ಮೊಡವೆಯೆಂಬುದು ಬಹಳ ಜನರ ಬಹುದೊಡ್ಡ ಸಮಸ್ಯೆ. ಯಾವುದೋ ಸಮಾರಂಭ, ಏನೋ ಮೀಟಿಂಗು, ಇನ್ನೇನೋ ಭೇಟಿ ಸಂದರ್ಭವೇ ಬೆಳಗ್ಗೆ ಏಳುವಷ್ಟರಲ್ಲಿ ಕೆನ್ನೆ ಮೇಲೋ, ಮೂಗಿನ ತುದಿಯಲ್ಲೋ, ತುಟಿಯ ಕೆಳಗೋ ಕೆಂಪನೆಯ ದೊಡ್ಡದೊಂದು ಮೊಡವೆ ಎದ್ದು ನಿಂತು ಬಿಡುತ್ತದೆ. ಬೇಡವೆಂದು ಮನಸ್ಸು ಹೇಳಿದರೂ ಅದು ಕೇಳಬೇಕಲ್ಲಾ, ಒಂದಾದ ಮೇಲೊಂದರಂತೆ ಏಳಲಾರಂಭಿಸುತ್ತದೆ. ಮುಖದ ತುಂಬ ಮೊಡವೆ ಎಂಬುದು ಹದಿಹರೆಯದ ಮಂದಿಗ್ಯಾಕೆ, ವಯಸ್ಸಾದ ಮೇಲೂ ಕಾಟ ಕೊಡುತ್ತದೆ. ಎಣ್ಣೆ ತಿಂಡಿಯಿಂದ ದೂರವಿರುವುದು, ಸಿಕ್ಕಸಿಕ್ಕ ಲೇಪಗಳನ್ನು, ಕ್ರೀಮು ಮುಲಾಮುಗಳನ್ನು ಹಚ್ಚುವುದೂ ಮಾಡಿದ್ದಾಯ್ತು, ಆದರೂ ಮೊಡವೆ ತನ್ನ ಪಾಡಿಗೆ ಏಳುವುದು ಮಾತ್ರ ನಿಲ್ಲುವುದೇ ಇಲ್ಲವಲ್ಲ ಎಂಬುದು ಎಲ್ಲರ ಅಳಲು. ಹೋದೆಯಾ ಪಿಶಾಚಿ ಅಂದುಕೊಳ್ಳುವಷ್ಟರಲ್ಲಿ ಬಂದೆಯಾ ಗವಾಕ್ಷಿಲಿ ಎಂಬಂತಾಗುತ್ತದೆ.
ಮುಖಕ್ಕೆ ಲೇಪ ಹಚ್ಚುವುದು, ಔಷಧಿಗಳನ್ನು ತೆಗೆದುಕೊಳ್ಳುವುದು, ವೈದ್ಯರು ಹೇಳಿದ ಮುಲಾಮು ಹಚ್ಚಿಕೊಳ್ಳುವುದು ಎಲ್ಲ ಮಾಡುವುದು ಸರಿಯೇ ಆದರೂ, ಬಹಳ ಸಾರಿ ಇವೆಲ್ಲವಕ್ಕಿಂತಲೂ ನಾವು ಉಣ್ಣುವ ಆಹಾರವೂ ಮುಖ್ಯವಾಗುತ್ತದೆ. ಬಹಳ ಸಾರಿ ಮೊಡವೆ ಎಂದ ಕೂಡಲೇ, ಎಣ್ಣೆ ಪದಾರ್ಥ, ಕುರುಕಲು ತಿಂಡಿಗಳಿಂದ ದೂರವಿರಿ ಎಂದು ಎಲ್ಲರೂ ಸಲಹೆ ಕೊಡುವುದು ಸಾಮಾನ್ಯ. ಆದರೆ, ಇದಕ್ಕೂ ಮೀರಿದ ಇನ್ಯಾವುದೋ ವಿಷಯ ಗೊತ್ತೇ ಆಗದಂತೆ, ನಿಮ್ಮ ಅಹಾರಾಭ್ಯಾಸದಲ್ಲಿರುವುದು ಭಾದೆ ಕೊಡುತ್ತಿದೆ ಎಂಬ ಸೂಕ್ಷ್ಮ ಅರಿಯಬೇಕು. ಯಾಕೆಂದರೆ ನಿತ್ಯ ಸೇವಿಸುವ ಹಾಲು ಕೂಡಾ ಮೊಡವೆಯ ತೊಂದರೆಯಿರುವವರಿಗೆ ಅಡ್ಡ ಪರಿಣಾಮವೇ ಬೀರಬಹುದು, ಮೊಡವೆಯ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಬಹುದು ಎನ್ನುತ್ತಾರೆ ಚರ್ಮ ತಜ್ಞರು.
ಹೌದು, ಹಾಲ್ಯಾಕೆ ಮೊಡವೆಗೆ ಕಾರಣ ಎಂಬುದಕ್ಕೆ ಚರ್ಮವೈದ್ಯರು ಕೊಡುವ ಕಾರಣ ಇವು.
೧. ಹಾಲಿನಲ್ಲಿ ಐಜಿಎಫ್ ಎಂಬ ಬೆಳವಣಿಗೆಯ ಹಾರ್ಮೋನು ಇರುವುದರಿಂದ ಇದು ಕೆಲವರಿಗೆ ಚರ್ಮ ಸಂಬಂಧೀ ತೊಂದರೆಗಳನ್ನು ತರುತ್ತದೆ.
೨. ಹಾಲು ದೇಹದಲ್ಲಿ ಇನ್ಸುಲಿನ್ ಹೆಚ್ಚು ಮಾಡುತ್ತದೆ. ಇನ್ಸುಲಿನ್ ಹೆಚ್ಚಿದ್ದರೆ ಅದು ಚರ್ಮದಲ್ಲಿ ಸೆಬಮ್ ಉತ್ಪಾದನೆಯನ್ನೂ ಹೆಚ್ಚು ಮಾಡುತ್ತದೆ. ಇದರಿಂದ ಚರ್ಮದ ಸಣ್ಣ ಸಣ್ಣ ರಂಧ್ರಗಳು ಮುಚ್ಚಿ ಹೋಗಿ ಅದು ಮೊಡವೆಗಳಾಗಿಬಿಡುತ್ತದೆ.
೩. ಆಂಡ್ರೋಜನ್ ಉತ್ಪಾದನೆಯನ್ನು ಉದ್ದೀಪಿಸುತ್ತದೆ. ಆಂಡ್ರೋಜನ್ ಮಟ್ಟ ಹೆಚ್ಚಾದರೆ ಅದು ಸೆಬಮ್ ಉತ್ಪಾದನೆಯನ್ನೂ ಹೆಚ್ಚು ಮಾಡುತ್ತದೆ. ಇದರಿಂದ ಮೊಡವೆಗಳೇಳುತ್ತವೆ. ಕೇವಲ ಮೊಡವೆಯಷ್ಟೇ ಅಲ್ಲ, ಚರ್ಮದ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೪. ಮೊದಲೇ ಮೊಡವೆಯಂಥ ಸಮಸ್ಯೆ ಇರುವ ಮಂದಿ ಹಾಲು ಸೇವಿಸಿದರೆ, ತೈಲಗ್ರಂಥಿಗಳಲ್ಲಿ ಹೆಚ್ಚು ತೈಲ ಉತ್ಪಾದನೆಯಾಗಲು ಇಂಬು ಕೊಟ್ಟಂತಾಗುತ್ತದೆ. ದೇಹದಲ್ಲಿ ಹೆಚ್ಚು ಹೆಚ್ಚು ಎಣ್ಣೆಯಂಶ ಉತ್ಪಾದನೆಯಾದರೆ ಅದು ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನೂ ಬೀರುತ್ತದೆ ಎಂಬ ವಿಷಯ ಸದಾ ನೆನಪಿಟ್ಟುಕೊಳ್ಳಬೇಕು.
ಹಾಲನ್ನು ನಿತ್ಯ ಸೇವಿಸಲು ನಾನಾ ಕಾರಣಗಳಿವೆ. ಅದು ಪ್ರೊಟೀನ್, ಕ್ಯಾಲ್ಶಿಯಂ ಹಾಗೂ ಇತರ ಪೋಷಕಾಂಶಗಳ ಮೂಲ ಎಂದು ನಾವು ದಿನನಿತ್ಯ ಹಾಲು ಕುಡಿಯುವುದನ್ನು ರೂಢಿ ಮಾಡಿರುತ್ತೇವೆ. ಇದು ಹೌದು ಕೂಡಾ. ಆದರೆ, ಈಗಾಗಲೇ ಮೊಡವೆಯ ಸಮಸ್ಯೆಯನ್ನು ಬಹಳವಾಗಿ ಅನುಭವಿಸುವವರು, ಏನು ಮಾಡಿದರೂ ಇದರಿಂದ ಮುಕ್ತಿ ದೊರೆಯದವರು ಇದಕ್ಕೆ ಕಾರಣಗಳನ್ನು ಹುಡುಕುತ್ತಿರುವವರಿಗೆ ಇಂಥದ್ದೂ ಒಂದು ಕಾರಣವಿರಬಹುದು ಎಂದು ತನ್ನ ದೇಹವನ್ನು ಸೂಕ್ಷ್ಮವಾಗಿ ಗಮನಿಸಬಹುದು. ಇಂಥವರು ಹಾಲಿನ ಬದಲಾಗಿ ಸೋಯಾ ಹಾಲು ಅಥವಾ ಬಾದಾಮಿ ಹಾಲನ್ನು ನಿತ್ಯ ಬಳಕೆಗೆ ಬಳಸಬಹುದು. ಮೊಡವೆಯನ್ನು ನಿಯಂತ್ರಣದಲ್ಲಿಡುವುದು ಸಾದ್ಯವೇ ಆಗದ ವಿಚಾರವಲ್ಲ. ಆದರೆ ಕಾರಣ ಹುಡುಕುವುದು ಮಾತ್ರ ಸವಾಲು. ಇಂತಹ ಕೆಲವು ಮೂಲ ಅಂಶಗಳನ್ನು ಪತ್ತೆ ಹಚ್ಚಿದರೆ, ಮೊಡವೆಯಿಂದ ದೂರವಿರಬಹುದು.
ಇದನ್ನೂ ಓದಿ | Breastfeeding | ಚಳಿಗಾಲದಲ್ಲಿ ಹಾಲುಣಿಸುವುದೇ ತಾಯಂದಿರಿಗೆ ಸವಾಲು! ಪರಿಹಾರ ಏನು?