ನಮ್ಮ ದೇಹದ ಒಳಾಂಗಗಳಲ್ಲಿ ಅತಿ ದೊಡ್ಡ ಅಂಗವೆಂದರೆ ಯಕೃತ್ತು. ದೇಹದ ಬಹಳಷ್ಟು ಕೆಲಸಗಳ ಸೂತ್ರವನ್ನು ಹಿಡಿದಿರುವ ಅಂಗವೂ ಹೌದಿದು. ದೇಹದ ಡಿಟಾಕ್ಸ್‌ನಿಂದ ಹಿಡಿದು, ಕೊಲೆಸ್ಟ್ರಾಲ್, ಸಕ್ಕರೆ ಪ್ರಮಾಣಗಳ ನಿಯಂತ್ರಣದವರೆಗೆ ಹತ್ತುಹಲವು ಕೆಲಸಗಳನ್ನು ಪಿತ್ತಜನಕಾಂಗ ನಿರ್ವಹಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಯಕೃತ್ತಿಗೆ ಕೊಬ್ಬಿನ ಸಮಸ್ಯೆ (Fatty liver disease) ಹೆಚ್ಚಿರುವುದು ಆತಂಕಕಾರಿಯಾಗಿದೆ. ದೇಹದ ಎಲ್ಲಾ ಅಂಗಗಳೂ ಮುಖ್ಯವಾದವುಗಳೇ ಹೌದಾದರೂ, ಪಿತ್ತಜನಕಾಂಗದ ಸಮಸ್ಯೆ ಇತರೆಲ್ಲ ಅಂಗಗಳಿಗೆ ವಿವಿಧ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿ ಫ್ಯಾಟಿಲಿವರ್‌ನ ಲಕ್ಷಣಗಳು, ಕಾರಣಗಳು, ಪರಿಹಾರದಂಥ ಕೆಲವು ಮಾಹಿತಿಗಳು ಉಪಯುಕ್ತವೆನಿಸಿವೆ.
ಏನು ಹೀಗೆಂದರೆ?
ಯಕೃತ್ತಿನಲ್ಲಿ ಅಧಿಕ ಕೊಬ್ಬು ಶೇಖರವಾದ ಪರಿಣಾಮ, ಯಕೃತ್ತು ಅಗಲವಾಗಿ ದೊಡ್ಡದಾಗುತ್ತದೆ. ಇದನ್ನೇ ಫ್ಯಾಟಿಲಿವರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬೊಜ್ಜು ಇರುವವರು, ದೀರ್ಘಕಾಲದಿಂದ ಮಧುಮೇಹಿಗಳಾಗಿದ್ದವರು ಮತ್ತು ಹೆಚ್ಚು ಅಲ್ಕೋಹಾಲ್ ಸೇವಿಸುವವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯ ದೂರಗಾಮಿ ಪರಿಣಾಮಗಳನ್ನು ಲಕ್ಷಿಸಿದಾಗ, ಆದಷ್ಟೂ ಶೀಘ್ರ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.
ಕಾರಣಗಳೇನು?
ಹಲವಾರು ಕಾರಣಗಳಿವೆ- ಬೊಜ್ಜು, ಅಲ್ಕೋಹಾಲ್ ಸೇವನೆ, ದೀರ್ಘಕಾಲದ ಮಧುಮೇಹ, ಅ ತಿಹೆಚ್ಚಿನ ಕ್ಯಾಲರಿ ಆಹಾರವನ್ನು ಸದಾ ತಿನ್ನುವುದು, ವ್ಯಾಯಾಮವಿಲ್ಲದ ಜೀವನ, ಕೆಲವು ಔಷಧಗಳ ಬೇಕಾಬಿಟ್ಟಿ ಸೇವನೆ, ಆನುವಂಶೀಯ ಕಾರಣಗಳು, ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಮುಖ್ಯ ಕಾರಣಗಳು.
ಲಕ್ಷಣಗಳೇನು?
ಆರಂಭಿಕ ಲಕ್ಷಣಗಳು ಸೌಮ್ಯವಾಗಿದ್ದು, ಗಮನಕ್ಕೆ ಬಾರದೆ ಹೋಗುವುದೇ ಹೆಚ್ಚು. ಅತಿಯಾದ ಸುಸ್ತು, ಹೊಟ್ಟೆಯ ಮೇಲಿನ ಭಾಗದ ಬಲಪಕ್ಕದಲ್ಲಿ ನೋವು ಮೊದಲಿಗೆ ಕಾಣಿಸಿಕೊಳ್ಳಬಹುದು. ಸಮಸ್ಯೆ ಮುಂದುವರಿಯುತ್ತಿದ್ದಂತೆ, ನಿದ್ರಾಹೀನತೆ, ಅತಿಯಾದ ಸುಸ್ತು, ಆಲಸ್ಯ, ಹೊಟ್ಟೆ ಉಬ್ಬರಿಸಿದಂತಾಗುವುದು, ಕಾಲು ಊದಿಕೊಳ್ಳುವುದು ಮುಂತಾದ ಲಕ್ಷಣಗಳು ತೋರಬಹುದು.
ಪರಿಹಾರವೇನು?
ಮೊದಲಿಗೆ, ಯಕೃತ್ತಿನಲ್ಲಿ ಕೊಬ್ಬು ತುಂಬುವುದಕ್ಕೆ ಕಾರಣವೇನು ಎಂಬುದನ್ನು ವೈದ್ಯರು ಪತ್ತೆ ಮಾಡುತ್ತಾರೆ. ಉದಾ, ತಪ್ಪಾದ ಆಹಾರಕ್ರಮವೇ, ಜಡವಾದ ಜೀವನಶೈಲಿಯೇ, ಅಲ್ಕೋಹಾಲ್ ಚಟವೇ, ವೈರಸ್ ಪ್ರಕೋಪವೇ, ಆನುವಂಶಿಕವಾಗಿ ಬಂದಿದ್ದೇ- ಏನು ಕಾರಣ ಎಂಬುದನ್ನು ಅರಿಯಬೇಕು. ದೇಹದಲ್ಲಿ ಬೊಜ್ಜು ಹೆಚ್ಚಿದೆ ಎಂದಾರೆ ತೂಕ ಇಳಿಸುವುದು ಅಗತ್ಯ. ಸಾಮಾನ್ಯವಾಗಿ ಇಂಥ ಪ್ರಕರಣಗಳಲ್ಲಿ ದೇಹದ ಶೇ. ೧೦ರಷ್ಟು ತೂಕ ಇಳಿಸಿದರೂ ಸಮಸ್ಯೆಯಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತದೆ ಎನ್ನುತ್ತಾರೆ ತಜ್ಞರು.
ಕೆಟ್ಟ ಆಹಾರಶೈಲಿಯ ಬಳುವಳಿಯಿದು ಎಂದಾದರೆ, ಜಿಡ್ಡು ಮತ್ತು ಮಸಾಲೆ ಪದಾರ್ಥಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಅಲ್ಕೋಹಾಲ್ ಮುಟ್ಟುವುದೂ ವರ್ಜ್ಯ. ಜಡವಾಗಿರದೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಸಹ ಮುಖ್ಯ. ಮಧುಮೇಹಿಗಳಿಗೆ ಈ ಸಮಸ್ಯೆಯಿದ್ದರೆ ಇನ್ನಷ್ಟು ಎಚ್ಚರಿಕೆ ಅಗತ್ಯ. ವೈರಸ್ ಸಮಸ್ಯೆಯಿಂದಾಗಿ ಯಕೃತ್ತು ತೊಂದರೆಗೊಳಗಾಗಿದ್ದರೆ ತಕ್ಷಣ ಚಿಕಿತ್ಸೆ ಬೇಕೇಬೇಕು. ನಮ್ಮ ಪಿತ್ತ ಜನಕಾಂಗದ ಕ್ಷೇಮ ಸಮಾಚಾರವನ್ನು ನಾವು ವಿಚಾರಿಸಿಕೊಳ್ಳದಿದ್ದರೆ, ಇದರ ದೂರಗಾಮಿ ಪರಿಣಾಮಗಳು ತೀಕ್ಷ್ಣವಾಗಿರುವುದಂತೂ ಖಂಡಿತ.
ಇದನ್ನೂ ಓದಿ: Health Benefits of Red Chilli: ದಿನಬಳಕೆಯ ಕೆಂಪು ಮೆಣಸಿನಕಾಯಿ ಖಾರಕ್ಕಷ್ಟೇ ಅಲ್ಲ, ದೇಹಕ್ಕೂ ಅಗತ್ಯ!