Site icon Vistara News

Exercise Tips: ವ್ಯಾಯಾಮ, ವರ್ಕೌಟ್‌ ಯಾವಾಗ ಒಳ್ಳೆಯದು? ಬೆಳಗ್ಗೆಯೋ ಸಂಜೆಯೋ?

gym

ವ್ಯಾಯಾಮ (exercise tips) ಹಾಗೂ ನಡಿಗೆಯ ವಿಚಾರಕ್ಕೆ ಬಂದರೆ, ಒಂದಿಷ್ಟು ಮಂದಿ ಬೆಳಗಿನ ಹೊತ್ತನ್ನು (morning exercise) ಆಯ್ಕೆ ಮಾಡಿಕೊಂಡರೆ, ಇನ್ನೊಂದಿಷ್ಟು ಮಂದಿ ಸಂಜೆಯ ಹೊತ್ತನ್ನು (evening exercise) ಆಯ್ಕೆ ಮಾಡುತ್ತಾರೆ. ವ್ಯಾಯಾಮ ಪ್ರತಿದಿನ ಮಾಡಿದರಾಯಿತು, ಅದಕ್ಕೆ ಹೊತ್ತು ಗೊತ್ತೆಲ್ಲ ಇಲ್ಲ ಎಂಬುದು ಬಹುತೇಕ ಎಲ್ಲರ ವಾದ. ದಿನವೂ ಒಂದಿಷ್ಟು ಕ್ಯಾಲರಿಯನ್ನು ಕರಗಿಸಿದರಾಯಿತು, ಸಮಯ ಇಂಥದ್ದೇ ಆಗಬೇಕೆಂದಿಲ್ಲ ಎಂದು ಕ್ಯಾಲರಿ ಲೆಕ್ಕಾಚಾರ (calories) ಹಾಕುವ ಫಿಟ್‌ನೆಸ್‌ ಫ್ರೀಕ್‌ಗಳ (fitness freak) ಅಂಬೋಣ. ಹಲವರು, ಆಫೀಸು ಮುಗಿಸಿ ಬಂದು ಜಿಮ್‌ಗೆ ಲಗ್ಗೆಯಿಟ್ಟು, ಬೆವರಿಳಿಸಿ ಬರುತ್ತಾರೆ. ಇನ್ನೂ ಕೆಲವರು ಬೆಳಗ್ಗೆಯೇ ಬೆವರಿಳಿಸಿಯೇ ಆಫೀಸು ಸೇರುತ್ತಾರೆ. ಹಾಗಾದರೆ, ವ್ಯಾಯಾಮ ಯಾವಾಗ ಮಾಡಿದರೆ ಒಳ್ಳೆಯದು, ಬೆಳಗ್ಗೆಯೋ ಸಂಜೆಯೋ ಎಂಬ ಪ್ರಶ್ನೆ ನಿಮ್ಮನ್ನು ಕಾಡದೆ ಇರದು. ಆದರೆ, ವ್ಯಾಯಾಮ, ವರ್ಕೌಟ್‌ (workout) ಮಾಡಲು ಬೆಳಗಿನ ಸಮಯದಷ್ಟು ಸುಸಮಯ ಯಾವುದೂ ಇಲ್ಲ. ಬೆಳಗ್ಗೆ ಆಗ ತಾನೇ ಎದ್ದು ದೇಹ, ಮನಸ್ಸು ನಿರಾಳವಾಗಿದ್ದಾಗ, ವ್ಯಾಯಾಮ ಮಾಡಿ ಚುರುಕಾಗಿಸುವುದು ಎಲ್ಲ ರೀತಿಯಲ್ಲೂ ಆರೋಗ್ಯಕ್ಕೆ (health tips) ಒಳ್ಳೆಯದು. ಸಂಜೆಯಾಗುತ್ತಾ ಹೋದಂತೆ, ದೇಹವನ್ನೂ ಮನಸ್ಸನ್ನೂ ನಿಧಾನವಾಗಿ ಶಾಂತಗೊಳಿಸುತ್ತಾ, ಹೆಚ್ಚು ಆಯಾಸವಾಗದಂತೆ ಸಣ್ಣದೊಂದು ನಡಿಗೆ (walking) ಬೇಕಿದ್ದರೆ ಮಾಡಿ ಆ ದಿನವನ್ನು ಮುಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತದೆ ಆಯುರ್ವೇದ (Ayurveda) ಕೂಡಾ. ಹಾಗಾದರೆ ಬನ್ನಿ, ಬೆಳಗ್ಗೆ ವ್ಯಾಯಾಮ ಮಾಡುವುದರಿಂದಾಗುವ ಲಾಭಗಳೇನು ಎಂಬುದನ್ನು ನೋಡೋಣ.

1. ಬೆಳಗ್ಗೆ ನೀವು ವರ್ಕ್‌ಔಟ್‌ ಮಾಡಿದಿರೆಂದಾದಲ್ಲಿ, ನೀವು ಏಕಾಗ್ರಚಿತ್ತರಾಗಿ ವರ್ಕ್‌ಔಟ್‌ ಮೇಲೆ ಗಮನ ಕೊಡಬಹುದಾಗಿರುತ್ತದೆ. ನಿಮ್ಮ ಗಮನ ಬೇರೆಡೆಗೆ ಈ ಸಂದರ್ಭ ಹೋಗುವುದು ಕಡಿಮೆ. ಬೆಳಗ್ಗೆ ಮನಸ್ಸು ಪ್ರಫುಲ್ಲವಾಗಿರುವುದರಿಂದ, ನಿದ್ದೆ ಮುಗಿಸಿ ತಾಜಾ ಅನುಭೂತಿ ಪಡೆಯುವ ಗಳಿಗೆ ಅದು. ಹಾಗಾಗಿ ಈ ಸಮಯ ವ್ಯಾಯಾಮಕ್ಕೆ, ನಡಿಗೆಗೆ ಅತ್ಯಂತ ಸೂಕ್ತ.

2. ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮ, ನಡಿಗೆ ಮಾಡುವುದರಿಂದ ಬೆಳಗು ಒಂದು ಪಾಸಿಟಿವಿಟಿಯಿಂದ ಆರಂಭವಾಗುತ್ತದೆ. ಬೇಕಿದ್ದರೆ, ಒಂದು ದಿನ ಬೇಗ ಮಲಗಿ, ಸ್ವಲ್ಪ ಬೇಗ ಎದ್ದು, ಬೆಳಗಿನ ಆ ಪ್ರಶಾಂತ ವಾತಾವರಣದಲ್ಲಿ ಒಂದು ವಾಕಿಂಗ್‌, ಜಾಗಿಂಗ್‌ ಅಥವಾ ವ್ಯಾಯಾಮದಿಂದ ಆರಂಭಿಸಿ ನೋಡಿ. ದೇಹ, ಮನಸ್ಸು ಎರಡೂ ಉಲ್ಲಸಿತಗೊಂಡು ಬೆಳಗಿನ ತಿಂಡಿ ಆರಾಮವಾಗಿ ತಿಂದು, ಆ ದಿನವಿಡೀ ಒಳ್ಳೆಯ ಆರೋಗ್ಯಕರ ಆಹಾರ ತಿನ್ನುವೆಡೆಗೆ ಮನಸ್ಸು ತಾನೇ ತಾನಾಗಿ ಪ್ರೇರಣೆಗೊಳ್ಳುತ್ತದೆ. ದಿನವಿಡೀ ಒಂದು ಪಾಸಿಟಿವಿಟಿಯ ಭಾವ ಮನಸ್ಸನ್ನು, ದೇಹವನ್ನು ತುಂಬಿಕೊಂಡಿರುತ್ತದೆ.

3. ಬೆಳಗ್ಗೆ ವ್ಯಾಯಾಮ ಅಥವಾ ನಡಿಗೆಯಿಂದ ದಿನ ಆರಂಭಿಸಿದಿರೆಂದಾದಲ್ಲಿ ಆ ದಿನವಿಡೀ ಚೈತನ್ಯದಾಯಕವಾಗಿರುತ್ತದೆ. ದೇಹದ ಎಲ್ಲ ಅಂಗಾಗಗಳೂ ಚುರುಕುಗೊಂಡು, ಶಕ್ತಿವರ್ಧಿಸಿಕೊಂಡು ಇಡೀ ದಿನ ಚುರುಕಾಗಿ ಕೆಲಸ ಮಾಡುತ್ತವೆ. ದೇಹದಲ್ಲಿ ಖುಷಿ ಚಿಮ್ಮಿಸುವ ಹಾರ್ಮೋನುಗಳು ಬಿಡುಗಡೆಗೊಂಡು, ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ನಮ್ಮ ಬಗ್ಗೆ ನಮಗೊಂದು ಆತ್ಮವಿಶ್ವಾಸ ಬೆಳೆಯುತ್ತದೆ. ಇದು ಉತ್ತಮ ಆರೋಗ್ಯಕರ ಆಯ್ಕೆಗಳತ್ತ ನಮ್ಮನ್ನು ಕೊಂಡೊಯ್ಯುತ್ತದೆ.

4. ಬೆಳಗ್ಗೆಯೇ ವ್ಯಾಯಾಮ ನಡಿಗೆ ಆಗಿ, ಆಫೀಸು, ಕೆಲಸ ಮುಗಿಸಿಕೊಂಡು ಮನೆಗೆ ಬಂದಿರೆಂದರೆ, ಹೆಚ್ಚು ಸುಸ್ತಾಗುವ ಯಾವ ತಲೆಬಿಸಿಗಳನ್ನೂ ಮೈಗೆ ಎಳೆದುಕೊಳ್ಳದೆ, ಊಟ ಮಾಡಿ, ಸ್ವಲ್ಪ ಹೊತ್ತು, ಮನೆಮಂದಿಯ ಜೊತೆ ಬೆರೆತು ಮನಸ್ಸು ಹಗುರಾಗಿ ನಿದ್ದೆಗೆ ಜಾರಿದರೆ ಸುಖವಾಗಿ ನಿದ್ದೆ ಬರುತ್ತದೆ. ಯಾವ ತಲೆಬಿಸಿಗಳೂ ನಿಮ್ಮನ್ನು ಬಾಧಿಸದು. ದೇಹಕ್ಕೆ ದಣಿವಾಗಿ ಹಿತವಾದ ನಿದ್ದೆ ಸಹಜವಾಗಿ ಆವರಿಸುತ್ತದೆ. ನಿದ್ದೆಯೇ ಬರುವುದಿಲ್ಲ ಎಂಬ ಸಮಸ್ಯೆಗಳೆಲ್ಲ ನಿಮ್ಮ ಬಳಿ ಸುಳಿಯದು.

ಇದನ್ನೂ ಓದಿ: Weight Loss Tips: ವ್ಯಾಯಾಮ, ಡಯಟ್‌ ಸಾಧ್ಯವಾಗುತ್ತಿಲ್ಲವಾದರೆ, ತೂಕ ಇಳಿಸಲು ಇಷ್ಟಾದರೂ ಮಾಡಿ!

5. ಬೆಳಗ್ಗಿನ ಹಿತವಾದ ಸೂರ್ಯನ ಬೆಳಕಿಗೆ ಮೈಯೊಡ್ಡಿಕೊಂಡು, ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ವಾಕ್‌, ವ್ಯಾಯಾಮ ಮಾಡಿ ಬಂದರೆ ಮನಸ್ಸು, ದೇಹ ಪ್ರಫುಲ್ಲಗೊಂಡು, ದೇಹಕ್ಕೆ ಬೇಕಾದ ವಿಟಮಿನ್‌ ಡಿ ಸೂರ್ಯನ ಬಿಸಿಲಿನಿಂದ ಸಿಕ್ಕಿ, ಚರ್ಮ ಹೊಳಪನ್ನು ಪಡೆಯುತ್ತದೆ. ದೇಹವು ಆರೋಗ್ಯದ ಕಾಂತಿಯಿಂದ ಫಳಪಳಿಸುತ್ತದೆ. ದೇಹದಲ್ಲಿ ರಕ್ತಪೂರಣ ಹೆಚ್ಚಾಗಿ, ದೇಹದ ಎಲ್ಲ ಅಂಗಾಂಗಗಳಿಗೆ ರಕ್ತ ಸರಿಯಾಗಿ ಪೂರಣಗೊಂಡು ಆಮ್ಲಜನಕವೂ ಸರಿಯಾಗಿ ತಲುಪಿ ದೇಹದ ಪ್ರತಿ ಅಂಗಾಂಶವೂ ಆರೋಗ್ಯವನ್ನು ಸಾರುತ್ತದೆ. ಅದು ನಿಮ್ಮ ಮುಖದ ಕಾಂತಿಯಲ್ಲಿ ಪ್ರತಿಫಲಿಸುತ್ತದೆ.

6. ಬೆಳಗಿನ ಹೊತ್ತು ವರ್ಕೌಟ್‌ ಮಾಡುವುದರಿಂದ ರಕ್ತದೊತ್ತಡವೂ ಸಮತೋಲನದಲ್ಲಿರುತ್ತದೆ. ರಕ್ತದೊತ್ತಡ ಇತ್ಯಾದಿಗಳ ಸಮಸ್ಯೆ ಇರುವ ಮಂದಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸರಿಯಾದ ವಿಧಾನ. ಇದರಿಂದ ನಿತ್ಯಜೀವನದಲ್ಲಿ ಶಿಸ್ತೂ ಕೂಡಾ ಮೈಗೂಡಿ, ಆರೋಗ್ಯ ವೃದ್ಧಿಸುತ್ತದೆ.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version