ನೋಡುವುದಕ್ಕೆ ಒಂದೇ ಸಾಲಿನಲ್ಲಿ ಮುತ್ತು ಪೋಣಿಸಿದಂತೆ ಕಾಣುವ ಹಲ್ಲುಗಳು ಯಾರಿಗೆ ಬೇಡ? ಹಾಗಾಗಿ ಹಲ್ಲುಗಳಿಗೆ ಬ್ರೇಸಸ್ (Dental braces) ಹಾಕಿಸಿಕೊಳ್ಳುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ದಂತಗಳ ವಕ್ರತೆ, ಬೈಟ್ ಸರಿಯಿಲ್ಲದಿರುವುದು, ಒಂದರಮೇಲೊಂದು ಹಲ್ಲುಗಳು ಬೆಳೆಯುವುದು- ಇಂಥ ನಾನಾ ಸಮಸ್ಯೆಗಳಿಗೆ ಹಲ್ಲುಗಳಿಗೆ ಬ್ರೇಸ್ ಹಾಕುವುದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಬ್ರೇಸ್ ಹಾಕುವ ಪ್ರಕ್ರಿಯೆ ಸುಲಭವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ವರ್ಷಗಟ್ಟಲೆ ಸಮಯ ಹಿಡಿಯುವ ಚಿಕಿತ್ಸೆಯಿದು. ಬ್ರೇಸ್ ಹಾಕಿಕೊಳ್ಳುವ ಯೋಚನೆ ಇರುವಂಥವರು ಈ ಬಗ್ಗೆ ತಿಳಿದುಕೊಳ್ಳಲೇಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ.
ಏಕೆ ಹೆಚ್ಚಿವೆ?
ಬ್ರೇಸ್ ಹಾಕಿಕೊಳ್ಳುವವರ ಸಂಖ್ಯೆ ಮೊದಲಿಗಿಂತ ಈಗೇಕೆ ಹೆಚ್ಚಿದೆ? ಮೊದಲನೇದಾಗಿ ಹೆಚ್ಚಿದ ಸೌಂದರ್ಯ ಪ್ರಜ್ಞೆ. ನಗು ಸುಂದರವಾಗಿರಬೇಕೆಂದು ಹಂಬಲಿಸುವವರ ಸಂಖ್ಯೆ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಬದಲಾಗಿರುವ ನಮ್ಮ ಆಹಾರ ಶೈಲಿ. ಮೊದಲಿನವರಂತೆ ಕಬ್ಬು ಕಚ್ಚಿಕೊಂಡು ತಿನ್ನುವವರು, ಅಡಿಕೆಯಂಥ ಗಟ್ಟಿ ವಸ್ತುಗಳನ್ನು ಜಗಿಯುವವರ, ಪೇರಲೆ ಹಣ್ಣು ಕಚ್ಚಿ ತಿನ್ನುವವರ ಸಂಖ್ಯೆಯೇ ಕಡಿಮೆಯಾಗಿದೆ. ತಿನ್ನುವುದೆಲ್ಲವೂ ಮೆದುವಾದ, ಜಂಕ್ ಆಹಾರಗಳೇ. ಇದರಿಂದ ಒಡಸುಗಳು ಸಾಕಷ್ಟು ವಿಕಾಸವಾಗದೆ, ಬಿದ್ದು-ಹುಟ್ಟುವ ಹಲ್ಲುಗಳಿಗೆ ಜಾಗವೇ ಇರುವುದಿಲ್ಲ. ಇದರಿಂದ ಮಕ್ಕಳ ಬಾಯಲ್ಲಿ ಒಂದರಮೇಲೊಂದು ಹಲ್ಲು ಹುಟ್ಟುವುದು, ಸಾಲು ತಪ್ಪುವುದು, ವಕ್ರವಾಗುವುದು ಸಾಮಾನ್ಯ ಎನಿಸಿದೆ.
ಯಾವ ರೀತಿಯದು?
ಹೌದು, ಇದರಲ್ಲೂ ಹಲವಾರು ರೀತಿಯದ್ದು ಲಭ್ಯವಿದೆ. ಸಾಂಪ್ರದಾಯಕ ರೀತಿಯ ಲೋಹದ ಬ್ರೇಸ್, ಸೆರಾಮಿಕ್ ಬ್ರೇಸ್, ಲಿಂಗ್ವಲ್ ಬ್ರೇಸ್ ಮತ್ತು ಪಾರದರ್ಶಕ ಅಲೈನರ್‌ಗಳು ಎಂದು ಇವನ್ನು ವಿಂಗಡಿಸಬಹುದು. ಲೋಹದ ಬ್ರೇಸ್‌ಗಳು ಸಾಮಾನ್ಯವಾಗಿ ಹೆಚ್ಚಿನ ಜನರ ಹಲ್ಲುಗಳ ಮೇಲೆ ಕಾಣುವಂಥವು. ಪ್ರತಿಯೊಂದು ಹಲ್ಲಿಗೂ ಒಂದು ಬ್ರೇಸ್ ಅಂಟಿಸಿ, ಅದಕ್ಕೆ ತಂತಿಯ ಜಾಲದಿಂದ ಬಿಗಿಯಲಾಗುತ್ತದೆ. ಬಾಯಿ ತೆಗೆಯುತ್ತಿದ್ದಂತೆ ಎದ್ದು ಕಾಣುವಂಥ ಬ್ರೇಸ್‌ಗಳಿವು. ಸಿರಾಮಿಕ್ ಸಹ ಇದೇ ರೀತಿಯಲ್ಲಿ ಬಳಕೆಯಾಗುವುದಾದರೂ, ಪ್ರತೀ ಹಲ್ಲಿಗೂ ಅಂಟಿಸುವ ಲೋಹದ ಬ್ರೇಸ್ ಬದಲು, ಹಲ್ಲಿನ ಬಣ್ಣದ್ದೇ ಸಿರಾಮಿಕ್ ಬಳಕೆಯಾಗುತ್ತದಷ್ಟೇ. ಇದರಿಂದ ಬ್ರೇಸ್ ತೀರಾ ಎದ್ದು ಕಾಣುವುದಿಲ್ಲ. ಲಿಂಗ್ವಲ್ ಬ್ರೇಸ್‌ಗಳನ್ನು ಬಾಯೊಳಗೆ, ಅಂದರೆ ಹಲ್ಲಿನ ಹಿಂಬದಿಯಲ್ಲಿ ಹಾಕಲಾಗುತ್ತದೆ. ಇದು ಒಂದಿನಿತೂ ಹೊರಗೆ ಕಾಣುವುದಿಲ್ಲ. ಕ್ಲಿಯರ್ ಅಲೈನರ್‌ಗಳು ಸಂಪೂರ್ಣ ಪಾರದರ್ಶಕ. ಆಯಾ ಹಲ್ಲುಗಳ ಅಳತೆಗೆ ಹೊಂದಿಸಿ ಇವುಗಳನ್ನು ಮಾಡಿ ಕೂರಿಸಲಾಗುತ್ತದೆ. ಬ್ರೇಸ್ ಹಾಕಿದ್ದು ಮೇಲ್ನೋಟಕ್ಕೆ ಗೊತ್ತೇ ಆಗುವುದಿಲ್ಲ.
ಎಷ್ಟು ದಿನ ಬೇಕು?
ಹಲ್ಲುಗಳ ಸಮಸ್ಯೆ ಏನು ಮತ್ತು ಎಷ್ಟು ತೀವ್ರ ಎನ್ನುವುದರ ಮೇಲೆ, ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೆ ಎಷ್ಟು ಸಮಯ ಬೇಕು ಎಂಬುದು ನಿರ್ಧಾರವಾಗುತ್ತದೆ. ಕೆಲವೊಮ್ಮೆ ಆಯ್ಕೆ ಮಾಡಿಕೊಂಡ ಬ್ರೇಸ್ ಮೇಲೂ ಇದು ಅವಲಂಬಿತ ಆಗಿರುತ್ತದೆ. ಲೋಹದ ಬ್ರೇಸ್‌ಗಳು 18ರಿಂದ 24 ತಿಂಗಳುಗಳವರೆಗೆ ಸಮಯ ಬೇಡಿದರೆ, ಪಾರದರ್ಶಕ ಅಲೈನರ್‌ಗಳ ಸಮಯ 6ರಿಂದ 18 ತಿಂಗಳವರೆಗೂ ವ್ಯಾಪಿಸಬಹುದು.
ನೋವು ಮತ್ತು ಕಿರಿಕಿರಿ
ಯಾವುದೇ ರೀತಿಯ ಬ್ರೇಸ್ ಹಾಕಿದರೂ ಒಂದಿಷ್ಟು ನೋವು ಮತ್ತು ಕಿರಿಕಿರಿ ತಪ್ಪಿದ್ದಲ್ಲ. ಅದರಲ್ಲೂ ಮೊದಲಿಗೆ ಹಾಕಿದಾಗ, ಅದು ಒಗ್ಗುವುದಕ್ಕೆ ವಾರಗಟ್ಟಲೆ ಬೇಕಾಗುತ್ತದೆ. ಆವರೆಗೆ ಬಾಯಿ, ದಂತ, ಒಸಡು ಎಲ್ಲೆಲ್ಲೂ ನೋವು. ನಂತರ ತಿಂಗಳಿಗೊಮ್ಮೆ ಅದನ್ನು ಹೊಂದಿಸಿಕೊಳ್ಳಲು, ಚಿಕಿತ್ಸೆ ಎಷ್ಟು ಸರಿಯಾಗಿದೆ ನೋಡಲು ತಜ್ಞರಲ್ಲಿ ಹೋಗಲೇಬೇಕು. ಆಗಲೂ ಒಂದೆರಡು ದಿನ ನೋವು ಮತ್ತು ಕಿರಿಕಿರಿ ಕಟ್ಟಿಟ್ಟಿದ್ದು.
ಊಟದ ಪಥ್ಯ
ವರ್ಷಗಟ್ಟಲೆ ಪಾಲಿಸಬೇಕಾದ ಕ್ರಮಗಳಲ್ಲಿ ಇದೂ ಒಂದು. ತಿಂದರೆ ಆರೋಗ್ಯಕ್ಕೆ ಸಮಸ್ಯೆ ಎಂದಲ್ಲ, ತಿನ್ನುವುದಕ್ಕೆ ಕಷ್ಟ ಎನ್ನುವ ಕಾರಣಕ್ಕೆ ಪಾಲಿಸಬೇಕಾದ ಪಥ್ಯವಿದು. ಉದಾ, ಚಕ್ಕುಲಿ, ನಿಪ್ಪಟ್ಟು ಮುಂತಾದ ಗಟ್ಟಿ ತಿನಿಸುಗಳಿಂದ ಬ್ರೇಸ್ ಮುರಿಯುತ್ತದೆ. ಹೀಗೇ ಪದೇಪದೆ ಮುರಿಯುತ್ತಿದ್ದರೆ ಚಿಕಿತ್ಸೆಯ ಅವಧಿ ಇನ್ನಷ್ಟು ದೀರ್ಘವಾಗಬಹುದು. ಅಂಟಾದ ತಿನಿಸುಗಳು, ಸಕ್ಕರೆಭರಿತ ತಿಂಡಿಗಳು, ಗಮ್ ಅಥವಾ ಕ್ಯಾರಮಲ್ ಇರುವ ಚಾಕಲೇಟ್ ಇತ್ಯಾದಿಗಳು ಈ ಚಿಕಿತ್ಸೆ ಮುಗಿಯುವವರೆಗೆ ಮುಟ್ಟುವಂತಿಲ್ಲ.
ಬಾಯಿಯ ಸ್ವಚ್ಛತೆ
ಇದಂತೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ್ದು. ಬಾಯಿ ತುಂಬಾ ಹರಿದಾಡುವ ತಂತಿ-ಬೇಲಿಯಂಥ ವಸ್ತುಗಳಿಂದಾಗಿ ಆಹಾರದ ತುಣುಕುಗಳು ಎಲ್ಲೆಂದರಲ್ಲಿ ಅಡಗಿ ಕೂರುತ್ತವೆ. ಪ್ರತಿ ಬಾರಿ ಊಟ-ತಿಂಡಿಯ ನಂತರ ಹಲ್ಲುಜ್ಜಲೇಬೇಕು. ಹಲ್ಲುಗಳ ನಡುವಿನ ಶುಚಿತ್ವಕ್ಕೆ ಸಣ್ಣ ಇಂಟ್ರಾಡೆಂಟಲ್ ಬ್ರಷ್‌ಗಳನ್ನು ಬಳಸಲೇಬೇಕು. ದಿನಕ್ಕೆ ಒಂದಿಷ್ಟು ಹೊತ್ತು ಬಾಯಿಯ ಸ್ವಚ್ಛತೆಗೆಂದೇ ಸಮಯ ಮೀಸಲಿಡಬೇಕಾಗುತ್ತದೆ. ಈ ಬಗ್ಗೆ ಉದಾಸೀನ ಮಾಡಿದಲ್ಲಿ ಹಲ್ಲುಗಳು ಎರ್ರಾಬಿರ್ರಿ ಹುಳುಕಾಗುವುದು ನಿಶ್ಚಿತ.
ದುಬಾರಿಯೇ?
ಎಲ್ಲವೂ ಅಲ್ಲ! ಕೆಲವು ಬ್ರೇಸ್‌ಗಳು ಅಷ್ಟೇನೂ ತುಟ್ಟಿಯಲ್ಲ. ಸಾಮಾನ್ಯವಾದ ಲೋಹದ ಬ್ರೇಸ್‌ಗಳು ಕೈಗೆಟುಕುವ ಬೆಲೆಯೇ ಆಗಿರುತ್ತವೆ. ಪಾರದರ್ಶಕ ಅಲೈನರ್‌ಗಳು ದುಬಾರಿ ಬೆಲೆಯವು. ದಂತ ವಿಮೆಯಲ್ಲಿ ಬ್ರೇಸ್‌ಗಳು ಸಾಮಾನ್ಯವಾಗಿ ಸೇರಿರುತ್ತವೆ. ಅದಿಲ್ಲದಿದ್ದರೆ, ವೈದ್ಯರಲ್ಲೇ ಕಂತುಗಳಲ್ಲಿ ಪಾವತಿಸುವ ಆಯ್ಕೆಯೂ ಇರುತ್ತದೆ. ಈ ಎಲ್ಲವನ್ನೂ ಮೊದಲೇ ತಿಳಿದುಕೊಂಡು, ಚಿಕಿತ್ಸೆಗೆ ಕೈ ಹಾಕುವುದು ಜಾಣತನ.
ತೆಗೆದ ಮೇಲೆ?
ಇಲ್ಲಪ್ಪಾ, ಮುಗಿಯುವುದಿಲ್ಲ! ಬ್ರೇಸ್‌ನಿಂದ ಮುಕ್ತಿ ಪಡೆದ ನಂತರವೂ ಹಲವಾರು ತಿಂಗಳುಗಳವರೆಗೆ ರಿಟೈನರ್‌ಗಳನ್ನು ಧರಿಸಬೇಕಾಗುತ್ತದೆ. ತಮ್ಮ ಹೊಸ ಸ್ಥಾನದಲ್ಲಿ ಹಲ್ಲುಗಳು ನಿಲ್ಲಬೇಕು ಎಂದರೆ ಇವು ಬೇಕು. ಹಲ್ಲುಗಳ ಸಮಸ್ಯೆ ಮತ್ತು ಚಿಕಿತ್ಸೆಯ ಆಧಾರದ ಮೇಲೆ ಎಷ್ಟು ಸಮಯದವರೆಗೆ ರಿಟೈನರ್ ಧರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇವುಗಳು ಬೇಕಾದಾಗ ತೆಗೆಯಬಲ್ಲ ಕ್ಲಿಪ್‌ಗಳಂತೆ ಇರುತ್ತವೆ. ಹಲ್ಲಿಗೆ ತೀರಾ ತೊಂದರೆಯನ್ನೇನೂ ನೀಡುವುದಿಲ್ಲ.
ಇದನ್ನೂ ಓದಿ: Weight Loss Tips: ಇದ್ದಕ್ಕಿದ್ದಂತೆ ದೇಹದ ತೂಕ ಇಳಿಸಲು ಹೋದರೆ ಏನಾಗುತ್ತದೆ ನೋಡಿ!