Site icon Vistara News

Fatty Liver: ಏನೆಲ್ಲ ಕಾರಣಗಳಿಗೆ ಫ್ಯಾಟಿ ಲಿವರ್‌ ಬರುತ್ತದೆ?

Fatty Liver What Causes

ಬೆಂಗಳೂರು: ಯಕೃತ್‌ನ ಕೊಬ್ಬು ಅಥವಾ ಫ್ಯಾಟಿ ಲಿವರ್‌ ಸಮಸ್ಯೆ (Fatty Liver) ವಿಶ್ವದ ಶೇ. 25ರಷ್ಟು ಜನರನ್ನೀಗ ಬಾಧಿಸುತ್ತಿದೆ. ಭಾರತವಂತೂ ವಿಶ್ವದ ಫ್ಯಾಟಿ ಲಿವರ್‌ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್‌ನಂಥ ಜೀವನಶೈಲಿಯ ದೋಷದಿಂದ ಬರುವ ಸಮಸ್ಯೆಗಳು ಯಕೃತ್‌ನ ಕೊಬ್ಬಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅದಲ್ಲದೆ, ಪ್ರತಿಯೊಬ್ಬರದ್ದೂ ಪ್ರತ್ಯೇಕವಾದ ಜೀವನಶೈಲಿಗಳು ಇಂಥ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಯಾವ ಕೆಟ್ಟ ಅಭ್ಯಾಸಗಳು ಇಂಥ ತೊಂದರೆಗಳನ್ನು ಮುಂದಿಡುತ್ತವೆ? ಅವುಗಳನ್ನು ಹೇಗೆ ದೂರ ಮಾಡಬಹುದು?

ಅತಿಯಾಗಿ ತಿನ್ನುವುದು

ನಮ್ಮ ಶರೀರಕ್ಕೆ ಬೇಕಾದ ಕ್ಯಾಲರಿಗಿಂತ ಅಧಿಕ ಪ್ರಮಾಣದಲ್ಲಿ ತಿನ್ನುವ ಅಭ್ಯಾಸವಿದ್ದರೆ, ಈ ವಿಷಯ ಗಮನದಲ್ಲಿರಬೇಕು. ಹೆಚ್ಚುವರಿ ಕ್ಯಾಲರಿಗಳೆಲ್ಲ ಶರೀರದಲ್ಲಿ ಶೇಖರಣೆಯಾಗುವುದು ಕೊಬ್ಬಿನ ರೂಪದಲ್ಲಿ. ಅದರಲ್ಲೂ ಜಿಡ್ಡು ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚಾಗಿ ಸೇವಿಸುವುದು ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಬೇಕಾದಷ್ಟೇ ತಿನ್ನುವುದು ಸುಲಭದ ಉಪಾಯ. ಅದರಲ್ಲೂ ಲೀನ್‌ ಪ್ರೊಟೀನ್‌, ಇಡೀ ಧಾನ್ಯಗಳು ಮತ್ತು ನಾರು ಭರಿತ ಆಹಾರಗಳ ಸೇವನೆಯನ್ನು ಅಗತ್ಯವಾಗಿ ಮಾಡಿ.

ಜಡಜೀವನ

ದೈಹಿಕ ಚಟುವಟಿಕೆ ಕಡಿಮೆಯಾದಷ್ಟು ಸ್ವಾಸ್ಥ್ಯವೂ ಕಡಿಮೆಯಾಗುತ್ತದೆ. ದೇಹದ ಕೊಬ್ಬು ಕರಗುವಂತೆ, ಬಕೆಟ್‌ಗಟ್ಟಲೆ ಬೆವರು ಹರಿಸಿ ವ್ಯಾಯಾಮ ಮಾಡಬೇಕೆಂದಲ್ಲ. ಬದಲಿಗೆ, ವಾಋಕ್ಕೆ 150 ನಿಮಿಷಗಳ ಅಥವಾ ದಿನಕ್ಕೆ 30 ನಿಮಿಷಗಳ ಮಧ್ಯಮ ಪ್ರಮಾಣದ ವ್ಯಾಯಾಮ ಸಾಕಾಗುತ್ತದೆ. ಚುರುಕು ನಡಿಗೆ, ಸೈಕಲ್‌ ಹೊಡೆಯುವುದು, ಈಜು, ಯೋಗ, ಏರೋಬಿಕ್ಸ್‌, ಜುಂಬಾ, ಪಿಲಾಟೆ ಮುಂತಾದ ಯಾವುದೇ ನಿಮ್ಮಿಷ್ಟದ ವ್ಯಾಯಾಮವನ್ನು ಮಾಡಬಹುದು. ದೀರ್ಘ ಕಾಲ ಒಂದೇ ಕಡೆ ಕೂತು ಕೆಲಸ ಮಾಡದೆ ಆಗಾಗ ಎದ್ದು ಓಡಾಡಿ. ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ.

ಆಲ್ಕೋಹಾಲ್‌

ಇದಂತೂ ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಇರುವಂಥ ಅತಿದೊಡ್ಡ ಕಾರಣಗಳಲ್ಲಿ ಒಂದು. ಮೊದಲಿಗೆ ಅಂಥ ವ್ಯತ್ಯಾಸ ಕಾಣದ್ದರೂ, ದೀರ್ಘ ಕಾಲ ಮದ್ಯಪಾನದ ಚಟ ಮುಂದುವರಿಯುವುದು ಇಡೀ ದೇಹವನ್ನು ಒಳಗಿಂದೊಳಗೆ ಶಿಥಿಲಗೊಳಿಸಬಲ್ಲದು. ಹಾಗಾಗಿ ಹವ್ಯಾಸ, ಮಜಾ, ಸ್ನೇಹಿತರ ಜೊತೆಗೆ, ಎಂದೋ ಪಾರ್ಟಿಗೆ… ಇಂಥ ಕುಂಟು ನೆಪಗಳನ್ನು ಹೇಳಿಕೊಂಡು ಗುಂಡು ಹಾಕುವ ಬದಲು, ಮದ್ಯಪಾನವನ್ನು ಸಂಪೂರ್ಣ ತ್ಯಜಿಸಲು ದೃಢ ಮನಸ್ಸು ಮಾಡಿ.

ಅಧಿಕ ಸಕ್ಕರೆ

ಸಕ್ಕರೆಯಂಶ ಹೆಚ್ಚಿರುವ ನೈಸರ್ಗಿಕ ಆಹಾರಗಳು ಅಂಥ ಅಪಾಯವನ್ನು ತರುವುದಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಹಣ್ಣುಗಳ ಸೇವನೆ ಮಾಡುವ ಅಭ್ಯಾಸದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಕೃತಕ ಸಿಹಿಯನ್ನು ಸೇರಿಸಿದ ಆಹಾರಗಳು ಮಾತ್ರ ಯಾವತ್ತಿಗೂ ಕಂಟಕವನ್ನು ತರಬಲ್ಲವು. ಸೋಡಾ, ಫ್ರೂಟ್‌ ಜ್ಯೂಸ್‌, ಕ್ಯಾಂಡಿಗಳು, ಕೇಕ್‌, ಐಸ್‌ಕ್ರೀಮ್‌, ಜಿಲೇಬಿ, ಹಲ್ವಾಗಳಿಂದ ಹಿಡಿದು ಯಾವುದೇ ಸಿಹಿ ತಿನಿಸುಗಳು ಅತಿಯಾದರೆ ಯಕೃತ್‌ಗೆ ತೊಂದರೆ. ದಿನಕ್ಕೆ 4 ಚಮಚಕ್ಕಿಂತ ಹೆಚ್ಚಿನ ಸಕ್ಕರೆಯಂಶ ದೇಹಕ್ಕೆ ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Actor Suriya: ಸೂರ್ಯಗೆ ಸೆಟ್‌ನಲ್ಲಿ ಗಾಯ: ಆರೋಗ್ಯ ಸ್ಥಿತಿ ಹೇಗಿದೆ?

ನಿದ್ದೆಗೇಡಿತನ

ದಿನಕ್ಕೆ ಅಗತ್ಯ ಪ್ರಮಾಣದ ನಿದ್ದೆಯನ್ನು ಮಾಡದವರಲ್ಲಿ ಯಕೃತ್‌ನ ಆರೋಗ್ಯ ಚೆನ್ನಾಗಿಲ್ಲ ಎಂಬ ಅಂಶವನ್ನು ಅಧ್ಯಯನಗಳು ಎತ್ತಿ ಹಿಡಿದಿವೆ. ಹಾಗಾಗಿ ದಿನಕ್ಕೆ 7-8 ತಾಸು ಕಡ್ಡಾಯವಾಗಿ ನಿದ್ರಿಸಬೇಕು ಎಂಬ ನಿಯಮವನ್ನು ಹಾಕಿಕೊಳ್ಳಿ. ನಿದ್ದೆಯೆಂದರೆ ಕೇವಲ ಹಾಸಿಗೆಯ ಮೇಲೆ ಮಲಗಿ, ಕೈಯಲ್ಲಿ ಮೊಬೈಲ್‌ ಹಿಡಿಯುವುದಲ್ಲ. ಬದಲಿಗೆ, ಅದಷ್ಟೂ ತಾಸುಗಳ ಗಾಢ ನಿದ್ದೆ. ಇದರಿಂದ ದೇಹದ ಬಹಳಷ್ಟು ರಿಪೇರಿ ಕೆಲಸಗಳು ಸುಗಮವಾಗುತ್ತವೆ.

ಸಂಸ್ಕರಿತ ಆಹಾರ

ಇದು ಸಹ ಯಕೃತ್ತನ್ನು ಹಾಳು ಮಾಡುವ ಕೇಡಿಗಳಲ್ಲಿ ಒಂದು. ಅತಿಯಾದ ಕೊಬ್ಬಿನ ಆಹಾರಗಳು, ಉಪ್ಪು ಹೆಚ್ಚಿರುವ ಚಿಪ್ಸ್‌ನಂಥ ತಿನಿಸುಗಳು, ಮೈದಾಭರಿತ ಆಹಾರಗಳು, ಶೀತಲೀಕರಿಸಿದ ತಿನಿಸುಗಳು- ಇವೆಲ್ಲ ಪಿತ್ತಕೋಶದ ಆಯುಷ್ಯವನ್ನೇ ಕಡಿತ ಮಾಡುವ ಸಾಮರ್ಥ್ಯ ಹೊಂದಿದವು. ಹಾಗಾಗಿ ತಾಜಾ ಆಹಾರ ಸೇವಿಸಿ, ಇಡೀ ಧಾನ್ಯಗಳನ್ನು, ಸಾಕಷ್ಟು ಹಣ್ಣು-ತರಕಾರಿಗಳನ್ನು ಹೊಂದಿದ ಸತ್ವಯುತ ಆಹಾರವನ್ನೇ ತಿನ್ನಿ.

Exit mobile version