ಬೇಸಿಗೆ ಸುಡು ಸುಡು ಬಿಸಿಲಿಗೆ ಏನಾದರೂ ತಂಪು ತಂಪು ತಿನ್ನೋಣ ಅನ್ನುವುದು ಸಹಜ. ಮನುಷ್ಯನಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳೂ ಸಹ ನೀರಿನ ಆಸರೆ ಬಯಸುವುದು ಸಾಮಾನ್ಯ. ಪ್ರಕೃತಿದತ್ತವಾಗಿ ಸಿಗುವ ಹಣ್ಣು ಹಂಪಲುಗಳಿಂದ ದೇಹ ತಂಪು ಮಾಡಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸುತ್ತೇವೆ. ಇನ್ನು ತೂಕ ಇಳಿಸುವ ಮಂದಿಗೆ ಈ ಬೇಸಿಗೆ ಕಾಲ ಸಕಾಲ. ಸಾಕಷ್ಟು ಹಣ್ಣುಗಳು ತೂಕ ಇಳಿಕೆಗೆ ಪೂರಕವಾಗಿಯೂ ಇವೆ. ಹೆಚ್ಚು ಲೈಕೋಪೀನ್ ಇರುವ ಕಲ್ಲಂಗಡಿ ಹಣ್ಣೂ (watermelon) ಕೂಡಾ, ತೂಕ ಇಳಿಕೆಗೆ ಸಹಾಯ ಮಾಡುವ ಹಣ್ಣೇ ಆಗಿದೆ. ಆದರೆ, ಹಾಗಂತ, ಈ ಕಲ್ಲಂಗಡಿಯನ್ನೇ ತಿಂದು ತೂಕ ಇಳಿಸಲು ಪ್ರಯತ್ನಿಸುವ ಮಂದಿಯೂ ಇಲ್ಲದಿಲ್ಲ. ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿಯನ್ನು ತಿಂದು ತೂಕ ಇಳಿಸಿಕೊಂಡವರೂ ಇದ್ದಾರೆ ನಿಜ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಬಿಸಿಲಿನ ಝಳದಿಂದ ರಕ್ಷಿಸುವ ಗುಣಗಳಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ್ದು. ಆದರೆ, ಕಲ್ಲಂಗಡಿ ಕಡಿಮೆ ಕ್ಯಾಲರಿಯೆಂದು ಸಂಜೆಯ ಮೇಲೆ, ರಾತ್ರಿಯ ಊಟಕ್ಕೆ ತಿನ್ನುತ್ತೀರಾದರೆ ಕೊಂಚ ಎಚ್ಚರವಿರಲಿ. ಇದು ಖಂಡಿತಾ ರಾತ್ರಿಯೂಟದ ಸಮಯಕ್ಕೆ ಹೇಳಿ ಮಾಡಿಸಿದ ಹಣ್ಣಲ್ಲ. ಕಡಿಮೆ ಕ್ಯಾಲರಿಯಾದ್ದರಿಂದ ಇದು ಬೇಗ ಕರಗೀತು ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಲೆಕ್ಕಾಚಾರ ಖಂಡಿತ ತಪ್ಪು. ಬನ್ನಿ, ಕಲ್ಲಂಗಡಿಯನ್ನು ಯಾಕೆ ರಾತ್ರಿ ತಿನ್ನಬಾರದು ಎಂಬುದನ್ನು ತಿಳಿಯೋಣ.
1. ವಾಟರ್ ಮೆಲನ್ ಎಂಬ ತನ್ನ ಹೆಸರೇ ಹೇಳುವಂತೆ, ಕಲ್ಲಂಗಡಿ ಹಣ್ಣಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ನೀರಿದೆ. ಲೈಕೋಪೀನ್, ಪೊಟಾಶಿಯಂ, ಹಾಗೂ ಸಾಕಷ್ಟು ಪ್ರಮಾಣದಲ್ಲಿ ಇತರ ಪೋಷಕಾಂಶಗಳೂ ಇವೆ. ನಾರಿನಂಶವೂ ಹೆಚ್ಚಿದೆ. ಹಾಗಾಗಿ ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ ನಿಜ. ಆದರೆ, ಇವೆಲ್ಲ ಇದ್ದೂ, ಕಲ್ಲಂಗಡಿ ಹಣ್ಣನ್ನು ಯಾವಾಗ ಎಷ್ಟು ತಿನ್ನಬೇಕು ಎಂಬ ಅರಿವು ಇರಬೇಕು. ಮುಖ್ಯವಾಗಿ ರಾತ್ರಿ ಮಲಗಲು ಹೋಗುವ ಮುನ್ನ ತಿನ್ನಬಾರದು. ಅಂದರೆ, ರಾತ್ರಿಯೂಟ ಎಂದು ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಸಂಜೆ ಏಳರ ನಂತರ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಖೆಂದರೆ, ಕಲ್ಲಂಗಡಿ ಹಣ್ಣು ಸ್ವಲ್ಪ ಅಸಿಡಿಕ್ ಅಂದರೆ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ದೇಹ ವಿಶ್ರಾಂತಿಗೆ ಹೊರಡುವ ಸಂದರ್ಭ ಇದರ ಸೇವನೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನೂ ನಿಧಾನಗೊಳಿಸುವ ಅಪಾಯವಿರುತ್ತದೆ.
2. ಕಲ್ಲಂಗಡಿ ಹಣ್ಣಿನ ಸೇವನೆಗೆ ಅತ್ಯಂತ ಒಳ್ಳೆಯ ಸಮಯ ಎಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಒಂದು ಗಂಟೆ. ಈ ಸಂದರ್ಭ ದೇಹದ ಜೀರ್ಣಕ್ರಿಯೆಯ ಶಕ್ತಿ ಅತ್ಯಂತ ಹೆಚ್ಚಿರುತ್ತದೆ. ಆಗ, ಕಲ್ಲಂಗಡಿ ಹಣ್ಣಿನ ಪೋಷಕಾಂಶಗಳೂ ಸಹ ದೇಹಕ್ಕೆ ಸಮರ್ಪಕವಾಗಿ ಸಿಗುತ್ತದೆ.
3. ನಾವಂದುಕೊಂಡಂತೆ, ರಾತ್ರಿಯ ಹೊತ್ತು ಕಲ್ಲಂಗಡಿ ಹಣ್ಣು ಜೀರ್ಣಕ್ರಿಯೆಯ ಸ್ನೇಹಿಯಲ್ಲ. ಹಗಲಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡಿದರೂ ರಾತ್ರಿಯಾದ ಮೇಲೆ, ದೇಹ ವಿಶ್ರಾಂತಿಯಲ್ಲಿರುವಾಗ ಇದರ ವರಸೆ ಬದಲಾಗುತ್ತದೆ. ಹಾಗಾಗಿ, ರಾತ್ರಿ ಇದನ್ನು ಸೇವಿಸಿದರೆ, ಮಾರನೇ ದಿನ ಹೊಟ್ಟೆ ಕೆಡುವುದು, ಚೆನ್ನಾಗಿ ಕರಗಿದ ಅನುಭವ ಆಗದೆ ಇರುವುದು, ಹೊಟ್ಟೆ ಸಂಬಂಧೀ ಕಿರಿಕಿರಿಗಳು ಉಂಟಾಗುವ ಸಂಭವ ಇವೆ.
4. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ರಾತ್ರಿ ಸೇವಿಸಿದರೆ, ತೂಕ ಹೆಚ್ಚಾಗುವ ಸಂಭವವೂ ಇದೆ.
5. ಕೇವಲ ಇವಿಷ್ಟೇ ಅಲ್ಲ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಆಗಾಗ ಮೂತ್ರ ಬರುವ ಸಂಭವ ಹೆಚ್ಚು. ಹೀಗಾಗಿ, ರಾತ್ರಿಯ ನಿದ್ದೆಗೆ ಭಂಗ ಉಂಟಾಗಲೂಬಹುದು.
6. ಶೀತ ಪ್ರಕೃತಿಯ ದೇಹ ಇರುವ ಮಂದಿಗೆ ರಾತ್ರಿ ಕಲ್ಲಂಗಡಿ ಸೇವನೆಯಿಂದ ತಲೆನೋವು, ನೆಗಡಿ ಬರುವ ಸಂಭವವೂ ಇದೆ. ಮಾರನೇ ದಿನ ತಲೆ ಭಾರವಾದ ಸ್ಥಿತಿ, ತಲೆನೋವಿನ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಿ.
7. ಕಲ್ಲಂಗಡಿ ಹಣ್ಣನ್ನು ಅಂಗಡಿಯಿಂದ ತಂದ ತಕ್ಷಣ ತಾಜಾ ಆಗಿರುವಾಗಲೇ ಕತ್ತರಿಸಿ ತಿನ್ನುವುದು ಒಳ್ಳೆಯದು. ಅದನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು ಒಳ್ಳೆಯದಲ್ಲ. ತಾಜಾ ತಿನ್ನುವುದರಿಂದ ಆರೋಗ್ಯದ ಲಾಭಗಳು ಹೆಚ್ಚು.