Site icon Vistara News

Electric Shock Feeling: ಚಳಿಗಾಲದಲ್ಲಿ ಇನ್ನೊಬ್ಬರನ್ನು ಮುಟ್ಟಿದಾಗ ನಾವೇಕೆ ʻಶಾಕ್‌ʼ ಹೊಡೆಯುತ್ತೇವೆ?

Electric Shock Feeling

ಚಳಿಗಾಲ ಬರುತ್ತಿದ್ದಂತೆ ಶಾಕ್‌ ಹೊಡೆಯುವವರಿಗೆ ಬರವಿಲ್ಲ. ಹಾಗೆಂದು ಅವರೇನು ಯಾವುದೇ ವಿದ್ಯುತ್‌ ಉಪಕರಣಗಳನ್ನು ಮುಟ್ಟುವ ಕಾರಣಕ್ಕೆ ಹೀಗಾಗುವುದಲ್ಲ. ಬಾಗಿಲ ಚಿಲಕ, ಕುರ್ಚಿ, ಬೈಕು, ಕಾರು ಅಥವಾ ಇನ್ನೊಬ್ಬ ವ್ಯಕ್ತಿ- ಹೀಗೆ ಏನನ್ನಾದರೂ ಮುಟ್ಟಿದಾಗ ಥಟ್ಟನೆ ಕರೆಂಟ್‌ ಹೊಡೆದ ಅನುಭವ ಆಗುವುದು ಅಪರೂಪವೇನಲ್ಲ. ಹೀಗೇಕಾಗುತ್ತದೆ?

ನಮ್ಮ ಸುತ್ತಲಿನ ಪ್ರತಿಯೊಂದು ವಸ್ತುವೂ ಅಗೋಚರವಾದ ಅಣುಗಳಿಂದ ಮಾಡಿರುವುದು ತಿಳಿದಿರುವ ವಿಷಯವೇ. ಪ್ರತಿಯೊಂದು ಅಣುವೂ ಧನಾತ್ಮಕವಾದ ಪ್ರೊಟಾನ್‌, ಋಣಾತ್ಮಕವಾದ ಎಲೆಕ್ಟ್ರಾನ್‌ ಮತ್ತು ಇದ್ಯಾವುದೂ ಅಲ್ಲದ ನ್ಯೂಟ್ರಾನ್‌ಗಳಿಂದ ಮಾಡಲ್ಪಟ್ಟಿದೆ. ಹೆಚ್ಚಿನ ಸಾರಿ ಅಣುಗಳಲ್ಲಿರುವ ಪ್ರೊಟಾನ್‌ ಮತ್ತು ಎಲೆಕ್ಟ್ರಾನ್‌ಗಳ ಸಂಖ್ಯೆ ಸಮನಾಗಿಯೇ ಇರುತ್ತದೆ, ಹಾಗಾಗಿ ಅಣುಗಳಿಗೆ ಯಾವುದೇ ವಿದ್ಯುದಾವೇಶ ಇರುವುದಿಲ್ಲ. ಆದರೆ ಪ್ರೊಟಾನ್‌ ಮತ್ತು ಎಲೆಕ್ಟ್ರಾನ್‌ಗಳ ಸಂಖೆಯಲ್ಲಿ ಸಮತೋಲನ ಇಲ್ಲವಾದರೆ ಅಣುವಿಗೆ ವಿದ್ಯುದಾವೇಶ ಇರುವುದು ಸಾಮಾನ್ಯ. ಪ್ರೊಟಾನ್‌ ಮತ್ತು ನ್ಯೂಟ್ರಾನ್‌ಗಳು ಸ್ಥಿರವಾಗಿ ಇರುವಂಥವು. ಚಲಿಸುವುದು ಎಲೆಕ್ಟ್ರಾನ್‌ಗಳು ಮಾತ್ರ. ಹಾಗಾಗಿ ಋತಾತ್ಮಕ ಚಾರ್ಜ್‌ ಹೊಂದಿರುವ ಈ ಅಣುಗಳು, ಯಾವುದೇ ಧನಾತ್ಮಕವಾಗಿರುವ ವಸ್ತುವಿನತ್ತ ಸೆಳೆಯಲ್ಪಡುತ್ತವೆ. ಯಾರನ್ನಾದರೂ/ ಏನನ್ನಾದರೂ ಮುಟ್ಟಿದರೆ ಥಟ್ಟನೆ ಶಾಕ್‌ ಹೊಡೆದಂತಾಗುವುದು ಈ ಎಲೆಕ್ಟ್ರಾನ್‌ಗಳ ಕ್ಷಿಪ್ರ ಚಲನೆಯಿಂದ.

ಚಳಿಗಾಲದಲ್ಲಿ ಹೀಗಾಗುವುದು ಹೆಚ್ಚು. ಅದರಲ್ಲೂ ವಾತಾವರಣ ಶುಷ್ಕವಾಗಿದ್ದರೆ ಈ ಸಾಧ್ಯತೆ ಅಧಿಕ. ಇಷ್ಟು ಸಾಲದೆಂಬಂತೆ, ಹತ್ತಿಯದ್ದಲ್ಲದೆ ಸಿಂಥೆಟಿಕ್‌ ಬಟ್ಟೆಗಳನ್ನು ಧರಿಸಿದ್ದರೆ ಈ ವಿದ್ಯಮಾನ ಮತ್ತೂ ಹೆಚ್ಚು. ನಮ್ಮ ತ್ವಚೆಯ ಮೇಲ್ಮೈಯಲ್ಲಿರುವ ಎಲೆಕ್ಟ್ರಾನ್‌ಗಳು ಇಂಥ ವಾತಾವರಣದಲ್ಲಿ ಸುಲಭವಾಗಿ ಚಲನಶೀಲವಾಗುತ್ತವೆ. ಚಳಿ-ಶುಷ್ಕವಲ್ಲದ ಬೇರೆಯ ಋತುಗಳಲ್ಲಿ, ವಾತಾವರಣದಲ್ಲಿರುವ ನೀರಿನ ಕಣಗಳು ಎಲೆಕ್ಟ್ರಾನ್‌ಗಳ ಋಣಾತ್ಮದ ಗುಣವನ್ನು ತೊಡೆಯುತ್ತವೆ. ಹಾಗಾಗಿ ಉಳಿದ ಕಾಲಗಳಲ್ಲಿ ನಮಗೆ ಬೆರಳುಗಳ ತುದಿಯಲ್ಲಿ ʻಛಟ್‌ʼ ಎಂಬಂತೆ ಶಾಕ್‌ ಹೊಡೆದ ಅಥವಾ ಸೂಜಿಮೊನೆಯಿಂದ ಚುಚ್ಚಿದಂಥ ಅನುಭವ ಆಗುವುದಿಲ್ಲ. ಈ ಎಲೆಕ್ಟ್ರಾನ್‌ಗಳು ನಮ್ಮ ದೇಹದಲ್ಲಿ ಹಾಗೆಯೇ ಉಳಿಯುತ್ತವೆಯೇ ಎಂಬುದು ಮುಂದಿನ ಪ್ರಶ್ನೆ. ಇಲ್ಲ! ಒಮ್ಮೆ ಚಲನಶೀಲವಾದ ಈ ಕಣಗಳು, ಪಾಸಿಟಿವ್‌ ಚಾರ್ಜ್‌ ಇರುವ ವಸ್ತುಗಳ ಸೆಳೆಯಲ್ಪಟ್ಟು, ಹಾರಿ ಹೋಗುತ್ತವೆ. ಹೀಗಾದಾಗಲೇ ನಮಗೆ ಶಾಕ್‌ ಹೊಡೆದ ಅನುಭವ ಆಗುವುದು.

ಕುತೂಹಲಕರ ಮಾಹಿತಿಗಳು

ಮೋಡಗಳೊಂದಿಗೆ ಗಾಳಿ ಉಜ್ಜಿದಾಗ ಮೂಡುವ ಮಿಂಚು ಸಹ ಸ್ಥಾಯಿ ವಿದ್ಯುತ್‌ನಿಂದಲೇ ಆಗುವುದು. ಇಂಥ ಸ್ಥಿರ ವಿದ್ಯುತ್‌ ಸಾಮಾನ್ಯವಾಗಿ ಪ್ರತಿ ಸೆಕೆಂಡ್‌ಗೆ 189, 282 ಮೈಲಿಯ ಭಯಾನಕ ವೇಗದಲ್ಲಿ ಚಲಿಸುತ್ತದೆ! ಧನಾತ್ಮಕ ಚಾರ್ಜ್‌ ಇರುವ ಸ್ಥಿರ ವಿದ್ಯುತ್‌ ಅನ್ನು ರೇಷ್ಮೆ ಅಥವಾ ಗಾಜಿನ ವಸ್ತುಗಳನ್ನು ಉಜ್ಜುವುದರಿಂದ ಪಡೆಯಬಹುದು. ಋಣಾತ್ಮಕ ಜಾರ್ಜ್‌ ಇರುವ ಸ್ಥಿರ ವಿದ್ಯುತ್‌ ಸೃಷ್ಟಿಸಲು ಪ್ಲಾಸ್ಟಿಕ್‌ ಅಥವಾ ರಬ್ಬರ್‌ ಮೇಲೆ ಉಜ್ಜಬಹುದು.

ಇದನ್ನೂ ಓದಿ: Health Benefits of Red Chilli: ದಿನಬಳಕೆಯ ಕೆಂಪು ಮೆಣಸಿನಕಾಯಿ ಖಾರಕ್ಕಷ್ಟೇ ಅಲ್ಲ, ದೇಹಕ್ಕೂ ಅಗತ್ಯ!

Exit mobile version