ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತಲೆನೋವಿರಲಿ, ಮಲಬದ್ಧತೆಯಿರಲಿ, ಅಥವಾ ಅಜೀರ್ಣವೇ ಇರಲಿ ನೀರು ಕುಡಿಯುವುದರಿಂದ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿರುತ್ತದೆ. ನಮ್ಮ ದೇಹದ ಶೇಕಡಾ ೭೦ರಷ್ಟು ನೀರಿನಿಂದ ಆಗಿರುವುದರಿಂದ ಹಾಗೂ ದೇಹವು ಸರಿಯಾಗಿ ಕೆಲಸ ಮಾಡಲು ಈ ನೀರಿನ ಪೂರೈಕೆ ಅತೀ ಅಗತ್ಯ ಎಂಬ ಸತ್ಯ ತಿಳಿದಿರುವಂಥದ್ದೇ. ನೀರಿಲ್ಲದಿದ್ದರೆ ನಮ್ಮ ದೇಹ ನಾನಾ ತೊಂದರೆಗಳಿಗೆ ಈಡಾಗುತ್ತದೆ. ಅದಕ್ಕಾಗಿಯೇ, ಪುರಾತನ ಆಯುರ್ವೇದ ಸೇರಿದಂತೆ ಎಲ್ಲ ವೈದ್ಯಪದ್ಧತಿಗಳೂ ಕೂಡಾ ನೀರಿನ ಸೇವನೆಯ ಅಗತ್ಯದ ಬಗ್ಗೆ ಒತ್ತಿ ಹೇಳುತ್ತವೆ. ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಅತ್ಯಂತ ಮುಖ್ಯವೆಂದು ಹೇಳುತ್ತವೆ. ಹಾಗಾದರೆ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಾವು ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
೧. ಇದು ಪಚನಕ್ರಿಯೆಯನ್ನು ವೇಗಗೊಳಿಸುತ್ತದೆ: ನೀವು ಡಯಟ್‌ನಲ್ಲಿದ್ದೀರೆಂದಾದಲ್ಲಿ, ಬೆಳಗ್ಗೆ ಎದ್ದ ಕೂಡಲೇ ಸಾಕಷ್ಟು ನೀರು ಕುಡಿಯುವುದು ಅತ್ಯುತ್ತಮ ಅಭ್ಯಾಸ. ಯಾಕೆಂದರೆ, ಇದು ಆ ದಿನದ ಪಚನಕ್ರಿಯೆಯನ್ನು ಸಾಮಾನ್ಯಕ್ಕಿಂತ ಶೇ.೩೦ರಷ್ಟು ಉದ್ದೀಪಿಸಿ ಚುರುಕಾಗುವಂತೆ ಮಾಡುತ್ತದೆ. ಇದರಿಂದ ತೂಕವೂ ಸಮತೋಲನದಲ್ಲಿದ್ದು, ಅದಕ್ಕಾಗಿಯೇ ನಿತ್ಯ ಕಡಿಮೆಯೆಂದರೂ ನಾಲ್ಕು ಲೀಟರ್‌ನಷ್ಟು ನೀರನ್ನು ಕುಡಿಯುವುದು ಒಳ್ಳೆಯದು.
೨. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನೀರು ಕುಡಿಯುವುದುದ ಇಡೀ ದೇಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ಒಳ್ಳೆಯದು ಎಂಬುದು ಗೊತ್ತೇ ಇದೆ. ನೀರು ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಲೇ ಇದ್ದರೆ ದೇಹದ ಎಲ್ಲ ಕೆಲಸಗಳೂ ಸರಾಗವಾಗಿ ಆಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
೩. ವಿಷಕಾರಿ ವಸ್ತು ಕ್ಲೀನ್: ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದು ಹಾಗೂ ಆಗಾಗ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರೆ ಇದು ನಿಮ್ಮ ಹೊಟ್ಟೆಯನ್ನು ಕ್ಲೀನಾಗಿ ಇಟ್ಟುಕೊಳ್ಳುತ್ತದೆ. ಹೊಟ್ಟೆಯಿಂದ ಬೇಡದ ವಿಷಕಾರಿ ನಿರುಪಯುಕ್ತ ವಸ್ತುಗಳು ಹೊರಹೋಗುತ್ತವೆ ಹಾಗೂ ದೇಹದಲ್ಲಿ ಆರೋಗ್ಯಕಳೆ ತುಂಬುತ್ತದೆ.
೪. ತಲೆನೋವು ಮಾಯ: ಮೈಗ್ರೇನ್‌ನಂತಹ ತಲೆನೋವು ಇದ್ದವರು ಬೆಳಗ್ಗೆ ನೀರು ಕುಡಿವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಜೊತೆಗೆ ಇಂಥ ತಲೆನೋವು ಕಾಣಿಸಿಕೊಂಡಾಗ ಕೂಡಲೇ ಸರಿಯಾಗಿ ನೀರು ಕುಡಿದರೆ, ಅರ್ಧ ಗಂಟೆಯಿಂದ ಮೂರು ಗಂಟೆಗಳೊಳಗಾಗಿ ತಲೆನೋವು ಸಂಪೂರ್ಣವಾಗಿ ವಾಸಿಯಾಗುತ್ತದೆ. ಹಲ್ಲಿನ ಸಮಸ್ಯೆಗಳೂ ದೂರಾಗುತ್ತವೆ.
೫. ತೂಕ ಕಡಿಮೆಯಾಗುತ್ತದೆ: ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದು ತೂಕ ಇಳಿಸಿಕೊಳ್ಳಬಯಸುವವರಿಗೆ ಅತ್ಯುತ್ತಮ ವಿಧಾನ. ಅಷ್ಟೇ ಅಲ್ಲ, ಆಗಾಗ ನೀರು ಕುಡಿಯುವುದರಿಂದ ದೇಹದ ಕಶ್ಮಲಗಳು ಹೊರಗೆ ಕಳಿಸಲ್ಪಟ್ಟು ದೇಹಕ್ಕೆ ಹೆಚ್ಚು ತಿನ್ನಬೇಕೆನ್ನಿಸುವ ಚಪಲವನ್ನು ಕಡಿಮೆ ಮಾಡುತ್ತದೆ. ಕ್ಯಾಲರಿ ಕರಗಿಸಲೂ ಕೂಡಾ ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ | Winter Arthritis | ಸಂಧಿವಾತ ಚಳಿಗಾಲದಲ್ಲೇ ಹೆಚ್ಚು ಕಾಡುವುದ್ಯಾಕೆ? ಇಲ್ಲಿದೆ ಪರಿಹಾರೋಪಾಯಗಳು
೬. ಮೊಡವೆಗಳ ಸಮಸ್ಯೆಗೆ ಉತ್ತಮ ಪರಿಹಾರ: ಮುಖದದಲ್ಲಿಮೊಡವೆಯ ಸಮಸ್ಯೆ ಇದ್ದವರು ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುತ್ತಾ ಬಂದಲ್ಲಿ ಸಾಕಷ್ಟು ಪ್ರಯೋಜನ ಕಾಣಬಹುದು. ದೇಹದ ಕಶ್ಮಲಗಳನ್ನು ಹೊರಗೆ ಕಳಿಸಿ ಚರ್ಮಕ್ಕೆ ಒಳಗಿನಿಂದ ಹೊಳಪು ನೀಡುತ್ತದೆ.
೭. ಶಕ್ತಿಯ ಮೂಲ: ನೀರ ಶಕ್ತಿಯ ಮೂಲ. ಬೆಳಗ್ಗೆ ನೀರು ಕುಡಿಯುವುದರಿಂದ ಹಾಗೂ ನೀರಿನ ಪೂರೈಕೆ ಸಮಪ್ರಮಾಣದಲ್ಲಿ ನಡೆಯುತ್ತಿದ್ದರೆ, ನಮ್ಮ ಚುರುಕುತನ ಹೆಚ್ಚಾಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಹಾಗೂ ಶಕ್ತಿಯ ಪೂರೈಕೆ ರಕ್ತದ ಮೂಲಕ ಆಗುತ್ತದೆ.
೮. ಹಸಿವನ್ನು ಕಡಿಮೆಗೊಳಿಸುತ್ತದೆ: ನೀರು ಕುಡಿಯುವುದರಿಂದ ಎಷ್ಟೋ ಬಾರಿ ನಾವು ಅನಗತ್ಯವಾಗಿ ಹಸಿವಿನ ವೇಳೆಯಲ್ಲಿ ಏನಾದರೊಂದು ತಿನ್ನುವುದು ತಪ್ಪುತ್ತದೆ. ಹಾಗಾಗಿ ನಾವು ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ತಪ್ಪುತ್ತದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಾಕಷ್ಟು ಉಪಯೋಗಗಳಿದ್ದು, ನೀವು ಈ ಅಭ್ಯಾಸಕ್ಕೆ ಹೊಸಬರಾಗಿದ್ದರೆ, ಎದ್ದ ತಕ್ಷಣ ನೀರು ಕುಡಿಯಲು ಕಷ್ಟವಾಗುತ್ತಿದ್ದರೆ, ಸ್ವಲ್ಪ ಪ್ರಮಾಣದ ನೀರು ಕುಡಿಯುವ ಮೂಲಕ ಈ ಅಭ್ಯಾಸ ಮಾಡಿಕೊಳ್ಳಬಹುದು. ನೀರು ಖಾಲಿ ಹೊಟ್ಟೆಯಲ್ಲಿ ಕುಡಿದಾಗ ಕನಿಷ್ಠ ಮುಕ್ಕಾಲು ಗಂಟೆಗಳ ಕಾಲ ಏನೂ ತಿನ್ನದೆ ಇದ್ದರೆ, ಕುಡಿದ ನೀರಿನ ಪೂರ್ಣ ಪ್ರಯೋಜನ ಪಡೆಯಬಹುದು.
ಇದನ್ನೂ ಓದಿ | Winter foods | ಚಳಿಗಾಲದಲ್ಲಿ ಮೆದುಳನ್ನು ಆರೋಗ್ಯವಾಗಿಡಿ, ಇವನ್ನು ಸೇವಿಸೋಕೆ ಮರೆಯದಿರಿ!