿಂದ ಇದು ಚರ್ಮದಲ್ಲಿ ಕೊಲಾಜೆನ್‌ ಉತ್ಪತ್ತಿಯನ್ನು ಉದ್ದೀಪಿಸುತ್ತದೆ. ಅಷ್ಟೇ ಅಲ್ಲ, ರಕ್ತ ಪೂರಣವನ್ನೂ ಗಟ್ಟಿಗೊಳಿಸುತ್ತದೆ. ಆ ಮೂಲಕದ ದೇಹದ ಎಲ್ಲ ಭಾಗಗಳಿಗೂ ರಕ್ತದ ಮೂಲಕ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ನಿಂಬೆಹಣ್ಣು, ಕಿತ್ತಳೆ, ನೆಲ್ಲಿಕಾಯಿ ಸೇರಿದಂತೆ ಹಲವು ಹಣ್ಣುಗಳ ಮೂಲಕ ವಿಟಮಿನ್‌ ಸಿ ಪಡೆಯಬಹುದು.

3. ವಿಟಮಿನ್‌ ಇ: ಚರ್ಮಕ್ಕೆ ಅತ್ಯಂತ ಅಗತ್ಯವಾಗಿರುವ ಜೀವಸತ್ವಗಳ ಪೈಕಿ ವಿಟಮಿನ್‌ ಇ ಪ್ರಮುಖವಾದುದು. ಇದು ಚರ್ಮ ಕೆಂಪು ಕೆಂಪಾಗುವುದು, ಚರ್ಮದ ಸುಕ್ಕು, ಉರಿಯೂತ, ಕಣ್ಣಿನ ಸುತ್ತ ಊದಿಕೊಳ್ಳುವುದು, ಕಪ್ಪು ಕಲೆಗಳಾಗುವುದು ಇತ್ಯಾದಿಗಳಿಗೆ ಪರಿಹಾರ ಒದಗಿಸುತ್ತದೆ. ಬಗೆಬಗೆಯ ಬೀಜಗಳನ್ನು ನಿತ್ಯಾಹಾರದಲ್ಲಿ ರೂಢಿಸಿಕೊಳ್ಳುವ ಮೂಲಕ ವಿಟಮಿನ್‌ ಇ ಪಡೆಯಬಹುದು. ಫ್ಲ್ಯಾಕ್ಸ್‌ ಸೀಡ್‌, ಚಿಯಾ ಬೀಜಗಳು, ವಾಲ್‌ನಟ್‌ ಸೇರಿದಂತೆ ಎಲ್ಲ ಬಗೆಯ ಬೀಜಗಳನ್ನು ಹಲವು ವಿಧಾನಗಳ ಮೂಲಕ ಹೊಟ್ಟೆ ಸೇವಿಸುವ ಮೂಲಕ ಚರ್ಮದ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

dark circles

4. ವಿಟಮಿನ್‌ ಕೆ: ವಿಟಮಿನ್‌ ಕೆಯೂ ಕೂಡಾ ಆಂಟಿ ಆಕ್ಸಿಡೆಂಟ್‌ಗಳನ್ನು ಭರಪೂರ ನೀಡುತ್ತದೆ. ಕೊತ್ತಂಬರಿ ಸೊಪ್ಪು, ಪುದಿನ, ಸೇರಿದಂತೆ ಹಲವು ಹಸಿರು ಸೊಪ್ಪುಗಳಲ್ಲಿ ವಿಟಮಿನ್‌ ಕೆ ಇದೆ. ಸಲಾಡ್‌, ಸ್ಮೂದಿ, ಬಗೆಬಗೆಯ ಸಬ್ಜಿಗಳನ್ನು ಮಾಡಿ ತಿನ್ನುವ ಮೂಲಕ ವಿಟಮಿನ್‌ ಕೆ ದೇಹ ಸೇರುವಂತೆ ಮಾಡಬಹುದು.

5. ಕಬ್ಬಿಣಾಂಶ: ಕಣ್ಣಿನ ಸುತ್ತ ಕಪ್ಪು ವರ್ತುಲಗಳಾಗಲು ಮುಖ್ಯ ಕಾರಣ ಅನೀಮಿಯಾ ಅಥವಾ ರಕ್ತಹೀನತೆ. ದೇಹದಲ್ಲಿ ಹಿಮೋಗ್ಲೋಬಿನ್‌ ಕೊರತೆಯಾದ ತಕ್ಷಣ ದೇಹದ ಚರ್ಮವೂ ಸೇರಿದಂತೆ ದೇಹದ ವಿವಿಧ ಭಾಗಗಗಳಿಗೆ ಆಮ್ಲಜನಕವೂ ಚುರುಕಾಗಿ ವರ್ಗಾವಣೆಯಾಗುವುದಿಲ್ಲ. ಇದರಿಂದ ಚರ್ಮದ ಸಮಸ್ಯೆಗಳೂ ತಲೆದೋರುತ್ತದೆ. ಮುಖ್ಯವಾಗಿ ಕಣ್ಣ ಕೆಳಗಿನ ಸೂಕ್ಷ್ಮ ಚರ್ಮ ಇದರ ಪರಿಣಾಮ ಅನುಭವಿಸುತ್ತದೆ. ಹಾಗಾಗಿ, ಕಬ್ಬಿಣಾಂಶ ಸೇವನೆ ಬಹುಮುಖ್ಯ. ಬಗೆಬಗೆಯ ಬೇಳೆಕಾಳುಗಳು, ಬೆಲ್ಲ, ಬೀಟ್‌ರೂಟ್‌ ಹಾಗೂ ಪಾಲಕ್‌ನಂತಹ ತರಕಾರಿ ಸೊಪ್ಪುಗಳಲ್ಲಿ ಕಬ್ಬಿಣಾಂಶ ಹೆಚ್ಚಿರುವುದರಿಂದ ಇವುಗಳನ್ನು ಸೇವಿಸುವ ಮೂಲಕ ಕಬ್ಬಿಣ ಸತ್ವ ಪಡೆಯಬಹುದು.

ಇದನ್ನೂ ಓದಿ: Sweet Potato Benefits: ಸಿಹಿಗೆಣಸಿನಿಂದ ಕೇವಲ ಆರೋಗ್ಯವಷ್ಟೇ ಅಲ್ಲ, ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ!

Exit mobile version