ಜೀರಿಗೆ (Jeera) ನಮ್ಮ ಮಸಾಲೆ ಡಬ್ಬಿಯಲ್ಲಿರುವ ಅತ್ಯಂತ ಬೇಕಾಗಿರುವ ಮಸಾಲೆ. ಹಲವು ಅಡುಗೆಗಳಿಗೆ ಜೀರಿಗೆ ಒಂದು ಮುಖ್ಯ ವಸ್ತು ಆಗಿದ್ದರೂ, ಜೀರಿಗೆಯ ಉಪಯೋಗಗಳು ಹಲವು. ಇದು ಕೇವಲ ಮಸಾಲೆಯಾಗಿ, ಅಡುಗೆಗೆ ರುಚಿ, ಘಮವನ್ನು ನೀಡುವುದು ಹೌದಾದರೂ, ನಿತ್ಯಜೀವನದಲ್ಲಿ ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಮನೆಮದ್ದಾಗಿ ಬಳಕೆಯಾಗುವ ಪ್ರಸಂಗಗಳೇ ಹೆಚ್ಚು. ಹೀಗೆ ನಮ್ಮ ನಿತ್ಯೋಪಯೋಗಿ ಜೀರಿಗೆಯ ಸಕಲ ಗುಣ ಸಂಪನ್ನತೆಯನ್ನೂ ನಾವು ಸಮರ್ಪಕವಾಗಿ ಬಳಸಕೊಳ್ಳಬೇಕೆಂದರೆ ನಾವು ಜೀರಿಗೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳನ್ನು ಮೊದಲು ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ, ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದಾಗುವ ಉಪಯೋಗಗಳನ್ನೂ (jeera water benefits) ಅರಿಯಬೇಕು.
1. ನಮ್ಮ ಹಿರಿಯರು ನಮಗೆ ದಾಟಿಸಿದಂತೆ, ಜೀರಿಗೆಯ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಹಾಕಿದ ನೀರನ್ನು ಕುದಿಸಿಕೊಂಡು ಸೋಸಿ ಕುಡಿದರೆ, ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳು ಚುರುಕುಗೊಂಡು ಆಹಾರವನ್ನು ಕರಗಿಸಲು ಶುರು ಮಾಡುತ್ತದೆ. ಅಜೀರ್ಣತೆ, ತಲೆಸುತ್ತು, ಗ್ಯಾಸ್ ತುಂಬಿಕೊಂಡಂತ ಸಮಸ್ಯೆಯನ್ನು ಇದು ಹೋಗಲಾಡಿಸುತ್ತದೆ.
2. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿದರೆ, ಇದು ದೇಹದ ಕಶ್ಮಲಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಒಳ್ಳೆಯ ಡಿಟಾಕ್ಸ್ ಡ್ರಿಂಕ್. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಿಂದ ಕಶ್ಮಲಗಳನ್ನು ಹೊರಗೆ ಕಳಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ.
3. ಜೀರಿಗೆ ನೀರು ರೋಗ ನಿರೋಧಕತೆಯನ್ನೂ ಹೆಚ್ಚಿಸುತ್ತದೆ. ಇದರಲ್ಲಿ ಸಾಕಷ್ಟು ಕಬ್ಬಿಣಾಂಶವಿದ್ದು ಇದು ರೋಗ ನಿರೋಧಕತೆ ಹೆಚ್ಚಿಸುವಲ್ಲಿ ಸಹಾಐ ಮಾಡುತ್ತದೆ. ನಾವು ನಿತ್ಯವೂ ಸೇವಿಸಬೇಕಾದಷ್ಟು ಕಬ್ಬಿಣಾಂಶವನ್ನು ಕೇವಲ ಒಂದು ಲೋಟ ಜೀರಿಗೆ ನೀರು ಹೊಂದಿರುವುದರಿಂದ (ಶೇ.೭) ಹಾಗೂ ವಿಟಮಿನ್ ಎ ಮತ್ತು ಸಿ ಇದರಲ್ಲಿರುವುದರಿಂದ ದೇಹ ಬಹುಬೇಗನೆ ರೋಗಗಳಿಗೆ ತುತ್ತಾಗದಂತೆ ಕಾಪಾಡುತ್ತವೆ.
4. ಜೀರಿಗೆ ನೀರನ್ನು ಹೀಗೆ ನಿತ್ಯವೂ ಕುಡಿಯುವುದರಿಂದ ರಕ್ತಹೀನತೆ ಬಾರದು. ಅನೀಮಿಯಾದಂತಹ ಸಮಸ್ಯೆ ಇರುವ ಮಂದಿಗೆ ಇದು ಬೆಸ್ಟ್ ಮದ್ದು. ಇದರಲ್ಲಿರುವ ಕಬ್ಬಿಣಾಂಶವು ಅನೀಮಿಯಾ ಸಮಸ್ಯೆ ಇರುವ ಮಂದಿಯನ್ನು ಸಮಸ್ಯೆಯಿಂದ ಹೊರತರುತ್ತದೆ.
5. ಶ್ವಾಸಕೋಶದ ಸಮಸ್ಯೆ ಇರುವ ಮಂದಿಗೂ ಜೀರಿಗೆ ನೀರು ಒಳ್ಳೆಯದು. ಕಫ ತುಂಬಿಕೊಂಡಂಥ ಸಮಸ್ಯೆ ಇರುವಾಗ, ಜೀರಿಗೆ ನೀರನ್ನು ಸೇವಿಸುತ್ತಿದ್ದರೆ ಉತ್ತಮ ಫಲ ಕಾಣಬಹುದು. ಇದು ಎದೆಯಲ್ಲಿ ಸಂಗ್ರಹವಾದ ಕಫ ಹೊರಗೆ ಬರಲು ಕೂಡಾ ಸಹಾಯ ಮಾಡುತ್ತದೆ.
6. ನಿದ್ರೆಯ ಸಮಸ್ಯೆ ಇರುವ ಮಂದಿಗೂ ಜೀರಿಗೆ ನೀರು ಒಳ್ಳೆಯದು. ನಿದ್ರಾಹೀನತೆ, ಇನ್ಸೋಮಿಯಾ ಸಮಸ್ಯೆ ಇರುವ ಮಂದಿಗೂ ಇದು ಸಹಾಯ ಮಾಡುತ್ತದೆ.
7. ಸ್ಮರಣ ಶಕ್ತಿಗೂ ಜೀರಿಗೆ ನೀರು ಒಳ್ಳೆಯದು. ಇದು ಬುದ್ಧಿಯನ್ನು ಚುರುಕಾಗಿಸುತ್ತದೆ.
8. ಜೀರಿಗೆಗೆ ಕಶ್ಮಲಗಳನ್ನು ದೇಹದಿಂದ ಹೊರಕ್ಕೆ ಕಳಿಸುವ ಗುಣವಿರುವುದರಿಂದ ಇದು ಚರ್ಮದ ಆರೋಗ್ಯದಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಮುಖದ ಚರ್ಮದ ಸಮಸ್ಯೆಗಳಿದ್ದರೆ ಅದಕ್ಕೆ ಜೀರಿಗೆ ನೀರು ಒಳ್ಳೆಯದು. ನಿತ್ಯವೂ ಜೀರಿಗೆ ನೀರು ಬೆಳಗ್ಗೆ ಕುಡಿಯುವುದರಿಂದ ಕಜ್ಜಿ, ಮೊಡವೆಗಳಂತಹ ಸಮಸ್ಯೆಗಳೂ ಕಡಿಮೆಯಾಗುತ್ತದೆ.
ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?