Site icon Vistara News

Egg Yolk Benefits: ಮೊಟ್ಟೆಯ ಹಳದಿ ಲೋಳೆಯನ್ನು ಎಸೆಯುತ್ತೀರಾ? ಎಸೆಯುವ ಮೊದಲು ಒಮ್ಮೆ ಯೋಚಿಸಿ!

Egg Yolk Benefits

ಮೊಟ್ಟೆ ಎಂಬುದು ಅತ್ಯಂತ ಸಮಕಾಲೀನವೂ, ಸಂಪೂರ್ಣ ಪೋಷಕಾಂಶಯುಕ್ತವೂ ಹಾಗೂ ಸದಾ ಸುಲಭವಾಗಿ ಸಿಗಬಲ್ಲ ಹಾಗೂ ಮಾಡಬಲ್ಲ ಅಡುಗೆಯ ಆಯ್ಕೆಯಾಗಿಯೂ ಸರ್ವಕಾಲಕ್ಕೂ ಸಲ್ಲುತ್ತದೆ. ಆದರೆ ಬಹಳ ಮಂದಿ ತೂಕ ಇಳಿಸುವ ಹಾಗೂ ವರ್ಕೌಟ್‌ ಪ್ರಿಯರು ಪ್ರೊಟೀನ್‌ ಮಾತ್ರ ನಮ್ಮ ದೇಹಕ್ಕೆ ಸೇರಬೇಕು ಎಂದುಕೊಂಡು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹೊಟ್ಟೆಗೆ ಹಾಕಿ, ಉಳಿದ ಹಳದಿ ಲೋಳೆಯನ್ನು ಏನೂ ಮಾಡದೆ ಎಸೆದುಬಿಡುತ್ತಾರೆ. ಆದರೆ, ಇವೆರಡನ್ನೂ ಒಟ್ಟಿಗೆ ತಿಂದರೆ ಮಾತ್ರ ಸಂಪೂರ್ಣ ಆಹಾರವಾಗಬಲ್ಲದು. ಹಾಗೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳೆಲ್ಲವೂ ಇವೆರಡೂ ಸೇರಿದಾಗಲೇ ಸಿಗುವುದರಿಂದ ಒಂದನ್ನು ಎಸೆದು ಇನ್ನೊಂದನ್ನು ಮಾತ್ರ ತಿಂದರೆ ಒಳ್ಳೆಯದಾಗದು ಎನ್ನುತ್ತಾರೆ ಹೃದ್ರೋಗ ತಜ್ಞ ಡಾ. ಅಲೋಕ್‌ ಚೋಪ್ರಾ.
ಹೌದು. ಡಾ. ಚೋಪ್ರಾ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಜಿಜ್ಞಾಸೆಯ ಬಗೆಗೆ ಬೆಳಕು ಚೆಲ್ಲಿರುವ ವಿಡಿಯೋ ಈಗ ಸಾಕಷ್ಟು ಚರ್ಚೆಯೊಂದಿಗೆ ವೈರಲ್‌ ಆಗಿದೆ. ಬಿಳಿ ಲೋಳೆಗೆ ಹೋಲಿಸಿದರೆ, ಮೊಟ್ಟೆಯ ಹಳದಿ ಯೋಕ್‌ನಲ್ಲಿ ವಿಟಮಿನ್‌ ಎ, ಇ ಹಾಗೂ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಬಿಳಿ ಲೋಳೆಯಲ್ಲಿ ಪ್ರೊಟೀನ್‌ ಹೇರಳವಾಗಿರುವುದು ನಿಜವೇ ಆದರೂ, ಇಡೀ ಮೊಟ್ಟೆಯನ್ನು ಸಂಪೂರ್ಣವಾಗಿ ಹೊಟ್ಟೆಗಿಳಿಸಿದರೆ ಸಿಗುವ ಪೋಷಕಾಂಶಗಳು ಅಧಿಕ. ಕೊಬ್ಬು ಹಾಗೂ ಕೊಲೆಸ್ಟೆರಾಲ್‌ ಮೊಟ್ಟೆಯ ಬಿಳಿ ಲೋಳೆಯನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆ ಸೇರದು ಎಂಬುದು ನಿಜವೇ ಆದರೂ, ಇಡಿಯ ಮೊಟ್ಟೆ ತಿನ್ನುವುದರಿಂದ ಸಿಗುವ ಲಾಭಕ್ಕಿಂತ ಇದರಲ್ಲಿ ಪೋಷಕಾಂಶಗಳು ಕಡಿಮೆಯೇ. ಇಡಿಯ ಮೊಟ್ಟೆ ತಿನ್ನುವುದರಿಂದ ಎಲ್ಲ ಬಗೆಯ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳನ್ನು ನೀವು ಸಂಪೂರ್ಣ ಆಹಾರದಂತೆ ಪಡೆಯಬಹುದು. ಹೀಗಾಗಿ ನೀವು ಹಳದಿ ಭಾಗವನ್ನು ಎಸೆಯುವ ಮೂಲಕ ಮೊಟ್ಟೆಯ ನಿಜವಾದ ಲಾಭವನ್ನು ಪಡೆಯುತ್ತಿಲ್ಲ ಎಂದೇ ಅರ್ಥ ಎಂದು (Egg Yolk Benefits) ಅವರು ವಿವರಿಸಿದ್ದಾರೆ.

ಕೊಲೆಸ್ಟೆರಾಲ್‌ ಇದೆಯಲ್ಲವೇ

ಹಾಗಾದರೆ ಮೊಟ್ಟೆಯ ಹಳದಿ ಭಾಗದಲ್ಲಿ ಅಧಿಕ ಕೊಲೆಸ್ಟೆರಾಲ್‌ ಇದೆಯಲ್ಲವೇ ಎಂದು ನೀವು ಮರುಪ್ರಶ್ನೆ ಹಾಕಬಹುದು. ಇದನ್ನೂ ವೈದ್ಯರು ಹೀಗೆ ಬಿಡಿಸಿ ಹೇಳುತ್ತಾರೆ. ಕೊಲೆಸ್ಟೆರಾಲ್‌ ಬಗೆಗೆ ಇಂದು ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಹೃದ್ರೋಗಕ್ಕೆ ಕೊಲೆಸ್ಟೆರಾಲ್‌ ಕಾರಣವಲ್ಲ. ಕೊಲೆಸ್ಟೆರಾಲ್‌ ನಮ್ಮ ದೇಹದಲ್ಲಿರಲೇಬೇಕು. ಅಂಗಾಂಶಗಳ ರಚನೆಗೆ, ಹಾರ್ಮೋನ್‌ ಉತ್ಪಾದನೆಗೆ, ಮಿದುಳಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿಯ ವರ್ಧನೆಗೆ ಕೊಲೆಸ್ಟೆರಾಲ್‌ ಬೇಕೇ ಬೇಕು. ೧೬ ಬೇರೆ ಬೇರೆ ಬಗೆಯ ಕೆಲಸಗಳನ್ನು ಈ ಕೊಲೆಸ್ಟೆರಾಲ್‌ ನಿರ್ವಹಿಸುತ್ತದೆ. ನಮ್ಮ ದೇಹವೇ ಶೇ.85ರಷ್ಟು ಕೊಲೆಸ್ಟೆರಾಲ್‌ ಅನ್ನು ಉತ್ಪಾದನೆ ಮಾಡುತ್ತದೆ ಕೂಡಾ. ನೀವು ಇಂತಹ ಆಹಾರವನ್ನು ತಿಂದರೂ ತಿನ್ನದಿದ್ದರೂ ಕೊಲೆಸ್ಟೆರಾಲ್‌ ದೇಹದಲ್ಲಿ ಉತ್ಪಾದನೆಯಾಗುತ್ತಲೇ ಇರುತ್ತದೆ ಎಂದ ಮೇಲೆ ಅದು ಹೇಗೆ ಕೆಟ್ಟದ್ದಾದೀತು ಅಲ್ಲವೇ ಎಂದು ಅವರು ಮರುಪ್ರಶ್ನಿಸುತ್ತಾರೆ. ಆದರೆ ಅವರ ಈ ಪೋಸ್ಟ್‌ ಸಾಕಷ್ಟು ಮಂದಿಯಲ್ಲಿ ಗೊಂದಲ ಹುಟ್ಟಿಸಿದೆ. ಪರ್ಸನಲ್‌ ಕೋಚ್‌ ಒಬ್ಬರು, ಈ ಹಿನ್ನೆಲೆಯಲ್ಲಿ ನೇರವಾಗಿ ಡಾಕ್ಟರ್‌ ಅವರನ್ನು ಪ್ರಶ್ನಿಸಿದ್ದಾರೆ ಕೂಡಾ. ಮೊಟ್ಟೆಯ ಬಿಳಿ ಲೋಳೆಯಲ್ಲಿರುವುದು ಅಲ್ಬುಮಿನ್.‌ ನೀವು ಹೇಳುವಂತೆ ಮೊಟ್ಟೆಯ ಬಿಳಿ ಲೋಳೆಯಲ್ಲಿ ಇನ್‌ಫ್ಲಮೇಟರಿ ಪ್ರೊಟೀನ್‌ ಹಳದಿ ಲೋಳೆಯ ಜೊತೆ ಸೇರಿಸಿ ತಿನ್ನುವಾಗ ಎಲ್ಲಿ ಹೋಗುತ್ತದೆ ಎಂದು ವಿವರಿಸುವಿರಾ ಎಂದು ಕೇಳಿದ್ದಾರೆ. ಅದಕ್ಕೆ ಅವರು ಉತ್ತರವಾಗಿ, ಮೊಟ್ಟೆಯಲ್ಲಿ ಉತ್ತಮ ಪ್ರಮಾಣದಲ್ಲಿ ಪ್ರೊಟೀನ್‌ ಇದ್ದು ಅದರಲ್ಲಿರುವ ಕೆಲವು ಭಾಗ ಇನ್‌ಫ್ಲಮೇಷನ್‌ಗೂ ಕಾರಣವಾಗುತ್ತದೆ. ಇದರಿಂದ ಬಯೋಟಿನ್‌ ಕೊರತೆ, ಜೀರ್ಣ ಸಮಸ್ಯೆಗಳೂ ಬರಬಹುದು ಎಂದಿದ್ದಾರೆ.

ಇದನ್ನೂ ಓದಿ: Nipah Virus: ಡೇಂಜರಸ್‌ ನಿಫಾ ವೈರಸ್‌; ಇದರ ಲಕ್ಷಣಗಳೇನು? ನಮಗೆ ಅಪಾಯ ಇದೆಯೆ?

ತೂಕ ಇಳಿಕೆಗೆ ಅಡ್ಡಿ?

ಮೊಟ್ಟೆಯ ಹಳದಿ ಭಾಗ ಒಳ್ಳೆಯದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಆದರೆ, ಇದರಲ್ಲಿ ಕೊಬ್ಬಿನಂಶ ಅಧಿಕವಾಗಿರುವುದರಿಂದ ಇದು ಹೆಚ್ಚು ಕ್ಯಾಲರಿಯ ಆಹಾರವಾಗುತ್ತದೆ. ಹಾಗಾಗಿ ಹಳದಿ ಭಾಗ ಆರೋಗ್ಯಕರವಾದರೂ, ಅದರಲ್ಲಿರುವ ಕ್ಯಾಲರಿಯೇ ತೂಕ ಇಳಿಸುವವರ ಚಿಂತೆಗೆ ಕಾರಣವಾಗುತ್ತದೆ. ಹೀಗಾಗಿ ತೂಕ ಇಳಿಸುವವರೋ, ತೂಕವನ್ನು ಹಾಗೇಯೇ ಇಡಬಯಸುವವರೋ ಎಂಬುದರ ಮೇಲೆ ಈ ಸೇವನೆ ನಿರ್ಧರಿತವಾಗುತ್ತದೆ ಎಂದು ಮತ್ತೊಬ್ಬರು ಈ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version