Site icon Vistara News

Ear buzzing | ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಇಲ್ಲಿದೆ ಕಾರಣ

tinnitus

ʻಕಿವಿಗೆ ಗಾಳಿ ಹೊಕ್ಕಂತೆ ಆಡುತ್ತಿದ್ದಾರೆʼ ಎಂಬ ಬೈಗುಳವನ್ನು ಸಾಮಾನ್ಯವಾಗಿ ಕೇಳಿರಬಹುದು. ನಮ್ಮ ದೇಹದ ಯಾವುದೇ ಭಾಗದಲ್ಲಿ ಸಾಮಾನ್ಯವಲ್ಲದ ಏನೇ ತೊಂದರೆ ಬಂದರೂ ಅದು ಕಿರಿಕಿರಿಯನ್ನೇ ತರುತ್ತದೆ. ಹೊರಜಗತ್ತನ್ನು ಕೇಳಬೇಕಾದ ಕಿವಿಯನ್ನು ಒಳಗಿನಿಂದಲೇ ಶಬ್ದ ಬಂದು ತುಂಬಿದರೆ? ಅದರಲ್ಲೂ ನಮ್ಮ ಸುತ್ತಲಿನ ಉಳಿದಾರಿಗೂ ಕೇಳದ ಶಬ್ದಗಳು ನಮಗೆ ಮಾತ್ರ ಕೇಳಿಸುತ್ತಿವೆ ಎಂದಾಗ? ಗುಂಯ್‌, ಹಿಸ್‌ಸ್‌, ಗರ್ರರ್‌, ಸುಂ..ಯ್‌- ಹೀಗೆ ನಾನಾ ರೀತಿಯ ಶಬ್ದಗಳು ಕಿವಿಯ ಒಳಗಿನಿಂದಲೇ ಕೇಳಿಸುವ ಈ ವಿಚಿತ್ರ ಸಮಸ್ಯೆಗೆ- ಭೂತಚೇಷ್ಟೆಯೆಂದಲ್ಲ- ಟಿನ್ನಿಟಸ್‌ ಎನ್ನಲಾಗುತ್ತದೆ.

ಸದಾಕಾಲ ನಾನಾ ರೀತಿಯ ಶಬ್ದಗಳಿಂದ ಮೊರೆಯುವ ಕಿವಿ ತಲೆಚಿಟ್ಟು ಹಿಡಿಸುತ್ತದೆ. ಇದು ಒಂದು ಕಿವಿಯಲ್ಲಿ ಅಥವಾ ಎರಡೂ ಕಿವಿಯಲ್ಲಿ ಕೇಳಿಸಬಹುದು; ಒಮ್ಮೊಮ್ಮೆ ಅಥವಾ ಇಡೀ ದಿನ ಕೇಳಿಸಬಹುದು; ಸಣ್ಣದಾಗಿ ಅಥವಾ ದೊಡ್ಡದಾಗಿ ಕೇಳಿಸಬಹುದು ಇನ್ನೂ ಕೆಲವು ಸಂದರ್ಭಗಳಲ್ಲಿ ಹೃದಯದ ಬಡಿತದಂತೆ ಒಂದು ರಿದಂನಲ್ಲೂ ಈ ಶಬ್ದಗಳು ಕೇಳಿಸಬಹುದು.

ಸಾಮಾನ್ಯವಾಗಿ ೬೫ ವರ್ಷಕ್ಕೆ ಮೇಲ್ಪಟ್ಟವರಲ್ಲಿ ಶೇ. ೨೫ರಷ್ಟು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬುದು ಅಂದಾಜು. ಈ ಶಬ್ದ ಅತಿಯಾದರೆ, ಹೊರಗಿನ ಶಬ್ದವನ್ನು ಕೇಳಲು ಅಥವಾ ಯಾವುದೇ ವಿಷಯದ ಬಗ್ಗೆ ಗಮನ ಕೇಂದ್ರೀಕರಿಸಲು ಅಡಚಣೆಯಾಗಬಹುದು. ನಿದ್ದೆ ಮಾಡಲು ಸಾಧ್ಯವಾಗದೆ ನಿಧಾನಕ್ಕೆ ಖಿನ್ನತೆಯೂ ಆವರಿಸಬಹುದು. ಅಂತೂ ನಿತ್ಯದ ಬದುಕಿನ ಮೇಲೆ ಹಲವು ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು.

ಇದೆಂಥಾ ರೋಗ?: ಅಲ್ಲ, ಇದು ರೋಗವಲ್ಲ. ಕೆಲವೊಮ್ಮೆ ಬೇರೆ ಸಮಸ್ಯೆಗಳಿಗೆ ದಿಕ್ಸೂಚಿಯಾಗಿರಬಹುದು ಅಥವಾ ಬೇರೆ ಸಮಸ್ಯೆಗಳು ಇದಕ್ಕೆ ಮೂಲವಾಗಿರಬಹುದು. ಇದು ಏನೆಲ್ಲಾ ಕಾರಣಗಳಿಂದ ಬರುತ್ತದೆ ಎಂಬುದನ್ನು ನೋಡೋಣ.

ನಮ್ಮ ಒಳಗಿವಿಯಲ್ಲಿ ನಾಜೂಕಾದ ಕೂದಲಿನಂಥ ಕೋಶಗಳಿರುತ್ತವೆ. ಪ್ರತಿಬಾರಿ ಕಿವಿಯ ಮೇಲೆ ಯಾವುದೇ ಶಬ್ದದ ತರಂಗಗಳು ಬಿದ್ದಾಗಲೂ ಈ ಕೋಶಗಳು ಕಂಪಿಸಿ, ವಿದ್ಯುನ್ಮಾನ ತರಂಗಗಳನ್ನು ಸೃಷ್ಟಿಸಿ, ವಾಹಕ ನರಗಳ ಮೂಲಕ ನಮ್ಮ ಮೆದುಳಿಗೆ ರವಾನಿಸುತ್ತವೆ. ಈ ಶಬ್ದಗಳ ಅರ್ಥವೇನು ಎಂಬುದನ್ನು ನಮ್ಮ ಮೆದುಳು ಗುರುತಿಸುತ್ತದೆ. ಆದರೆ ನಮ್ಮ ಕಿವಿಯೊಳಗಿನ ಕೂದಲಿನಂಥ ಕೋಶಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಆಗ ಒಟ್ಟಾರೆ ಏನೇನೋ ಸಂಕೇತಗಳನ್ನು ಅವು ಮೆದುಳಿಗೆ ರವಾನಿಸಿ ಟಿನ್ನಿಟಸ್‌ ಉಂಟುಮಾಡಬಹುದು.

ಕಿವಿಯ ಸೋಂಕು: ಕಿವಿಯಲ್ಲಿ ಕೊಳೆ, ಅಂಟಿನಂಥ ವಸ್ತು ತುಂಬಿ ಈ ಸಮಸ್ಯೆ ಬರಬಹುದು. ಕೆಲವೊಮ್ಮೆ ಕಿವಿಯ ಸೋಂಕು ಸಹ ಇದಕ್ಕೆ ಕಾರಣವಾಗುತ್ತದೆ. ಪೆನ್ನು, ಪೆನ್ಸಿಲ್ಲಿನಂಥ ಯಾವುದಾದರೂ ವಸ್ತುವನ್ನು ಕಿವಿಯೊಳಗೆ ಹಾಕಿ, ಪೊರೆಗೆ ಗಾಯವಾದರೂ ಈ ಸಮಸ್ಯೆ ಬರಬಹುದು.

ಅಪಘಾತ: ಕೆಲವು ಅಪಘಾತಗಳಲ್ಲಿ ತಲೆಗೆ ಅಥವಾ ಕುತ್ತಿಗೆಗೆ ಗಾಯವಾಗಿರಬಹುದು. ಇದರಿಂದ ಒಳಗಿವಿಯ ಕೋಶಗಳು ಅಥವಾ ಶಬ್ದವಾಹಕ ನರಗಳಿಗೆ ಪೆಟ್ಟಾಗಿ ಈ ಸಮಸ್ಯೆ ತಲೆದೋರಬಹುದು. ಆದರೆ ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಒಂದು ಕಿವಿಯಲ್ಲಿ ಟಿನ್ನಿಟಸ್‌ ಉಂಟಾಗುತ್ತದೆ.

ಶಬ್ದ ಸ್ಫೋಟ: ಅತಿ ದೊಡ್ಡದಾದ ಯಾವುದಾದರೂ ಶಬ್ದ, ಉದಾ- ಸ್ಫೋಟದಂಥದ್ದು, ಒಮ್ಮೆಲೇ ಕಿವಿಗೆ ಅಪ್ಪಳಿಸಿದಾಗ ನರಗಳಿಗೆ ಹಾನಿಯಾಗಿ ಟಿನ್ನಿಟಸ್‌ ಬರುವ ಸಾಧ್ಯತೆಯಿದೆ. ಗಿರಣಿ ಅಥವಾ ಡಿಸ್ಕೊ ಬಾರ್‌ನಂಥ ಅತಿಯಾದ ಶಬ್ದವಿರುವ ಸ್ಥಳಗಳಲ್ಲಿ ದೀರ್ಘಕಾಲ ಕೆಲಸ ಮಾಡಿದವರು, ಯುದ್ಧಭೂಮಿಯಲ್ಲಿರುವ ಸೈನಿಕರು, ಕಿವಿಗೆ ದೊಡ್ಡ ವಾಲ್ಯೂಮ್‌ನಲ್ಲಿ ಸದಾಕಾಲ ಇಯರ್‌ ಪ್ಲಗ್‌ ಬಳಸುವವರಿಗೂ ಈ ಸಮಸ್ಯೆ ಕಾಡುವುದು ಸಾಮಾನ್ಯ. ಶ್ರವಣೇಂದ್ರಿಯ ಕ್ರಮೇಣ ಹಾನಿಗೊಳಗಾಗುವುದು ಇದಕ್ಕೆ ಕಾರಣ

ಔಷಧಿಗಳು: ಬಹಳಷ್ಟು ಔಷಧಿಗಳು ಈ ಸಮಸ್ಯೆಗೆ ಕಾರಣವಾಗುತ್ತವೆ. ಈಗಾಗಲೇ ಟಿನ್ನಿಟಸ್‌ ಇರುವವರಲ್ಲಿ ಈ ಔಷಧಿಗಳು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಕೆಲವು ಪ್ರತಿಜೈವಿಕಗಳು, ಸ್ಟಿರಾಯ್ಡ್‌ರಹಿತ ಉರಿಯೂತ ಶಮನಕಾರಕಗಳು (NSAID), ಕ್ಯಾನ್ಸರ್‌ ಔಷಧಿಗಳು, ಮಲೇರಿಯಾ ಔಷಧಿಗಳು, ಖಿನ್ನತೆ ನಿವಾರಕಗಳು- ಹೀಗೆ ಹಲವು ರೀತಿಯ ಮದ್ದುಗಳೇ ಕಿವಿಗೆ ಗುದ್ದು ಕೊಡಬಹುದು. ಸಾಮಾನ್ಯವಾಗಿ ಈ ಔಷಧಿಗಳನ್ನು ನಿಲ್ಲಿಸಿದ ಕೆಲವು ದಿನಗಳಲ್ಲಿ ಈ ಶಬ್ದ ಮಾಯವಾಗುತ್ತದೆ.

ಅಲರ್ಜಿ: ಹೆಚ್ಚಾಗಿ ಚಳಿಗಾಲದಲ್ಲಿ, ಕೆಲವರಿಗೆ ಎಲ್ಲಾ ಕಾಲದಲ್ಲೂ, ಕಾಡುವ ಅಲರ್ಜಿಯಿಂದಾಗಿ ಮೂಗಿನ ಒಳತುದಿಯನ್ನು ಒಳಗಿವಿಗೆ ಸಂಪರ್ಕಿಸುವ ನಾಳ ದ್ರವದಿಂದ ತುಂಬಿಹೋಗುತ್ತದೆ. ಹೀಗೆ ಸೃಷ್ಟಿಯಾಗುವ ಒತ್ತಡದಿಂದಲೂ ಕಿವಿಯಲ್ಲಿ ಇಂಥ ಶಬ್ದಗಳು ಬರಬಹುದು.

ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್‌ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ

ಇತರ ಕಾರಣಗಳು: ಅತಿಯಾದ ಮೈಗ್ರೇನ್, ಥೈರಾಯ್ಡ್‌ ಸಮಸ್ಯೆ, ಮಧುಮೇಹ, ಹೃದಯ ಸಮಸ್ಯೆ, ರಕ್ತಹೀನತೆ, ಅತಿಯಾದ ಸಿಗರೇಟ್‌ ಮತ್ತು ಕುಡಿತ, ರುಮಟಾಯ್ಡ್‌ ಆರ್ಥರೈಟಿಸ್‌ನಂಥ ಹಲವಾರು ಸಮಸ್ಯೆಗಳು ನಮ್ಮ ಕಿವಿಯಲ್ಲಿ ಈ ತೊಂದರೆಯನ್ನು ಉಂಟುಮಾಡುವಂಥವು.

ಇದಕ್ಕೇನು ಮಾಡಬಹುದು?: ಇದೊಂದು ರೋಗವಲ್ಲದಿರುವುದರಿಂದ, ಇದಕ್ಕೆಂದೇ ನಿಗದಿತವಾದ ಚಿಕಿತ್ಸೆಯೂ ಇಲ್ಲ. ಬೇರೆ ಸಮಸ್ಯೆಗಳಿಗೆ ಇದು ದಿಕ್ಸೂಚಿಯೇ ಎಂಬುದನ್ನು ಮೊದಲು ವೈದ್ಯರು ಪತ್ತೆ ಮಾಡುತ್ತಾರೆ. ಹಾಗೇನೂ ಇಲ್ಲದಿದ್ದರೆ, ಇದಕ್ಕಿರುವ ಬೇರೆಯ ಮೂಲವನ್ನು ಪತ್ತೆ ಮಾಡುವುದು ಮುಖ್ಯ. ಹೆಚ್ಚಿನ ಶಬ್ದವಿರುವ ಸ್ಥಳದಲ್ಲೇ ಬದುಕು ಎಂದಾದರೆ, ಕಿವಿಯ ರಕ್ಷಣೆಗೆ ಕೆಲವು ಸಾಧನಗಳನ್ನು ಬಳಸಬೇಕಾಗುತ್ತದೆ. ದೊಡ್ಡ ಶಬ್ದಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದಾದರೆ ಅದನ್ನು ಮಾಡುವುದು ಸೂಕ್ತ. ಅಲ್ಕೋಹಾಲ್‌ ಮತ್ತು ಸಿಗರೇಟ್‌ ಅಭ್ಯಾಸವಿದ್ದರೆ ತ್ಯಜಿಸುವುದು ಎಲ್ಲಾ ದೃಷ್ಟಿಯಿಂದಲೂ ಅನುಕೂಲ.

ಶಬ್ದ ಚಿಕಿತ್ಸೆ, ಅಂದರೆ ಬೇರೆ ರೀತಿಯ ಶಬ್ದಗಳನ್ನು ಬಾಧಿತರಿಗೆ ಕೇಳಿಸುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವನ್ನು ಕೆಲವೊಮ್ಮೆ ವಯಸ್ಸಾದವರಲ್ಲಿ ಮಾಡಲಾಗುತ್ತದೆ. ಇದಲ್ಲದೆ, ಆಪ್ತ ಸಮಾಲೋಚನೆ, ಕಾಗ್ನಿಟಿವ್‌ ಬಿಹೇವಿಯರಲ್‌ ಥೆರಪಿ ಮುಂತಾದವುಗಳ ಮೂಲಕ ಗಮನವನ್ನು ಬೇರೆಡೆ ಸೆಳೆದು, ಈ ಸಮಸ್ಯೆಗೆ ಉಪಶಮನ ನೀಡುವ ಸಾಧ್ಯತೆಯನ್ನೂ ವೈದ್ಯರು ಪರಿಶೀಲಿಸುತ್ತಾರೆ.

ಇದನ್ನೂ ಓದಿ | Winter Fashion | ಚುಮುಚುಮು ಚಳಿಗೆ ಬಂತು ಬಣ್ಣಬಣ್ಣದ ಲೈಟ್‌ವೈಟ್‌ ಉಲ್ಲನ್‌ ಟೋಪಿ

Exit mobile version