Site icon Vistara News

Food Habit | ಹಸಿದ ಹೊಟ್ಟೆಗೆ ಈ ಆಹಾರಗಳು ಬೇಡವೇ ಬೇಡ!

Food Habit

ಹೊಟ್ಟೆ, ನಿನ್ನಿಂದ ನಾ ಕೆಟ್ಟೆ ಎಂದು ಗೋಳಾಡುವ ಸಂದರ್ಭಗಳು ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಬಂದೇ ಇರುತ್ತದೆ. ತಿಂದ ಆಹಾರ ಅನಿರೀಕ್ಷಿತವಾಗಿ ಹೊಟ್ಟೆಯನ್ನು ಹಾಳು ಮಾಡುವುದಿದೆ. ಕೊನೆಗೆ ಎದುರಾಗುವ ಹೊಟ್ಟೆನೋವು, ವಾಂತಿ, ಡಯರಿಯಾಗಳನ್ನು ನಿಯಂತ್ರಿಸಲು ವೈದ್ಯರ ಮೊರೆ ಹೋಗಬೇಕಾಗುತ್ತದೆ. ʻಕಳೆದ ಬಾರಿ ತಿಂದಾಗ ಏನೂ ಆಗಿರಲಿಲ್ಲ. ಈ ಸಾರಿ ಯಾಕೆ ಹೀಗಾಯ್ತು?ʼ ಎಂದು ಚಿಂತಿಸುವಂತಾಗುತ್ತದೆ. ಅದರಲ್ಲೂ ಹೊಟ್ಟೆ ಹಸಿದಿದ್ದಾಗ ಸಿಕ್ಕಿದ್ದೆಲ್ಲಾ ಮುಕ್ಕಿಬಿಡುವ ಭಾವ ಬರುವುದು ಸಹಜ. ಆದರೆ ಹೆಚ್ಚಿನ ಎಚ್ಚರಿಕೆ ಬೇಕಾಗುವುದೇ ಈ ಹೊತ್ತಿನಲ್ಲಿ. ಹಾಗಾದರೆ ಯಾವೆಲ್ಲಾ ಆಹಾರಗಳನ್ನು ಹಸಿದಾಗ ತಿನ್ನಬಾರದು?

ಹುಳಿ ಹಣ್ಣುಗಳು
ಹುಳಿಯಾದ ದ್ರಾಕ್ಷಿ, ಕಿತ್ತಳೆಯಂಥ ಹಣ್ಣುಗಳು ಹಸಿದ ಹೊಟ್ಟೆಗೆ ಥರವಲ್ಲ. ಇವೆಲ್ಲಾ ಅತ್ಯಂತ ಆರೋಗ್ಯಕರ ಹಣ್ಣುಗಳೇ ಹೌದಾದರೂ, ಹಸಿದಾಗ ಇವುಗಳನ್ನು ತಿಂದರೆ ಅಸಿಡಿಟಿ, ಎದೆಯುರಿಯಂಥ ಸಮಸ್ಯೆಗಳು ಬರಬಹುದು.

ಖಾರ, ಮಸಾಲೆಯುಕ್ತ ಆಹಾರ
ಚೆನ್ನಾಗಿ ಹಸಿದ ಹೊಟ್ಟೆಗೆ ಖಾರ ಸುರಿದರೆ ಅದರ ಸ್ಥಿತಿ ಏನಾಗಬೇಡ! ಅದರಲ್ಲೂ ಬೆಳಗಿನ ತಿಂಡಿಗೆ ಸಿಕ್ಕಾಪಟ್ಟೆ ಮಸಾಲೆಯುಕ್ತ ಆಹಾರ ಖಂಡಿತಾ ಒಳ್ಳೆಯದಲ್ಲ. ದಿನವಿಡೀ ಹುಟ್ಟೆಯುರಿ, ಹುಳಿತೇಗಿನಂಥ ಸಮಸ್ಯೆಗಳು ಕಾಡಬಹುದು. ಬೆಳಗಿನ ಉಪಹಾರದಲ್ಲಿ ಖಾರ ಹಿತಮಿತವಾಗಿರಲಿ.

ಸಿಹಿಯೂ ಸಲ್ಲದು
ಹಸಿದಾಗೊಂದು ಚಾಕೊಲೇಟ್‌ ಬಾರ್‌ ಕೈಗೆ ಸಿಕ್ಕಿದರೆ…ತಿನ್ನದೇ ಇರುವುದಕ್ಕೆ ಎಂಟೆದೆ ಬೇಕು! ಆದರೆ ಹಸಿದಾಗ ಸಿಹಿ ತಿಂಡಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್‌ ಪ್ರಮಾಣದಲ್ಲಿ ತೀಷ್ಣ ಏರಿಕೆಯಾಗುತ್ತದೆ. ಇಂಥ ಅಭ್ಯಾಸದಿಂದ ಯಕೃತ್ತಿಗೆ ಕ್ರಮೇಣ ಹಾನಿಯಾಗಬಹುದು. ಹೊಟ್ಟೆ ತುಂಬಿದ ನಂತರ ಬಾಯಿ ಸಿಹಿ ಮಾಡಿಕೊಳ್ಳಿ, ಅಭ್ಯಂತರವಿಲ್ಲ.

ಸೋಡಾ
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೋಡಾ ಕುಡಿಯುವ ಮಹಾನುಭಾವರೂ ಇದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಂತೆ! ಇಡೀ ಜೀರ್ಣಾಂಗದ ಆರೋಗ್ಯವನ್ನು ಹಾಳು ಮಾಡುವುದಕ್ಕೆ ಇಂಥ ಒಂದು ಅಭ್ಯಾಸ ಸಾಕು. ದೇಹದ ಚಯಾಪಚಯ ಕ್ರಿಯೆಯನ್ನು ಅಲ್ಲಾಡಿಸಿಬಿಡುವ ಕೆಲಸವಿದು. ಕಾಫಿ, ಚಹಾಗಳನ್ನೂ ಇದೇ ಸಾಲಿಗೆ ಸೇರಿಸಿ. ಹಸಿದಾಗ ಬೇರೇನೂ ಸಿಗದಿದ್ದರೆ, ಒಂದು ಲೋಟ ಹಾಲು ಸಿಕ್ಕಿದರೂ ಅಮೃತವೇ.

ಹಸಿ ತರಕಾರಿ
ಹುಬ್ಬೇರಿಸಬೇಡಿ, ಎಲ್ಲಾ ಹಸಿ ತರಕಾರಿಗಳೂ ಹಸಿದ ಹೊಟ್ಟೆಗೆ ಸೂಕ್ತವಲ್ಲ. ಸೌತೇಕಾಯಿಯಂಥ ತರಕಾರಿಗಳು ಹಸಿದ ಹೊಟ್ಟೆಯನ್ನು ತಣಿಸಬಹುದು. ಆದರೆ ಕ್ಯಾರೆಟ್‌, ಬೀಟ್ರೂಟ್‌ನಂಥವು ಜೀರ್ಣವಾಗುವುದು ನಿಧಾನವಾಗಬಹುದು.

ಫ್ರೋಜನ್‌ ಆಹಾರ
ಐಸ್‌ ಟೀ, ಕೋಲ್ಡ್‌ ಕಾಫಿ, ಐಸ್‌ಕ್ರೀಂನಂಥವೂ ಹಸಿದ ಹೊಟ್ಟೆಯನ್ನು ಬುಡಮೇಲು ಮಾಡಬಲ್ಲವು. ಕೆಲವೊಮ್ಮೆ ಹುಳಿಯಾದ ಮೊಸರೂ ಸಹ ಹಸಿದ ಹೊಟ್ಟೆಯ ತಾಪತ್ರಯವನ್ನು ಹೆಚ್ಚಿಸುತ್ತದೆ.

ಹಾಗಾದರೆ ಹಸಿದಾಗ ಏನು ತಿನ್ನಬೇಕು ಎಂದು ಕಣ್ಣು ಕೆಂಪಾಗಿಸಬೇಡಿ. ದಾಳಿಂಬೆ, ಪಪ್ಪಾಯ, ಕಲ್ಲಂಗಡಿಯಂಥ ಮೆಲನ್‌ಗಳು, ಒಣಹಣ್ಣು ಮತ್ತು ಬೀಜಗಳು, ಅನ್ನ, ಚಪಾತಿ- ಇಂಥ ಎಲ್ಲಾ ಆಹಾರಗಳೂ ಹಸಿದ ಹೊಟ್ಟೆಯನ್ನು ತಣಿಸಬಲ್ಲವು.

ಇದನ್ನೂ ಓದಿ| Eye health foods | ಕಣ್ಣು ಆರೋಗ್ಯವಾಗಿ ಇರಬೇಕಿದ್ದರೆ ಇವನ್ನೆಲ್ಲ ತಿನ್ನುತ್ತಿರಿ!

Exit mobile version