Site icon Vistara News

Dinner time: ಸೂರ್ಯಾಸ್ತಕ್ಕೂ ಮೊದಲೇ ರಾತ್ರಿಯೂಟ ಮಾಡುವ ಅಭ್ಯಾಸದ ಲಾಭಗಳೇನು ಗೊತ್ತೇ?

dinner time

ರಾತ್ರಿಯೂಟ ಅಥವಾ ಡಿನ್ನರ್‌ (Dinner time) ಬಗೆಗೆ ಅನೇಕರಿಗೆ ಸಾಕಷ್ಟು ಗೊಂದಲಗಳಿರುತ್ತವೆ. ಅಂದರೆ, ರಾತ್ರಿ ಸರಿಯಾದ ಸಮಯದಲ್ಲಿ ಊಟ ಮಾಡುವುದು ಮುಖ್ಯ ಎಂಬ ಸಲಹೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸ್ವೀಕರಿಸಿರುತ್ತಾರೆ. ಆದರೆ ಸರಿಯಾದ ಸಮಯ ಎಂದರೆ ಯಾವುದು ಎಂಬ ಗೊಂದಲ ಹಲವರದ್ದು. ಮಲಗುವುದುಕ್ಕಿಂತ ಕನಿಷ್ಟ ಎರಡರಿಂದ ಮೂರು ಗಂಟೆಯಾದರೂ ಮೊದಲು ಊಟ ಮಾಡುವುದು ಬಹಳ ಮುಖ್ಯ ಎಂದು ವಯಸ್ಸಾದವರಿಗೆ, ಮಧುಮೇಹದ (Diabetes) ತೊಂದರೆ ಇರುವ ಮಂದಿಗೆ, ರಕ್ತದೊತ್ತಡ (Blood pressure) ಇರುವ ಮಂದಿಗೆ ವೈದ್ಯರು ಸಲಹೆ ನೀಡಿರುವುದು ಸಾಮಾನ್ಯ. ದಿನವೊಂದರ ಕೊನೆಯ ಆಹಾರವೆಂದು ಪರಿಗಣಿಸಲ್ಪಡುವ ಡಿನ್ನರ್‌ ಅಥವಾ ರಾತ್ರಿಯೂಟ ಎಷ್ಟು ಮಾಡಬೇಕು, ಯಾವಾಗ ಮಾಡಬೇಕು ಎಂಬುದರ ಅರಿವು ಕೇವಲ ಇಷ್ಟೇ ಮಂದಿಗಲ್ಲ, ಎಲ್ಲರಿಗೂ ಇರುವುದು ಆರೋಗ್ಯದ ದೃಷ್ಟಿಯಿಂದ (healthy dinner) ಒಳ್ಳೆಯದು. ಹಾಗಾದರೆ ಬನ್ನಿ, ಆಯುರ್ವೇದ (Ayurveda tips) ಈ ರಾತ್ರಿಯೂಟದ ಕುರಿತು ಏನು ಹೇಳುತ್ತದೆ ಎಂಬುದನ್ನು ನೋಡೋಣ.

ಆಯುರ್ವೇದದ ಪ್ರಕಾರ, ರಾತ್ರಿಯೂಟ ಮಾಡಬಹುದಾದ ಅತ್ಯಂತ ಪ್ರಶಸ್ತವಾದ ಸಮಯ ಎಂದರೆ ಅದು ಸೂರ್ಯಾಸ್ತಕ್ಕೂ ಮೊದಲು. ಹೌದು. ಸೂರ್ಯಾಸ್ತಕ್ಕೂ ಮೊದಲು ಊಟ ಮುಗಿಸುವ ಪದ್ಧತಿಯೇನೂ ಹೊಸತಲ್ಲ. ಕೆಲವು ಧರ್ಮದ ಮಂದಿ ಅದನ್ನು ತಮ್ಮ ನಿತ್ಯಜೀವನದಲ್ಲಿ ಪಾಲನೆಯನ್ನೂ ಮಾಡುವುದು ತಿಳಿದ ವಿಚಾರ.

ಸೂರ್ಯ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾನೆ ಎಂದರೆ ನೀವು ನಂಬಲೇಬೇಕು. ಸೂರ್ಯನ ಉಪಸ್ಥಿತಿಯಲ್ಲಿ ಅಂದರೆ ಹಗಲು ಹೊತ್ತಿನಲ್ಲಿ ದೇಹಕ್ಕೆ ಜೀರ್ಣಕ್ರಿಯೆ ಸುಲಭ. ಸೂರ್ಯೋದಯವಾದ ಕೂಡಲೇ ನಮ್ಮ ಜೀರ್ಣಾಂಗ ವ್ಯವಸ್ಥೆಯೂ ಕೂಡಾ ಚುರುಕಾಗುತ್ತದೆ. ಹಾಗೆಯೇ ಸೂರ್ಯಾಸ್ತವಾದ ಮೇಲೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಜೀರ್ಣರಸಗಳ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಪರಿಣಾಮ ಜೀರ್ಣಕ್ರಿಯೆ ಮಂದಗತಿಯಲ್ಲಿ ಸಾಗುತ್ತದೆ. ಇದೇ ಕಾರಣಕ್ಕೆ ನಾವು ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡಿದರೆ, ನಮ್ಮ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ. ತಡವಾಗಿ ಊಟ ಮಾಡಿದರಂತೂ ಜೀರ್ಣಾಂಗವ್ಯೂಹವು ನಿಧಾನವಾಗಿ ಗಂಟೆಗಟ್ಟಲೆ ಕೆಲಸ ಮಾಡುತ್ತಲೇ ಇರುತ್ತದೆ. ನಮ್ಮ ದೇಹಕ್ಕೆ ನಾವು ವಿಶ್ರಾಂತಿ ನೀಡಿದರೂ, ನಮ್ಮ ಜೀರ್ಣಾಂಗವ್ಯೂಹಕ್ಕೆ ವಿಶ್ರಾಂತಿ ನೀಡಿರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಅಷ್ಟೇ ಅಲ್ಲ, ಸೂರ್ಯಾಸ್ತದ ನಂತರ ದೇಹದಲ್ಲಿ ಕಲ್ಮಶಗಳೂ ಬಿಡುಗಡೆಯಾಗಿ ಅದು ಆಹಾರದ ಜೊತೆಗೆ ಸೇರಿ ಮಲಬದ್ಧತೆ, ಹೊಟ್ಟೆಯುಬ್ಬರದಂತಹ ಸಮಸ್ಯೆಗಳಿಗೆ ಪ್ರೇರಣೆ ನೀಡುತ್ತದೆ.

ಇದನ್ನೂ ಓದಿ: Health Tips: ಸೂಕ್ಷ್ಮ ಜೀರ್ಣಕ್ರಿಯೆಯ ಮಂದಿ ರಾತ್ರಿಯೂಟಕ್ಕೆ ಇವುಗಳಿಂದ ದೂರವಿರಿ!

ಹಾಗಾದರೆ, ಸೂರ್ಯಾಸ್ತಕ್ಕೂ ಮೊದಲು ಊಟ ಮಾಡುವುದರಿಂದ ಕೇವಲ ಇಷ್ಟೇ ಪ್ರಯೋಜನವಾ ಎಂದರೆ ಖಂಡಿತಾ ಅಲ್ಲ. ಒಮ್ಮೆ ರಾತ್ರಿಯೂಟ ಬೇಗ ಮಾಡುವ ಅಭ್ಯಾಸವಾದರೆ, ಅದರ ಲಾಭಗಳು ನಿಮಗೆ ತಾನೇತಾನಾಗಿ ಅರಿವಾಗುತ್ತಾ ಹೋಗುತ್ತದೆ. ದೇಹದಲ್ಲಿ ಆಹಾರ ಬೇಗನೆ ಜೀರ್ಣವಾಗಿ, ಜೀರ್ಣಾಂಗವ್ಯೂಹ ಬೇಗನೆ ಕೆಲಸ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ತನ್ನ ಅಂಗಾಂಗಗಳಿಗಾದ ತೊಂದರೆಗಳನ್ನು ತಾನಾಗಿ ಸರಿಪಡಿಸಿಕೊಳ್ಳಲು, ಸ್ನಾಯುಗಳಿಗೆ ಹಾಗೂ ಮಾಂಸಖಂಡಗಳಿಗೆ ಆದ ನೋವುಗಳನ್ನು ಕಡಿಮೆ ಮಾಡಿಕೊಳ್ಳಲು ದೇಹಕ್ಕೆ ತನ್ನದೇ ಆದ ಸಮಯ ದೊರೆಯುತ್ತದೆ.

ಇಷ್ಟೇ ಅಲ್ಲ, ಇದರಿಂದ ನಿದ್ದೆಗೂ ನೇರ ಸಂಬಂಧವಿದೆ. ಸೂರ್ಯಾಸ್ತಕ್ಕೂ ಮೊದಲು ಊಟ ಮುಗಿಸುವುದರಿಂದ ನಿದ್ದೆ ಚೆನ್ನಾಗಿ ಆಗುತ್ತದೆ. ಬೇಗನೆ ನಿದ್ದೆ ಮಾಡಿ, ಬೆಳಗ್ಗೆ ಚುರುಕಾಗಿ ಏಳುವ ಅಭ್ಯಾಸವಾಗುತ್ತದೆ. ಎದ್ದ ಕೂಡಲೇ ಜೀರ್ಣಾಂಗವ್ಯೂಹವೂ ಎಂದಿಗಿಂತ ಹೆಚ್ಚು ಚುರುಕಾಗಿ ಕೆಲಸ ಮಾಡಲು ಆರಂಭಿಸುತ್ತದೆ.

ಇನ್ನು ಮಧುಮೇಹಿಗಳಿಗೂ ಈ ಅಭ್ಯಾಸ ಒಳ್ಲೆಯದು. ರಕ್ತದಲ್ಲಿ ಸಕ್ಕರೆಯ ಮಟ್ಟ ಏರುಪೇರಾಗುವುದನ್ನು ತಪ್ಪಿಸಿ, ಮಧುಮೇಹ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: Health Tips: ಕಿತ್ತಳೆ ಹಣ್ಣಿನ ಸಿಪ್ಪೆಯಿಂದಲೂ ಇಷ್ಟೆಲ್ಲಾ ಲಾಭವಿದೆ, ಮತ್ಯಾಕೆ ಎಸೀತೀರಾ!

Exit mobile version