Site icon Vistara News

Diabetes Care: ಮಧುಮೇಹ ಇರುವವರು ಎಳನೀರು ಕುಡಿಯಬಹುದಾ?

drink tender coconut

ಬಿಸಿಲಿನಲ್ಲಿ ಬಳಲಿ ಬೆಂಡಾಗಿ ಬಂದವರಿಗೆ ಎಳನೀರು (tender coconut) ಕೊಡುವ ಚೈತನ್ಯ ಅಷ್ಟಿಷ್ಟಲ್ಲ. ಎಳನೀರು ಕೇವಲ ರಿಫ್ರೆಶಿಂಗ್‌ ಮಾತ್ರವಲ್ಲ, ಅದು ಭರ್ಜರಿ ಪೋಷಕಾಂಶಗಳಿಂದಲೂ ಕೂಡಿದೆ. ಫಿಟ್‌ನೆಸ್ ಉತ್ಸಾಹಿಗಳು ಮತ್ತು ಆರೋಗ್ಯ ಪ್ರಜ್ಞೆಯ ಜನರು ಇದು ಎನರ್ಜಿ ಡ್ರಿಂಕ್‌ ಅಂತಲೂ ಮೆಚ್ಚುತ್ತಾರೆ. ಉಷ್ಣವಲಯದ ದೇಶಗಳಲ್ಲಿ ವಾಸಿಸುವ ಜನರು ಇದನ್ನು ನಿಯಮಿತವಾಗಿ ಕುಡಿಯುತ್ತಾರೆ. ಆದರೆ ಇಂದು ಪ್ರಪಂಚದಾದ್ಯಂತದ ಸೂಪರ್‌ರ್ಮಾರ್ಕೆಟ್‌ಗಳು ಸಹ ಬಾಟಲಿಯಲ್ಲಿ ಎಳನೀರು ಸಂಗ್ರಹಿಸಿ ಮಾರುತ್ತವೆ. ಆದರೆ ಎಳನೀರು ಸಿಹಿ ಅಲ್ಲವೇ? ಡಯಾಬಿಟಿಸ್‌ ಇರುವವರು ಇದನ್ನು ಕುಡಿಯಬಹುದೇ? ಈ ಪ್ರಶ್ನೆ ಹಾಗೂ ಆತಂಕ ಮಧುಮೇಹಿಗಳಿಗೆ (Diabetes Care) ಇದೆ. ಇದಕ್ಕೆ ಉತ್ತರ- ಧಾರಾಳವಾಗಿ ಕುಡಿಯಬಹುದು; ಆದರೆ ಎಷ್ಟು ಮತ್ತು ಯಾವಾಗ ಎಂಬುದು ಮುಖ್ಯ. ಎಳನೀರಿನಲ್ಲಿರುವ ಸೋಡಿಯಂ ಮತ್ತು ಪೊಟ್ಯಾಸಿಯಂ, ಎಲೆಕ್ಟ್ರೋಲೈಟ್‌ಗಳು ನಮ್ಮಲ್ಲಿ ಚೈತನ್ಯ ತುಂಬಿಸಲು ಅತ್ಯುತ್ತಮ. ಇದು ನಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡಲು ಬಿಡುವುದಿಲ್ಲ ಎಂದು ಪೌಷ್ಟಿಕತೆ ತಜ್ಞರು ಹೇಳುತ್ತಾರೆ.

ಎಳನೀರಿನಲ್ಲಿ ಇರುವ ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳು ದೇಹದ Ph ಸಮತೋಲನವನ್ನು ಕಾಪಾಡುತ್ತವೆ. ದೇಹದ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತವೆ. ಇದು ಕೃತಕ ಎನರ್ಜಿ ಡ್ರಿಂಕ್‌ಗಳಿಗೆ ಅತ್ಯುತ್ತಮ ಪರ್ಯಾಯ. ಮೆಗ್ನೀಸಿಯಮ್ ಅಂಶವು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನರಗಳನ್ನು ಶಾಂತಗೊಳಿಸುತ್ತದೆ. ಪೊಟ್ಯಾಸಿಯಮ್ ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ. ಸ್ನಾಯುಗಳಲ್ಲಿ ಬಲವನ್ನು ಸೇರಿಸುತ್ತದೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ರಾಸಾಯನಿಕ ಸಂಯೋಜನೆಯು ರಕ್ತದ ಪ್ಲಾಸ್ಮಾದಂತೆಯೇ ಉತ್ತಮ.

ಇಷ್ಟೆಲ್ಲ ಪ್ರಯೋಜನ ಇದ್ದರೂ, ಇದು ಸಕ್ಕರೆಯ ಮಟ್ಟದಲ್ಲಿ ಏರುಪೇರು ಉಂಟುಮಾಡಬಹುದು ಎಂದು ಮಧುಮೇಹಿಗಳು ಸಂದೇಹಿಸುತ್ತಾರೆ. ಆದರೆ ನಿಯಮಿತವಾಗಿ ವ್ಯಾಯಾಮ ಮಾಡುವ ಮಧುಮೇಹಿಗಳು ದಿನಕ್ಕೆ ಒಂದು ಎಳನೀರನ್ನು (diabetes diet) ಕುಡಿಯಬಹುದು. ಇದು ಗ್ಲೂಕೋಸ್ ಮಟ್ಟದಲ್ಲಿ ಯಾವುದೇ ಏರಿಕೆ ಉಂಟುಮಾಡುವುದಿಲ್ಲ. ರಕ್ತದಲ್ಲಿ ಹೆಚ್ಚು ಅನಿಯಂತ್ರಿತ ಸಕ್ಕರೆ ಮಟ್ಟ ಹೊಂದಿರುವವರು ಮಾತ್ರ ಇದನ್ನು ಸೃವಿಸುವ ಮುನ್ನ ಹುಷಾರಾಗಿರಬೇಕು ಅಷ್ಟೆ.

ಮಧುಮೇಹಿಗಳು ಎಳನೀರು ಸೇವಿಸಲು ಉತ್ತಮ ಸಮಯವೆಂದರೆ ಬೆಳಗಿನ ಹೊತ್ತು. ಖಾಲಿ ಹೊಟ್ಟೆಯಲ್ಲಿ ಹಾಗೂ ವ್ಯಾಯಾಮದ ಬಳಿಕ ಉತ್ತಮ. ಹೆಚ್ಚು ಸೇವಿಸಿದರೆ ಏನಾಗುತ್ತದೆ? ಕೆಲವರಲ್ಲಿ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಉಂಟಾಗಬಹುದು. ಹೆಚ್ಚುವರಿ ಮೂತ್ರ ವಿಸರ್ಜನೆ ಮತ್ತು ಶೀತಕ್ಕೆ ಕಾರಣವಾಗಬಹುದು. ಏಕೆಂದರೆ ಇದು ದೇಹವನ್ನು ತಂಪಾಗಿಸುತ್ತದೆ.

ಎಳನೀರಿನಲ್ಲಿ ಇರುವ ಸಕ್ಕರೆಯ ಅಂಶ ಕಡಿಮೆ. ಎಳನೀರಿನಲ್ಲಿರುವುದು ಮುಖ್ಯವಾಗಿ ಗ್ಲೂಕೋಸ್. ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. 200 ಮಿಲಿಲೀಟರ್‌ ವರೆಗೆ ಇದರ ಸೇವನೆಯನ್ನು ಸೀಮಿತಗೊಳಿಸಬೇಕು. ನೆನಪಿಡಿ, ಮಧುಮೇಹಿಗಳಿಗೆ ಯಾವುದೇ ಹಣ್ಣಿನ ರಸ, ಕಾರ್ಬೊನೇಟೆಡ್‌ ಪಾನೀಯ ಅಥವಾ ಐಸ್‌ಕ್ರೀಮ್‌ಗಿಂತ ತೆಂಗಿನ ನೀರು ಉತ್ತಮ. ಅದರಲ್ಲೂ ಬಾಟಲಿಯಲ್ಲಿ ತುಂಬಿದ ಎಳನೀರಿಗಿಂತ ನೈಸರ್ಗಹಿಕವಾಗಿ ಸಿಗುವುದು ಇನ್ನೂ ಉತ್ತಮ ಎಂದು ತಜ್ಞರೆನ್ನುತ್ತಾರೆ.

ಇದನ್ನೂ ಓದಿ: Diabetes Care: ಮಧುಮೇಹಿಗಳಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚೇಕೆ?

Exit mobile version