ಮಳೆಗಾಲದ ಆರೋಗ್ಯ ಸಮಸ್ಯೆಗಳು (Ear Infections during Monsoon) ನಾನಾ ರೀತಿಯವು. ಹೆಚ್ಚಿನ ತೇವಾಂಶ ಇರುವಲ್ಲೆಲ್ಲ ವೈರಸ್, ಫಂಗಸ್ ಮತ್ತು ಬ್ಯಾಕ್ಟೀರಿಯಗಳ ಬೆಳವಣಿಗೆ ಸಮೃದ್ಧವಾಗಿ ಆಗುತ್ತದೆ. ಉದಾ: ಕಿವಿಯನ್ನೇ ಗಮನಿಸಿದರೆ ಮುಖದಂಚಿಗಿನ ಈ ಪುಟ್ಟ ಬಾವಿಗಳಲ್ಲಿ ಎಷ್ಟೊಂದು ತೇವಾಂಶ ಸೇರಿಕೊಳ್ಳುತ್ತದೆಂದರೆ ಜೋರು ಮಳೆಯಲ್ಲಿ ಕಿವಿನೋವು ಎಷ್ಟೋ ಮಂದಿಗೆ ಬಿಡುವುದೇ ಇಲ್ಲ. ಆಗಾಗ ಕಿವಿಯ ಸೋರುವುದು, ಸೋಂಕುಗಳು ಕಾಟ ಕೊಡುತ್ತಲೇ ಇರುತ್ತವೆ. ಕಿವಿ ಕಟ್ಟಿದಂತಾಗುವುದು, ಕಿರಿಕಿರಿ, ಸರಿಯಾಗಿ ಕೇಳದಂತಾಗುವುದು, ಸೋರುವುದು, ಬಿಟ್ಟು ಬಿಟ್ಟು ಕಾಡುವ ನೋವು ಇತ್ಯಾದಿಗಳೆಲ್ಲ ಸೋಂಕಿನ ಲಕ್ಷಣಗಳು. ಮಳೆಗಾಲದಲ್ಲಿ ಕಾಡುವ ಕಿವಿಯ ಸೋಂಕುಗಳನ್ನು ನಿಯಂತ್ರಿಸುವುದು ಹೇಗೆ?
ಸ್ವಚ್ಛತೆ
ಕಿವಿಯ ಹೊರಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಲ್ಳುವುದು ಅಗತ್ಯ. ಅದಕ್ಕಾಗಿ ಸ್ವಚ್ಛವಾದ ಹತ್ತಿಯ ವಸ್ತ್ರದಿಂದ ಕಿವಿಯ ಹೊರಭಾಗವನ್ನು ಒರೆಸಿ ಶುಚಿ ಮಾಡಿ. ಸ್ನಾನ ಆದ ನಂತರ ಅಥವಾ ಹೊರಗಿನಿಂದ ಬಂದಾಗ ಮಳೆಯಲ್ಲಿ ನೆನೆದಿದ್ದರೆ ಕಿವಿಯ ಹೊರಭಾಗವನ್ನು ಒರೆಸಿ ಒಣಗಿಸಿಕೊಳ್ಳುವುದು ಅಗತ್ಯ. ಇದಕ್ಕಾಗಿ ಕಿವಿಯೊಳಗೆ ಹತ್ತಿಯನ್ನೋ ಅಥವಾ ಇನ್ನೇನನ್ನಾದರೂ ತುರುಕುವ ಸಾಹಸ ಮಾಡಬೇಡಿ.
ಇಯರ್ ಪ್ಲಗ್
ಕಿವಿಯೊಳಗೆ ಹಾಕುವಂಥ ಯಾವುದೇ ಉಪಕರಣಗಳಾದರೂ ಕಿವಿಯ ಪೊರೆಯ ಅತ್ಯಂತ ಸಮೀಪದಲ್ಲೇ ಇರುತ್ತವೆ. ಹಾಗಾಗಿ ಅವುಗಳ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಅವುಗಳಲ್ಲೂ ಫಂಗಸ್ ಬೆಳೆಯುವ ಅಪಾಯವಿದೆ. ಹಾಗಾಗಿ ಇಯರ್‌ಪ್ಲಗ್, ಹೆಡ್‌ಫೋನ್ ಗಳನ್ನು ಆಗಾಗ ಶುಚಿ ಮಾಡಿ ಇರಿಸಿಕೊಳ್ಳಿ. ಇದರಿಂದ ರೋಗಾಣುಗಳು ಕಿವಿಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಕಡ್ಡಿ ಹಾಕಬೇಡಿ
ಕಡ್ಡಿಗಳು, ಹತ್ತಿಯ ಸ್ವಾಬ್‌ಗಳು ಮುಂತಾದ ಯಾವುದನ್ನೂ ಕಿವಿಯೊಳಗೆ ಸ್ವಚ್ಛತೆಯ ನೆವದಿಂದ ಹಾಕಬೇಡಿ. ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ ಈ ವಸ್ತುಗಳು. ಹೀಗೆ ಹಾಕುವ ವಸ್ತುಗಳಲ್ಲೇ ರೋಗಾಣುಗಳು ಇರಬಹುದು. ಅವು ಶುಚಿ ಮಾಡುವ ಬದಲು ಕಿವಿಯಲ್ಲಿರುವ ಕುಗ್ಗೆಯನ್ನು ಇನ್ನಷ್ಟು ಒಳಗೆ ತಳ್ಳಿ ಹಾನಿ ಮಾಡಬಹುದು. ಒಂದೊಮ್ಮೆ ಕಿವಿಯನ್ನು ಶುಚಿ ಮಾಡುವುದು ಅಗತ್ಯ ಎಂದಾದರೆ, ತಜ್ಞರ ನೆರವು ಪಡೆಯಿರಿ.
ಈಜಬೇಡಿ
ಮಳೆಗಾಲದ ದಿನಗಳಲ್ಲಿ ಈಜುಕೊಳಗಳಿಗೆ ಇಳಿಯುವುದು ಕ್ಷೇಮವಲ್ಲ. ಆ ನೀರಿನಲ್ಲಿ ಹಲವು ರೀತಿಯ ರೋಗಾಣುಗಳು ಇರಬಹುದು. ಕೇವಲ ಈಜುವುದೇ ಅಲ್ಲ, ಯಾವುದೇ ರೀತಿಯ ಜಲಸಾಹಸಗಳು ಈ ದಿನಗಳಲ್ಲಿ ಸರಿಯಲ್ಲ. ಇಷ್ಟಾಗಿಯೂ ನೀರಿಗಿಳಿಯುವುದು ಅನಿವಾರ್ಯ ಎಂದಾದರೆ ಜಲ ನಿರೋಧಕ (ವಾಟರ್ ರೆಸಿಸ್ಟೆಂಟ್) ಇಯರ್ ಪ್ಲಗ್‌ಗಳನ್ನು ಬಳಸುವುದು ಒಳ್ಳೆಯದು. ಇವು ಕಿವಿ ಮತ್ತು ನೀರಿನ ನಡುವೆ ಗೋಡೆಯನ್ನು ಸೃಷ್ಟಿ ಮಾಡಿ, ಕಿವಿಗೆ ನೀರು ಹೋಗದಂತೆ ತಡೆಯುತ್ತವೆ.
ವಿಶ್ರಾಂತಿ ನೀಡಿ
ನಮ್ಮ ಕಿವಿಗೂ ವಿಶ್ರಾಂತಿ ಬೇಕು. ಸದಾ ಕಾಲ ಕೇಳುತ್ತಲೇ ಇರುವ ಅವುಗಳಿಗೆ ದಿನವಿಡೀ ಇಯರ್ ಫೋನ್ ತುಂಬಿಸಿಟ್ಟರೆ ಕಷ್ಟ. ಇದರಿಂದ ಕಿವಿಯಲ್ಲಿನ ತೇವಾಂಶವೂ ಹೆಚ್ಚುತ್ತದೆ. ಹಾಗಾಗಿ ಕೇಳುವ ಕಾಯಕದಿಂದ ದಿನದ ಸ್ವಲ್ಪ ಹೊತ್ತು ಅವುಗಳಿಗೆ ವಿಶ್ರಾಂತಿ ನೀಡಿ. ಸುತ್ತಲಿನ ಜಗತ್ತಿನ ಶಬ್ದಗಳನ್ನು ನಿಲ್ಲಿಸಲಂತೂ ಸಾಧ್ಯವಿಲ್ಲ. ಹಾಗಾಗಿ ಕಿವಿಗೆ ಹಾಕುವ ಉಪಕರಣಗಳನ್ನು ಕಡಿಮೆ ಮಾಡಿ.
ಇದನ್ನೂ ಓದಿ:Thyroid Health Formulas: ನಿಮ್ಮ ಥೈರಾಯ್ಡ್ ನಿಮ್ಮ ಕೈಯಲ್ಲಿ! ಥೈರಾಯ್ಡ್ ಆರೋಗ್ಯಕ್ಕೆ ಇಲ್ಲಿವೆ ಆರು ಸೂತ್ರಗಳು
ತಜ್ಞರೇ ಬೇಕು
ಇಷ್ಟಾಗಿ ಕಿವಿಯಲ್ಲಿ ನೋವು, ಕಿರಿಕಿರಿ ಅಥವಾ ಯಾವುದೇ ರೀತಿಯ ತೊಂದರೆಯಿದ್ದರೂ ಸ್ವಯಂವೈದ್ಯ ಮಾಡಬೇಡಿ. ಔಷಧಿ ಅಂಗಡಿಯಿಂದ ಯಾವುದಾದರೂ ಡ್ರಾಪ್ಸ್ ತಂದು ಹಾಕುವುದು, ಪ್ರತಿಜೈವಿಕ ಡ್ರಾಪ್ ಪ್ರಯೋಗಿಸುವುದು, ಯಾವುದೋ ಸೊಪ್ಪಿನ ರಸ ಅಥವಾ ತೈಲ ಕಿವಿಗೆ ಹನಿಸುವುದು ಮುಂತಾದ ಯಾವುದೇ ನಾಟಿ ಪದ್ಧತಿಗಳು ಕಿವಿಯನ್ನು ತೀವ್ರ ತೊಂದರೆಗೆ ದೂಡಬಹುದು. ಬದಲಿಗೆ, ನೇರವಾಗಿ ಇಎನ್‌ಟಿ ವೈದ್ಯರ ಬಳಿ ಹೋಗಿ.