Site icon Vistara News

Paracetamol Side Effect : ಜ್ವರ ಎಂದ ತಕ್ಷಣ ಪ್ಯಾರಾಸಿಟಮಾಲ್‌ ನುಂಗಬೇಡಿ! ಇದರ ಸೈಡ್ ಎಫೆಕ್ಟ್ ತಿಳಿಯಿರಿ

Do not swallow paracetamol as soon as you have a fever! Know its side effect

#image_title

ಮೈ ಬೆಚ್ಚಗಾಗಿದೆಯೇ? ಸಣ್ಣ ನೆಗಡಿ ಜೊತೆಗೆ ಮೈ-ಕೈ ನೋವೇ? ಸ್ವಲ್ಪ ತಲೆಭಾರದೊಂದಿಗೆ ಗಂಟಲು ನೋವೇ? ಇಂಥದ್ದು ಏನೇ ಆದರೂ ಒಂದು ಪ್ಯಾರಾಸಿಟಮಾಲ್‌ ನುಂಗಿದರೆ… ಮನಸ್ಸಿಗೆ ನೆಮ್ಮದಿ. ಹಾಗೆಂದು ಅನಾರೋಗ್ಯ ಕಡಿಮೆ ಆಗುವುದಕ್ಕೆ ನಾಲ್ಕಾರು ದಿನಗಳು ಬೇಕಾದೀತು ಅಥವಾ ಒಂದೆರಡು ದಿನಗಳೇ ಸಾಕಾದೀತು. ಆದರೆ ಔಷಧ ನುಂಗುವುದು ನಮ್ಮ ಧೈರ್ಯಕ್ಕೆ. ಬಹಳಷ್ಟು ಬಾರಿ ವೈದ್ಯರನ್ನೂ ಕೇಳದೆ, ಔಷಧ ಅಂಗಡಿಯವರನ್ನೋ ಗೂಗಲ್‌ ವಿಶ್ವವಿದ್ಯಾಲಯವನ್ನೋ ಕೇಳಿ ಅಥವಾ ಸ್ವಯಂವೈದ್ಯವನ್ನಾದರೂ ಮಾಡಿಕೊಂಡು ಮಾತ್ರೆ ಗುಳುಂ ಮಾಡುತ್ತೇವೆ. ಆದರೆ ವೈದ್ಯ ವಿಜ್ಞಾನದ ಪ್ರಕಾರ ಇದು ಖಂಡಿತಾ ಸರಿಯಲ್ಲ. ಅದರಲ್ಲೂ ಗರ್ಭಿಣಿಯರಿಗೆ ಪ್ಯಾರಾಸೆಟಮಾಲ್‌ ಬೇಡವೇಬೇಡ.

ಹೀಗೆ ಸಣ್ಣ-ಪುಟ್ಟದ್ದಕ್ಕೆಲ್ಲಾ ಔಷಧ ನುಂಗುವುದು ಬೇಡ ಎನ್ನುತ್ತಾರೆ ತಜ್ಞರು. ಅನುಮಾನವಿದ್ದರೆ ವೈದ್ಯರಲ್ಲಿ ಮಾತನಾಡಿ, ಚಿಕಿತ್ಸೆ ಅಗತ್ಯವಿದ್ದರೆ ಅವರೇ ಸೂಚಿಸುತ್ತಾರೆ. ಹಾಗಿಲ್ಲದೆ, ವಿಶ್ರಾಂತಿ ಅಥವಾ ಇನ್ನಿತರ ಮಾರ್ಗಗಳ ಮೂಲಕ ಅನಾರೋಗ್ಯ ತೊಲಗುತ್ತದೆ ಎಂದಾದರೆ ಔಷಧಿ ನುಂಗುವುದಾದರೂ ಯಾಕೆ? ಅದರಲ್ಲೂ, ಸ್ವಲ್ಪ ಮೈ ಬಿಸಿಯಾದರೆ ತುರ್ತಾಗಿ ಔಷಧಿ ಅಂಗಡಿಗೆ ಓಡಿ, ಪ್ಯಾರಾಸಿಟಮಾಲ್‌ ತರುವ ಅಗತ್ಯವಿಲ್ಲ. ಹೀಗೆ ಮಾಡುವುದರಿಂದ ಸೋಂಕಿನೊಂದಿಗೆ ಹೋರಾಡಿ, ಜ್ವರ ತಣಿಸುವಂಥ ದೇಹದ ನೈಸರ್ಗಿಕ ಪ್ರತಿಕ್ರಿಯೆ ಕುಂಠಿತಗೊಳ್ಳುತ್ತದೆ. ಇಷ್ಟೇ ಅಲ್ಲ, ಔಷಧಿಯ ಅಗತ್ಯವಿದ್ದಾಗ ಅದು ದೇಹದ ಮೇಲೆ ಕೆಲಸ ಮಾಡದೇ ಹೋಗಬಹುದು.

ನಮ್ಮ ದೇಹದ ತಾಪಮಾನವನ್ನು ನಿಯಂತ್ರಿಸುವ ರಾಸಾಯನಿಕ ದೂತರನ್ನು ಮೆದುಳಿಗೆ ಹೋಗಲು ಬಿಡದಂತೆ ಮಾಡಿ, ಆ ಮೂಲಕ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ತಂತ್ರವನ್ನು ಪ್ಯಾರಾಸಿಸೆಟಮಾಲ್‌ಗಳು ಅನುಸರಿಸುತ್ತವೆ. ಎಲ್ಲಾ ಸಂದರ್ಭಗಳಲ್ಲೀ ಇದರ ಅಗತ್ಯ ನಮಗೆ ಇರುವುದಿಲ್ಲ. ಯಾವಾಗ ಅಗತ್ಯ ಬೀಳುತ್ತದೆ ಎಂಬುದನ್ನು ವೈದ್ಯರು ನಿರ್ಧರಿಸಿದರೆ ಉತ್ತಮ. ದೇಹದ ಅನಾರೋಗ್ಯ, ಸೋಂಕು ಮತ್ತು ಗಾಯಗಳ ನೋವನ್ನು ತಹಬಂದಿಗೆ ತರುವ ಪ್ರೋಸ್ಟಾಗ್ಲಾಂಡಿನ್‌ಗಳ ಕೆಲಸಕ್ಕೆ ಈ ಔಷಧಗಳು ಅಡ್ಡಿಯುಂಟು ಮಾಡುತ್ತವೆ.

ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಾಲ್‌ಗಳ ಬಳಕೆ ಬೇಡ ಎನ್ನುತ್ತದೆ ವೈದ್ಯವಿಜ್ಞಾನ. ಇದರಲ್ಲಿರುವ ರಾಸಾಯನಿಕಗಳು ಹೊಟ್ಟೆಯಲ್ಲಿರುವ ಶಿಶುವಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಶಿಶುವಿನಲ್ಲಿ ಆಟಿಸಂ, ಬುದ್ಧಿಮತ್ತೆ ಕಡಿತಗೊಳ್ಳುವುದು, ಭಾಷೆಯ ತೊಡಕು, ಅತಿಯಾದ ಕ್ರಿಯಾಶೀಲತೆಯಂಥ ದೋಷಗಳನ್ನು ಅಧ್ಯಯನಗಳು ಗಮನಿಸಿವೆ. ಈ ಕುರಿತು ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳು ಸಹ ಇದನ್ನೇ ಹೇಳುತ್ತವೆ. ಇವೆಲ್ಲ ನರ ಮತ್ತು ಬೌದ್ಧಿಕ ಸ್ತರದಲ್ಲಾದರೆ, ದೈಹಿಕವಾಗಿಯೂ ಭ್ರೂಣದ ಬೆಳವಣಿಗೆಗೆ ಸಮಸ್ಯೆಯನ್ನು ಒಡ್ಡುತ್ತವೆ ಈ ಔಷಧಿಗಳು. ಹಾಗಾಗಿ ವೈದ್ಯರ ಸಲಹೆ ಇಲ್ಲದ ಹೊರತು ಗರ್ಭಿಣಿಯರಿಗೆ ಪ್ಯಾರಾಸೆಟಮಾಲ್‌ ನಿಷಿದ್ಧ.

Exit mobile version