Site icon Vistara News

Foot care | ಒಡೆದ ಹಿಮ್ಮಡಿಗಳನ್ನು ಕೂಡಿಸಲು ಇವುಗಳನ್ನು ಪ್ರಯತ್ನಿಸಿ

foot

ನಮ್ಮ ಶರೀರದ ಆರೈಕೆ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ಮರೆತುಬಿಡುವ ಒಂದು ಅಂಗವೆಂದರೆ ನಮ್ಮ ಪಾದ. ʻದಪ್ಪ ಚರ್ಮʼದ ಈ ಅಂಗ ನಮ್ಮ ನಿರಾಸಕ್ತಿಗೆ ಬೇಸರಗೊಳ್ಳದೆ ನಮ್ಮೆಲ್ಲಾ ಚಟುವಟಿಕೆಗಳಿಗೆ ಊರುಗೋಲಿನಂತೆ ನಿಲ್ಲುತ್ತದೆ. ಅಂಥ ಪಾದಗಳ ಆರೈಕೆಯ ಬಗ್ಗೆ ಕೆಲವು ಮಾತು.

ನಮ್ಮ ದೇಹದ ಉಳಿದೆಲ್ಲಾ ಅಂಗಗಳ ಹಾಗೆಯೇ ಪಾದಗಳಿಗೂ ಸಾಕಷ್ಟು ಪ್ರಮಾಣದಲ್ಲಿ ತೇವ ಮತ್ತು ಎಣ್ಣೆಯಂಶದ ಅಗತ್ಯವಿದೆ. ಅವುಗಳನ್ನು ಕಾಲಕಾಲಕ್ಕೆ ತೊಳೆದು ಶುಚಿಯಾಗಿಟ್ಟುಕೊಂಡು, ಮಾಯಿಶ್ಚರೈಸ್‌ ಮಾಡದಿದ್ದರೆ ಹಿಮ್ಮಡಿ ಒಡಕು ಕಟ್ಟಿಟ್ಟಿದ್ದು. ಬೇಸಿಗೆಯಲ್ಲಿ ಶರೀರದಲ್ಲಿ ನೀರಿನಂಶ ಕಡಿಮೆಯಾಗಿ ಹಿಮ್ಮಡಿ ಒಡೆದರೆ, ಮಳೆಗಾಲದಲ್ಲಿ ಅತಿತೇವ ಕೆಲವರಿಗೆ ಸಮಸ್ಯೆ ನೀಡುತ್ತದೆ. ಇನ್ನು ಚಳಿಗಾಲದ ಒಣಹವೆ ಬಹಳಷ್ಟು ಜನರಲ್ಲಿ ಹಿಮ್ಮಡಿ ಒಡಕು ತರುತ್ತದೆ. ಇದರಿಂದ ನೋಡುವುದಕ್ಕೆ ಹಿಮ್ಮಡಿಗಳು ವಿಚಿತ್ರವಾಗಿ ಕಾಣುವುದು ಮಾತ್ರವೇ ಅಲ್ಲ, ವಿಪರೀತ ನೋವುಂಟು ಮಾಡುತ್ತವೆ. ಸರಿಯಾದ ಚಿಕಿತ್ಸೆ ದೊರೆಯದಿದ್ದರೆ, ಬಿರುಕುಗಳು ಆಳವಾಗಿ, ಕೆಂಪಾಗಿ, ಊದಿಕೊಂಡು, ಕೆಲವೊಮ್ಮೆ ರಕ್ತ ಸೋರಿ ಹೆಜ್ಜೆ ಇಡಲೂ ಕಷ್ಟ ಎನ್ನುವಷ್ಟು ನೋವು ಕೊಡುತ್ತವೆ.

ಏನು ಮಾಡಬಹುದು?: ಮೊದಲಿಗೆ ಸಾಕಷ್ಟು ನೀರು ಕುಡಿಯಿರಿ. ಶರೀರದಲ್ಲಿ ನೀರಿನಂಶ ಕಡಿಮೆಯಾದರೆ ಚರ್ಮ ಒಣಗಿದಂತಾಗುತ್ತದೆ. ಪಾದ ಮಾತ್ರವೇ ಅಲ್ಲ, ಒಟ್ಟಾರೆಯಾಗಿ ಚರ್ಮದ ಆರೋಗ್ಯ ಇದರಿಂದ ಸುಧಾರಿಸುತ್ತದೆ.

ಇದನ್ನೂ ಓದಿ | ಯುವಪೀಳಿಗೆಯಲ್ಲಿ ಟ್ರೆಂಡ್‌ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ

ಕ್ರೀಮ್‌ ಬೇಕು: ಪಾದಗಳನ್ನು ಶುಚಿಗೊಳಿಸಿದ ನಂತರ ಆಳವಾಗಿ ಮಾಯಿಶ್ಚರೈಸ್‌ ಮಾಡುವಂಥ ಕ್ರೀಮ್‌ ಹಚ್ಚಿ. ಚರ್ಮದೊಳಗೆ ಈ ಕ್ರೀಮ್‌ ಮಾಯವಾಗುವ ಮುನ್ನ ಹೆಚ್ಚು ಓಡಾಡಿದರೆ ನೆಲದ ಕೊಳೆಯೆಲ್ಲ ಕಾಲಿಗೆ ಅಂಟಿಕೊಂಡು, ಮಾಡಿದ್ದೆಲ್ಲಾ ಹೊಳೆಯಲ್ಲಿನ ಹೋಮವಾಗುತ್ತದೆ. ಆಗೆ ಓಡಾಡುವುದು ಅನಿವಾರ್ಯವಾದರೆ ಸಾಕ್ಸ್‌ ಹಾಕಿ. ಇದನ್ನು ದಿನಕ್ಕೆ ಮೂರ್ನಾಲ್ಕು ಬಾರಿ ಮಾಡುವುದು ಒಳಿತು.

ಒಣ ಚರ್ಮ ತೆಗೆಯಿರಿ: ಬಿರುಕುಗಳು ಆಳವಾಗಿದ್ದರೆ ಒಳಗಿನ ಕೊಳೆ ಮತ್ತು ಒಣ ಚರ್ಮವನ್ನು ತೆಗೆಯುವುದು ಸುಲಭವಲ್ಲ. ಉಗುರು ಬಿಸಿ ನೀರಿನಲ್ಲಿ ಸ್ವಲ್ಪ ಹ್ಯಾಂಡ್‌ ಸೋಪ್‌ ಹಾಕಿ ಪಾದಗಳನ್ನು ೧೫ ನಿಮಿಷ ನೆನೆಸಿಡಿ. ಹದವಾದ ಬಿಸಿ ನೀರಿನಲ್ಲಿ ಪಾದ ನೆನೆಸಿ ಕುಳಿತುಕೊಳ್ಳುವುದು ಮನಸ್ಸಿಗೂ ಆರಾಮದಾಯಕ. ನಂತರ ಮೃದುವಾದ ಬ್ರಶ್ಶಿನಿಂದ ಅಥವಾ ಯಾವುದಾದರೂ ಸ್ಕ್ರಬ್‌ನಿಂದ ಪಾದವನ್ನು ಉಜ್ಜಿ ಕೊಳೆ ಮತ್ತು ಒಣ ಚರ್ಮವನ್ನು ತೆಗೆಯಿರಿ. ಪಾದ ಒಣಗಿದ ಮೇಲೆ ಚನ್ನಾಗಿ ಕ್ರೀಮ್‌ ಹಚ್ಚಿ. ಪೆಡಿಕ್ಯೂರ್‌ ಮಾಡಿಸಿಕೊಳ್ಳುವುದು ಈ ಇಡೀ ಪ್ರಕ್ರಿಯೆನ್ನು ಸುಲಭ ಮಾಡುತ್ತದೆ.

ಬಿಸಿ ನೀರಲ್ಲಿ ಮತ್ತೆಮತ್ತೆ ಕಾಲಿಟ್ಟುಕೊಳ್ಳಬೇಕೆನಿಸಿದರೆ, ನೀರಿಗೆ ಎಪ್ಸಮ್‌ ಸಾಲ್ಟ್‌ (ಮೆಗ್ನೀಶಿಯಂ ಸಲ್ಫೇಟ್)‌ ಮತ್ತು ಒಂದೆರಡು ಹನಿಗಳು ಯಾವುದಾದರೂ ಎಸೆನ್ಶಿಯಲ್‌ ಆಯಿಲ್‌ (ಲಾವೆಂಡರ್‌, ಪೆಪ್ಪರ್‌ಮಿಂಟ್…‌ ಇಂಥವು) ಸೇರಿಸಿ. ಇದು ಸಹ ಉತ್ತಮ ಫಲಿತಾಂಶ ನೀಡುತ್ತದೆ.

ಅಲೋವೇರಾ ಜೆಲ್:‌ ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ಶುಚಿ ಮಾಡಿ. ಘನವಾಗಿ ಅಲೋವೇರಾ ಜೆಲ್‌ ಹಚ್ಚಿ, ಸಾಕ್ಸ್‌ ಹಾಕಿಯೇ ಮಲಗಿ. ವಿಧಾನ ಯಾವುದೇ ಅನುಸರಿಸಿದರೂ, ಅವುಗಳನ್ನು ಬೇಸರಗೊಳ್ಳದೆ ಮಾಡಬೇಕಾಗುತ್ತದೆ. ಆಗ ಮಾತ್ರ ಹಿಮ್ಮಡಿ ಒಡಕು ಸುಧಾರಿಸಲು ಸಾಧ್ಯ. ಇಷ್ಟಾಗಿಯೂ ಹಿಮ್ಮಡಿ ಒಡಕು ಹೆಚ್ಚುತ್ತಲೇ ಇದ್ದರೆ ವೈದ್ಯೋಪಚಾರ ಅಗತ್ಯವಾಗುತ್ತದೆ.

ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?

Exit mobile version