Site icon Vistara News

Winter Skin Care: ಚಳಿಗಾಲದಲ್ಲಿ ಒಣಕಲು ಚರ್ಮ ನಯವಾಗಬೇಕಿದ್ದರೆ ಇವುಗಳನ್ನು ಕುಡಿಯಿರಿ!

Winter Skin Care

ಚಳಿಗಾಲದಲ್ಲಿ ಚಂದಕ್ಕೆ ಮುದುಡಿಕೊಂಡು ಆಗೀಗ ಬಿಸಿಬಿಸಿ ಹಬೆಯಾಡುವ ಚಹಾ ಕುಡಿಯುತ್ತಾ, ಚಳಿಗಾಲದ ಸುಖ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ನಿಮ್ಮ ಚರ್ಮಗಳೆಲ್ಲ ಬಿಗಿಯಾಗಿ, ಒರಟೊರಟಾಗಿ ಸಿಪ್ಪೆಗಳೆಲ್ಲ ಎದ್ದು, ಎಷ್ಟು ಕ್ರಿಂ ಹಚ್ಚಿಕೊಂಡರೂ ಸ್ವಲ್ಪವೇ ಹೊತ್ತಲ್ಲಿ ಮತ್ತೆ ಅದೇ ಸ್ಥಿತಿಗೆ ತಲುಪುವುದನ್ನು ಗಮನಿಸಿರಬಹುದು. ಯಾಕೆ ಹೀಗೆ, ನನ್ನ ಚರ್ಮವೇ ಹೀಗೆ, ಚಳಿಗೆ ಬೇಗ ಒಣಗುತ್ತದೆ ಎಂದು ನಿಮಗನ್ನಿಸಿದರೂ, ನೀವು ತಿನ್ನುವ ಕುಡಿಯುವ ವಸ್ತುವಿನ ಪರಿಣಾಮವೂ ಆಗಿರುತ್ತದೆ ಎಂಬುದನ್ನು ಗಮನಿಸಬೇಕು. ಚಳಿಗಾಲ ಬಂದಾಕ್ಷಣ ನೀರು ಕುಡಿಯುವುದನ್ನು ಗಣನೀಯವಾಗಿ ಕಡಿಮೆ ಮಾಡಿರುವುದೂ ಕೂಡಾ ಒಂದು ಪ್ರಮುಖ ಕಾರಣವಾದರೆ, ಕೆಲವು ಬಗೆಯ ಆಹಾರಗಳ ಸೇವನೆ ನಾವು ಮಾಡಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವುಗಳು ಯಾವುವು (Winter Skin Care) ಎಂಬುದನ್ನು ನೋಡೋಣ.

ನೀರು

ಚಳಿಗಾಲ ಬಂದ ತಕ್ಷಣ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ಸ್ವಲ್ಪ ಕಡಿಮೆಯಾದರೂ, ಇದ್ದಕ್ಕಿದ್ದಂತೆ ಗಣನೀಯವಾಗಿ ಕಡಿಮೆ ಮಾಡುವುದು ಬೇಡ. ನಿಮ್ಮ ಚರ್ಮ ಒಣಗುವುದಕ್ಕೆ ಮೂಲ ಕಾರಣ ಇದೇ. ಹಾಗಾಗಿ, ಚಳಿಗಾಳದಲ್ಲಿ ಕನಿಷ್ಟ 2.5 ಲೀಟರ್‌ ನೀರನ್ನಾದರೂ ಪ್ರತಿನಿತ್ಯ ಕುಡಿಯಿರಿ. ಚರ್ಮದ ಒಣಗುವಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಗ್ರೀನ್‌ ಟೀ

ನೀರು ಕುಡಿಯುತ್ತಲೇ ಇರುವುದು ಕಷ್ಟವಾಗುತ್ತದೆಯೋ? ಹಾಗಾದರೆ, ಗ್ರೀನ್‌ ಟೀ ಕುಡಿಯಿರಿ. ಗ್ರೀನ್‌ ಟೀಯಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳೂ, ಆಂಟಿ ಇನ್‌ಫ್ಲಮೇಟರಿ ಗುಣಗಳೂ ಇರುವುದರಿಂದ ಚರ್ಮಕ್ಕೂ ಅತ್ಯಂತ ಒಳ್ಳೆಯದು. ಮುಖ್ಯವಾಗಿ ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸಿ ಒಣಗದಂತೆ ಕಾಪಾಡುವ ಕೆಲಸವನ್ನು ಇದು ಮಾಡುತ್ತದೆ. ಜೊತೆಗೆ ಚರ್ಮ ಹೊಳಪಾಗುತ್ತದೆ.

ನಿಂಬೆರಸ ಹಾಗೂ ಬಿಸಿನೀರು

ಹದವಾದ ಬಿಸಿನೀರಿಗೆ ಕೊಂಚ ನಿಂಬೆರಸ ಹಿಂಡಿ ಕುಡಿಯಿರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬಹುದು. ಇದರಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳಿದ್ದು ಇವು ದೇಹವನ್ನು ರೋಗಗಳಿಂದ ತಪ್ಪಿಸುತ್ತವೆ. ಚರ್ಮ ತೇವಾಂಶವನ್ನು ಕಳೆದುಕೊಳ್ಳದಂತೆ ನೋಡುವ ಜೊತೆಗೆ ಚರ್ಮಕ್ಕೆ ಕಾಂತಿಯನ್ನೂ ನೀಡುತ್ತದೆ. ಒಟ್ಟಾರೆಯಾಗಿ ಚರ್ಮದ ಆರೋಗ್ಯಕ್ಕೂ ಇದು ಒಳ್ಳೆಯದು.

ತೆಂಗಿನಕಾಯಿ ನೀರು

ತೆಂಗಿನಕಾಯಿ ನೀರು ಕೂಡಾ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದರಲ್ಲಿ ಸಾಕಷ್ಟು ಎಲೆಕ್ಟ್ರೋಲೈಟ್‌ಗಳಿದ್ದು ಇದು ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಚರ್ಮಕ್ಕೆ ಅಗತ್ಯ ಬೇಕಾಗುವ ಪೋಷಕಾಂಶಗಳನ್ನೂ ಇದು ಕೊಡುತ್ತದೆ. ಚಳಿಗಾಲದಲ್ಲಿ ತೆಂಗಿನಕಾಯಿ ನೀರು ಕುಡಿಯಲು ಸಾಧ್ಯವಾಗದಿದ್ದರೆ ಕೊಂಚ ಉಗುರು ಬೆಚ್ಚಗೆ ಮಾಡಿಯೂ ಕುಡಿಯಬಹುದು.

ಪುದಿನ ಚಹಾ

ಚಳಿಗಾಲದಲ್ಲಿ ಕುಡಿಯಬಹುದಾದ ಇನ್ನೊಂದು ಪೇಯ ಎಂದರೆ ಪುದಿನ ಚಹಾ. ಬಿಸಿಬಿಸಿ ನೀರಿಗೆ ಕೊಂಚ ಪುದಿನ ಎಲೆಗಳನ್ನು ಹಾಕಿ ಕುಡಿದರೆ, ಮೈಮನದಲ್ಲೆಲ್ಲ ಚೈತನ್ಯ, ಚಳಿಗಾಲದ ಆಲಸ್ಯ ದೂರ. ಅಷ್ಟೇ ಅಲ್ಲ. ಚರ್ಮದ ಸಮಸ್ಯೆಗಳೂ ಕೂಡಾ ಮಾಯ. ಚರ್ಮಕ್ಕೆ ಸರಿಯಾದ ತೇವಾಂಶವೂ ದಕ್ಕುವ ಜೊತೆಗೆ ಒಣಕಲಾದ ಚರ್ಮ ಫಳಪಳಿಸುತ್ತದೆ.

ಆಲೊವೆರಾ ಜ್ಯೂಸ್‌

ಆಲೊವೆರಾ ಅಥವಾ ಲೋಳೆಸರ ಎಂಬ ಸಸ್ಯದ ಜ್ಯೂಸ್‌, ಜೆಲ್‌ ಸೌಂದರ್ಯ ಸಮಸ್ಯೆಗಳಿಗೆ ಬಳಸುವುದು ನಿಮಗೆ ಗೊತ್ತಿರುವ ವಿಚಾರವೇ. ಬೇಸಿಗೆಯಲ್ಲಿ ಸೂರ್ಯನ ಬಿಸಿಲಿನ ಝಳಕ್ಕೆ ಸುಟ್ಟ ಚರ್ಮವನ್ನು ಮರಳಿ ಯಥಾ ಸ್ಥಿತಿಗೆ ತರಬೇಕಾದರೆ ಆಲೋವೆರಾ ಬಳಸುವುದು ಅತ್ಯಂತ ಪರಿಣಾಮಕಾರಿ ತಂತ್ರ. ಆದರೆ, ಚಳಿಗಾಲಕ್ಕೂ ಕೂಡಾ ಈ ಆಲೋವೆರಾ ಬಹಳ ಒಳ್ಳೆಯದನ್ನೇ ಮಾಡುತ್ತದೆ ಎಂದರೆ ನಂಬಲೇಬೇಕು. ಇದರಲ್ಲಿ ಸಾಕಷ್ಟು ಪೋಷಕಾಂಶಗಳೂ, ಖನಿಜಾಂಶಗಳೂ, ಅಮೈನೋ ಆಸಿಡ್‌ಗಳೂ ಇರುವುದರಿಂದ ಚರ್ಮಕ್ಕೆ ಬೇಕಾದ ಎಲ್ಲ ಪೋಷಣೆಯನ್ನೂ ನೀಡುತ್ತದೆ. ಇದರ ಜ್ಯೂಸ್‌ ಕುಡಿಯುವ ಮೂಲಕ ಚಳಿಗಾಲದಲ್ಲಿ ಚರ್ಮಕ್ಕೆ ಬೇಕಾದ ತೇವಾಂಶವನ್ನು ಗಳಿಸಬಹುದು.

ಇದನ್ನೂ ಓದಿ: Health Benefits Of Rosemary Tea: ರೋಸ್‌ಮೆರಿ ಚಹಾದಿಂದ ಆರೋಗ್ಯಕ್ಕೇನು ಲಾಭ?

Exit mobile version