ಬೆಂಗಳೂರು: ವಿದ್ಯಾರ್ಥಿಗಳು ತಾವೇ ಮಾಡಿಕೊಳ್ಳಬಹುದಾದ ಕೆಲವು ಸುಲಭ ಅಡುಗೆಗಳು ಇಲ್ಲಿವೆ. ತಾಸುಗಟ್ಟಲೆ ಹೆಚ್ಚುತ್ತಾ, ರುಬ್ಬುತ್ತಾ, ಬೇಯಿಸುವ ಕೆಲಸಗಳು ಓದುವ ಕಾಲದಲ್ಲಿ ಆಗದಂಥ ಮಾತು. ಚುರುಕಾಗಿ ಮಾಡುವಂಥ ಆರೋಗ್ಯಕರ (cooking tips for students) ಆಯ್ಕೆಗಳಿವು.
ವಿದ್ಯಾರ್ಥಿ ಜೀವನದಲ್ಲಿ ಎದುರಿಸಬೇಕಾದ ಸವಾಲುಗಳ ಪೈಕಿ ನಮಗಾಗಿ ನಾವು ಅಡುಗೆ ಮಾಡಿಕೊಳ್ಳುವುದೂ ಒಂದು! ತಮಾಷೆಗಲ್ಲ, ಸಿಕ್ಕಿದಲ್ಲಿ ಸಿಕ್ಕಿದ್ದನ್ನು ತಿಂದುಕೊಂಡಿರುವ ಮನೋಸ್ಥಿತಿ ಇಲ್ಲದಿದ್ದರೆ, ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ, ರುಚಿ-ಶುಚಿಯ ಬಗ್ಗೆ ಆಸ್ಥೆ ಇದ್ದರೆ ನಮಗಾಗಿ ನಾವು ಬೇಯಿಸಿಕೊಳ್ಳುವ ದಿನಗಳು ವಿದ್ಯಾರ್ಥಿ ಜೀವನದಲ್ಲಿ ಖಂಡಿತಕ್ಕೂ ಬರಬಹುದು. ಆ ಸನ್ನಿವೇಶವನ್ನು ಎದುರಿಸುವುದು (cooking tips for students) ಅಂದುಕೊಂಡಷ್ಟು ಸುಲಭವಲ್ಲದೆಯೂ ಇರಬಹುದು. ವ್ಯಾಸಂಗದ ಜೊತೆಗೆ ಕೆಲವೊಮ್ಮೆ ಅರೆಕಾಲಿಕ ಕೆಲಸ ಮಾಡುವುದೂ ಅಗತ್ಯವಾಗುತ್ತದೆ. ಇವೆಲ್ಲ ಹೊಣೆಗಳ ನಡುವೆ ಅಡುಗೆ ಮನೆಯಲ್ಲಿ ಕೈ ಸುಟ್ಟುಕೊಳ್ಳುವ ಕೆಲಸವೂ ಸೇರಿಕೊಂಡರೆ ನಿಭಾಯಿಸುವುದು ಹೇಗೆ?
ಹಾಗೆಂದೇ ವಿದ್ಯಾರ್ಥಿಗಳು ತಾವೇ ಮಾಡಿಕೊಳ್ಳಬಹುದಾದ ಕೆಲವು ಸುಲಭ ಅಡುಗೆಗಳು ಇಲ್ಲಿವೆ. ತಾಸುಗಟ್ಟಲೆ ಹೆಚ್ಚುತ್ತಾ, ರುಬ್ಬುತ್ತಾ, ಬೇಯಿಸುವ ಕೆಲಸ ಓದುವ ಕಾಲದಲ್ಲಿ ಆಗದಂಥ ಮಾತು. ಚುರುಕಾಗಿ ಮಾಡುವಂಥ ಆರೋಗ್ಯಕರ (cooking tips for students) ಆಯ್ಕೆಗಳಿವು. ಯಾವುದೇ ಊಟಕ್ಕಾದರೂ ರುಚಿಯ ಜೊತೆಗೆ ಗಮನಹರಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ಕಾರ್ಬ್-ಪ್ರೊಟೀನ್-ನಾರು-ಕೊಬ್ಬು-ಖನಿಜಗಳ ಸಮತೋಲನ ನೂರು ಪ್ರತಿಶತ ಅಲ್ಲದಿದ್ದರೂ ಮುಕ್ಕಾಲುಪಾಲಾದರೂ ಸರಿಯಿದ್ದರೆ ರೋಗಗಳನ್ನು ದೂರ ಇಡಬಹುದು, ದೇಹದ ಸಹಜ ಪ್ರತಿರೋಧಕ ಶಕ್ತಿ ಸಶಕ್ತವಾಗಿರುತ್ತದೆ.
ಸುಲಭ ಕಿಚಡಿಗಳು: ಬೇಳೆ-ಅಕ್ಕಿಯನ್ನು ಬಳಸಿ ಮಾಡುವ ಸುಲಭ ಅಡುಗೆಯಿದು. ಅಕ್ಕಿಯಷ್ಟು ಕಾರ್ಬ್ ಬೇಡ ಎನಿಸಿದರೆ, ಅದರ ಬದಲಿಗೆ ಓಟ್ಸ್, ಸಿರಿಧಾನ್ಯಗಳು, ಕಿನೋವಾ ಮುಂತಾದ ಯಾವುದೇ ಪ್ರೊಟೀನ್‌ಭರಿತ ಧಾನ್ಯಗಳನ್ನು ಈ ಖಾದ್ಯಕ್ಕೆ ಬಳಸಿಕೊಳ್ಳಬಹುದು.
ಬೇಕಾಗುವ ವಸ್ತುಗಳು: ಹೆಸರುಬೇಳೆ- 1 ಕಪ್, ಅಕ್ಕಿ- 2 ಕಪ್, ಬೀನ್ಸ್, ಕ್ಯಾರೆಟ್, ಎಲೆಕೋಸು ಮುಂತಾದ ನಿಮ್ಮಿಷ್ಟದ ತರಕಾರಿಗಳು- 2 ಕಪ್, ಶುಂಠಿ- ಒಂದಿಂಚು, ಕಾಳುಮೆಣಸಿನ ಪುಡಿ- 1/4 ಚಮಚ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆ ರಸ- ಒಂದು ಚಮಚ, ಒಗ್ಗರಣೆಗೆ ತುಪ್ಪ, ಜೀರಿಗೆ, ಅರಿಶಿನ ಮತ್ತು ಇಂಗು.
ವಿಧಾನ: ಕುಕ್ಕರ್‌ಗೆ ನೇರವಾಗಿ ಒಗ್ಗರಣೆ ಹಾಕುವ ವಿಧಾನವಿದು. ಕುಕ್ಕರ್ ಹದವಾಗಿ ಬಿಸಿಯಾದಾಗ ತುಪ್ಪ ಹಾಕಿ. ಇದಕ್ಕೆ ಜೀರಿಗೆ, ಇಂಗು, ಶುಂಠಿ ಮತ್ತು ಕರಿಬೇವಿನ ಸೊಪ್ಪುಗಳನ್ನು ಒಂದಾದಮೇಲೊಂದು ಹಾಕಿ ಬಾಡಿಸಿ. ತರಕಾರಿಗಳನ್ನು ಹಾಕಿ ಬಾಡಿಸಿಕೊಳ್ಳಿ. ಇದಕ್ಕೆ ತೊಳೆದಿಟ್ಟ ಹೆಸರುಬೇಳೆಯನ್ನು ಹಾಕಿ ಒಂದೆರಡು ನಿಮಿಷ ಕೈಯಾಡಿಸಿ. ಈ ಮಿಶ್ರಣಕ್ಕೆ ಐದು ಕಪ್‌ನಷ್ಟು ನೀರು ಹಾಕಿ. ನೀರು ಕುದಿಯುವಾಗ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ನಿಂಬೆರಸ. ಕಾಳುಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ. ಕುದಿಯುವ ಎಸರಿಗೆ ಅಕ್ಕಿ ಹಾಕಿ ಮುಚ್ಚಿ. ಸಣ್ಣ ಉರಿಯಲ್ಲಿ ಎರಡು ಸೀಟಿ ಸಾಕಾಗುತ್ತದೆ. ಖಿಚಡಿಯ ಇದೇ ರೆಸಿಪಿಗೆ ಅಕ್ಕಿಯ ಬದಲು ಬೇರೆ ಧಾನ್ಯಗಳನ್ನು ಬಳಸಿಕೊಳ್ಳಬಹುದು.
ದಿಢೀರ್ ದೋಸೆಗಳು: ಅಕ್ಕಿ-ಉದ್ದು ನೆನೆಸಿ, ರುಬ್ಬಿ, ಹುದುಗು ಬರಿಸಿ ದೋಸೆ ಮಾಡುವುದು ಸಾಂಪ್ರದಾಯಿಕ ಪದ್ಧತಿ. ಆದರೆ ಇಷ್ಟು ವ್ಯವಧಾನ ಇರದಿದ್ದಾಗ ದಿಢೀರ್ ಆಗಿಯೂ ದೋಸೆಗಳನ್ನು ಮಾಡಬಹುದು. ರುಬ್ಬದೆಯೇ ಮಾಡುವಂಥ ರವಾ ದೋಸೆ, ರಾಗಿ ದೋಸೆ ಮುಂತಾದವು ಈ ನಿಟ್ಟಿನಲ್ಲಿ ಆಪತ್‌ಬಾಂಧವರಂತೆ.
ರಾಗಿ ದೋಸೆ: ರಾಗಿ ಹಸಿ ಹಿಟ್ಟು- 1 ಕಪ್, ಚಿರೋಟಿ ರವೆ- 1/2 ಕಪ್, ಅಕ್ಕಿ ಹಿಟ್ಟು 1/2 ಕಪ್, ಮೊಸರು- 1/2 ಕಪ್, ಉಪ್ಪು- ರುಚಿಗೆ
ವಿಧಾನ: ಮೇಲಿನ ಎಲ್ಲಾ ವಸ್ತುಗಳನ್ನು ನಿಧಾನಕ್ಕೆ ಗಂಟಾಗದಂತೆ ನೀರು ಸೇರಿಸಿ ಮಿಶ್ರ ಮಾಡಿ. ಮಾಮೂಲಿ ದೋಸೆ ಹಿಟ್ಟಿನ ಹದಕ್ಕೇ ಈ ಹಿಟ್ಟನ್ನೂ ಮಾಡಿಕೊಳ್ಳಬಹುದು. ಬಿಸಿ ಕಾವಲಿಗೆ ಹಿಟ್ಟು ಹಾಕಿದರೆ ರಾಗಿ ದೋಸೆ ಸಿದ್ಧ. ಚೆಟ್ಣಿ ಮಾಡುವಷ್ಟು ಸಮಯವಿಲ್ಲದಿದ್ದರೆ ಚಿಂತಿಲ್ಲ. ಇದೇ ಹಿಟ್ಟಿಗೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪುಗಳನ್ನು ಸೇರಿಸಿಕೊಳ್ಳಿ. ಹಿಟ್ಟಿಗೆ ಇನ್ನೂ ನೀರು ಹಾಕಿ, ನೀರು ದೋಸೆಯ ಹದಕ್ಕೆ ಸಿದ್ಧಪಡಿಸಿ. ಕಾವಲಿ ಬಿಸಿಯಾದಾಗ ನೀರು ದೋಸೆಯಂತೆಯೇ ಇದನ್ನೂ ಹಾಕಬಹುದು.
ರವೆ ದೋಸೆ: ಚಿರೋಟಿ ರವೆ- ೧ ಕಪ್, ಅಕ್ಕಿ ಹಿಟ್ಟು- ೧/೪ ಕಪ್, ಗೋಧಿ ಹಿಟ್ಟು- ೧/೪ ಕಪ್, ಜೋಳದ ಹಿಟ್ಟು- ೧/೪ ಕಪ್, ಮೊಸರು- ೧/೨ ಕಪ್, ಉಪ್ಪು- ರುಚಿಗೆ
ವಿಧಾನ: ಮೇಲಿನ ಎಲ್ಲಾ ವಸ್ತುಗಳಿಂದ ನೀರು ಸೇರಿಸುತ್ತಾ ಗಂಟಾಗದಂತೆ ಮಿಶ್ರಣ ತಯಾರಿಸಿ. ದೋಸೆ ಹಿಟ್ಟಿನ ಹದಕ್ಕೆ ಬಂದ ಮೇಲೆ ಹತ್ತು ನಿಮಿಷಗಳ ಕಾಲ ಹಾಗೆಯೇ ಇಡಿ. ತವಾ ಬಿಸಿಯಾದ ನಂತರ ದೋಸೆ ಹಾಕಿ. ಇಂಥದ್ದೇ ಮಿಶ್ರಣವನ್ನು ಸಿದ್ಧಪಡಿಸಿಯೇ ಡಬ್ಬಿಯಲ್ಲಿ ಇಟ್ಟುಕೊಂಡರೆ, ಬೇಕಾದಾದ ಮೊಸರು, ಉಪ್ಪು, ನೀರು ಹಾಕಿ ಇನ್ನೂ ಚುರುಕಾಗಿ ಬೆಳಗಿನ ಉಪಾಹಾರ ಮಾಡಿಕೊಳ್ಳಬಹುದು.
ಫಟಾಫಟ್ ಪರಾಟಾಗಳು: ಈ ಪರಾಟಾಗಳು ಸಾಮಾನ್ಯವಾಗಿ ಗೋಧಿ ಹಿಟ್ಟಿನವು. ಆದರೆ ಗೋಧಿಯೊಂದಿಗೆ ಸಜ್ಜೆ, ಜೋಳ, ರಾಗಿ ಮುಂತಾದ ಹಿಟ್ಟುಗಳನ್ನೂ ಕೊಂಚ ಸೇರಿಸಿಕೊಂಡರೆ- ಬಹುಧಾನ್ಯಗಳ ಪರಾಟಾ ಸಿದ್ಧವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಧಾನ್ಯಗಳು ಯಾವತ್ತೂ ಲಾಭದಾಯಕ.
ಸರಳ ವಿಧಾನ: ನಿಮ್ಮಿಷ್ಟದ ಯಾವುದೇ ಸೊಪ್ಪು ಅಥವಾ ತರಕಾರಿಯನ್ನು ತೆಗೆದುಕೊಳ್ಳಿ. ಉದಾ, ಪಾಲಕ್, ಮೆಂತೆಯಂಥ ಸೊಪ್ಪುಗಳು ಅಥವಾ ಕ್ಯಾರೆಟ್, ಹೂಕೋಸು, ಮೂಲಂಗಿ ಮುಂತಾದ ತರಕಾರಿಗಳು. ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ, ಧನಿಯಾ ಮತ್ತು ಜೀರಿಗೆ ಪುಡಿ
ಸೊಪ್ಪು ಅಥವಾ ತರಕಾರಿಗಳನ್ನು ಸಣ್ಣಕ್ಕೆ ಹೆಚ್ಚಿ ಅಥವಾ ತುರಿದುಕೊಳ್ಳಿ. ೧/೨ ಕಪ್ ನೀರನ್ನು ಬಿಸಿ ಮಾಡಿ. ನೀರು ಒಲೆಯ ಮೇಲಿದ್ದಾಗಲೇ ಅದನ್ನು ಹೆಚ್ಚಿದ ಸೊಪ್ಪು/ ತರಕಾರಿಗಳನ್ನು ಹಾಕಿ ಸ್ವಲ್ಪ ಬಾಡಿಸಿ. ಇದಕ್ಕೆ ಉಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ಕೈಯಾಡಿ. ಈ ಮಿಶ್ರಣ ಬಿಸಿ ಇರುವಾಗಲೇ ಇದಕ್ಕೆ ಧಾನ್ಯಗಳ ಹಿಟ್ಟು ಸೇರಿಸಿ ಕೆಲಸಿ, ಚೆನ್ನಾಗಿ ನಾದಿದರೆ ಪರಾಟಾ ಹಿಟ್ಟು ಸಿದ್ಧ. ಬೇಕಾದಾಗ ಲಟಿಸಿ, ಬೇಯಿಸಿ, ಹೊಟ್ಟೆಗೆ ನೈವೇದ್ಯ ಮಾಡಿ.
ಇದನ್ನೂ ಓದಿ : Healthy eating tips for college students : ಕಾಲೇಜು ವಿದ್ಯಾರ್ಥಿಗಳ ಊಟದಲ್ಲಿ ಏನಿದ್ದರೆ ಸೂಕ್ತ?
ಸ್ಟಫ್ಡ್ ಪರಾಟಾ ವಿಧಾನ: ಈ ವಿಧಾನದಲ್ಲಿ ಆಲೂಗಡ್ಡೆ, ಹೂಕೋಸು, ಪನೀರ್ ಮುಂತಾದವುಗಳನ್ನು ಬಳಸಬಹುದು. ಸಾಮಾನ್ಯ ಚಪಾತಿ ಹಿಟ್ಟಿನಂತೆಯೇ ಹಿಟ್ಟು ಕಲೆಸಿಕೊಳ್ಳಿ. ಪರಾಟಾ ಒಳಗೆ ತುಂಬಿಸಬೇಕಾದ ವಸ್ತುವಿಗೆ ಮಸಾಲೆಗಳನ್ನು ಸೇರಿಸಿಕೊಳ್ಳಿ. ಉದಾ, ಆಲೂಗಡ್ಡೆಯಾದರೆ ಬೇಯಿಸಿ ಕಿವುಚಿ ಮಸಾಲೆ ಸೇರಿಸಿ. ಪನೀರ್ ಸ್ಟಫ್ ಮಾಡುವುದಾದರೆ ತುರಿದು ಮಸಾಲೆ ಹಾಕಿ. ಈ ಮಿಶ್ರಣವನ್ನು ಹೋಳಿಗೆ ಹೂರಣ ತುಂಬಿದಂತೆಯೇ ಹಿಟ್ಟಿನೊಳಗೆ ತುಂಬಿ ಲಟಿಸಿ, ಬೇಯಿಸಿ.
ಇದಲ್ಲದೆ, ಕೇವಲ ಒಂದು ಸರಿಯಾದ ಖಮ್ಮನೆಯ ಒಗ್ಗರಣೆಯೊಂದಿಗೆ ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನಗಳು ಸಿದ್ಧಗೊಳ್ಳುತ್ತವೆ. ಇವುಗಳಿಗೆ ಬೇಕಾದ ತರಕಾರಿಗಳನ್ನು ಸೇರಿಸಿಕೊಳ್ಳುವುದು ನಂನಮ್ಮ ಆಯ್ಕೆಗೆ ಬಿಟ್ಟಿದ್ದು. ಆದಷ್ಟೂ ಕಡಿಮೆ ಸಮಯದಲ್ಲಿ, ರುಚಿಯಾದ ಆರೋಗ್ಯಕರವಾದ ಅಡುಗೆಯ ಆಯ್ಕೆಗಳಂತೂ ಇವೆ. ಇಂಥ ಜೀವನಶೈಲಿಯನ್ನು ವಿದ್ಯಾರ್ಥಿ ದಿಸೆಯಲ್ಲೇ ರೂಢಿಸಿಕೊಳ್ಳುವುದು ಆರೋಗ್ಯಕರ ಬದುಕಿಗೆ ಬಂಡವಾಳ ಹೂಡಿದಂತೆ.