ಚರ್ಮದ ಸೌಂದರ್ಯದ ವಿಚಾರಕ್ಕೆ ಬಂದರೆ ಎಲ್ಲರೂ ಕೊಂಚ ಹೆಚ್ಚೇ ಆಸ್ಥೆ ವಹಿಸುತ್ತೇವೆ. ತಾನು ಚೆನ್ನಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯವೇನೋ ನಿಜ. ಆದರೆ ಜಗತ್ತಿನಲ್ಲಿ ಎಲ್ಲಕ್ಕಿಂತ ಮೊದಲು ಕಣ್ಣಿಗೆ ಬೀಳುವ ಬಾಹ್ಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಶತಾಯಗತಾಯ ಪ್ರಯತ್ನಿಸುತ್ತಾರೆ. ಈ ಬಾಹ್ಯ ಸೌಂದರ್ಯ ಒಳಗಿನಿಂದ ಇರುವ ಆರೋಗ್ಯದ ಮೂಲಕವಾಗಿ ಬಂದರೆ ಆ ಕಂಗೊಳಿಸುವ ಕಾಂತಿಯೇ ಬೇರೆ. ಯಾರೇನೇ ಹೇಳಲಿ, ನಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯವಾಗುವುದು ನಾವೇನು ತಿನ್ನುತ್ತಿದ್ದೇವೆ. ಎಷ್ಟು ನೀರು ಕುಡಿಯುತ್ತಿದ್ದೇವೆ ಹಾಗೂ ಎಷ್ಟು ಆರೋಗ್ಯಕರ ಪೋಷಕಾಂಶಗಳನ್ನು ದೇಹದೊಳಕ್ಕೆ ಕಳುಹಿಸುತ್ತಿದ್ದೇವೆ ಎಂಬುದರ ಮೂಲಕವೇ ಆಗಿದೆ. ಆರೋಗ್ಯಕರ ಜೀವನಶೈಲಿ ನಮ್ಮ ಚರ್ಮದ ಆರೋಗ್ಯದ ಕೀಲಿಕೈ.
ಚರ್ಮಕ್ಕೆ ಬೇಕಾದ ಬಹಳ ಮುಖ್ಯ ಪೋಷಕಾಂಶಗಳ ಪೈಕಿ ಕೊಲಾಜೆನ್ ಬಹಳ ಮುಖ್ಯವಾದದ್ದು. ಕೊಲಾಜೆನ್ ಎಂಬ ಪ್ರೊಟೀನ್ ನಮ್ಮ ಎಲುಬು, ಕೀಲುಗಳು, ರಕ್ತ, ಮಾಂಸಖಂಡಗಳು, ಕಾರಟಿಲೇಜ್‌ಗಳು ಮತ್ತಿತರ ಎಡೆಗಳಲ್ಲಿ ಇರುವುದಲ್ಲದೆ, ಇವು ಚರ್ಮದ ಮೃದುತನವನ್ನು ಹೆಚ್ಚು ಮಾಡುತ್ತದೆ. ಇದು ಚರ್ಮದ ಆರೋಗ್ಯಯುತ ಕಳೆಯ ಹಿಂದಿನ ರಹಸ್ಯ. ಮನುಷ್ಯನೂ ಸೇರಿದಂತೆ ಎಲ್ಲ ಪ್ರಾಣಿಗಳ ದೇಹದಲ್ಲೂ ಕೊಲಾಜೆನ್ ಉತ್ಪತ್ತಿಯಾಗುತ್ತಿದ್ದು, ಇದರ ಉತ್ಪಾದನೆಗೆ ಕಾರಣವಾಗುವುದು ನಾವು ತಿನ್ನುವ ಕೆಲವು ಆಹಾರಗಳು. ಆಹಾರದಲ್ಲಿರುವ ಅಮೈನೋ ಆಸಿಡ್, ವಿಟಮಿನ್ ಚಿ, ಝಿಂಕ್, ಮ್ಯಾಂಗನೀಸ್ ಹಾಗೂ ಕಾಪರ್‌ನ ಅಂಶಗಳು ದೇಹ ಕೊಲಾಜನ್ ಉತ್ಪಾದಿಸಲು ಪ್ರೇರೇಪಿಸುತ್ತವೆ.
ಚರ್ಮದ ಆರೋಗ್ಯ ಹೆಚ್ಚಿಸುವ ಆಹಾರ ಪದ್ಧತಿ ನಿಮಗೆ ಬೇಕಿದ್ದಲ್ಲಿ ಖಂಡಿತವಾಗಿ ಈ ಪೋಷಕಾಂಶಗಳಿರುವ ಆಹಾರವನ್ನು ನಿತ್ಯವೂ ಸೇವಿಸುವುದು ಮುಖ್ಯವಾಗುತ್ತದೆ. ಹಾಗಾದರೆ, ಕೊಲಾಜೆನ್ ಉತ್ಪಾದನೆಗೆ ಪ್ರಚೋದಿಸುವ, ಚರ್ಮದ ಕಾಂತಿಯನ್ನು ಹೆಚ್ಚಿಸುವ ಸರಳ ಆಹಾರ ಯಾವುವು ಎಂಬುದನ್ನು ನೋಡೋಣ.
೧. ಚಿಕನ್: ಕೋಳಿ ಮಾಂಸ ಅಥವಾ ಚಿಕನ್ ತಿಂದರೆ ನಿಮ್ಮ ಚರ್ಮ ಹೊಳಪನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಚಿಕನ್‌ನಲ್ಲಿ ಕನೆಕ್ಟಿವ್ ಟಿಶ್ಯೂ ಹೇರಳವಾಗಿರುವುದರಿಂದ ಹಾಗೂ ಇದರಲ್ಲೇ ಅತ್ಯಧಿಕ ಕೊಲಾಜೆನ್ ಇರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
೨. ನೆಲ್ಲಿಕಾಯಿ: ನೆಲ್ಲಿಕಾಯಿ ಒಂದು ಸೂಪರ್‌ಫುಡ್. ಇದರಲ್ಲಿರುವ ವಿಟಮಿನ್ ಸಿ ಯ ಅಂಶ ಅತ್ಯಂತ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಆರೋಗ್ಯಯುತ ಚರ್ಮಕ್ಕೆ ಒಳ್ಳೆಯದು. ಇದು ರೋಗನಿರೋಧಕ ಶಕ್ತಿ ಹಾಗೂ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
ಇದನ್ನೂ ಓದಿ: Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ
೩. ಮೀನು: ಮೀನು ಕೊಲಾಜೆನ್‌ನ ಅತ್ಯಂತ ಶ್ರೀಮಂತ ಮೂಲ ಎಂದು ಹೇಳಲಾಗುತ್ತದೆ. ಸಮುದ್ರದ ಉಪ್ಪುನೀರಿನ ಹಾಗೂ ಕೆರೆಯ ಸಿಹಿನೀರಿನ ಮೀನುಗಳಲ್ಲಿ ಅಮೈನೋ ಆಸಿಡ್ ಹೇರಳವಾಗಿದ್ದು ಇವು ಕೊಲಾಜೆನ್ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
೪. ಹಾಲು ಹಾಗೂ ಡೈರಿ ಉತ್ಪನ್ನಗಳು: ಭಾರತದಲ್ಲಿ ಹಾಲಿಲ್ಲದೆ ನಮಗೆ ಒಂದು ದಿನವೂ ಮುಂದೆ ಸಾಗದು. ಹಾಲು, ಮೊಸರು, ಬೆಣ್ಣೆ, ತುಪ್ಪ, ಪನೀರ್, ಚೀಸ್ ಮತ್ತಿತರ ಆಹಾರಗಳು ಝಿಂಕ್‌ನಿಂದ ಸಮೃದ್ಧವಾಗಿರುವುದರಿಂದ ಇದು ಕೊಲಾಜೆನ್ ಉತ್ಪಾದಿಸಲು ನೆರವಾಗುತ್ತದೆ.
೫. ದಾಲ್: ದಾಲ್ ಎಂಬುದೊಂದು ಸರಳ, ಸುಲಭ ಹಾಗೂ ಅಷ್ಟೇ ಹದವಾದ ಘಮದ ನಿತ್ಯದ ಆಹಾರ. ಚಪಾತಿಯ ಜೊತೆಗೆ ನೆಂಜಿಕೊಳ್ಳಲು ದಾಲ್ ಬೇಕು. ಊಟಕ್ಕೆ ಬೆರೆಸಿ ಉಣ್ಣಲೂ ದಾಲ್ ಬೇಕು. ಈ ದಾಲ್‌ನಲ್ಲಿ ಕಾಪರ್, ಮ್ಯಾಂಗನೀಸ್ ಹೆಚ್ಚಿರುವುದರಿಂದ ಇದರಲ್ಲಿರುವ ಕಿಣ್ವಗಳು ಕೊಲಾಜೆನ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತವೆ. ಇಷ್ಟೇ ಅಲ್ಲ, ದಾಲ್ ಪ್ರೊಟೀನ್‌ಯುಕ್ತ ಸರಳವಾದ ಆರೋಗ್ಯಕರ ಆಹಾರ ಕೂಡಾ. ಇವೆಲ್ಲವುಗಳ ಸೇವನೆ ನಮ್ಮ ಆಹಾರದ ಜೊತೆ ಸೇರಿದರೆ, ಕೊಲಾಜೆನ್ ಉತ್ಪಾದನೆಯನ್ನು ಪ್ರೇರೇಪಿಸಿ ಮುಖದ ಚರ್ಮ ಸಹಜವಾಗಿಯೇ ಕಾಂತಿಯುತವಾಗಿ ಕಂಗೊಳಿಸುವಲ್ಲಿ ನೆರವಾಗುತ್ತವೆ.
ಇದನ್ನೂ ಓದಿ: Skin Care: ಋತುಬಂಧದ ನಂತರ ಚರ್ಮದ ಆರೈಕೆ ಹೇಗಿರಬೇಕು?