ಕೆಲವೊಮ್ಮೆ ಸಮಸ್ಯೆ ಸಣ್ಣದಿರಬಹುದು, ಆದರೆ, ಅದರ ಪರಿಣಾಮ ಕಾಡದೆ ಬಿಡುವುದಿಲ್ಲ. ಮುಖದ ಮೇಲಿನ ಪುಟ್ಟ ಸಮಸ್ಯೆಯೂ ಸಣ್ಣಮಟ್ಟಿನ ಕೀಳರಿಮೆ ತರಬಹುದು. ಪುಟ್ಟ ಕಲೆಯೂ ದೊಡ್ಡದೆಂದು ಅನಿಸಬಹುದು. ಅಂಥದ್ದರಲ್ಲಿ ಕನ್ನಡಕ ಬಳಸುವ ಮಂದಿಯ ಸಮಸ್ಯೆಯೂ ಸಣ್ಣದೇನಲ್ಲ. ಕನ್ನಡಕವನ್ನು ನಿತ್ಯ ಬಳಸುವ ಮಂದಿಯದ್ದೆಲ್ಲ ಒಂದೇ ಅಳಲು. ಅದು ಕಣ್ಣ ಬದಿಯಲ್ಲಿ ಕನ್ನಡಕ ಉಳಿಸಿಹೋಗುವ ಕಲೆ!
ಹೌದು ಹೇಳಲು, ಕೇಳಲು ಇದು ಸಮಸ್ಯೆಯೇ ಅಲ್ಲ. ಕಣ್ಣ ಬದಿಯಲ್ಲಿ ಹಾಗೆ ಉಳಿದುಬಿಡುವ ಪುಟ್ಟ ಗುಳಿಯಂತ ಕಲೆ ದೊಡ್ಡದೇನಲ್ಲ. ಒಂದು ಸಣ್ಣ ಕಲೆಗೆ ಇಷ್ಟೆಲ್ಲ ತಲೆ ಕೆಡಿಸಬೇಕಾ ಎಂದು ಯೋಚನೆಯೂ ಬರಬಹುದು. ಆದರೆ, ಕನ್ನಡಕ ನಿತ್ಯ ಬಳಸುವ ಮಂದಿ ಒಮ್ಮೆ ಕಣ್ಣಿನಿಂದ ಕನ್ನಡಕ ತೆಗೆದು ಕೆಳಗಿಟ್ಟಾಗ, ಅರೆ, ಎಷ್ಟು ವಯಸ್ಸಾದಂತೆ ಕಾಣಿಸುತ್ತಿದ್ದೇನಲ್ಲಾ, ಕಣ್ಣು ಒಳಗಿಳಿದು ಹೋದಂತೆ ಮುಖ ನಿಸ್ತೇಜವಾದಂತೆ ಅನಿಸಬಹುದು. ಹಾಗಾಗಿ, ಇದು ಸಮಸ್ಯೆಯಲ್ಲದ ಸಮಸ್ಯೆಯೇ. ಇಂಥ ಗುಳಿ ಕಲೆಯ ಬಗ್ಗೆ ಮೊದಲೇ ಗಮನ ಹರಿಸಿದರೆ ಮಾತ್ರ ಕಲೆಯಾಗದಿರುವಂತೆ ತಡೆಬಹುದು. ಇಲ್ಲವಾದಲ್ಲಿ ಶಾಶ್ವತವಾಗಿ ಕಲೆ ಉಳಿದುಬಿಡಬಹುದು ಎಂಬುದು ಗೊತ್ತೇ.
ಕನ್ನಡಕದಿಂದ ಪಾರಾಗಲು ಕಾಂಟಾಕ್ಟ್ ಲೆನ್ಸ್ ಇನ್ನೊಂದು ದಾರಿಯೇನೋ ನಿಜ, ಹಾಗೆ ಸಲಹೆ ಕೊಡುವುದೂ ಸುಲಭವೇ. ಆದರೆ, ಪ್ರತಿದಿನವೂ ಕಾಂಟಾಕ್ಟ್ ಲೆನ್ಸ್ ಬಳಸುವುದು ಬಹಳ ಮಂದಿ ಇಷ್ಟ ಪಡುವುದಿಲ್ಲ. ಆದರೆ, ಕನ್ನಡಕವೆಂಬುದು ಸಾಮಾನ್ಯರಿಗೆ ಸುಲಭವಾಗಿ ಸರಳವಾಗಿ ಕಂಫರ್ಟ್‌ಗೆ ಒಗ್ಗುವ ದಾರಿ. ಆದರೆ, ಇದು ಉಳಿಸಿಹೋಗುವ ಈ ಕಲೆಗೆ ಮದ್ದೆಲ್ಲಿದೆ?
ಈ ಕಲೆ ಆಗುವುದು ಮೂಗಿನ ಎರಡೂ ಬದಿ ಕಣ್ಣಿನ ಪಕ್ಕ ಕನ್ನಡಕದಿಂದ ಬೀಳುವ ಒತ್ತಡದಿಂದ. ಇದರ ಭಾರದಿಂದ ಒಂದೇ ಜಾಗದಲ್ಲಿ ಒತ್ತಡ ಬಿದ್ದು ಅಲ್ಲಿ ಶಾಶ್ವತವಾಗಿ ಕಪ್ಪಾದ ಕಲೆಗಳಂತೆ ಸಣ್ಣ ಗುಳಿಗಳಾಗುತ್ತದೆ. ಆದರೆ ಈ ಕಲೆಗಳಾಗದಂತೆ ಮೊದಲೇ ಕೊಂಚ ಜಾಗರೂಕತೆ ವಹಿಸಿಕೊಂಡರೆ, ನಿಮ್ಮ ಮುಖ ಕನ್ನಡಕ ನಿತ್ಯ ಧರಿಸುವ ಮುಖವೆಂದು ಯಾರೂ ಗುರುತಿಸಲಾರರು. ಹಾಗಾದರೆ, ಚಿಂತೆ ಮಾಡುವ ಮೊದಲು ಯಾವ ಕ್ರಮ ಕೈಗೊಳ್ಳಬಹುದೆಂಬುದನ್ನು ನೋಡಿ.
೧. ಕನ್ನಡಕ ಖರೀದಿಸುವಾಗ ಆದಷ್ಟು ಹಗುರವಾದ ಕನ್ನಡಕ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಮ್ಮ ಕಣ್ಣಿನ ಪಕ್ಕ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಕಲೆ ಬೀಳುವುದಿಲ್ಲ.
೨. ಸಿಲಿಕಾನ್ ನೋಸ್ ಪ್ಯಾಡ್‌ಗಳಿರುವ ಕನ್ನಡಕ ಖರೀದಿಸುವ ಆಯ್ಕೆಯನ್ನು ಸೈಡಿಗಿಟ್ಟು ಆದಷ್ಟೂ ಕನ್ನಡಕದ ಜೊತೆಗೇ ಬಂದ ಅಂದರೆ ಇನ್‌ಬಿಲ್ಟ್ ನೋಸ್ ಪ್ಯಾಡ್ ಇರುವ ಕನ್ನಡಕಗಳನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ಮೂಗಿನ ಎರಡೂ ಬದಿಗಳಿಗೆ ಅಷ್ಟು ಒತ್ತಡ ಬೀಳುವುದಿಲ್ಲ.
೩. ನೋಸ್ ಪ್ಯಾಡನ್ನು ಕ್ಲೀನ್ ಮಾಡುತ್ತಾ ಇರಿ. ಕನ್ನಡಕ ಹಾಗೂ ನೋಸ್ ಪ್ಯಾಡಿನಲ್ಲಿ ಕೂರುವ ಧೂಳು, ಮುಖದ ಜಿಡ್ಡಿನಂಶ ಅದರಲ್ಲೇ ಕೂತು, ಆ ಭಾಗದ ಚರ್ಮಕ್ಕೆ ಇನ್ನೂ ಹಾನಿಯುಂಟು ಮಾಡಿ ಕಲೆಯಾಗುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಆಗಾಗ ಕನ್ನಡಕವನ್ನು ಸ್ವಚ್ಛವಾಗಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೪. ಕಣ್ಣು ಹಾಗೂ ಕಣ್ಣಿನ ಸುತ್ತ ದಿನವೂ ವರ್ತುಲಾಕಾರದಲ್ಲಿ ಮಸಾಜ್ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ದಿನವೂ ದಣಿವ ಕಣ್ಣುಗಳಿಗೆ ಇದು ಆರಾಮ ನೀಡುತ್ತದೆ. ಜೊತೆಗೆ ನೋಸ್ ಪ್ಯಾಡಿನಿಂದ ಬಿದ್ದ ಒತ್ತಡವನ್ನೂ ಕೂಡಾ ಕೊಂಚ ಮಟ್ಟಿಗೆ ರಿಲ್ಯಾಕ್ಸ್ ಮಾಡಿಸುತ್ತದೆ. ಆ ಭಾಗದಲ್ಲಿ ರಕ್ತ ಪರಿಚಲನೆಯನ್ನು ಚುರುಕುಗೊಳಿಸಿ ಕಲೆಯಾಗುವುದನ್ನು ತಪ್ಪಿಸುತ್ತದೆ. ಜೊತೆಗೆ ಕಣ್ಣನ್ನೂ ಆರೋಗ್ಯವಾಗಿಡುತ್ತದೆ.
೫. ಸಾಧ್ಯವಾದರೆ, ಆಗಾಗ ಕಾಂಟಾಕ್ಟ್ ಲೆನ್ಸ್ ಬಳಸುವುದನ್ನು ರೂಢಿ ಮಾಡಿಕೊಳ್ಳಬಹುದು.
೬. ನಿಮ್ಮ ಕಣ್ಣಿನ ತಜ್ಞವೈದ್ಯರನ್ನು ಆಗಾಗ ಭೇಟಿಯಾಗಿ, ಅವರ ಸಲಹೆಯನ್ನು ಪಡೆಯಬಹುದು. ಚರ್ಮತಜ್ಞರು ನೀಡುವ ಕಪ್ಪು ಕಲೆ, ವರ್ತುಲಗಳ ಮುಲಾಮುಗಳಿಂದ ಸ್ವಲ್ಪ ಮಟ್ಟಿನ ಪ್ರಯೋಜನ ದೊರೆತರೂ ದೊರೆತೀತು. ಆದರೆ, ಇಂತಹ ಕಲೆಗಳಿಗೆ ಮನೆಮದ್ದುಗಳು ಪರಿಹಾರ ನೀಡುವುದಿಲ್ಲ. ಕನ್ನಡಕ ಉಳಿಸಿಹೋದ ಕಲೆಗಳನ್ನು ಯಾವ ಆಲೂಗಡ್ಡೆ, ಟೊಮೆಟೋ ರಸ, ಸೌತೆಕಾಯಿಗಳೂ ಅಳಿಸಿಹಾಕುವುದಿಲ್ಲ. ಅದನ್ನು ಕನ್ನಡಕ ಬಳಸುವ ಸಮಯದಲ್ಲೇ ಜಾಗರೂಕತೆ ವಹಿಸಿಕೊಳ್ಳುವುದು ಉತ್ತಮ. ಒಮ್ಮೆ ಗಾಢವಾಗಿ ಕಲೆಯಾಗಿ ಉಳಿದ ಮೇಲೆ ಇದು ಎಂದಿಗೂ ಮಾಸದು. ನಿಮ್ಮ ಮಾಡಿಗೆ ನೀವು ಏನೇನೋ ಬಳಸಿ ಪ್ರಯತ್ನ ಪಡುವ ಬದಲು, ತಜ್ಞರ ಸಲಹೆಯನ್ನು ಪಡೆದುಕೊಂಡು ಮುಂದುವರಿಯುವುದು ಉತ್ತಮ.
ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ