ಡೆಂಗ್ಯು ಎಂಬ ಜ್ವರ (Dengue Fever) ಆಗಾಗ ಎಲ್ಲೆಡೆ ಸದ್ದು ಮಾಡುತ್ತಲೇ ಇರುತ್ತದೆ. ಸೊಳ್ಳೆಯಿಂದ (Mosquito bite) ಬರುವ ಈ ಜ್ವರವೆಂದರೆ, ಹೆಚ್ಚಿದ ಉಷ್ಣಾಂಶ, ಮೈಮೇಲೆ, ಕೆಂಪನೆಯ ಸಣ್ಣ ಗುಳ್ಳೆಗಳೇಳುವುದು, ತಲೆನೋವು, ಮೈಕೈ ನೋವು ಇತ್ಯಾದಿ ಇತ್ಯಾದಿ ಲಕ್ಷಣಗಳೊಂದಿಗೆ ಬರುತ್ತದೆ. ಈ ಜ್ವರ ಎಲ್ಲ ಜ್ವರದಂತಲ್ಲ. ಅಪಾಯವಿಲ್ಲ ಎಂದುಕೊಂಡರೂ ಕೆಲವೊಮ್ಮೆ ಹಠಾತ್ತನೆ ಅಪಾಯಕ್ಕೆ ದೂಡುತ್ತದೆ. ಇಂತಹ ಸಂದರ್ಭ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿ ಅತ್ಯಂತ ಅವಶ್ಯಕ. ಇದು ಬಂದಾಗ ಯಾವ ಆಹಾರವನ್ನು ತೆಗೆದುಕೊಂಡರೆ ಒಳ್ಳೆಯದು, ಹಾಗೂ ಯಾವುದರ ಸೇವನೆ ಒಳ್ಳೆಯದಲ್ಲ ಎಂಬ ವಿಚಾರಗಳನ್ನು ತಿಳಿದಿರುವುದೂ ಬಹಳ ಮುಖ್ಯ. ಹಾಗಾಗಿ, ಬನ್ನಿ, ಯಾವೆಲ್ಲ ಆಹಾರ ಡೆಂಗ್ಯುವಿನ ಸಮಯದಲ್ಲಿ ನಾವು ಸೇವಿಸಬೇಕು (Dengue Fever foods) ಎಂಬುದನ್ನು ನೋಡೋಣ.
1. ನೀರು: ನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಡೆಂಗ್ಯು ಬಂದಾಗ ಸಾಧ್ಯವಾದಷ್ಟು ನೀರು ಕುಡಿಯುತ್ತಿದ್ದರೆ, ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಬಾರದು. ಇದರಿಂದ ಜ್ವರದ ಉಷ್ಣಾಂಶವೂ ಕೂಡಾ ಗರಿಷ್ಠ ಮಟ್ಟಕ್ಕೇರುಬುದು ತಪ್ಪುತ್ತದೆ. ದೇಹದಲ್ಲಿ ನೀರಿನಂಶದ ಸಮತೋಲನವೂ ಕಾಯ್ದುಕೊಳ್ಳುತ್ತದೆ.
2. ಎಳನೀರು: ಎಳನೀರಿನಲ್ಲಿ ಸಾಕಷ್ಟು ಪ್ರಮಾಣದ ಎಲೆಕ್ಟ್ರೋಲೈಟ್‌ಗಳು ನೈಸರ್ಗಿಕವಾಗಿ ಸಮೃದ್ಧವಾಗಿರುವುದರಿಂದ ಜ್ವರದ ಸಂದರ್ಭ ದೇಹದಲ್ಲಿ ನಿರ್ಜಲೀಕರಣವಾಗದಂತೆ ಇದು ತಡೆಯುತ್ತದೆ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ, ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಅಂದರೆ, ಖನಿಜಾಂಶಗಳಾದ ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂಗಳನ್ನು ಒದಗಿಸಿ ಸಹಾಯ ಮಾಡುತ್ತದೆ.
3. ಹಣ್ಣುಗಳು: ಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಹಾಗೂ ಖನಿಜ ಲವಣಗಳೂ ಇರುವುದರಿಂದ ಡೆಂಗ್ಯು ಸಂದರ್ಭ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ತಿನ್ನುವುದು ಬಹಳ ಮುಖ್ಯ. ಹಣ್ಣುಗಳಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ರೋಗಗಳ ವಿರುದ್ಧ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲ, ಬಾಳೆಹಣ್ಣು, ಪಪ್ಪಾಯಿ, ಕಲ್ಲಂಗಡಿಯಂತಹ ಹಣ್ಣುಗಳನ್ನು ಸುಲಭವಾಗಿ ಜೀರ್ಣ ಮಾಡಬಹುದಾದ್ದರಿಂದ ಹಾಗೂ ಇವುಗಳಲ್ಲಿ ಹೇರಳವಾಗಿ ಪೋಷಕಾಂಶಗಳು ಬಹುಬೇಗನೆ ದೇಹ ಸೇರುವುದರಿಂದ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ.
4. ಹರ್ಬಲ್ ಚಹಾಗಳು: ಶುಂಠಿ, ಕ್ಯಾಮೋಮೈಲ್ ಮತ್ತಿತರ ಹರ್ಬಲ್ ಚಹಾಗಳು ಜ್ವರದ ಸಂದರ್ಭ ಕುಡಿದಾಗ ಹಾಯೆನಿಸುವಂತೆ ಮಾಡಬಲ್ಲ ಶಕ್ತಿ ಇದೆ. ಸಾಮಾನ್ಯ ಚಹಾ, ಕಾಫಿಗಳು ರುಚಿಯೆನಿಸಿದರೂ, ಜ್ವರದ ಸಂದರ್ಭ ಇಂತಹ ಹರ್ಬಲ್ ಚಹಾಗಳು ಒಳ್ಳೆಯದು. ಶುಂಠಿ ಚಹಾದಲ್ಲಿ, ಆಂಟಿ ಇನ್‌ಫ್ಲಮೇಟರಿ ಗುಣಗಳು ಹೇರಳವಾಗಿ ಇರುವುದರಿಂದ ಜ್ವರದ ಹಲವು ಲಕ್ಷಣಗಳನ್ನು ಗುಣಪಡಿಸುವಲ್ಲಿಯೂ ಇದು ಸಹಾಯ ಮಾಡುತ್ತದೆ.
5. ಧಾನ್ಯಗಳು: ಧಾನ್ಯಗಳಿಂದ ಮಾಡಿದ ಆಹಾರಗಳಾದ ಅನ್ನ, ಓಟ್ಸ್, ಇಡ್ಲಿ, ದೋಸೆ, ಉಪ್ಪಿಟ್ಟು, ದಲಿಯಾ ಮತ್ತಿತರ ಆಹಾರಗಳ ಸೇವನೆ ಒಳ್ಳೆಯದು. ಇದರಿಂದ ದೇಹಕ್ಕೆ ಬೇಕಾದ ಶಕ್ತಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತದೆ. ಸರಿಯಾಗಿ ಬೇಯಿಸಿದ, ಹೆಚ್ಚು ಅನಗತ್ಯ ಮಸಾಲೆಗಳಿಲ್ಲದ, ಹದವಾದ ತಿನಿಸುಗಳು, ಹಬೆಯಲ್ಲಿ ಬೇಯಿಸಿದ ತಿಂಡಿಗಳು ಇಂತಹ ಸಂದರ್ಭ ಅತ್ಯಂತ ಒಳ್ಳೆಯದು.
6. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿಯೂ, ವಿಟಮಿನ್, ಖನಿಜಾಂಶಗಳು ಹಾಗೂ ಲವಣಗಳೂ ಇರುವುದರಿಂದ ಇವುಗಳ ಸೇವನೆ ಅತ್ಯಂತ ಮುಖ್ಯ. ಸಹಜವಾಗಿ ಸುಲಭವಾಗಿ ಕರಗಬಲ್ಲ ಹಸಿರು ತರಕಾರಿಗಳು, ಬೇಯಿಸಿ ತಿನ್ನಬಹುದಾದ, ಸೂಪ್ ಮಾಡಿ ಕುಡಿಯಬಹುದಾದ ಹೀಗೆ, ಹಲವು ಬಗೆಯಲ್ಲಿ ಹಸಿರು ತರಕಾರಿಗಳನ್ನು ಆದಷ್ಟು ಹೊಟ್ಟೆ ಸೇರುವಂತೆ ಮಾಡಬಹುದು.
7. ಪ್ರೊಟೀನ್: ಪ್ರೊಟೀನ್‌ನಿಂದ ಸಮೃದ್ಧ ಆಹಾರ ಈ ಸಂದರ್ಭ ಅತ್ಯಂತ ಅಗತ್ಯ. ಚಿಕನ್, ಟೋಫು, ಮೀನು ಇತ್ಯಾದಿಗಳನ್ನೂ ಹಿತಮಿತವಾಗಿ ಸೇವಿಸಿ ಪ್ರೊಟೀನ್‌ನ ಪೂರೈಕೆ ಮಾಡಬಹುದು. ಚೆನ್ನಾಗಿ ಬೇಯಿಸಿದ, ಸಮೃದ್ಧ ಆಹಾರಗಳನ್ನೂ ಸೇವಿಸುವ ಮೂಲಕ ದೇಹದಲ್ಲಿ ಮತ್ತೆ ಮಾಂಸಖಂಡಗಳು ಬಲಗೊಂಡು ಆರೋಗ್ಯ ಹೊಂದುವತ್ತ ಹೆಜ್ಜೆ ಹಾಕಬಹುದು.