ಕಣ್ಣಿನ ಸುತ್ತ ಕಪ್ಪು ವರ್ತುಲ (Dark Circles) ಉಂಟಾಗುವುದು ಬಹಳ ಮಂದಿಯ ಸಮಸ್ಯೆ. ಮುಖ ನೋಡಿದಾಕ್ಷಣ ಮುಖವೇ ಕಳಾಹೀನವಾಗಿ ಕಾಣಲು ಕಣ್ಣಿನ ಸುತ್ತಲ ಕಪ್ಪು ವರ್ತುಲವೇ ಕಾರಣವಾಗಬಹುದು. ಅತಿಯಾದ ಕೆಲಸದ ಒತ್ತಡ, ನಿದ್ದೆ ಸರಿಯಾಗಿ ಆಗದಿರುವುದು ಇತ್ಯಾದಿಗಳು ಇದಕ್ಕೆ ಕಾರಣವಾದರೂ, ಒಮ್ಮೆ ಉಂಟಾದ ಕಪ್ಪು ವರ್ತುಲ ಮಾಯವಾಗಲು ಸಮಯ ಬೇಕು. ಅಂಡರ್ ಐ ಕ್ರೀಂ ಹಾಗೂ ಸೀರಂಗಳ ಲೇಪನದಿಂದ ಇದು ಕಡಿಮೆಯಾಗಬಹುದು (Dark Circles removal) ಎಂದು ಅನೇಕರು ನಾನಾ ಪ್ರಯತ್ನ ಮಾಡುವುದುಂಟು. ಆದರೆ ಕೆಲವು ಮನೆಮದ್ದುಗಳಿಂದ ಹಾಗೂ ಸರಿಯಾದ ನಿದ್ದೆಯಿಂದ, ಶಿಸ್ತಿನ ಜೀವನಶೈಲಿಯಿಂದ ನಿಮ್ಮ ಕಣ್ಣು ಹೊಳಪಿನಿಂದ ನಳನಳಿಸಬಹುದು. ಹಾಗಾದರೆ, ಕಣ್ಣಿನ ಸುತ್ತಲ ಕಪ್ಪು ವರ್ತುಲಗಳಿಗೆ ಹಾಗೂ ಕಣ್ಣಿನ ಕೆಳಗಿನ ಚರ್ಮ ಕೆಲಸದ ಒತ್ತಡದಿಂದ ಊದಿಕೊಂಡಂತಿದ್ದರೆ ಕೆಲವು ಸಿಂಪಲ್ ಮನೆಮದ್ದುಗಳನ್ನು (Dark Circles home remedies) ನೋಡೋಣ.
೧. ಬಾದಾಮಿ ಎಣ್ಣೆ: ಎರಡರಿಂದ ಮೂರು ಬಿಂದು ಬಾದಾಮಿ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಇದನ್ನು ಮಾಡಿಕೊಂಡರೆ ಬೆಳಗ್ಗೆ ಚೆನ್ನಾಗಿ ಮುಖ ತೊಳೆದುಕೊಂಡರೆ ಫ್ರೆಶ್ ಅನುಭವವಾಗುತ್ತದೆ. ನಿತ್ಯವೂ ರಾತ್ರಿ ಇದನ್ನು ಮಾಡಿಕೊಂಡರೆ ಕಣ್ಣಿನ ಸುತ್ತಲ ಕಪ್ಪುವರ್ತುಲ ನಿಧಾನವಾಗಿ ಮಾಯವಾಗುತ್ತದೆ.
೨. ಆಲೋವೆರಾ ಅಥವಾ ಲೋಳೆಸರದ ಜೆಲ್: ಒಂದು ಚಮಚದಷ್ಟು ಅಲೊವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ಕಣ್ಣಿನ ಸುತ್ತ ಹಚ್ಚಿ ಮೆದುವಾಗಿ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿ ಮಲಗುವಾಗ ಇದನ್ನು ಮಾಡಿಕೊಂಡು ಬೆಳಗ್ಗೆ ಎದ್ದು ತೊಳೆದುಕೊಳ್ಳಿ. ಹೀಗೆ ಪ್ರತಿನಿತ್ಯ ಮಾಡಿದರೆ ಕೆಲ ದಿನಗಳಲ್ಲಿ ಉತ್ತಮ ಫಲ ಕಾಣಬಹುದು.
೩. ಸೌತೆಕಾಯಿ: ಸೌತೆಕಾಯಿಯಲ್ಲಿ ಬಯೋಆಕ್ಟೀವ್ ಗುಣಗಳಿರುವುದರಿಂದ ಚರ್ಮದ ಕಪ್ಪು ಕಲೆಗಳಿಗೆ ಇದು ಅತ್ಯಂತ ಒಳ್ಳೆಯದು. ಒಂದು ಚಮಚ ಸೌತೆಕಾಯಿ ರಸಕ್ಕೆ ಒಂದು ಚಮಚ ಅಲೊವೆರಾ ಜೆಲ್ ಸೇರಿಸಿ ಇದನ್ನು ಮುಖ ಹಾಗೂ ಕಣ್ಣಿನ ಸುತ್ತ ೧೫ರಿಂದ ೩೦ ನಿಮಿಷಗಳ ಕಾಲ ಹಚ್ಚಿಕೊಳ್ಳಬಹುದು. ನಿತ್ಯವೂ ಹೀಗೆ ಮಾಡುವುದರಿಂದ ಉತ್ತಮ ಪರಿಣಾಮ ಕಾಣಬಹುದು.
೪. ಟೊಮೇಟೋ: ಟೊಮೆಟೋ ಹಾಗೂ ನಿಂಬೆರಸವನ್ನು ಮಿಕ್ಸ್ ಮಾಡಿಕೊಂಡು ಕಣ್ಣಿನ ಸುತ್ತ ಹಚ್ಚಿಕೊಂಡು ೨೦ ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ನಿತ್ಯವೂ ಮಾಡುವ ಅವಶ್ಯಕತೆಯಿಲ್ಲ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಬಹುದು. ಕೆಲವರ ಚರ್ಮಕ್ಕೆ ನಿಂಬೆರಸ ಸರಿ ಹೊಂದದೆ ಇರಬಹುದು. ಹಾಗಾಗಿ ಮೊದಲೇ ಚರ್ಮದ ಮೇಲೆ ಇನ್ನು ಪರೀಕ್ಷೆ ಮಾಡಿಕೊಂಡು ಕಣ್ಣಿನ ಸುತ್ತ ಹಚ್ಚಿ.
೫. ಮೊಸರು: ಮೊಸರಿನ ಜೊತೆಗೆ ನಿಂಬೆರಸ ಸೇರಿಸಿಯೂ ಕಣ್ಣ ಸುತ್ತ ಹಚ್ಚಿಕೊಂಡು ೧೫-೨೦ ನಿಮಿಷ ಬಿಟ್ಟು ತೊಳೆದುಕೊಳ್ಳಬಹುದು. ವಾರಕ್ಕೆರಡು ಬಾರಿ ಹೀಗೆ ಮಾಡಿಕೊಳ್ಳಿ. ನಿಂಬೆರಸ ಕೆಲವರಿಗೆ ಉರಿ ತರಬಹುದು, ಹಾಗಾಗಿ ಇದನ್ನು ಕಣ್ಣಿನ ಸುತ್ತ ಹಚ್ಚುವ ಮೊದಲು ಪರೀಕ್ಷಿಸಿಕೊಳ್ಳಿ.
ಇದನ್ನೂ ಓದಿ: Eye Care: ಡಿಜಿಟಲ್ ಜಗತ್ತಿನಲ್ಲಿ ಕಣ್ಣುಗಳ ರಕ್ಷಣೆ ಹೇಗೆ?
೬. ಆಲೂಗಡ್ಡೆ: ಹಸಿ ಆಲೂಗಡ್ಡೆಯ ರಸವನ್ನು ತೆಗೆದು ಅದನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದಕೂ ಕಪ್ಪು ವರ್ತುಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
೭. ಕೇಸರಿ: ಮೂರ್ನಾಲ್ಕು ಕೇಸರಿ ದಳಗಳನ್ನು ತೆಗೆದುಕೊಂಡು ಅದನ್ನು ೨-೩ ಚಮಚ ಹಾಲಿನಲ್ಲಿ ೨ ಗಂಟೆಗಳ ಕಾಲ ನೆನೆಸಿಡಿ. ಈ ಮಿಶ್ರಣವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು ೧೫ ನಿಮಿಷ ಬಿಟ್ಟು ತೊಳೆಯಿರಿ. ನಿತ್ಯವೂ ಇದನ್ನು ಮಾಡುವುದರಿಂದ ಕ್ರಮೇಣ ಕಲೆ ಮಾಯವಾಗುತ್ತದೆ.
೮. ಗ್ರೀನ್‌ಟೀ ಬ್ಯಾಗ್‌ಗಳು: ಗ್ರೀನ್ ಟೀ ಬ್ಯಾಗನ್ನು ನೀರಿನಲ್ಲಿ ನೆನೆಸಿಟ್ಟು ಅದನ್ನು ಫ್ರಿಡ್ಜ್‌ನಲ್ಲಿಡಿ. ಇದನ್ನು ನಿತ್ಯವೂ ಕಣ್ಣ ಮೇಲಿಟ್ಟು ೧೦. ೧೫ ನಿಮಿಷ ಕಣ್ಣಿಗೆ ವಿಶ್ರಾಂತಿ ನೀಡಿ. ನಂತರ ತೊಳೆದುಕೊಳ್ಳಿ. ಇದರಿಂದ ವಿಶೇಷ ಲಾಭಗಳಾಗುತ್ತದೆ. ಗ್ರೀನ್ ಟೀ ಮಾಡಿ ಕುಡಿದ ಟೀ ಬ್ಯಾಗ್‌ಗಳನ್ನು ಎಸೆಯದೆ, ಫ್ರಿಡ್ಜ್‌ನಲ್ಲಿಟ್ಟುಕೊಂಡು ಹೀಗೆ ಟ್ರೈ ಮಾಡಬಹುದು.
ಇದನ್ನೂ ಓದಿ: Eye Care Tips: ಏನಿದು ಐ ಸ್ಟೈ? ಏಕೆ ಬರುತ್ತದೆ? ಬಂದಾಗ ಏನು ಮಾಡಬೇಕು?