ನಮ್ಮ ಹಲ್ಲುಗಳು (Benefits of Oral health) ಸಹ ನಮ್ಮ ಬೆರಳಚ್ಚಿನಂತೆಯೇ ಅನನ್ಯ; ಒಬ್ಬರದ್ದಿರುವಂತೆ ಇನ್ನೊಬ್ಬರದ್ದು ಇರುವುದಿಲ್ಲ. ಅವಳಿ ಮಕ್ಕಳ ಹಲ್ಲುಗಳು ಸಹ ಒಂದೇ ರೀತಿ ಇರುವುದಿಲ್ಲ. ಆದರೆ ಬಾಯಿ ಸ್ವಚ್ಛ ಮಾಡುವ ರೀತಿಯಲ್ಲಿ ಭಿನ್ನತೆಯಿಲ್ಲ, ಅದು ಎಲ್ಲರಿಗೂ ಸಮಾನ. ಬಾಯಿಯ ಶುಚಿತ್ವವನ್ನು ಕಾಪಾಡಿಕೊಂಡು, ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮುಂದೆ ಬರಬಹುದಾದ ಒಂದಿಷ್ಟು ರೋಗಗಳನ್ನು ಮುಂದೂಡಬಹುದು ಅಥವಾ ಮುಂದಿನ ಹಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯನ್ನೂ ಪಡೆಯಬಹುದು. ಉದಾ, ಒಸಡುಗಳು ಪದೇಪದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅಥವಾ ಪೆರಿಯೊಡಾಂಟೈಟಿಸ್ ಬಾಧಿಸುತ್ತಿದ್ದರೆ ಟೈಪ್-2 ಮಧುಮೇಹದ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದು. ಕೆಲವು ವಿಟಮಿನ್‌ಗಳ ಕೊರತೆಯನ್ನು ದಂತ, ಒಸಡುಗಳು ಸ್ಪಷ್ಟವಾಗಿ ತಿಳಿಸುತ್ತವೆ. ಏನಿದು? ಹೇಗೆ?
ಪೋಷಕಾಂಶಗಳ ಕೊರತೆ
ಕೆಲವು ಪೋಷಕಸತ್ವಗಳ ಕೊರತೆಯನ್ನೂ ಬಾಯಿಯ ಮೂಲಕ ತಿಳಿಯಬಹುದು. ಉದಾ, ವಿಟಮಿನ್ ಬಿ ಕೊರತೆಯಿದ್ದರೆ ಹಲ್ಲುಗಳ ಎನಾಮಲ್ ಕವಚ ಬಲಹೀನವಾಗಿರುತ್ತದೆ. ಮಾತ್ರವಲ್ಲ, ತುಟಿ ಮತ್ತು ಕೆನ್ನೆಯ ಒಳಭಾಗದಲ್ಲಿ ಬಿರುಕುಗಳು ಇರಬಹುದು. ಬಾಯಲ್ಲಿ ಪದೇಪದೆ ಹುಣ್ಣಾಗುವುದು ಸಹ ಇಂಥದ್ದನ್ನೇ ಸೂಚಿಸುತ್ತದೆ. ವಿಟಮಿನ್ ಡಿ ಕೊರತೆಯಿದ್ದರೆ ಹಲ್ಲುಗಳು ಸೊಟ್ಟಾಗಿರುವುದು, ಹುಳುಕು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗಬಹುದು.
ಆಸ್ಟಿಯೊಪೊರೋಸಿಸ್
ಈ ರೋಗ ಮೂಳೆಗಳನ್ನು ಮಾತ್ರವಲ್ಲ, ಹಲ್ಲುಗಳನ್ನೂ ಬಾಧಿಸುತ್ತದೆ. ಅಂದರೆ ಹಲ್ಲುಗಳ ಆಧಾರವಾದ ಮೂಳೆಗಳು ಶಕ್ತಿಗುಂದುತ್ತಿದ್ದಂತೆಯೇ ಆ ಹಲ್ಲುಗಳು ಶಕ್ತಿಹೀನವಾಗಿ ಉದುರಿಹೋಗಬಹುದು. ಹಾಗಾಗಿ ಹಲ್ಲುಗಳ ಬಲ ಕುಂದುವುದು ಮತ್ತು ದೇಹದ ಮೂಳೆಗಳ ಬಲ ಕುಂದುವುದರ ನಡುವೆ ನೇರ ನಂಟನ್ನು ತಜ್ಞರು ಗುರುತಿಸಿದ್ದಾರೆ.
ಗರ್ಭಾವಸ್ಥೆಯ ಸೂಚನೆ
ಇದ್ದಕ್ಕಿದ್ದಂತೆ ಒಸಡುಗಳಿಂದ ರಕ್ತಸ್ರಾವ, ಹಲ್ಲುಗಳ ಬುಡ ಊದಿಕೊಳ್ಳುವಂಥ ತೊಂದರೆ ಆರಂಭವಾಗಿದೆಯೇ? ಗರ್ಭಾವಸ್ಥೆಯಲ್ಲಿ ಬಾಧಿಸುವ ಜಿಂಜವೈಟಿಸ್ ಇದಕ್ಕೆ ಕಾರಣವಾಗಿರಬಹುದು. ಗರ್ಭಿಣಿಯಲ್ಲಿ ಆಗುವ ಹಲವು ರೀತಿ ಹಾರ್ಮೋನ್ ಬದಲಾವಣೆಗಳಿಂದ ಮತ್ತು ಆಗಾಗ ಮೆಲ್ಲುವುದರಿಂದ ಒಸಡುಗಳ ಸಮಸ್ಯೆ ಬಾಧಿಸುವುದು ಸಾಮಾನ್ಯ
ಹೃದಯ ಜೋಪಾನ
ಹಲ್ಲು ಉದುರುವುದು, ಒಸಡುಗಳ ರೋಗಗಳು ಮತ್ತು ಹೃದ್ರೋಗಗಳ ನಡುವೆಯೂ ನಂಟಿದೆ ಎನ್ನುತ್ತದೆ ವೈದ್ಯ ವಿಜ್ಞಾನ. ಹಲ್ಲುಗಳ ಮೇಲೆ ಪದೇಪದೆ ಪ್ಲೇಕ್ ಅಂದರೆ ಪದರದಂತೆ ಕಟ್ಟಿಕೊಳ್ಳುವುದು ಮತ್ತು ಒಸಡುಗಳ ಅನಾರೋಗ್ಯ ಕಾಡುತ್ತಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಭೀತಿ ಅಂಥವರಿಗೆ ಹೆಚ್ಚು. ಹಾಗಾಗಿ ಈ ರೋಗಗಳನ್ನು ದೂರವಿಡುವಂಥ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ.
ಹಲ್ಲು ಕಡಿಯುತ್ತೀರೇ?
ಕಟಕಟನೆ ಹಲ್ಲು ಕಡಿಯುವುದನ್ನು ಕೋಪದ ಲಕ್ಷಣ ಎನ್ನುತ್ತೇವೆ. ಆದರೆ ಇದು ಬದುಕಿನಲ್ಲಿ ಕಾಡುತ್ತಿರುವ ಅತಿ ಒತ್ತಡದ ಚಿಹ್ನೆಯೂ ಆಗಿರಬಹುದು. ಅದರಲ್ಲೂ ಬಿಗಿದುಕೊಂಡಂಥ ಬಾಯಿ ಖಂಡಿತವಾಗಿ ನಮ್ಮ ಮಾನಸಿಕ ಸ್ಥಿತಿಯ ಸಂಕೇತ. ಒತ್ತಡವನ್ನು ಮೊದಲು ಇಳಿಸಿಕೊಳ್ಳಿ. ಹಲ್ಲುಗಳನ್ನು ಉಳಿಸಿಕೊಳ್ಳಿ.
ತಿನ್ನುವ ಕಾಯಿಲೆ
ಬುಲಿಮಿಯದಂಥ ರೋಗವನ್ನು ತಿನ್ನದಿರುವ ಕಾಯಿಲೆ ಎಂದರೂ ತಪ್ಪೇನಿಲ್ಲ! ಅತಿಯಾಗಿ ತಿನ್ನುವುದು ಮತ್ತು ದೇಹ ತೂಕವನ್ನು ನಿಯಂತ್ರಿಸುವ ಭರದಲ್ಲಿ ಎಲ್ಲವನ್ನೂ ವಾಂತಿ ಮಾಡಿಕೊಳ್ಳುವ ಇದೊಂದು ಮಾನಸಿಕ ಸಮಸ್ಯೆಯೂ ಹೌದು. ಈ ತೊಂದರೆ ಇರುವವರಿಗೆ ಎನಾಮಲ್ ಕವಚಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ. ವಾಂತಿ ಮೂಲಕ ಹೊಟ್ಟೆಯಲ್ಲಿರುವ ಪಿತ್ತರಸ ಬಾಯಿಗೆ ಬಂದು, ಹಲ್ಲುಗಳಿಗೆ ಸೋಕಿದಾಗ, ಅದರಲ್ಲಿರುವ ಆಮ್ಲೀಯ ಗುಣದಿಂದಾಗಿ ಎನಾಮಲ್ ಹಾಳಾಗಲು ಪ್ರಾರಂಭಿಸುತ್ತದೆ. ಇದರಿಂದ ಹಲ್ಲುಗಳ ಬಣ್ಣ ಮತ್ತು ಆಕಾರದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ನರರೋಗಗಳಿಗೂ ದಿಕ್ಸೂಚಿ
ಜೀವನವಿಡೀ ಮತ್ತೆಮತ್ತೆ ಒಸಡು ಮತ್ತು ಹಲ್ಲುಗಳ ಸೋಂಕುಗಳಿಂದ ಬಳಲಿದ ವೃದ್ಧರಲ್ಲಿ ಡಿಮೆನ್ಶಿಯ ಅಥವಾ ಅಲ್‌ಜೈಮರ್ಸ್‌ನಂಥ ನರರೋಗಗಳು ಅಮರಿಕೊಳ್ಳುವುದು, ಆರೋಗ್ಯವಂತ ಹಲ್ಲುಗಳಿರುವವರಿಗಿಂತ ಅಧಿಕ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಬಾಯಿಯ ಆರೋಗ್ಯವನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ವೃದ್ಧಾಪ್ಯದಲ್ಲಿ ಬರಬಹುದಾದ ಘೋರ ಕಾಯಿಲೆಗಳನ್ನೂ ದೂರ ಇರಿಸಬಹುದು.
ಅಲರ್ಜಿ
ಬಿಟ್ಟೂಬಿಡದೆ ಕಾಡುವ ನೆಗಡಿ, ಮೂಗು ಕಟ್ಟುವಂಥ ಅಲರ್ಜಿಯ ಸಮಸ್ಯೆಯಿಂದಾಗಿ ಹಲ್ಲುನೋವು ಬರುವ ಸಾಧ್ಯತೆಯೂ ಇಲ್ಲದಿಲ್ಲ. ಕಟ್ಟಿದ ಮೂಗಿನ ಉಪಟಳದಿಂದ ಸದಾ ಕಾಲ ಬಾಯಿಯಿಂದಲೇ ಉಸಿರಾಡು ಅವಸ್ಥೆಯಲ್ಲಿದ್ದರೆ, ಬಾಯಿಯ ಜೊಲ್ಲು ಒಣಗುವುದು ಸಹಜ. ಬಾಯಿಯಲ್ಲಿ ಉಳಿಯುವ ಆಹಾರದ ಕಣಗಳು, ಆಮ್ಲೀಯ ರಸಗಳನ್ನೆಲ್ಲಾ ಸ್ಚಚ್ಛಮಾಡಲು ಲಾಲಾ ರಸ ಇಲ್ಲದಿದ್ದರೆ, ಅದರಿಂದಲೂ ಹಲ್ಲು ಹುಳುಕಾಗುತ್ತದೆ.