Site icon Vistara News

Eye care | ನಮ್ಮ ನಿತ್ಯದ ಅಭ್ಯಾಸಗಳೇ ಕಣ್ಣಿನ ತೊಂದರೆಗೆ ಕಾರಣವಾಗುತ್ತಿದೆಯೇ?!

Eye care

ವಯಸ್ಸಾಗುತ್ತಾ ಹೋದಂತೆ ದೃಷ್ಠಿದೋಷ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ದೃಷ್ಠಿದೋಷ ಸಾಮಾನ್ಯ ತೊಂದರೆಯಾಗಿ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ನಮ್ಮ ನಿತ್ಯದ ಅಭ್ಯಾಸಗಳೂ ಇದಕ್ಕೆ ಕಾರಣ. ವಿಶ್ವದ ಕಾಲು ಭಾಗದಷ್ಟು ಅಂಧರು ಭಾರತದಲ್ಲೇ ಇದ್ದಾರಂತೆ! ರಾಷ್ಟ್ರೀಯ ಅಂಧತ್ವ ನಿಗ್ರಹ ಯೋಜನೆ (ಎನ್‌ಪಿಸಿಬಿ)ಯ ಪ್ರಕಾರ, ದೇಶದಲ್ಲಿ ೧೨ ಮಿಲಿಯನ್‌ ಜನರು ದೃಷ್ಟಿದೋಷ ಹೊಂದಿದವರಿದ್ದಾರಂತೆ. ವಿಶ್ವದ ಒಟ್ಟು ಸಂಖ್ಯೆ ೩೯ ಮಿಲಿಯನ್‌ಗೆ ಹೋಲಿಸಿದರೆ ಇದು ದೊಡ್ಡ ಸಂಖ್ಯೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಕಣ್ಣಿನ ತೊಂದರೆಗಳು ಅವಗಣನೆಯಾಗುವುದೇ ಹೆಚ್ಚು. ದೃಷ್ಠಿದೋಷ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗಲು ಕಾರಣವೇನು ಹಾಗೂ ನಮ್ಮ ನಿತ್ಯದ ಯಾವ ಅಭ್ಯಾಸಗಳು ದೃಷ್ಠಿಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದನ್ನು ನೋಡೋಣ.

೧. ಹೆಚ್ಚುತ್ತಿರುವ ಸ್ಕ್ರೀನ್‌ಟೈಂ: ಇತ್ತೀಚೆಗಿನ ದಶಕದಲ್ಲಿ ನಿತ್ಯದ ಸ್ಕ್ರೀನ್‌ಟೈಂ ಹೆಚ್ಚಾಗಿದೆ. ಟಿವಿ, ಮೊಬೈಲ್‌ ಫೋನ್‌, ಟಾಬ್ಲೆಟ್‌ಗಳು ಹೀಗೆ ನಮ್ಮ ನಿತ್ಯದ ಗ್ಯಾಜೆಟ್‌ ಬಳಕೆಯ ಹಸಿವು ದಿನೇ ದಿನೇ ಹೆಚ್ಚುತ್ತಿದೆ. ಕೆಲಸದ ನಿಮಿತ್ತ ಕಂಪ್ಯೂಟರ್‌ ಲ್ಯಾಪ್‌ಟಾಪ್‌ ಬಳಕೆ ಹೆಚ್ಚಾಇರುವುದುದ ನಿಜವೇ ಆದರೂ, ಇದರ ಹೊರತಾಗಿಯೂ ದಿನಕ್ಕೆ ಹಲವಾರು ಗಂಟೆಗಳ ಕಾಲ ನಾವು ಮೊಬೈಲ್‌ ಫೋನಿನಲ್ಲಿ ಕಳೆಯುತ್ತೇವೆ. ಇದರಿಂದ ಕಣ್ಣಿಗೆ ತೊಂದರೆಯಾಗುತ್ತದೆ. ಪುಟ್ಟ ಮಕ್ಕಳಲ್ಲೇ ದೃಷ್ಠಿದೋಷಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದರಿಂದ ಮಿದುಳು ಹೆಚ್ಚು ಹೊತ್ತು ಆಕ್ಟಿವ್‌ ಆಗಿ ಇರುತ್ತದಲ್ಲದೆ, ನಮಗೆ ಬೇಕಾದ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ.

೨. ಧೂಮಪಾನ: ಧೂಮಪಾನದಿಂದ ಕಣ್ಣಿಗೆ ತೊಂದರೆಯಿದೆ ಎಂದರೆ ನಂಬುತ್ತೀರಾ? ಹೌದು. ನಿಮ್ಮ ಶ್ವಾಸಕೋಶ, ಹೃದಯಕ್ಕಿರುವಷ್ಟೇ ತೊಂದರೆ ಧೂಮಪಾನದಿಂದ ನಿಮ್ಮ ಕಣ್ಣಿಗೂ ಇದೆ ಎಂದರೆ ನಂಬಲೇಬೇಕು. ವಯಸ್ಸಾಗುತ್ತಾ ಆಗುತ್ತಾ ಆಗುವ ಮಾಂಸಖಂಡಗಳ ಬಲಹೀನತೆ ಹಾಗೂ ನಷ್ಟ, ಕಣ್ಣಿನ ಪೊರೆ, ಕಣ್ಣು ಮಂದವಾಗುವುದು ಎಲ್ಲವೂ ಮುಂಚಿತವಾಗಿಯೇ ಆಗಬಹುದು. ಇದಲ್ಲದೆ ಧೂಮಪಾನದಿಂದ ಸಂಭವಿಸಬಹುದಾದ ಕ್ಯಾನ್ಸರ್‌ಗೂ ದೃಷ್ಠಿದೋಷಕ್ಕೂ ನೇರಾನೇರ ಸಂಬಂಧವಿದೆ.

೩. ಇತರ ಅನಾರೋಗ್ಯದ ಬಗೆಗೆ ನಿರ್ಲಕ್ಷ್ಯ: ಮಧುಮೇಹ, ಹೈಪರ್‌ಟೆನ್ಶನ್‌, ಬೊಜ್ಜು, ಥೈರಾಯ್ಡ್‌ ಮತ್ತಿತರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಕಣ್ಣಿನ ತೊಂದರೆಗಳೂ ಉಲ್ಬಣಿಸುವ ಸಂಭವವಿದೆ. ಅಧಿಕ ರಕ್ತದೊತ್ತಡದಿಂದ ಹೈಪರ್‌ಟೆನ್ಸಿವ್‌ ರೆಟಿನೋಪತಿ ಬರಬಹುದು. ಇದರಿಂದ ಹೃದಯದ ತೊಂದರೆಗಳೂ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ರಿಸ್ಕ್‌ ಇದೆ.

ಇದನ್ನೂ ಓದಿ | Face Care | ನೆನಪಿಡಿ: ಈ ಐದು ಸೌಂದರ್ಯ ಚಿಕಿತ್ಸೆಗಳು ಅತಿಯಾದರೆ ಒಳ್ಳೆಯದಲ್ಲ!

೪. ನಿದ್ರಾಹೀನತೆ ಹಾಗೂ ವ್ಯಾಯಾಮದ ಕೊರತೆ: ಪ್ರತಿನಿತ್ಯ ಬೇಕಾದಷ್ಟು ನಿದ್ದೆ ಮಾಡದಿರುವುದು ಕೂಡಾ ಕಣ್ಣಿನ ತೊಂದರೆಗೆ ನಾಂದಿ ಹಾಡುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣುರಿ, ಕಣ್ಣು ಒಣಗಿದಂತಾಗುವುದು, ಕೆಂಗಣ್ಣು, ಕಣ್ಣಿನ ಸುತ್ತ ಕಪ್ಪು ವರ್ತುಲ, ಅತಿ ಬೆಳಕಿಗೆ ಕಣ್ಣು ಬಿಡಲು ಕಷ್ಟವಾಗುವುದು ಇತ್ಯಾದಿ ಸಮಸ್ಯೆಗಳೂ ಕಾರಣವಾಗಬಹುದು. ನಿದ್ದೆ ಸರಿಯಾಗಿ ಮಾಡದಿರುವುದು ಹಾರ್ಮೋನು ವೈಪರೀತ್ಯ ಹಾಗೂ ದೈಹಿಕ ಬದಲಾವಣೆಗಳಿಗೆ ನೇರಾನೇರಾ ಸಂಬಂಧವಿದೆ. ಮನೆಯ ಒಳಗೇ ಹೆಚ್ಚು ಸಮಯ ಕಳೆಯುವುದರಿಂದ ಈಗಿನ ಮಕ್ಕಳಲ್ಲಿ ಸಮೀಪ ದೃಷ್ಠಿ ದೋಷ ಬರುವ ಸಂಭವವೂ ಹೆಚ್ಚಾಗುತ್ತಿದೆ.

೫. ಸರಿಯಾಗಿ ನೀರು ಕುಡಿಯದಿರುವುದು: ನೀರು ನಮ್ಮ ದೇಹದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ದೇಹದ ಪ್ರತಿಯೊಂದು ಅಂಗವೂ ಸರಿಯಾಗಿ ಕಾರ್ಯ ನಿರ್ವಹಿಸಲು ನೀರು ಬೇಕು. ಕಣ್ಣಿಗಳಿಗೂ ಸೇರಿದಂತೆ. ಧೂಳು, ವಾತಾವರಣದ ಕೊಳೆ ಎಲ್ಲವೂ ಕಣ್ಣಿಗೆ ನೇರವಾಗಿ ಸಂಪರ್ಕವಾಗುವುದರಿಂದ ಕಣ್ಣಿನಲ್ಲಿ ನೀರಿನಂಶ ಇರುವುದು ಬಹಳ ಮುಖ್ಯವಾಗುತ್ತದೆ. ನೀರಿನ ಕೊರತೆಯೇ ಕಣ್ಣುರಿ, ಕಣ್ಣು ಒಣಗಿದಂತಾಗುವುದು, ಕಣ್ಣು ಬಾತುಕೊಳ್ಳುವುದು ಇತ್ಯಾದಿ ಸಮಸ್ಯೆಗಳನ್ನು ತರುತ್ತವೆ. ಹಾಗಾಗಿ ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ನಿತ್ಯದ ಜೀವನದಲ್ಲಿ ಆರೋಗ್ಯಯುತ ಜೀವನಶೈಲಿ ಹಾಗೂ ಆಹಾರಾಭ್ಯಾಸಗಳಿಂದ ಕಣ್ಣಿನ ತೊಂದರೆಯೂ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಹುಡುಕಿಕೊಂಡು ಬರುವುದನ್ನು ತಪ್ಪಿಸಬಹುದು.

ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

Exit mobile version