ʻಅಯ್ಯೋ, ಊಟವೂ ಬೇಡ, ತಿಂಡಿಯೂ ಬೇಡʼ ಎಂದು ಈ ದಿನಗಳಲ್ಲಿ ಯಾರಾದರೂ ಹೇಳಿದರೆ, ಅವರು ಉಪವಾಸದಲ್ಲಿದ್ದಾರೆ ಎಂದು ಭಾವಿಸುವ ಅಗತ್ಯವಿಲ್ಲ. ಈ ಉರಿ ಸೆಕೆಯಲ್ಲಿ ತಿನ್ನುವುದಕ್ಕೇನೂ ಬೇಡ, ತಂಪಾಗಿಡುವಂಥ ಪೇಯಗಳು ಮಾತ್ರವೇ ಸಾಕು ಎಂಬುದು ಅವರ ಭಾವವಾಗಿರುತ್ತದೆ. ಸುಳ್ಳೇನಲ್ಲ, ಈ ಸುಡುವ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವಂಥ ಪೇಯಗಳು ಇದ್ದಷ್ಟಕ್ಕೂ ಬೇಕೆನಿಸುತ್ತದೆ. ಹಾಗೆಂದು ಸದಾ ಕಾಲ ನೀರು ಕುಡಿಯಲೂ ಸಾಧ್ಯವಿಲ್ಲ. ದೇಹಕ್ಕೆ ಪೋಷಣೆಯನ್ನೂ ನೀಡಿ, ನೀರಡಿಕೆಯನ್ನೂ ಹೋಗಲಾಡಿಸುವಂಥ ಒಂದಿಷ್ಟು ಪೇಯಗಳು (Drinks for Summer) ಇಲ್ಲಿವೆ. ನಿಮಗೆ ಯಾವುದಿಷ್ಟ?
ನಿಂಬೆ ಪಾನಕ
ವಿಟಮಿನ್ ಸಿ ಹೇರಳವಾಗಿರುವ ಈ ಪಾನಕಕ್ಕೆ ಸಿಹಿಯನ್ನು ಬೆರೆಸದೆಯೇ ಸೇವಿಸಲೂಬಹುದು. ಬೆಲ್ಲ, ಏಲಕ್ಕಿಯಂಥವನ್ನು ಸ್ವಲ್ಪ ಸೇರಿಸಿಕೊಂಡರೆ, ಈ ಚೇತೋಹಾರಿಯಾದ ಪಾನಕ ದೇಹವನ್ನು ತಂಪಾಗಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ, ರೋಗನಿರೋಧಕ ಶಕ್ತಿಗೆ ಇಂಬು ದೊರೆಯುತ್ತದೆ.
ಇನ್ಫ್ಯೂಸ್ಡ್ ವಾಟರ್
ಹೆಸರು ನೋಡಿ ಏನೋ ಎಂದುಕೊಳ್ಳಬೇಕಿಲ್ಲ. ಅನಾನಸ್, ಸೌತೇಕಾಯಿ, ಪುದೀನಾ, ನಿಂಬೆಹುಲ್ಲು, ದ್ರಾಕ್ಷಿ ಮುಂತಾದ ನಿಮ್ಮಿಷ್ಟದ ಯಾವುದನ್ನಾದರೂ ಒಂದು ದೊಡ್ಡ ಕಪ್‌ನಷ್ಟು ತೆಗೆದುಕೊಂಡು ಮೂರು ಲೀಟರ್ ನೀರಿನ ಪಾತ್ರೆಗೆ ಬೆರೆಸಿ, ಕೆಲಕಾಲ ಇಡಿ. ವಿಭಿನ್ನ ರುಚಿ ಮತ್ತು ಘಮ ಹೊಂದಿರುವ ಈ ನೀರನ್ನು ದಿನವಿಡೀ ಕುಡಿಯಿರಿ. ಯಾವುದನ್ನೆಲ್ಲ ನೀರಿಗೆ ಬೆರೆಸುತ್ತೀರಿ ಎಂಬುದರ ಮೇಲೆ ಆ ನೀರಿನ ಸತ್ವವೇನು ಎಂಬುದು ನಿರ್ಧಾರವಾಗುತ್ತದೆ.
ಎಳನೀರು
ಇದಂತೂ ಬೇಸಿಗೆಯಲ್ಲಿ ಅಮೃತ ಸಮಾನ. ದೇಹಕ್ಕೆ ಬೇಕಾದ ಎಲೆಕ್ಟ್ರೊಲೈಟ್‌ಗಳನ್ನೆಲ್ಲ ನೈಸರ್ಗಿಕವಾಗಿ ಒದಗಿಸುವ ಅದ್ಭುತ ಪೇಯವಿದು. ಅದರಲ್ಲೂ ವ್ಯಾಯಾಮ ಮಾಡಿದ ನಂತರ, ಬಿಸಿಲಿನಲ್ಲಿ ತಿರುಗಾಡುವಾಗ, ಆಯಾಸವಾಗಿದ್ದಲ್ಲಿ ಒಂದು ಎಳನೀರು ಹೊಟ್ಟೆಗೆ ಬಿದ್ದರೂ, ದೇಹ ಚೇತರಿಸಿಕೊಳ್ಳುತ್ತದೆ. ಬೇಸಿಗೆ ತಣಿಯುವವರೆಗೂ ದಿನಕ್ಕೊಂದು ಎಳನೀರು ಖಂಡಿತ ಕುಡಿಯಬಹುದು.
ಎಳ್ಳಿನ ಪಾನಕ
ಒಂದು ದೊಡ್ಡ ಚಮಚ ಎಳ್ಳನ್ನು ಕೆಲಕಾಲ ನೆನೆಸಿ, ಏಲಕ್ಕಿಯೊಂದಿಗೆ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಟು ತಂಪಾದ ಹಾಲು, ಬೆಲ್ಲ ಬೆರೆಸಿ. ದೇಹ ತಣಿಯುವಷ್ಟು ಸೇವಿಸಿ. ಹೆಸರು ಕಾಳನ್ನೂ ಹೀಗೆಯೇ ನೆನೆಸಿ, ರುಬ್ಬಿ, ಪೇಯ ಮಾಡಿಕೊಂಡು ಸೇವಿಸಬಹುದು.
ರಾಗಿ ತಿಳಿ
ಯಾವುದೇ ಧಾನ್ಯಗಳ ತಿಳಿಗಳು ದೇಹಕ್ಕೆ ತಂಪೆರೆಯುತ್ತವೆ. ಕೇವಲ ರಾಗಿಯೆಂದಲ್ಲ, ಅಕ್ಕಿ, ಗೋದಿ ಮುಂತಾದ ನಿಮ್ಮಿಷ್ಟದ ಯಾವುದೇ ಧಾನ್ಯಗಳ ತಿಳಿಯನ್ನು ಈ ದಿನಗಳಲ್ಲಿ ಸೇವಿಸುವುದರಿಂದ ದಾಹವೂ ನೀಗುತ್ತದೆ, ದೇಹಕ್ಕೆ ಬೇಕಾದ ಪೋಷಣೆಯೂ ಲಭಿಸುತ್ತದೆ. ತಿನ್ನುವುದೇ ಬೇಡ ಎನ್ನುವ ಈ ದಿನಗಳಲ್ಲಿ ದೇಹ ಬಳಲದಂತೆ ಈ ಮೂಲಕ ಕಾಪಾಡಿಕೊಳ್ಳಬಹುದು.
ಬೂದುಗುಂಬಳದ ರಸ
ನೈಸರ್ಗಿಕವಾಗಿಯೇ ರಸಭರಿತವಾದಂಥ ತರಕಾರಿಯಿದು. ಇದನ್ನು ಕತ್ತರಿಸಿ ರುಬ್ಬಿ ರಸ ತೆಗೆದುಕೊಳ್ಳಿ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಮಾತ್ರವೇ ಅಲ್ಲ, ದಿನದ ಯಾವುದೇ ಹೊತ್ತಿನಲ್ಲಿ ಬೂದುಗುಂಬಳದ ರಸ ಸೇವಿಸುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಹಲವು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳನ್ನು ಶರೀರಕ್ಕೆ ಒದಗಿಸಬಹುದು.
ಹಣ್ಣಿನ ರಸಗಳು
ಕಲ್ಲಂಗಡಿಯಿಂದ ಹಿಡಿದು, ಅನಾನಸ್, ಕಿತ್ತಳೆ, ದ್ರಾಕ್ಷಿ ಮುಂತಾದ ಯಾವುದೇ ರಸಭರಿತ ಹಣ್ಣುಗಳನ್ನು ಜ್ಯೂಸರ್‌ಗೆ ಹಾಕಿದರೆ ಶುದ್ಧ ಹಣ್ಣಿನ ರಸ ಲಭ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಕೃತಕ ಬಣ್ಣ, ಪರಿಮಳದ ಜ್ಯೂಸ್ ಖರೀದಿಸುವ ಬದಲು, ಇಂಥ ಶುದ್ಧ ಹಣ್ಣಿನ ರಸಗಳು ಆರೋಗ್ಯಕ್ಕೆ ಬೇಕಾದ ಆರೈಕೆಯನ್ನು ನೀಡುತ್ತವೆ.
ಮಜ್ಜಿಗೆ
ತಂಪಾದ ಮಜ್ಜಿಗೆಯನ್ನಂತೂ ಹೇಗೆ ಬೇಕೆಂದರೆ ಹಾಗೆ ಒಗ್ಗಿಸಿಕೊಳ್ಳಬಹುದು. ಇಂಗು, ಜೀರಿಗೆ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ಹಸಿಮೆಣಸು… ಹೀಗೆ ತರಹೇವಾರಿ ಘಮಗಳೊಂದಿಗೆ ನೀರು-ಮಜ್ಜಿಗೆಯನ್ನು ಕುಡಿಯುವ ಕ್ರಮ ಹೆಚ್ಚಿನ ಕಡೆಗಳಲ್ಲಿ ರಾಮನವಮಿಗೆ ಮುನ್ನವೇ ಆರಂಭವಾಗಿರುತ್ತದೆ. ಹೊಟ್ಟೆಯ ಆರೋಗ್ಯವನ್ನೂ ಜೋಪಾನ ಮಾಡುವ ಮಜ್ಜಿಗೆ ದೇಹಕ್ಕೆ ಅಗತ್ಯ ಸತ್ವವನ್ನೂ ಒದಗಿಸುತ್ತದೆ.
ಬೀಜಗಳು
ಕಾಮಕಸ್ತೂರಿ, ಚಿಯಾ ಮುಂತಾದ ಸಣ್ಣ ಬೀಜಗಳನ್ನು ನೀರಲ್ಲಿ ನೆನೆಸಿ, ಒಂದೆರಡು ಗಂಟೆಗಳ ಕಾಲ ಬಿಡಿ. ಇದನ್ನು ಬೇಕಾದಷ್ಟು ಪ್ರಮಾಣದ ನೀರಿಗೆ ಹಾಗೆಯೇ ಬೆರೆಸಿ ಕುಡಿಯಬಹುದು ಅಥವಾ ಹಾಲಿನೊಂದಿಗೂ ಬೆರೆಸಿಕೊಳ್ಳಬಹುದು. ಇವು ದೇಹಕ್ಕೆ ಬೇಕಾದಂಥ ಮಹತ್ವದ ಸತ್ವಗಳನ್ನು ಒದಗಿಸಿ, ಸುಡು ಬೇಸಿಗೆಯಲ್ಲಿ ದೇಹ ತಂಪಾಗಿರುವಂತೆ ಮಾಡುತ್ತದೆ.
ಇದನ್ನೂ ಓದಿ: ORS: ಒಆರ್‌ಎಸ್ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?