ಪ್ರತಿಯೊಬ್ಬರ ದೇಹಕ್ಕೆ ನೀರು ಎಂಬುದು ಅತ್ಯಂತ ಪ್ರಾಥಮಿಕ ಅವಶ್ಯಕತೆಗಳಲ್ಲೊಂದು. ನೀರಿಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ದೇಹ ಶೇ.70ರಷ್ಟು ನೀರಿನಿಂದಲೇ ಆವೃತವಾಗಿದೆ ಎಂಬುದೂ ಕೂಡಾ ತಿಳಿದ ವಿಷಯ. ಅಂದರೆ ಸುಮಾರು 40 ಲೀಟರ್‌ಗಳಷ್ಟು ನೀರು ನಮ್ಮ ದೇಹದಲ್ಲೇ ಇದೆ. ಆದರೆ, ನಿತ್ಯವೂ ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ನಾವು ಕುಡಿಯುತ್ತಿದ್ದೇವಾ ಎಂಬುದು ಮಾತ್ರ ಪ್ರತಿಯೊಬ್ಬರೂ ಚಿಂತಿಸಬೇಕಾದ ವಿಚಾರ. ಯಾಕೆಂದರೆ, ನಮ್ಮ ಬಹುತೇಕ ಸಮಸ್ಯೆಗಳ ಮೂಲ ಇಲ್ಲಿಯೇ ಅಡಗಿರುತ್ತದೆ. ನೀರು ಸರಿಯಾಗಿ (Drinking Water) ಕುಡಿಯದೆ, ನಮ್ಮ ದೇಹವನ್ನು ಸರಿಯಾಗಿ ಹೈಡ್ರೇಟ್ ಮಾಡದೆ ಇರುವುದರ ಫಲವಾಗಿ ಏನೇನು ಸಮಸ್ಯೆಗಳು (health tips) ಕಾಣಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ನೋಡೋಣ.
1. ನಮ್ಮ ದೇಹದಲ್ಲಿ ನೀರಿನಂಶದ ಏರುಪೇರಿನಿಂದಲೇ ನಮ್ಮ ದೇಹದ ತೂಕದಲ್ಲಿ ನಿತ್ಯವೂ ಸುಮಾರು ೨ ಕೆಜಿಗಳಷ್ಟು ಏರುಪೇರಾಗಬಹುದಂತೆ.
2. ಉಸಿರಾಟ, ಬೆವರುವುದು ಹಾಗೂ ಮೂತ್ರ ವಿಸರ್ಜನೆ ಉಯಾದಿಗಳಲ್ಲಿ ನಾವು ಕಳೆದುಕೊಳ್ಳುವ ನೀರಿನಂಶವನ್ನು ಸರಿದೂಗಿಸಲು ನಾವು ಪ್ರತಿದಿನ ಕನಿಷ್ಟ ಮೂರು ಲೀಟರ್ ಆದರೂ ನೀರು ಕುಡಿಯಬೇಕು.
3. ಬಹಳಷ್ಟು ಮಂದಿ ಅವರ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದಿಲ್ಲ. ನೀರು ಕುಡಿಯದಿದ್ದರೆ, ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತಲೆನೋವು, ತಲೆ ಸುತ್ತುವುದು, ಸುಸ್ತು ಇತ್ಯಾದಿಗಳು ನೀರು ಕುಡಿಯದೆ ಇರುವುದರಿಂದ ಕಾಣುವ ಸಾಮಾನ್ಯ ಸಮಸ್ಯೆಗಳು.
4. ದೇಹಕ್ಕೆ ಸ್ವಲ್ಪವೇ ಸ್ವಲ್ಪ ನೀರಿನ ಕೊರತೆಯಾದರೂ ಕೂಡಾ ದೇಹ ನಿತ್ರಾಣಗೊಳ್ಳುತ್ತದೆ. ಸಂಶೋಧನೆಗಳ ಪ್ರಕಾರ ಕೇವಲ ಶೇಕಡಾ ಎರಡರಷ್ಟು ನೀರಿನ ಕೊರತೆಯಾದರೂ ಕೂಡಾ ದೇಹದ ಸಾಮರ್ಥ್ಯದಲ್ಲಿ ಇಳಿಕೆಯಾಗುತ್ತದೆ.
5. ಯುಎಸ್ ನ್ಯಾಷನಲ್ ಅಕಾಡೆಮೀಸ್ ಆಫ್ ಸೈನ್ಸ್ ಅಂಡ್ ಮೆಡಿಸಿನ್ ವರದಿಯ ಪ್ರಕಾದ ಪುರುಷರಿಗೆ ಪ್ರತಿದಿನ ೩.೭ ಲೀಟರ್ ನೀರು ಕುಡಿಯುವುದು ಅತ್ಯಂತ ಅಗತ್ಯ. ಮಹಿಳೆಯರಿಗೆ ಕನಿಷ್ಟ ೨.೩ ಲೀಟರ್ ನೀರು ಅಗತ್ಯವಿದೆ. ಕನಿಷ್ಟ ಇಷ್ಟಾದರೂ ನೀರು ದೇಹಕ್ಕೆ ಸಿಗದಿದ್ದರೆ ದೇಹದ ಶಕ್ತಿ ಕ್ಷೀಣಿಸುತ್ತದೆ.
6. ದೇಹಕ್ಕೆ ನೀರು ಸರಿಯಾಗಿ ಪೂರೈಕೆಯಾಗದಿದ್ದರೆ, ತಲೆಸುತ್ತುವುದು, ನಿತ್ರಾಣ, ಗೊಂದಲ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಇದು ಅತಿಯಾದರೆ, ಈ ಸಮಸ್ಯೆಯ ಭೀಕರ ಪರಿಣಾಮ ಅಂಗಾಗ ನಿಷ್ಕ್ರಿಯತೆಯವರೆಗೂ ತಲುಪಬಹುದು. ಅಷ್ಟೇ ಅಲ್ಲ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಗೂ ಕೂಡಾ ನೀರು ಕುಡಿಯದಿರುವುದೂ ಕಾರಣವಾಗಿರುತ್ತದೆ.
7. ನಿರ್ಜಲೀಕರಣದಿಂದ ರಕ್ತವು ಸಹಜವಾಗಿ ಹರಿಯಲು ಸಾಧ್ಯವಾಗದೆ, ದೇಹಕ್ಕೆ ಸಿಗಬೇಕಾದ ಪೋಷಕಾಂಶಗಳು ದೇಹದ ಇತರ ಭಾಗಗಳಿಗೆ ಪ್ರವಹಿಸಲು ಕಷ್ಟವಾಗುತ್ತದೆ. ಪೋಷಕಾಂಶಗಳು ಹಾಗೂ ಆಮ್ಲಜನಕ ಸರಿಯಾಗಿ ಸಿಗದೆ ಅವು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.
8. ಕೆಲವು ಸಂದರ್ಭಗಳಲ್ಲಿ ಇದರ ಪರಿಣಾಮ ಭೀಕರವಾಗಿಯೂ ಇರಬಹುದು. ಅಂದರೆ, ಅತಿಯಾದಾಗ ಮಿದುಳು, ಪಿತ್ತಕೋಶ, ಹೃದಯ, ಕಿಡ್ನಿ ಇಂತಹ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಇದನ್ನೂ ಓದಿ: Benefits Of Fenugreek Water: ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಕುಡಿಯಿರಿ