ಮಹಿಳೆಯರನ್ನು ಬಹುವಾಗಿ ಕಾಡಿಸುವ ರೋಗಗಳ ಪೈಕಿ ಅಂಡಾಶಯದ ಕ್ಯಾನ್ಸರ್ ಸಹ ಒಂದು. ತನ್ನಿರವನ್ನು ಎಲ್ಲೂ ಪ್ರಕಟಿಸದೆ ಕಡೆಗೆ ಧುತ್ತನೆ ಎರಗುವ ಈ ರೋಗವನ್ನು ʻಸೈಲೆಂಟ್ ಕಿಲ್ಲರ್ʼ ಎಂದೇ ಇತ್ತೀಚಿನವರೆಗೆ ಭಾವಿಸಲಾಗಿತ್ತು. ಆದರೆ ಹಾಗಲ್ಲ, ಈ ರೋಗವೂ ಲಕ್ಷಣಗಳನ್ನು ಪ್ರಕಟಿಸುತ್ತದೆ. ಸಮಸ್ಯೆಯೆಂದರೆ ಈ ಲಕ್ಷಣಗಳು ಗಂಭೀರವಾಗಿರದೇ ಸಾಮಾನ್ಯ ಅನಾರೋಗ್ಯದ ಲಕ್ಷಣಗಳಂತೆ ಗೋಚರಿಸುವುದರಿಂದ ರೋಗಿಗಳ ಗಮನಕ್ಕೆ ಬಾರದೆ ಉಳಿಯುತ್ತವೆ. ಶೇ. ೭೦ರಷ್ಟು ಮಹಿಳೆಯರಲ್ಲಿ ಈ ರೋಗ ಪತ್ತೆಯಾಗುವುದು ಆರಂಭಿಕ ಹಂತಗಳನ್ನು ಮೀರಿದಾಗ. ಆದರೆ ಉದ್ಭವಾವಸ್ಥೆಯಲ್ಲೇ ಅಂಡಾಶಯ ಕ್ಯಾನ್ಸರ್ ಪತ್ತೆಯಾದರೆ ಇದನ್ನು ಗುಣಪಡಿಸಲಾಗುವ ಸಾಧ್ಯತೆಗಳು ಹೆಚ್ಚು. ಹಾಗಾದರೆ ಯಾವುವು ಆ ಲಕ್ಷಣಗಳು?
ಹೊಟ್ಟೆಯುಬ್ಬರ: ಇದು ತೀರಾ ಸಾಮಾನ್ಯ ಸಮಸ್ಯೆ. ಆಹಾರ ವ್ಯತ್ಯಾಸ, ಅಜೀರ್ಣ, ಆಸಿಡಿಟಿಯಂಥ ಏನೇ ಸಮಸ್ಯೆಯಾದರೂ ಈ ಲಕ್ಷಣಗಳು ಸಾಮಾನ್ಯ. ಮಾಸಿಕ ಸ್ರಾವದ ಸಮಯದಲ್ಲೂ ಹೀಗಾಗುವುದುಂಟು. ಆದರೆ ಇವು ಕೆಲವು ಸಮಯದವರೆಗೆ ಮುಂದುವರೆದರೆ, ಋತುಸ್ರಾಮವ ನಂತರವೂ ಹೊಟ್ಟೆಯುಬ್ಬರ ಕಡಿಮೆಯಾಗದಿದ್ದರೆ ವೈದ್ಯರನ್ನು ಕಾಣುವುದು ಒಳಿತು.
ಹೊಟ್ಟೆನೋವು: ಇದೂ ಸಹ ದಾರಿ ತಪ್ಪಿಸುವಂಥ ಲಕ್ಷಣ. ಹೊಟ್ಟೆ ನೋವು ನಿಜಕ್ಕೂ ಬಹಳಷ್ಟು ಕಾರಣಗಳಿಗೆ ಕಾಣಿಸಿಕೊಳ್ಳಬಹುದು. ಕಿಬ್ಬೊಟ್ಟೆ ಅಥವಾ ಬೆನ್ನಿನ ಕೆಳಭಾಗದಲ್ಲಿ ಹೊಸದಾಗಿ ನೋವು ಕಾಣಿಸಿಕೊಂಡು, ಕೆಲವು ಸಮಯ ಮುಂದುವರಿದರೆ ಎಚ್ಚರವಿರಲಿ. ಆಹಾರ ಬದಲಿಸಿ ನೋಡಿದರೂ ನೋವು ನಿವಾರಣೆಯಾಗದಿದ್ದರೆ ವೈದ್ಯರಲ್ಲೊಮ್ಮೆ ಚರ್ಚಿಸಿ.
ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!
ಬಾತ್ ರೂಂ ಸಮಸ್ಯೆಗಳು: ಪದೇಪದೆ ಮೂತ್ರಕ್ಕೆ ಹೋಗಬೇಕೆನಿಸುವುದು, ಮಲಬದ್ಧತೆಯ ಸಮಸ್ಯೆ ಕಾಣಿಸಿಕೊಳ್ಳುವುದು ಸಹ ಎಚ್ಚರಿಕೆಯ ಗಂಟೆಯಾಗಿರಬಹುದು. ಅಂಡಾಶಯದಲ್ಲಿರುವ ಗಡ್ಡೆಗಳಿಂದಾಗಿ ಕರುಳಿನ ಮೇಲೆ ಬೀಳುವ ಒತ್ತಡಕ್ಕೆ ಮಲಬದ್ಧತೆ ಕಾಣಿಸಿಕೊಳ್ಳಬಹುದು. ಇದೇ ರೀತಿಯ ಒತ್ತಡ ಮೂತ್ರಕೋಶಗಳ ಮೇಲೂ ಬೀಳುವ ಸಾಧ್ಯತೆ ಇರುವುದರಿಂದ ನೋವು, ಉರಿ ಉಂಟಾಗಬಹುದು.
ಹಸಿವಿಲ್ಲ: ಎಂದಾಕ್ಷಣಕ್ಕೆ ಸಂತೋಷ ಪಡಬೇಡಿ. ಹಸಿವಿಲ್ಲದಿರುವುದು, ಅತೀವ ಆಯಾಸ ಇವೆಲ್ಲ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯ ಲಕ್ಷಣಗಳೇ ಆದರೂ, ಹಲವು ದಿನಗಳವರೆಗೆ ಇವು ಮುಂದುವರಿದರೆ ವೈದ್ಯರನ್ನು ಕಾಣುವುದು ಕ್ಷೇಮ.
ಈ ಮೇಲಿನ ಎಲ್ಲಾ ಲಕ್ಷಣಗಳೂ ಅತ್ಯಂತ ಸಾಮಾನ್ಯವಾಗಿ ಯಾರನ್ನೂ ಕಾಡಬಹುದಾದದ್ದು. ಆದರೆ ಅಂಡಾಶಯ ಕ್ಯಾನ್ಸರ್‌ನ ಲಕ್ಷಣಗಳೂ ಇವು ಆಗಿರುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ಮಹಿಳೆಯರು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಒಮ್ಮೆ ಈ ರೋಗ ಆರಂಭಿಕ ಹಂತವನ್ನು ಮೀರಿದರೆ, ರೋಗಿ ಉಳಿವಿನ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ | Mouth Ulcer | ಬಾಳು ಹಣ್ಣಾಗುವ ಮೊದಲು ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು