ಹೋಟೆಲ್‌ಗಳಲ್ಲಿ ಊಟ ಮಾಡಿದ ನಂತರ ಬಿಲ್ ನೀಡಿದ ಪ್ಲೇಟ್‌ನಲ್ಲಿರುವ ಸೋಂಪು (Fennel Seeds) ಅಥವಾ ಬಡೆಸೊಪ್ಪನ್ನು ಜಗಿಯುತ್ತಾ ಹೊರಬೀಳುತ್ತೀರಲ್ಲವೇ? ಇದ್ಯಾಕೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಇದು ಮೊದಲು ತಿಂದ ಆಹಾರ ಜೀರ್ಣಗೊಳ್ಳಲು ಸಹಾಯಕ ಎಂದಷ್ಟೇ ನಿಮಗೆ ಗೊತ್ತಿರಬಹುದು. ಆದರೆ ಸೋಂಪಿನ ಆರೋಗ್ಯ ಪ್ರಯೋಜನಗಳು (Fennel Seeds Benefits) ಅಸಂಖ್ಯ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವುದರಿಂದ ವಿಶೇಷ ಆಹಾರ ಪದಾರ್ಥಗಳಲ್ಲಿ ಹಾಗೂ ಕಚ್ಚಾ ರೂಪದಲ್ಲಿಯೂ ಸವಿಯಲಾಗುತ್ತದೆ. ಒಳ್ಳೆಯ ಪರಿಮಳ ಹಾಗೂ ರುಚಿ ಹೊಂದಿರುವ ಈ ಪುಟ್ಟ ಬೀಜಗಳಿಂದ ತಯಾರಿಸಲಾಗುವ ಚಹಾ ಮತ್ತು ಕಷಾಯಗಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು. ಬಡೆಸೊಪ್ಪು, ಸೊಂಪು ಎಂಬ ಹೆಸರಿನಿಂದ ಕರೆಯುವ, ನೋಡಲು ಜೀರಿಗೆಯಂತೆ ಕಾಣುವ ಸೋಂಪನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಸೋಂಪನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು (Fennel Seeds health Benefits) ಯಾವುವು ಎಂಬುದನ್ನು ನೋಡೋಣ.
ಅಡುಗೆಯ ರುಚಿ ಅಧಿಕ
ಸೋಂಪು ಒಂದು ಮಸಾಲೆ ಪದಾರ್ಥ. ಈ ಕಾಳುಗಳನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುವಂಥದು. ಯಾವುದೇ ಸಾಂಬಾರಿಗೆ ನಾಲ್ಕು ಕಾಳು ಸೋಂಪು ಸೇರಿಸುವುದರಿಂದ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಜೀರ್ಣ ಕ್ರಿಯೆಯ ಸುಧಾರಣೆ
ಸೋಂಪು ಜೀರ್ಣ ಕ್ರಿಯೆಯನ್ನು ಸುಧಾರಿಸುವ ಗುಣವನ್ನು ಹೊಂದಿದೆ. ಸೋಂಪಿನ ಕಷಾಯ/ ಚಹಾ ಕುಡಿಯುವುದರಿಂದ ಸ್ನಾಯುಗಳು ಸಡಿಲಗೊಳ್ಳುವುದು, ಪಿತ್ತ ರಸದ ಹರಿವನ್ನು ಉತ್ತೇಜಿಸುವುದು, ದೊಡ್ಡ ಕರುಳು ಮತ್ತು ಸಣ್ಣ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು. ಒಟ್ಟಾರೆಯಾಗಿ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸಿ, ದೇಹದಿಂದ ತ್ಯಾಜ್ಯವನ್ನು ಸುಲಭವಾಗಿ ಹೊರಹಾಕುವುದು. ಊಟದ ನಂತರ ಸೋಂಪು ಕಾಳು ಯಾಕೆ ಕೊಡುತ್ತಾರೆ ಎಂದು ಗೊತ್ತಾಯಿತಲ್ಲವೇ?
ರೋಗನಿರೋಧಕ ಶಕ್ತಿ ಹೆಚ್ಚಳ
ನಮ್ಮ ದೇಹ ರೋಗಗಳ ವಿರುದ್ಧ ಹೋರಾಡಬೇಕು ಅಥವಾ ಬಂದ ಅನಾರೋಗ್ಯವು ಬಹುಬೇಗ ಗುಣಮುಖವಾಗಬೇಕು ಎಂದರೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಅಥವಾ ತಿಂಡಿ ತಿನ್ನುವ ಮೊದಲು ಸೋಂಪಿನ ಚಹಾ ಸವಿದರೆ ರೋಗನಿರೋಧಕ ಶಕ್ತಿ ಹೆಚ್ಚುವುದು. ಸೋಂಪು ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚುವುದು.
ತೂಕ ಇಳಿಸುವ ಮಂತ್ರ
ಅಧಿಕ ತೂಕ ಹೊಂದಿದವರು ಯಾವುದೇ ವ್ಯಾಯಾಮ ಅಥವಾ ಪತ್ಯಗಳನ್ನು ಅನುಸರಿಸದೆ ತೂಕವನ್ನು ಇಳಿಸಬೇಕು ಎಂದುಕೊಂಡಿದ್ದರೆ ಸೋಂಪಿನ ಕಷಾಯ/ ಚಹಾವನ್ನು ಮುಂಜಾನೆ ಕುಡಿಯುವುದು ಉತ್ತಮ. ಇದು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ ದೀರ್ಘ ಕಾಲ ಹಸಿವನ್ನು ತಡೆಯುವುದು. ಇದರಿಂದಾಗ ಅನಗತ್ಯವಾಗಿ ತಿನ್ನುವ ಆಹಾರವನ್ನು ಕಡಿಮೆ ಮಾಡಬಹುದು. ಜೊತೆಗೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬು ಸಹ ಸುಲಭವಾಗಿ ಕರಗುವುದು.
ಹಾರ್ಮೋನ್‍ಗಳ ಸಮತೋಲನ
ನಿತ್ಯವೂ ಸೋಂಪಿನ ಚಹಾ ಕುಡಿಯುವುದರಿಂದ ದೇಹದಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಗುವುದು. ಜೊತೆಗೆ ಫೈಟೊ ಈಸ್ಟ್ರೊಜೆನ್ ಅನ್ನು ಬಿಡುಗಡೆ ಮಾಡುವುದು. ಪಾಲಿಸಿಸ್ಟಿಕ್ ಓವೆರೆಸಿ, ಥೈರಾಯ್ಡ್‌ನಂತಹ ಸಮಸ್ಯೆ ಇದ್ದರೆ ಸುಲಭವಾಗಿ ನಿವಾರಿಸಬಹುದು. ಆರೋಗ್ಯಕರ ಹಾರ್ಮೋನ್‍ಗಳ ಉತ್ಪಾದನೆಗೆ ಉತ್ತೇಜನ ನೀಡುವುದು.
ಮಧುಮೇಹ ನಿಯಂತ್ರಣ
ಕೆಲವು ಅಧ್ಯಯನಗಳ ಪ್ರಕಾರ ಮಧುಮೇಹ ಹೊಂದಿದವರು ಪ್ರತಿದಿನ ಮುಂಜಾನೆ ಸೋಪಿನ ಚಹಾ ಕುಡಿಯುವುದರಿಂದ ಮಧುಮೇಹವನ್ನು ಸಮತೋಲನದಲ್ಲಿ ಇಡಬಹುದು. ಸೋಂಪು ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಹೊಂದಿದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿ ಇಡುವುದು. ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ಮಧುಮೇಹವು ಹತೋಟಿಗೆ ಬರುವುದು.
ಸಂಧಿವಾತವನ್ನು ನಿವಾರಿಸುವುದು
ಉರಿಯೂತವನ್ನು ನಿವಾರಿಸುವ ಸೋಂಪು ಸಂಧಿವಾತ ಹಾಗೂ ಮೂಳೆಗೆ ಸಂಬಂಧಿಸಿದ ಅನೇಕ ಸಮಸ್ಯೆಯನ್ನು ನಿವಾರಿಸುವುದು. ಸಂಧುಗಳಲ್ಲಿ ಉಂಟಾಗುವ ನೋವುಗಳನ್ನು ನಿಯಮಿತವಾಗಿ ಕಡಿಮೆ ಮಾಡುವುದು. ಗಣನೀಯವಾಗಿ ಕುಡಿಯುವುದರಿಂದ ಮೂಳೆಗಳು ಬಲವನ್ನು ಪಡೆದುಕೊಳ್ಳುತ್ತವೆ.
ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!