Site icon Vistara News

Ginger Benefits: ಒಣಶುಂಠಿಯೋ, ಹಸಿಶುಂಠಿಯೋ? ಆರೋಗ್ಯದ ವಿಚಾರದಲ್ಲಿ ಯಾವುದು ನಿಜವಾದ ಹೀರೋ ಗೊತ್ತೇ?

ginger

ಒಣಶುಂಠಿ (dry ginger) ಹಾಗೂ ಹಸಿಶುಂಠಿಗಳೆರಡೂ (fresh ginger) ಗುಣದಲ್ಲಿ ಒಂದೇ ಸಮಾನರು ಎಂದು ನೀವು ಅಂದುಕೊಂಡರೆ ಅದು ಸುಳ್ಳು ಎಂಬ ಸತ್ಯದ ಬಗೆಗೆ ನಿಮಗೆ ಅರಿವಿದೆಯೇ? ಹೌದು, ಗುಣದಲ್ಲಿ ಒಣಶುಂಠಿಗೂ ಹಸಿಶುಂಠಿಗೂ (ginger benefits) ಸಾಕಷ್ಟು ವ್ಯತ್ಯಾಸವಿದೆ. ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿಗಳಿಗೆ ನಿತ್ಯವೂ ನಾವು ನೆಚ್ಚಿಕೊಂಡಿರುವ ಶುಂಠಿಯಲ್ಲೂ ಒಣ ಹಾಗೂ ಹಸಿಗಳೆಂಬ ಎರಡು ವಿಧಗಳಲ್ಲಿ ಬಹಳ ವ್ಯತ್ಯಾಸವಿದೆ ಎಂಬುದನ್ನು ನೀವು ಬಳಸುವ ಮುನ್ನ ತಿಳಿದುಕೊಂಡಿರಬೇಕು. ಇಂಥ ಮನೆಮದ್ದಿಗೆ (home medicine) ಯಾವುದೇ ಶುಂಠಿಯಾದರೂ ತೊಂದರೆಯಿಲ್ಲ ಎಂಬ ನಂಬಿಕೆ ಈವರೆಗೆ ನಿಮಗಿದ್ದರೆ, ಅದನ್ನೊಮ್ಮೆ ಮನಸ್ಸಿನಿಂದ ತೆಗೆದು ಹಾಕಿ. ಯಾಕೆಂದರೆ, ಗುಣದಲ್ಲಿ ಒಣಶುಂಠಿಯ ಸಮಕ್ಕೆ ಹಸಿಶುಂಠಿ ನಿಲ್ಲದು. ಒಣಶುಂಠಿಯೇ ಇಲ್ಲಿ ನಿಜವಾದ ಹೀರೋ! ಯಾಕೆ ಒಣಶುಂಠಿ ಹೀರೋ ಎಂದು ತಿಳಿಯಬೇಕಾದರೆ ಇಲ್ಲಿ ಓದಿ!

ಆಯುರ್ವೇದದ (Ayurveda) ಪ್ರಕಾರ, ತ್ರಿದೋಷಗಳ ಪೈಕಿ ವಾತವನ್ನು ಹಸಿಶುಂಠಿ ಹೆಚ್ಚಿಸುತ್ತದೆ. ಇದರಲ್ಲಿ ಹೆಚ್ಚು ವಾತಕಾರಕ ಗುಣಗಳಿವೆ. ಆದರೆ, ಒಣಶುಂಠಿ ವಾತವನ್ನು ಸಮತೋಲನದಲ್ಲಿಡುವ ಕೆಲಸ ಮಾಡುತ್ತದೆ. ಹಾಗಾಗಿ ಯಾವಾಗಲೂ, ಹೊಟ್ಟೆಯುಬ್ಬರ ಅಥವಾ ಬ್ಲೋಟಿಂಗ್‌ ಸಮಸ್ಯೆ ಬಂದಾಗ ಹಸಿ ಶುಂಠಿಯನ್ನು ತಿನ್ನುವುದರಿಂದಲೋ ಅಥವಾ ಶುಂಠಿ ಚಹಾ ಮಾಡಿ ಕುಡಿಯುವುದಲೋ ಸಮಸ್ಯೆಗೆ ಪರಿಹಾರ ಪಡೆಯಲೆತ್ನಿಸುವುದು ಒಳ್ಳೆಯ ಐಡಿಯಾ ಅಲ್ಲ. ಬದಲಾಗಿ ಒಣಶುಂಠಿಯ ನೀರು ಮಾಡಿ ಕುಡಿಯಿರಿ. ಸಮಸ್ಯೆಗೆ ಉತ್ತಮ ಪರಿಣಾಮ ಕಾಣುವಿರಿ.

ಒಣಶುಂಠಿ ಮಲಬದ್ಧತೆಗೆ ಅತ್ಯಂತ ಒಳ್ಳೆಯದು ಎಂಬುದು ನಿಮಗೆ ಗೊತ್ತೇ? ಮಲಬದ್ಧತೆಯ ಸಮಸ್ಯೆಯಿರುವ ಮಂದಿ ಅಂದರೆ, ಬೆಳಗ್ಗೆ ಎದ್ದ ಕೂಡಲೇ ಮಲವಿಸರ್ಜನೆ ಕಷ್ಟವಾಗುವ ಮಂದಿ ಒಂದು ಲೋಟ ಒಣಶುಂಠಿಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಒಣಶುಂಠಿಯಲ್ಲಿರುವ ಲ್ಯಾಕ್ಸೇಟಿವ್‌ ಹಾಗೂ ಹೀರುವ ಗುಣಗಳು ಮಲಬದ್ಧತೆಯ ಸಮಸ್ಯೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ನೀವು ಬಹುಬೇಗನೆ ಮುಕ್ತಿ ಹೊಂದಬಹುದು.

ಒಣಶುಂಠಿಯಲ್ಲಿ ಒಣಗುವ ಗುಣ ಇಲ್ಲದಿರುವುದರಿಂದ ಹಾಗೂ ಮೊದಲೇ ಒಣಗಿರುವುದರಿಂದ ಸರ್ವಕಾಲಕ್ಕೂ ಸಲ್ಲುವ ಹಾಗೂ ದೀರ್ಘಕಾಲಿಕ ಬಳಕೆಗೆ ಇದು ಸೂಕ್ತ. ಆದರೆ, ಹಸಿ ಶುಂಠಿಯಲ್ಲಿ ರೂಕ್ಷ ಗುಣಗಳಿದ್ದು ಅದರಲ್ಲಿ ಒಣಗುವ ಗುಣವಿದೆ. ಹಾಗಾಗಿ, ಯಾವಾಗಲಾದರೊಮ್ಮೆ ಹಸಿ ಶುಂಠಿ ಬಳಸಿದರೆ ತೊಂದರೆಯಿಲ್ಲ.

ಹಸಿ ಶುಂಠಿಯಲ್ಲಿ ಕಫ ಹೆಚ್ಚು ಮಾಡುವ ಗುಣಗಳೂ ಇವೆ ಎಂಬುದನ್ನು ಆಯುರ್ವೇದ ಹೇಳುತ್ತದೆ. ಆಯುರ್ವೇದದ ಪ್ರಕಾರ ಒಣಶುಂಠಿ ಕಫ ಕಡಿಮೆ ಮಾಡುವಲ್ಲಿ ಹೆಚ್ಚು ಫಲ ನೀಡುತ್ತದೆ. ಹಾಗಾಗಿ ಒಣಶುಂಠಿಯ ನೀರು, ಋತು ಬದಲಾವಣೆಯಿಂದ ಬರುವ ಶೀತ, ನೆಗಡಿ, ಜ್ವರ, ಕೆಮ್ಮಿನಂತಹ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ನೀಡುತ್ತದೆ. ಒಳಗೇ ಸಂಗ್ರಹವಾಗಿರುವ ಕಫವನ್ನು ಹೊರಗೆ ಕಳುಹಿಸಲು ಇದು ಅತ್ಯಂತ ಒಳ್ಳೆಯದು. ಅಷ್ಟೇ ಅಲ್ಲ, ಶ್ವಾಸನಾಳ ಹಾಗೂ ಮೇಲ್ಭಾಗದ ಶ್ವಾಸಕೋಶದ ಸಮಸ್ಯೆಗಳಿಗೂ ಇದು ರಾಮಬಾಣ.

ಹಾಗಾದರೆ ಈ ಒಣಶುಂಠಿ ನೀರನ್ನು ಮಾಡುವುದು ಹೇಗೆ ಎಂಬ ಯೋಚನೆ ನಿಮ್ಮಲ್ಲಿ ಬಂದಿರಬಹುದು ಅಲ್ಲವೇ? ಇಲ್ಲಿ ಕೇಳಿ. ಒಂದು ಇಂಚು ಒಣಶುಂಠಿ ತುಂಡು ಅಥವಾ ಒಂದೆರಡು ಚಮಚ ಒಣಶುಂಠಿ ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಅದನ್ನು ಚೆನ್ನಾಗಿ ಹಾಗೆಯೇ ಕುದಿಯಲು ಬಿಡಿ. ಸುಮಾರು ಎರಡು ಲೋಟ ನೀರಿಗೆ ಇಷ್ಟನ್ನು ಹಾಕಿ ಕುದಿಸಬಹುದು. ಈ ಎರಡು ಲೋಟ ನೀರು ಕುದಿದು ಕುದಿದು, ಸುಮಾರು ಒಂದು ಲೋಟವಾಗುವಷ್ಟು ಬತ್ತಿದ ಮೇಲೆ ಈ ನೀರನ್ನು ಸೋಸಿಕೊಂಡು ಕುಡಿಯಿರಿ. ಈ ಒಣ ಶುಂಠಿ ನೀರು ಬಹಳಷ್ಟು ಸಮಸ್ಯೆಗಳನ್ನು ದೂರ ಮಾಡುತ್ತದೆ.

ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!

Exit mobile version