Site icon Vistara News

Food Beneficial For Eye Health: ಕಣ್ಣಿನ ಆರೋಗ್ಯಕ್ಕೆ ಯಾವ ಆಹಾರಗಳು ಬೇಕು?

Food Beneficial For Eye Health

ಕಣ್ಣಿನ ತೊಂದರೆ ಎನ್ನುತ್ತಿದ್ದಂತೆ ಹಳೆಯ ಕಾಲದ ದಪ್ಪ ಕನ್ನಡಕದವರು ನೆನಪಾಗಬಹುದು. ಅದಿಲ್ಲದಿದ್ದರೆ ವಯಸ್ಸಾದವರು ಇಲ್ಲವೇ ಸ್ಕ್ರೀನ್‌ ನೋಡೀನೋಡಿ ಕಣ್ಣು/ ತಲೆ ಹಾಳು ಮಾಡಿಕೊಂಡವರ ಚಿತ್ರಗಳು ಕಣ್ಮುಂದೆ ಬರಬಹುದು. ಕಣ್ಣಿನ ಸಮಸ್ಯೆಗೆ ಕಾರಣಗಳು ಹಲವಾರು ಇದ್ದೀತು. ಜೊತೆಗೆ ಆಹಾರದಲ್ಲಿ ಸರಿಯಾದ ಪೋಷಣೆ ದೊರೆಯದಿದ್ದರೂ ಕಣ್ಣಿನ ತೊಂದರೆಗಳು ಮುತ್ತಿಕೊಳ್ಳುವುದು ನಿಶ್ಚಿತ. ಹಾಗಾದರೆ ಎಂಥ ಆಹಾರಗಳು (Food Beneficial For Eye Health) ನಮ್ಮ ಕಣ್ಣಿಗೆ ಬೇಕು?
ಕಣ್ಣಿನ ಪೊರೆ, ಮಧುಮೇಹಿಗಳು ಅನುಭವಿಸುವ ರೆಟಿನೋಪತಿ, ಶುಷ್ಕ ಕಣ್ಣುಗಳ ಸಮಸ್ಯೆ, ಗ್ಲುಕೋಮ, ಕುರುಡುತನ- ಇಂಥ ಸಮಸ್ಯೆಗಳು ವಯಸ್ಸಾದ ಮೇಲೆಯೇ ಬರಬೇಕೆಂದೇನಿಲ್ಲ. ಇತ್ತೀಚಿನ ದಿನಗಳಲ್ಲಿ ಕಡಿಮೆ ಪ್ರಾಯದವರಿಗೂ ಇವೆಲ್ಲ ಉಂಟಾಗುತ್ತಿವೆ. ಕೆಲವೊಮ್ಮೆ ನಂನಮ್ಮ ವಂಶವಾಹಿಗಳು ಇವುಗಳನ್ನು ನಿರ್ಧರಿಸುವುದು ಸತ್ಯವಾದರೂ, ನಾವು ತಿನ್ನುವ ಆಹಾರವೂ ಇದನ್ನು ನಿರ್ಧರಿಸುತ್ತದೆ. ಇಲ್ಲಿ ಹೇಳಿದಷ್ಟೇ ಆಹಾರಗಳು ಎಂದಲ್ಲ, ವರ್ಷವಿಡೀ ದೊರೆಯುವ ಹಣ್ಣು-ತರಕಾರಿಗಳು ಮತ್ತು ಕೆಲವು ಋತುಗಳಲ್ಲಿ ಮಾತ್ರವೇ ದೊರೆಯುವ ಪೀಚ್‌ ಹಣ್ಣು, ಕಲ್ಲಂಗಡಿ, ಚೆರ್ರಿ, ಮಾವಿನಂಥ ಹಣ್ಣುಗಳು ನಮ್ಮ ಆಹಾರದ ಭಾಗವಾಗಿದ್ದರೆ ಕಣ್ಣಿನ ಆರೋಗ್ಯಕ್ಕೆ ಮಾತ್ರವೇ ಅಲ್ಲ, ಒಟ್ಟಾರೆಯಾಗಿ ದೇಹಾರೋಗ್ಯಕ್ಕೆ ಬಹಳಷ್ಟು ಲಾಭವಿದೆ.

ಎ ಜೀವಸತ್ವ

ವಿಟಮಿನ್‌ ಎ ಸಮೃದ್ಧವಾಗಿರುವ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಪೂರಕ. ಮಕ್ಕಳಲ್ಲಿ ಉಂಟಾಗುವ ದೃಷ್ಟಿದೋಷ ನಿವಾರಣೆಗೆ, ವೈದ್ಯರ ಚಿಕಿತ್ಸೆಯ ಜೊತೆಜೊತೆಗೆ ಇಂಥ ಆಹಾರಗಳೂ ನೆರವಾಗುತ್ತವೆ. ಬೀಟಾ ಕ್ಯಾರೋಟಿನ್‌ ಹೇರಳವಾಗಿರುವ ಕ್ಯಾರೆಟ್‌, ಸಿಹಿ ಗೆಣಸು, ಕ್ಯಾಪ್ಸಿಕಂ, ಹೂಕೋಸು ಮುಂತಾದ ತರಕಾರಿಗಳು, ಪಪ್ಪಾಯಿ, ಸ್ಟ್ರಾಬೆರಿಯಂಥ ಹಣ್ಣುಗಳು ನಮ್ಮ ಆಹಾರದ ಭಾಗವಾಗಿರಲಿ.

ಇ ಜೀವಸತ್ವ

ವಿಟಮಿನ್‌ ಇ ಕೊರತೆಯಿಂದ ಕ್ಯಾಟರಾಕ್ಟ್‌ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕಣ್ಣಿನ ಪೊರೆ ಎಂದೇ ಈ ಸಮಸ್ಯೆಯನ್ನು ಕರೆಯಲಾಗುತ್ತದೆ. ವಿಟಮಿನ್‌ ಇ ಪೋಷಕಾಂಶ ಹೇರಳವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜಗಳು, ಶೇಂಗಾ ಮುಂತಾದ ಎಣ್ಣೆಕಾಳುಗಳು, ಮೆಂತೆ, ಪಾಲಕ್‌ನಂಥ ಸೊಪ್ಪುಗಳು ಕಣ್ಣಿನ ಆಹಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ.

ಒಮೇಗಾ 3ಕೊಬ್ಬಿನಾಮ್ಲ

ಒಮೇಗ 3 ಫ್ಯಾಟಿ ಆಮ್ಲಗಳು ನಮ್ಮ ಕಣ್ಣಿನ ರೆಟಿನಾ ರಕ್ಷಣೆಗೆ ಅಗತ್ಯ. ಇದಕ್ಕಾಗಿ ಬಾದಾಮಿ, ಅಗಸೆ ಬೀಜ, ಸೋಯಾ ಕಾಳುಗಳು, ವಾಲ್‌ನಟ್‌, ಅವಕಾಡೊ, ಮೊಟ್ಟೆ, ಕೆಲವು ಜಾತಿಯ ಮೀನುಗಳಲ್ಲಿ ಈ ಪೋಷಕಾಂಶ ವಿಫುಲವಾಗಿದೆ. ನಮ್ಮ ಆಹಾರ ಪದ್ಧತಿಗೆ ಸೂಕ್ತವಾಗಿದ್ದನ್ನು ಆಯ್ದುಕೊಂಡು, ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಸಿ ಜೀವಸತ್ವ

ವಿಟಮಿನ್‌ ಸಿ ನಮ್ಮ ದೃಷ್ಟಿ ರಕ್ಷಣೆಗೆ ಅತ್ಯಗತ್ಯ. ಕಿತ್ತಳೆ ಹಣ್ಣು, ಕಿವಿ ಹಣ್ಣು, ದಾಳಿಂಬೆ, ಬ್ರೊಕೋಲಿ ಮುಂತಾದ ಆಹಾರಗಳಲ್ಲಿ ಈ ಪೌಷ್ಟಿಕಾಂಶ ಹೇರಳವಾಗಿದೆ. ಮಾತ್ರವಲ್ಲ, ಸಿಟ್ರಸ್‌ ಅಂಶವಿರುವ ಹಲವಾರು ಹಣ್ಣುಗಳಲ್ಲಿ ಈ ಜೀವಸತ್ವ ನಮಗೆ ದೊರೆಯುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್‌ ಸಿ, ಕಣ್ಣಿನ ಉರಿಯೂತವನ್ನೂ ಶಮನಗೊಳಿಸುತ್ತದೆ.

ಸತು

ಜಿಂಕ್‌ ಸಹ ಸಮ್ಮ ನೇತ್ರ ರಕ್ಷಣೆಯ ಸೇನಾನಿಯೇ. ಮೊಟ್ಟೆ, ಶೇಂಗಾ, ಕಡಲೆಕಾಳು, ಹೆಸರು ಕಾಳಿನಂಥ ದ್ವಿದಳ ಧಾನ್ಯಗಳಲ್ಲಿ ಈ ಅಂಶ ವಿಫುಲವಾಗಿದೆ. ನಮ್ಮ ಕಣ್ಣುಗಳ ದೃಷ್ಟಿ ಮಸುಕಾಗದಂತೆ ಕಾಪಾಡಿಕೊಳ್ಳಲು ಇಂಥ ಆಹಾರಗಳು ಬೇಕೆಬೇಕು.

ಲೂಟಿನ್‌

ಇದನ್ನು ನೈಸರ್ಗಿಕ ಸನ್‌ಬ್ಲಾಕ್‌ ಎಂದು ಕರೆಯಬಹುದು. ಹಾನಿಕಾರಕ ಕಿರಣಗಳಿಂದ ಕಣ್ಣನ್ನು ರಕ್ಷಿಸುವಲ್ಲಿ ಇವುಗಳ ಪಾತ್ರ ಮಹತ್ವದ್ದು. ಪಾಲಕ್‌ ಸೊಪ್ಪು, ಪಿಸ್ತಾ, ಪಾರ್ಸ್ಲೆ ಸೊಪ್ಪು, ಹಸಿರು ಬಟಾಣಿ, ಮೊಟ್ಟೆ, ಕೆಂಪು ದ್ರಾಕ್ಷಿ, ಜೋಳ ಮುಂತಾದವುಗಳಿಂದ ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಲೂಟಿನ್‌ ಒದಗಿಸಬಹುದು.

ಲಿನೊಲೆನಿಕ್‌ ಆಮ್ಲ

ಲಿನೊಲೆನಿಕ್‌ ಆಮ್ಲವು ಒಮೇಗಾ 6 ಕೊಬ್ಬಿನಾಮ್ಲಗಳಲ್ಲಿ ಒಂದು. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಅಂಶಗಳಿದ್ದು, ನಮ್ಮ ತಿನ್ನುವ ಆಹಾರಗಳಲ್ಲಿ ಇದರ ಲಭ್ಯತೆ ಕಡಿಮೆ. ಪ್ರಿಮ್‌ರೋಸ್‌, ಸ್ಟಾರ್‌ಫ್ಲವರ್‌ ಮುಂತಾದ ಎಣ್ಣೆಗಳಲ್ಲಿ ಇವು ದೊರೆಯುತ್ತವೆ.

ಇದನ್ನೂ ಓದಿ: Ramphal Health Benefits: ರಾಮಫಲವೆಂಬ ಆರೋಗ್ಯಸೂತ್ರ

Exit mobile version