ನಿಮ್ಮ ಬಳಿ ಕಿಚನ್ ತುಂಬ ಒಳ್ಳೆಯ ಆರೋಗ್ಯಕರ ಸ್ನ್ಯಾಕ್‌ಗಳಿದ್ದರೂ, ನೀವು ಇಂದಿನಿಂದ ನಾನು ಹಾಳುಮೂಳು ತಿನ್ನುವುದಿಲ್ಲ (junk food) ಎಂದು ಪ್ರತಿಜ್ಞೆ ಮಾಡಿದ್ದರೂ, ಇದನ್ನು ನಾನು ಹೀಗೆ ತಿನ್ನುವುದು ಓಳ್ಳೆಯದಲ್ಲ ಎಂಬ ಸತ್ಯ ಗೊತ್ತಿದ್ದರೂ ನಿಮ್ಮ ಮನಸು ಹೃದಯ ಎರಡೂ ನಿಮ್ಮ ಬುದ್ಧಿಯ ಮಾತನ್ನು ಲೆಕ್ಕಿಸದೆ, ಕೈತುಂಬ ಚಿಪ್ಸ್ ಪ್ಯಾಕೆಟ್ಟಿನೊಳಗಿನ ಚಿಪ್ಸನ್ನು ಎಗರಿಸಿರುತ್ತದೆ. ಅಥವಾ ಸಂಜೆಯ ಹೊತ್ತು ಒಂದು ಫ್ರೆಂಚ್ ಫ್ರೈಸ್ ಆದರೂ ತಿನ್ನೋಣವೆನಿಸುತ್ತದೆ. ಕೆಲದಿನಗಳಿಂದ ಸಾಕಷ್ಟು ಕಷ್ಟಪಟ್ಟು ಇವುಗಳನ್ನೆಲ್ಲ ದೂರ ಇಟ್ಟರೂ, ಅದ್ಯಾಕೋ, ಏನಾದರೊಂದು ಹಾಳುಮೂಳು ಸಾಲ್ಟೀ ಸಾಲ್ಟೀ ಚಿಪ್ಸೋ, ಬುಜಿಯಾವೋ ಅಥವಾ ಇನ್ನೇನಾದರೂ ಬಾಯಿಗಿಡುವ (munching chips) ಅನಿಸುತ್ತದೆ. ಯಾಕೆ ಯಃಕಶ್ಚಿತ್ ಚಿಪ್ಸೊಂದನ್ನು ನಿಗ್ರಹಿಸಿಕೊಳ್ಳಲು ನಿಮಗೆ ಸಾದ್ಯವಾಗುವುದಿಲ್ಲ (healthy food) ಎಂಬ ಯೋಚನೆ ನಿಮಗೆ ಬಂದಿದೆಯಾ? ಯಾಕೆ ಈ ಚಿಪ್ಸ್ ಚಟಕ್ಕೆ ದಾಸನಾಗಿದ್ದೇನೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿದೆಯಾ? ಹಾಗಾದರೆ ಇಲ್ಲಿ ಕೇಳಿ. ಇವೆಲ್ಲ ಕಾರಣಗಳು ನಿಮ್ಮನ್ನು ಚಿಪ್ಸಿನಂತಹ ಉಪ್ಪಿನ ಪದಾರ್ಥಗಳತ್ತ ಸೆಳೆಯುತ್ತಿದೆ (Eating Chips problem) ಎಂದರ್ಥ.
1. ಒತ್ತಡದಲ್ಲಿದ್ದಾಗ: ನಾವು ಒತ್ತಡದಲ್ಲಿದ್ದಾಗ ಹೆಚ್ಚು ತಿನ್ನುತ್ತೇವೆ. ನೀವು ನಿಮ್ಮನ್ನೇ ಸ್ವಲ್ಪ ಗಮನಿಸಿ ನೋಡಿ. ಒತ್ತಡದಲ್ಲಿದ್ದಾಗ ನಮ್ಮನ್ನು ನಾವು ಸಂತೈಸಿಕೊಳ್ಳಲು ಇಂತಹ ತಿನಿಸುಗಳತ್ತ ವಾಲುತ್ತೇವೆ. ಆಗ, ಸ್ವಲ್ಪ ನಿರಾಳವಾದಂತೆ ಅನಿಸುತ್ತದೆ. ಇದು ಕೆಲವರಿಗೆ ಸಿಹಿಯಾಗಿರಬಹುದು, ಕೆಲವರಿಗೆ ಉಪ್ಪಾಗಿರಬಹುದು. ಕೆಲವರು, ಒತ್ತಡದಲ್ಲಿ ಚಾಕೋಲೇಟು, ಸಿಹಿತಿಂಡಿ ಇತ್ಯಾದಿಗಳನ್ನು ತಿನ್ನಲು ಬಯಸಿದರೆ, ಇನ್ನೂ ಕೆಲವರು ಆಲೂಗಡ್ಡೆ ಚಿಪ್ಸ್ ದಾಸರಾಗುತ್ತಾರೆ. ಹಾಗಾಗಿ ಆದಷ್ಟೂ ಒತ್ತಡದಲ್ಲಿದ್ದಾಗ, ಒತ್ತಡ ನಿವಾರಣೆಗಾಗಿ, ಗೆಳೆಯರ ಬಳಿ ಹರಟುವುದು ಅಥವಾ ಏನಾದರೊಂದು ಬೋರ್ಡ್ ಗೇಮ್ ಆಡುವುದು ಇತ್ಯಾದಿಗಳನ್ನು ಮಾಡಲು ಪ್ರಯತ್ನಿಸಿ.
2. ಉಪವಾಸ ಮಾಡಿದಾಗ: ತೂಕ ಇಳಿಸಬೇಕು ಎಂಬ ಹಠಕ್ಕೆ ಬಿದ್ದು, ನಿಮ್ಮನ್ನು ನೀವು ಉಪವಾಸಕ್ಕೆ ಕೆಡವುತ್ತೀರಲ್ಲ, ಆಗ ಇಂತಹ ಬಯಕೆಗಳು ತೀವ್ರವಾಗುತ್ತದೆ. ಕೇವಲ ಸಲಾಡ್‌ನಲ್ಲಿ ಮಧ್ಯಾಹ್ನದೂಟ ಮುಗಿಸಿದರೆ, ಬಹಳ ಹೊತ್ತು ಏನೂ ತಿನ್ನದೆ ಕೂತಿರುವುದರಿಂದ ಅಥವಾ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಆಹಾರ ರೂಪದಲ್ಲಿ ನೀವು ಕೊಡದೆ ಇದ್ದಾಗ ದೇಹ, ಮನಸ್ಸು ಹೀಗೆ ವರ್ತಿಸಲು ಶುರು ಮಾಡುತ್ತದೆ. ಹಾಗಾಗಿ ಅತಿಯಾಗಿ ಉಪವಾಸಕ್ಕೆ ಬೀಳಬೇಡಿ. ಹಿತಮಿತ ಆಹಾರ ಒಳ್ಳೆಯದು. ಆದರೆ ಇದೇ ಅತಿಯಾದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Weight Loss Tips: ವ್ಯಾಯಾಮ, ಡಯಟ್ ಸಾಧ್ಯವಾಗುತ್ತಿಲ್ಲವಾದರೆ, ತೂಕ ಇಳಿಸಲು ಇಷ್ಟಾದರೂ ಮಾಡಿ!
3. ಅಭ್ಯಾಸವಾಗಿರುವದರಿಂದ: ಈ ತರಹದ ಸಾಲ್ಟೀ ಚಿಪ್ಸುಗಳು, ಕುರುಕಲುಗಳು, ಅಥವಾ ಮಸಾಲೆ ಸ್ನ್ಲ್ಯಾಕ್ಸ್‌ಗಳನ್ನು ನೀವು ಅತಿಯಾಗಿ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದರೆ ಬಹಳ ಬೇಗ ಬಿಡುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ಚಿಪ್ಸ್ ಅಥವಾ ಕುರುಕಲು ತಿಂಡಿಯ ಮೋಹ ನಿಮಗೆ ಅಂಟಿದ್ದರೆ ಮೊದಲು ನಿಮ್ಮ ಆಹಾರಾಭ್ಯಾಸಗಳತ್ತ ಗಮನ ಕೊಡಿ. ನಿಧಾನವಾಗಿ ಪ್ರಮಾಣವನ್ನು ಕಡಿಮೆಗೊಳಿಸುತ್ತಾ ಬಿಡಲು ಪ್ರಯತ್ನಿಸಿ. ಒಮ್ಮೆಲೇ ಬಿಟ್ಟರೆ ಇಂತಹ ಅದ್ವಾನಗಳಾಗುತ್ತವೆ.
ನೀವು ಈ ಎಲ್ಲ ಕಾಳಜಿಗಳನ್ನು ತೆಗೆದುಕೊಂಡರೂ, ಸೋಡಿಯಂ ಭರಿತ ಚಿಪ್ಸು ಅಥವಾ ಪ್ಯಾಕೆಟ್ ಕುರುಕಲುಗಳನ್ನು ತಿನ್ನುವುದನ್ನು ಬಿಡಲು ಸಾಧ್ಯವೇ ಆಗುತ್ತಿಲ್ಲ ಅಥವಾ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದಾದಲ್ಲಿ ಖಂಡಿತವಾಗಿಯೂ ವೈದ್ಯರ ಸಲಹೆ ಪಡೆಯಿರಿ. ಇದಕ್ಕೆ ಥೈರಾಯ್ಡ್ ಅಥವಾ ಕಿಡ್ನಿ ಸಮಸ್ಯೆಗಳೂ ಕಾರಣವಿರಬಹುದು. ಅಥವಾ, ನಿರ್ಜಲೀಕರಣ, ಗರ್ಭಿಣಿಯಾಗಿರುವುದು, ಪೀರಿಯಡ್ಸ್ ತೊಂದರೆಗಳು, ನಿದ್ದೆಯ ಸಮಸ್ಯೆ ಇತ್ಯಾದಿ ಹಲವು ಕಾರಣಗಳೂ ಇರಲು ಸಾಧ್ಯತೆಗಳಿವೆ. ಹಾಗಾಗಿ ನಿಮ್ಮ ಚಟದ ಬಗ್ಗೆ ನಿಮಗೆ ಅರಿವಿರಲಿ. ನಿಮ್ಮ ಬುದ್ಧಿ ನಿಮಗೆ ಬುದ್ಧಿ ಮಾತು ಹೇಳುವಾಗ ಕೇಳುವ ತಾಳ್ಮೆ ಹಾಗೂ ಮನಸ್ಸು ನಿಮ್ಮಲ್ಲಿ ದೃಢವಾಗಿರಲಿ. ಯಾಕೆಂದರೆ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ!
ಇದನ್ನೂ ಓದಿ: PCOS Diet: ಪಿಸಿಒಎಸ್ ಸಮಸ್ಯೆಯೇ? ಈ ಪಾನೀಯಗಳಿಂದಲೂ ಪ್ರಯೋಜನ ಆಗಬಹುದು!