Site icon Vistara News

Diabetes Care: ಮಧುಮೇಹಿಗಳಲ್ಲಿ ಶ್ವಾಸಕೋಶದ ಸಮಸ್ಯೆ ಹೆಚ್ಚೇಕೆ?

diabetes care

ಧುಮೇಹ (diabetes care) ಎನ್ನುವ ಒಂದು ರೋಗ ತನ್ನೊಳಗೆ ಇನ್ನೆಷ್ಟು ಸಮಸ್ಯೆಗಳನ್ನು ತುಂಬಿಕೊಂಡಿದೆಯೋ ಎನ್ನುವಂತೆ ಕೆಲವೊಮ್ಮೆ ಭಾಸವಾಗುತ್ತದೆ. ಅಂದರೆ ದೇಹದಲ್ಲಿ ಇನ್ನಿತರ ಸಮಸ್ಯೆಗಳಿಗೂ ಇದೊಂದೇ ರೋಗ ಕಾವು ಕೊಡುತ್ತಾ, ಮರಿ ಮಾಡುತ್ತಾ ಹೋಗುತ್ತದೋ ಎಂಬಂತೆ ಕಾಣುತ್ತದೆ. ಹೀಗೆನ್ನಲು ಕಾರಣಗಳು ಇಲ್ಲದಿಲ್ಲ.

ʻಡಯಾಬಿಟಿಸ್‌ ಕೇರ್‌ʼ (diabetes care) ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನದ ವರದಿಯೊಂದು ಈ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ನೀಡುತ್ತದೆ. ಟೈಪ್‌-1 ಮತ್ತು ಟೈಪ್‌-2 ಮಧುಮೇಹವಿರುವವರು ಶೇ. 7ರಷ್ಟು ಹೆಚ್ಚಿನ ಅಸ್ತಮಾ, ಶೇ. 22ರಷ್ಟು ಹೆಚ್ಚು ಸಿಒಪಿಡಿ, ಶೇ.44ರಷ್ಟು ನ್ಯುಮೋನಿಯಾ, ಶೇ. 54ರಷ್ಟು ಪಲ್ಮನರಿ ಫೈಬ್ರೋಸಿಸ್‌ ಎನ್ನುವ ಶ್ವಾಸಕೋಶದ ಕಾಯಿಲೆಯನ್ನು ಹೊಂದುವ ಸಂಭಾವ್ಯತೆ ಹೆಚ್ಚಿದೆಯಂತೆ. ಆದರೆ ಮಧುಮೇಹ ಇರುವವರೇ ಶ್ವಾಸಕೋಶದ ಸಮಸ್ಯೆಗಳಿಗೆ ತುತ್ತಾಗುವ ಸಂಭಾವ್ಯತೆ ಹೆಚ್ಚೇಕೆ ಎನ್ನುವ ಈ ಸಂಕೀರ್ಣ ವಿಷಯದ ಬಗ್ಗೆ ಸೂಕ್ತ ಸಮಾಧಾನ ತಜ್ಞರಿಗೆ ಇನ್ನೂ ದೊರೆತಿಲ್ಲ ಎನ್ನಲಾಗಿದೆ.

ಮಧುಮೇಹ ಇರುವವರಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಡುವ ಸಂಭವವಿದೆ. ಅಂದರೆ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದು, ಇನ್ಸುಲಿನ್‌ ಮಟ್ಟ ಹೆಚ್ಚುವುದು, ನರಗಳ ಹಾನಿಗೆ ಒಳಗಾಗುವುದು, ದೇಹದಲ್ಲಿ ಹಾನಿಕಾರಕ ಮುಕ್ತ ಕಣಗಳು ಮತ್ತು ಉತ್ಕರ್ಷಣ ನಿರೋಧಕಗಳ ನಡುವಿನ ಅಸಮತೋಲನ, ರಕ್ತನಾಳಗಳಿಗೆ ಹಾನಿಯಾಗುವುದು, ಕೊಲಾಜಿನ್‌ ಮತ್ತು ಎಲಾಸ್ಟಿನ್‌ ಬದಲಾವಣೆ ಇತ್ಯಾದಿಗಳು. ಈ ಯಾವುದೇ ಕಾರಣಗಳಿಂದಲೂ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆಯಿದೆ.

ಶ್ವಾಸಕೋಶದ ಸೋಂಕು

ರಕ್ತದಲ್ಲಿ ಗ್ಲುಕೋಸ್‌ ಅಂಶ ಹೆಚ್ಚುವ ಹೈಪರ್‌ಗ್ಲೈಸೀಮಿಯದಿಂದ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ನ್ಯುಮೋನಿಯಾದಂಥ ಸೋಂಕು ಪುಪ್ಪುಸಗಳನ್ನು ಕಾಡುತ್ತದೆ. ತೀವ್ರ ಜ್ವರ, ಉಸಿರಾಟದ ತೊಂದರೆ, ಎದೆ ನೋವು, ಹಸಿವಿಲ್ಲದಿರುವುದು, ಚಳಿ ನಡುಕ ಅಥವಾ ಬೆವರುವುದು ಮುಂತಾದ ಲಕ್ಷಣಗಳು ನ್ಯುಮೋನಿಯಾದಲ್ಲಿ ಕಾಣಬಹುದು. ಮಧುಮೇಹಿಗಳಲ್ಲಿ ಈ ಲಕ್ಷಣಗಳ ತೀವ್ರತೆ ಹೆಚ್ಚಾದರೆ ಚಿಕಿತ್ಸೆ ನೀಡುವುದು ಕೂಡ ಸಮಸ್ಯೆಯಾಗಬಹುದು. ಹಾಗಾಗಿ ಸೋಂಕಿನ ಲಕ್ಷಣಗಳನ್ನು ಪ್ರಾರಂಭದಲ್ಲೇ ಪ್ರತಿಬಂಧಿಸುವುದು ಅಗತ್ಯ ಮತ್ತು ಮಧುಮೇಹವನ್ನು ನಿಯಂತ್ರಿಸುವುದು ಅಗತ್ಯ. ಮಾತ್ರವಲ್ಲ, ನ್ಯುಮೋನಿಯಾ ಮರುಕಳಿಸಿದರೆ, ಪ್ರತಿಜೈವಿಕ ಔಷಧಗಳಿಗೆ ರೋಗಾಣುಗಳು ಪ್ರತಿರೋಧ ಬೆಳೆಸಿಕೊಳ್ಳುವ ಸಂಭವವೇ ಹೆಚ್ಚು. ಹಾಗಾದರೆ ರೋಗಿಯ ಜೀವಕ್ಕೂ ಅಪಾಯ ಒದಗಬಹುದು.

ಕ್ಷಯ

ದೇಹದ ಪ್ರತಿಬಂಧಕ ಸಾಮರ್ಥ್ಯ ಕುಗ್ಗುತ್ತಿದ್ದಂತೆ ಕ್ಷಯದಂಥ ರೋಗಗಳ ದಾಳಿಯ ಸಂಭಾವ್ಯತೆ ಸಾಮಾನ್ಯ ವ್ಯಕ್ತಿಗಿಂತ ಮೂರು ಪಟ್ಟು ಹೆಚ್ಚು. ಕ್ಷಯ ರೋಗಿಗಳಲ್ಲಿ ಶೇ. 30ರಷ್ಟು ಮಂದಿಗೆ ಮಧುಮೇಹ ಇರುವುದು ಗಮನಾರ್ಹ ವಿಷಯ. ಇದಕ್ಕಿಂತ ಹೆಚ್ಚಿನ ಚಿಂತೆಯ ವಿಷಯವೆಂದರೆ, ಪುಪ್ಪುಸವನ್ನು ಹಿಂಡುವ ಕ್ಷಯ ರೋಗದ ಚಿಕಿತ್ಸೆಯೇ ಮಧುಮೇಹಿಗಳಲ್ಲಿ ಕೆಲವೊಮ್ಮೆ ಫಲಕಾರಿಯಾಗದೆ ಪರಿಸ್ಥಿತಿ ವಿಷಮಕ್ಕೆ ಹೋಗುವುದು.

ಸಿಸ್ಟಿಕ್‌ ಫೈಬ್ರೋಸಿಸ್

ಯಕೃತ್ತನ್ನು ಕಾಡುವ ಇದೂ ಸಹ ರೋಗಿಗಳ ಪಾಲಿಗೆ ಪ್ರಾಣಾಂತಿಕ ಸಮಸ್ಯೆಯಾಗಿ ಮಾರ್ಪಡಬಹುದು. ಹಾಗಾಗಿ ಮಧುಮೇಹ ಬಾರದಂತೆ ತಡೆಯುವುದು ಮತ್ತು ಒಂದೊಮ್ಮೆ ಬಂದರೆ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಮಹತ್ವದ್ದೆನಿಸುತ್ತದೆ.

ಸಿಒಪಿಡಿ

Chronic Obstructive Pulmonary Disorder (COPD) ಎಂದು ಕರೆಯಲಾಗುವ ಈ ಸಮಸ್ಯೆಯು ‍ಶ್ವಾಸಕೋಶದಲ್ಲಿನ ಉರಿಯೂತದಿಂದ ಬರುವಂಥ ಸಾಮಾನ್ಯ ಸಮಸ್ಯೆ. ಆದರೂ ಮಧುಮೇಹಿಗಳಲ್ಲಿ ಕೆಲವೊಮ್ಮೆ ಇದೂ ಸಹ ವಿಷಮಿಸುವ ಸಾಧ್ಯತೆಯಿದೆ. ಸುಸ್ತು, ಉಸಿರಾಟದ ತೊಂದರೆ- ಅದರಲ್ಲೂ ದೈಹಿಕ ಚಟುವಟಿಕೆ ಮಾಡಿದಾಗ ಉಸಿರು ಹಿಡಿದಂತಾಗುವುದು, ಉಬ್ಬಸ, ಕಫ ಮತ್ತು ಎದೆ ಬಿಗಿಯುವುದು ಇದರ ಸಾಮಾನ್ಯ ಲಕ್ಷಣಗಳು. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಶ್ವಾಸಕೋಶವು ಸೋಂಕಿಗೆ ಒಳಗಾಗಿ ಸಮಸ್ಯೆಗಳು ಉಲ್ಭಣಿಸುತ್ತವೆ.

ತಡೆಯುವುದು ಹೇಗೆ?

ಎಲ್ಲಕ್ಕಿಂತ ಮುಖ್ಯವಾಗಿ ಮಧುಮೇಹವನ್ನು ಹತೋಟಿಯಲ್ಲಿಡುವುದು ಅಗತ್ಯ. ಇದಕ್ಕೆ ಸೂಕ್ತ ಆಹಾರ ಮತ್ತು ನಿಯಮಿತ ವ್ಯಾಯಾಮ ಜೊತೆಯಾಗಿ ಬೇಕು. ಇದಲ್ಲದೆ, ಯಾವುದೇ ಸೋಂಕುಗಳನ್ನು ನಿರ್ಲಕ್ಷ ಮಾಡದೆ, ಪ್ರಾರಂಭದಲ್ಲೇ ಪ್ರತಿಬಂಧಿಸಬೇಕಾಗುತ್ತದೆ. ದೇಹದಲ್ಲಿ ಗ್ಲೂಕೋಸ್‌ ಹೆಚ್ಚಿದ್ದಷ್ಟೂ ರೋಗಾಣುಗಳಿಗೆ ಪುಷ್ಕಳ ಆಹಾರ ಸಿಕ್ಕಿದಂತೆ ಎಂಬುದನ್ನು ಮರೆಯಬಾರದು. ಇದರ ಜೊತೆಗೆ, ಪುಪ್ಪುಸವನ್ನು ಆರೋಗ್ಯವಾಗಿಡಲು ಧೂಮಪಾನವನ್ನು ಸಂಪೂರ್ಣ ತ್ಯಜಿಸಲೇಬೇಕು. ಇಲ್ಲದಿದ್ದರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ- ಮಾಡಿದ್ದೆಲ್ಲವೂ ವ್ಯರ್ಥ.

ಇದನ್ನೂ ಓದಿ: Food For Healthy Bones: ಮೂಳೆಗಳು ಸಶಕ್ತವಾಗಿರಬೇಕೆ? ಹಾಗಾದರೆ ಇಂಥ ಆಹಾರಗಳು ಬೇಕು!

Exit mobile version