ಬೆಳ್ಳುಳ್ಳಿಯನ್ನು ಕಂಡರೆ ಮೂಗು ಮುರಿವವರೇ ಹೆಚ್ಚು. ವಾಸನೆ ಎಂದು ಅದನ್ನು ದೂರ ತಳ್ಳುವುದು ಸಾಮಾನ್ಯ. ಬೆಳ್ಳುಳ್ಳಿ ತಿಂದು ಆತ್ಮೀಯರ ಬಳಿ ಪ್ರೀತಿಯಿಂದ ಹತ್ತಿರದಲ್ಲಿ ಕುಳಿತು ಹರಟಿದರೆ, ಜೊತೆಗಿದ್ದವರ ಕತೆ ಮುಗಿದಂತೆಯೇ ಎಂಬುದು ಹಲವರ ವಾದ. ಇದು ಸ್ವಲ್ಪ ಮಟ್ಟಿಗೆ ನಿಜವೂ ಕೂಡಾ. ಬೆಳ್ಳುಳ್ಳಿಯ ಗಾಢ ವಾಸನೆ ತಿಂದ ಮೇಲೆ ಬಹಳ ಹೊತ್ತು ಬಾಯಿಯಲ್ಲಿಯೇ ಇರುವ ಕಾರಣದಿಂದ ಹತ್ತಿರ ನಿಂತು ಮಾತನಾಡುತ್ತಿದ್ದರೆ, ಪಕ್ಕದಲ್ಲಿದ್ದವರಿಗೆ ವಾಸನೆ ಅನಿಸಬಹುದು. ಆದರೆ, ಬೆಳ್ಳುಳ್ಳಿ ವಾಸನೆಯೆಂದು ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕೆಂದರೆ, ಕೇವಲ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಗಾದೆಯೇನೋ ನಿಜವೇ. ಆದರೆ, ಒಂದು ಬೆಳ್ಳುಳ್ಳಿ ಎಸಳನ್ನು ದಿನನಿತ್ಯ ತಿಂದರೂ ಕೂಡಾ ವೈದ್ಯರಿಂದ ದೂರವಿರಬಹುದು. ಯಾಕೆಂದರೆ ಬೆಳ್ಳುಳ್ಳಿ ಬಹುಪಯೋಗಿ!
೧. ಬೆಳ್ಳುಳ್ಳಿಯ ಉಪಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಗಾಗ ಆರೋಗ್ಯ ಹದಗೆಡುವ, ಆಗಾಗ ಶೀತ, ಕೆಮ್ಮು, ಜ್ವರ, ತಲೆನೋವು ಕಾಡುವಮಂದಿಗೆ ಇದು ಉತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದೊಂದು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲ ಸಮಸ್ಯೆಗಳೂ ದೂರವಾಗಿ ಆರೋಗ್ಯ ಕಾಣುವಂತಾಗುತ್ತದೆ.
೨. ಅಧಿಕ ರಕ್ತದೊತ್ತಡವನ್ನು ಇದು ಸಮತೋಲನಕ್ಕೆ ತರುತ್ತದೆ. ಜಗತ್ತಿನಾದ್ಯಂತ ಹೃದಯದ ಸಮಸ್ಯೆಗಗೆ ಪ್ರಮುಖವಾದ ಕಾರಣ ಎಂದರೆ, ಅದು ಅಧಿಕ ರಕ್ತದೊತ್ತಡ. ಇದೇ ಬಹಳಷ್ಟು ಸಾರಿ ಶೇಕಡಾ ೭೦ರಷ್ಟು ಮಂದಿಯಲ್ಲಿ ಪಾರ್ಶ್ವವಾಯು ಹಾಗೂ ಹೃದಯಾಘಾತವನ್ನೂ ತರುತ್ತದೆ. ಬಹಳ ಸಾರಿ ಸಾವಿಗೂ ಕಾರಣವಾಗುತ್ತದೆ. ಬೆಳ್ಳುಳ್ಳಿ ಇಂತಹ ತೊಂದರೆಯನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಸಮತೋಲನಕ್ಕೆ ತರುವಲ್ಲಿ ಬೆಳ್ಳುಳ್ಳಿ ಸಹಕಾರಿ. ಆದರೆ, ಇದನ್ನು ತಿನ್ನುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳುವುದು ಒಳ್ಳೆಯದು.
೩. ಕೊಲೆಸ್ಟೆರಾಲ್ ಮಟ್ಟವನ್ನೂ ಬೆಳ್ಳುಳ್ಳಿ ತಗ್ಗಿಸುವಲ್ಲಿ ನೆರವಾಗುತ್ತದೆ. ಸುಮಾರು ಶೇ. ೧೦ರಿಂದ ೧೫ರಷ್ಟು ಕೆಟ್ಟ ಕೊಲೆಸ್ಟೆರಾಲನ್ನು ಬೆಳ್ಳುಳ್ಳಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೪. ಕ್ಯಾನ್ಸರ್‌ಗೂ ಬೆಳ್ಳುಳ್ಳಿ ಒಳ್ಳೆಯದು. ಕೊಲೋನ್ ಕ್ಯಾನ್ಸರ್ ಬರದಂತೆ ತಪ್ಪಿಸುವಲ್ಲಿ ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಎಂದು ಇತ್ತೀಚೆಗಿನ ಸಂಶೋಧನೆಗಳು ತಿಳಿಸಿವೆ.
೫. ಬೆಳ್ಳುಳ್ಳಿಯಲ್ಲಿ ಆಂಟಿ ಬಯಾಟಿಕ್ ಗುಣಗಳು ಹೆಚ್ಚಿರುವುದರಿಂದ ಹಲವಾರು ವಿಷಯಗಳಲ್ಲಿ ದೇಹಕ್ಕೆ ಇದು ನೆರವಾಗುತ್ತದೆ. ಮುಖ್ಯವಾಗಿ ದೇಹದಲ್ಲಿ ಬ್ಯಾಕ್ಟೀರಿಯಾ, ಫಂಗಸ್, ಪ್ರೊಟೋಝೋವಾ, ವೈರಲ್ ಇನ್‌ಫೆಕ್ಷನ್‌ಗಳು ಇತ್ಯಾದಿಗಳೆಲ್ಲವುಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.
ಇದನ್ನೂ ಓದಿ | Caffeine effects | ನಿಮ್ಮ ಕಳಾಹೀನ ಚರ್ಮದ ರಹಸ್ಯ ಅತಿಯಾದ ಕಾಫಿ ಸೇವನೆಯೂ ಆಗಿರಬಹುದು!
೬.ಬೆಳ್ಳುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಅಲ್ಝೀಮರ್ ಹಾಗೂ ಡಿಮೆನ್ಶಿಯಾದಂತಹ ಮರೆವಿನ ಕಾಯಿಲೆ ಬರದಂತೆ ರಕ್ಷಿಸುತ್ತದೆ. ಹಾಗಂತ ಬರುವುದೇ ಇಲ್ಲ ಎಂದಲ್ಲ, ಅಥವಾ ಬಂದ ಕಾಯಿಲೆಯ್ನು ಗುಣ ಪಡಿಸುತ್ತದೆ ಎಂದೂ ಅಲ್ಲ. ಆದರೆ, ಇದರಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಈ ಎಲ್ಲ ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದು ಅರ್ಥ.
೭. ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಕಳಿಸಿ ಆಗಾಗ ನಮ್ಮ ಜೀರ್ಣಕ್ರಿಯೆಯನ್ನು ಬಲಗೊಳಿಸುವ ಕೆಲಸವನ್ನು ನಾವು ಆಗಾಗ ಮಾಡಬೇಕಾಗುತ್ತದೆ. ಇಂತಹ ಡಿಟಾಕ್ಸ್ ಪ್ರಕ್ರಿಯೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿದರೆ ಆರೋಗ್ಯವೃದ್ಧಿಯಾಗಬಹುದು.
೮. ಇದು ಎಲುಬನ್ನು ಗಟ್ಟಿಗೊಳಿಸುವುದಲ್ಲದೆ, ಇವು ಗಾಯಗೊಳ್ಳುವುದನ್ನು, ತೊಂದರೆಗೊಳಪಡುವುದನ್ನು ತಪ್ಪಿಸುತ್ತದೆ.
೯. ನಿತ್ಯ ಬೆಳ್ಳುಳ್ಳಿ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ.
೧೦ ಕಾಲು ನೋವು, ಕೀಲುನೋವು, ಸಂಧಿನೋವುಗಳು ಮತ್ತಿತರ ಗಂಟು ನೋವುಗಳಿಗೆ ಬೆಳ್ಳುಳ್ಳಿ ಎಣ್ಣೆ ರಾಮಬಾಣ. ಬೆಳ್ಳಿಳ್ಳಿ ಎಸಳನ್ನು ಹಾಕಿ ಮಾಡಿದ ಎಣ್ಣೆಯನ್ನು ಹಚ್ಚುತ್ತಾ ಬಂದಲ್ಲಿ ಸಾಕಷ್ಟು ಪ್ರಯೋಜನ ಕಾಣಬಹುದು.
ಬೆಳ್ಳುಳ್ಳಿಯನ್ನು ತಮ್ಮ ಆರೋಯ ಸಮಸ್ಯೆಗಳಿಗೆ ನಿತ್ಯ ತಿನ್ನಬಯಸುವವರು ತಿನ್ನುವ ಮೊದಲು ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಉತ್ತಮ.
ಇದನ್ನೂ ಓದಿ | Headache types | ಇದು ತಲೆ ಇದ್ದವರ ಸಮಸ್ಯೆ! ತಲೆನೋವಿಗೆ ಪರಿಹಾರವೇನು?