ಆರೋಗ್ಯದ ವಿಚಾರಕ್ಕೆ ಬಂದಾಗ ಮೆಂತ್ಯ (fenugreek) ಬಹಳ ಒಳ್ಳೆಯದು ಎಂಬುದು ನಮಗೆ ತಿಳಿದಿದೆ. ಮೆಂತ್ಯ ಸೊಪ್ಪು ಅಷ್ಟೇ ಅಲ್ಲ, ಮೆಂತ್ಯ ಕಾಳೂ (fenugreek seeds) ಕೂಡಾ ಸಾಕಷ್ಟು ಒಳ್ಳೆಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ತೂಕ ಇಳಿಸಿಕೊಳ್ಳುವವರಿಂದ ಹಿಡಿದು, ಮಧುಮೇಹಿಗಳವರೆಗೆ ಮೆಂತ್ಯ ಎಲ್ಲರಿಗೂ ಬೇಕಾದದ್ದೇ. ರುಚಿಯಲ್ಲಿ ಸ್ವಲ್ಪ ಕಹಿ ಅನಿಸಿದರೂ, ಗುಣದಲ್ಲಿ ಇದು ಸಿಹಿ. ಅಂದರೆ, ದೇಹಕ್ಕೆ ಒಳ್ಳೆಯದನ್ನೇ (Health tips) ಬಯಸುತ್ತದೆ. ಮೆಂತ್ಯದಲ್ಲಿ ಕಬ್ಬಿಣಾಂಶವೂ ಸಾಕಷ್ಟಿದ್ದು, ಇತರ ಖನಿಜಾಂಶಗಳೂ ಇವೆ. ನಾರಿನಿಂದಲೂ ಇದು ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೂ ಸುಲಭ. ಒಟ್ಟಾರೆ ಆರೋಗ್ಯದಲ್ಲಿ ಮೆಂತ್ಯ (Fenugreek Seeds Benefits) ಒಂದು ಚಿನ್ನ.
ಇಂತಹ ಮೆಂತ್ಯ ಕಾಳು ಒಳ್ಳೆಯದೇನೋ ಸರಿ, ಆದರೆ, ಇದನ್ನು ನಿತ್ಯವೂ ಆಹಾರದಲ್ಲಿ ಬಳಕೆ ಹೇಗೆ ಎಂಬುದು ಹಲವರ ಸಮಸ್ಯೆ. ಮೆಂತ್ಯದಿಂದ ಏನೇನೆಲ್ಲ ಮಾಡಿ ತಿನ್ನಬಹುದು ಅಥವಾ ಮೆಂತ್ಯಕಾಳನ್ನು ನಿತ್ಯವೂ ಹೊಟ್ಟೆ ಸೇರುವಂತೆ ಮಾಡುವುದು ಹೇಗೆ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಇಲ್ಲಿವೆ ಕೆಲವು ಉಪಯೋಗಕರ ಟಿಪ್ಸ್.
1. ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಮೆಂತ್ಯಕಾಳಿನ ಚಹಾ ಮಾಡಿ ಕುಡಿಯುವುದನ್ನು ಅಭ್ಯಾಸ ಮಾಡಿ. ಅಂದರೆ, ಮೊದಲೇ ಮನೆಯಲ್ಲಿ ಒಂಡು ಡಬ್ಬದಲ್ಲಿ ಮೆಂತ್ಯ ಕಾಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬಹುದು. ನೀರಿಗೆ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ, ಸೋಸಿಕೊಂಡು ಈ ನೀರನ್ನು ಚಹಾದಂತೆ ಕುಡಿಯಬಹುದು. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಕಳಿಸುವ ಉತ್ತಮ ಡಿಟಾಕ್ಸ್ ಕೂಡಾ ಹೌದು. ಅಷ್ಟೇ ಅಲ್ಲ, ಮಧುಮೇಹಿಗಳಿಗೂ, ತೂಕ ಇಳಿಸಿಕೊಳ್ಳಲು ಬಯಸುವ ಮಂದಿಗೂ ಇದು ಅತ್ಯುತ್ತಮ ಪೇಯ.
2. ಮೆಂತ್ಯ ನೀರನ್ನು ಕುಡಿಯಬಹುದು. ಚಹಾದಂತೆ ಮೆಂತ್ಯ ಕಾಳಿನ ಪುಡಿಯನ್ನು ಕುದಿಸಿ ಕುಡಿಯುವ ಬದಲಾಗಿ ಮೆಂತ್ಯ ಕಾಳನ್ನು ರಾತ್ರಿಯೇ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಈ ನೀರನ್ನು ಕುಡಿಯಬಹುದು. ಕಾಳನ್ನು ಎಸೆಯದೆ, ನೀರು ಚಿಮುಕಿಸಿ ಹಾಗೆಯೇ ಇಟ್ಟ್ರೆ ಮಾರನೇ ದಿನದ ಹೊತ್ತಿಗೆ ಮೊಳಕೆ ಬಂದಿರುತ್ತದೆ. ಈ ಮೊಳಕೆ ಬಂದ ಮೇಂತ್ಯ ಕಾಳನ್ನೂ ಸೇವಿಸುವುದು ಒಳ್ಳೆಯದು.
3. ಮೆಂತ್ಯದ ಜೊತೆಗೆ ಸೋಂಪು, ಒಣಶುಂಠಿ, ಚೆಕ್ಕೆ ಇವಿಷ್ಟನ್ನು ಸೇರಿಸಿ ಮಿಕ್ಸಿಯಲ್ಲಿ ನೀರು ಹಾಕಿ ತಿರುಗಿಸಿ. ಈ ನೀರನ್ನು ಸೋಸಿಕೊಂಡು ಬೇಕಿದ್ದರೆ ನಿಂಬೆರಸ ಹಿಂಡಿ ಕುಡಿಯಬಹುದು. ಇದು ತೂಕ ಇಳಿಕೆಗೆ ಪರಿಣಾಮಕಾರಿ.
4. ಮೆಂತ್ಯ ಕಾಳಿನ ಸಲಾಡ್ ಕೂಡಾ ಮಾಡಬಹುದು ಗೊತ್ತಾ? ಮೆಂತ್ಯಕಾಳನ್ನು ನೆನೆಸಿಟ್ಟು ಮೊಳಕೆ ಬರಿಸಿ ಹಾಗೆಯೇ ತಿನ್ನಲು ಕಷ್ಟವಾಗುತ್ತಿದ್ದರೆ ಸಲಾಡ್ ಮಾಡಬಹುದು. ಯಾವೆಲ್ಲ ಹಣ್ಣು ಹಾಗೂ ಹಸಿ ತರಕಾರಿಗಳು ನಿಮಗಿಷ್ಟವೋ ಅದನ್ನೆಲ್ಲ ಸಣ್ಣಗೆ ಕತ್ತರಿಸಿ ಇದಕ್ಕೆ ಹಾಕಿ ಸಲಾಡ್ ಮಾಡಬಹುದು. ಉದಾಹರಣೆಗೆ ಮೊಳಕೆ ಬರಿಸಿದ ಹೆಸರು ಕಾಳು, ಮೊಳಕೆ ಬರಿಸಿದ ಮೆಂತ್ಯ, ಸೌತೆಕಾಯಿ, ದಾಳಿಂಬೆ, ಸೀಬೆಹಣ್ಣು, ಸೇಬು, ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಕೊಂಚ ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ, ನಿಂಬೆಹಣ್ಣು ಬೇಕಿದ್ದರೆ ಹಿಂಡಿ ಸಲಾಡ್ ತಯಾರಿಸಬಹುದು. ಇದು ಒಳ್ಳೆಯ ಸ್ನ್ಯಾಕ್ ಕೂಡಾ ಆಗಬಹುದು. ತಿಂಡಿ ಹಾಗೂ ಮಧ್ಯಾಹ್ನದೂಡದ ಮಧ್ಯೆ ಹಸಿವಾದಾಗ ಇದನ್ನು ಸೇವಿಸಬಹುದು.
5. ಮೆಂತ್ಯ ಸೊಪ್ಪನ್ನು ಒಣಗಿಸಿಟ್ಟುಕೊಂಡು ಬೇಕಾದಾಗಲೆಲ್ಲ ಅದರಿಂದ ಥೇಪ್ಲಾ ಮಾಡಬಹುದು. ಗುಜರಾತಿ ಶೈಲಿಯ ಪರಾಠಾವನ್ನು ಥೇಪ್ಲಾ ಎಂದು ಕರೆಯುತ್ತಾರೆ. ಇದಕ್ಕೆ ಮೆಂತ್ಯ ಸೊಪ್ಪನ್ನು ದಾರಾಳವಾಗಿ ಬಳಸಲಾಗುತ್ತದೆ. ನೀವು ಮಾಡುವ ಚಪಾತಿಗೆ ಮೆಂತ್ಯ ಸೊಪ್ಪನ್ನು ಸೇರಿಸಿ ಮೆಂತ್ಯ ಪರಾಠಾವನ್ನು ಮಾಡುವ ಮೂಲಕವೂ ಮೆಂತ್ಯ ಹೊಟ್ಟೆಗೆ ಸೇರುವಂತೆ ಮಾಡಬಹುದು. ಮೆಂತ್ಯ ಸೊಪ್ಪು ಸಿಗದ ಕಾಲದಲ್ಲಿ ಒಣಗಿಸಿದ ಮೆಂತ್ಯ ಸೊಪ್ಪನ್ನು ಬಳಸಹುದು.
6. ಮೆಂತ್ಯ ಸೊಪ್ಪು ಸಿಗುವ ಕಾಲದಲ್ಲಿ ಅದನ್ನು ಧಾರಾಳವಾಗಿ ಬಳಸಿ. ಅಂದರೆ ಮೆಂತ್ಯಸೊಪ್ಪಿನಿಂದ ಬಗೆಬಗೆಯ ಸಬ್ಜಿಗಳನ್ನೂ ಮಾಡಬಹುದು, ಹೂಕೋಸು, ಬ್ರೊಕೋಲಿ, ಆಲೂಗಡ್ಡೆ ಇತ್ಯಾದಿಗಳ ಜೊತೆಗೆ ಸೇರಿಸಿ ಉತ್ತರ ಭಾರತೀಯ ಶೈಲಿಯ ಮಾದರಿಯಲ್ಲಿ ಸಬ್ಜಿ ಮಾಡಬಹುದು.
ಇದನ್ನೂ ಓದಿ: Fenugreek Seeds For Diabetes: ಮಧುಮೇಹಿಗಳೇ ಬಿಡಿ ಚಿಂತೆ, ಇಷ್ಟು ತಿಂದರೆ ಸಾಕು ಮೆಂತೆ