Site icon Vistara News

Winter blues: ಚಳಿಗಾಲದ ಅನಾರೋಗ್ಯದಿಂದ ಪಾರಾಗಲು ಬಿಸಿಲಿಗೆ ಹೋಗಿ!

Winter Blue

ʻದಿನ ಕಳೆಯುವುದೇ ತಿಳಿಯುತ್ತಿಲ್ಲʼ ಎಂದು ಗೊಣಗುವವರ ಮಾತು ಸುಳ್ಳೇನಲ್ಲ! ಅಂದರೆ, ಹಗಲು ಕಡಿಮೆ ರಾತ್ರಿ ದೀರ್ಘ ಇರುವ ದಿನಗಳಿವು. ಎಷ್ಟೊತ್ತಾದರೂ ಬೆಳಗಾಗದೆ, ಬೇಗ ಕತ್ತಲಾಗುವುದರಿಂದ ದಿನ ಕಳೆಯುವುದೇ ತಿಳಿಯುವುದಿಲ್ಲ. ಇದಿಷ್ಟೇ ಆದರೆ ಪರವಾಗಿಲ್ಲ. ಏನೋ ಮೋಡ ಕವಿದ ವಾತಾವರಣ, ಚಳಿ, ಗಾಳಿ, ಒಂಥರಾ ಬೋರು, ಯಾವುದಕ್ಕೂ ಮೂಡಿಲ್ಲ, ಬೆಳಗಾದರೆ…ಅಯ್ಯೋ, ಏಳಬೇಕಲ್ಲ; ದಿನದ ಕೆಲಸ-ಕಾರ್ಯಗಳೇ ಆದರೂ, ಹಾಳಾದ್ದು, ಮಾಡಬೇಕಲ್ಲ! ಎಂಬ ಮನಸ್ಥಿತಿ ಕಾಣಲಾರಂಭಿಸುತ್ತದೆ. ಚಳಿಗಾಲವೆಂಬುದು ವಿಶೇಷವಾಗಿ ಬಾಧಿಸದ ಪ್ರದೇಶಗಳಲ್ಲಿ ಇಂಥ ಮೂಡಿಲ್ಲದ ಅವಸ್ಥೆಗಳು ಅಷ್ಟಾಗಿ ಕಾಣಲಾರವು. ಆದರೆ ಕೊರೆಯುವ ಚಳಿಯಿರುವ, ಸದಾ ಮೋಡ ಕವಿದ, ಹಗಲು ಅತಿ ಕಡಿಮೆ ಇರುವ, ಹಿಮ ಸುರಿಯುವ ಪ್ರದೇಶಗಳಲ್ಲಿ ಚಳಿಗಾಲವನ್ನು ಆರೋಗ್ಯಪೂರ್ಣವಾಗಿ ಕಳೆಯುವುದೆಂದರೆ ಯಜ್ಞದಂತೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅನಾರೋಗ್ಯ ಕಾಡಬಹುದು, ಖಿನ್ನತೆಯತ್ತ ಜಾರಬಹುದು. ಇದನ್ನೇ ʻವಿಂಟರ್‌ ಬ್ಲೂಸ್ʼ‌ ಅಥವಾ ಋತುಮಾನಗಳಲ್ಲಿ ಕಾಡುವ ಸಮಸ್ಯೆಗಳು (Seasonal affective disorder (SAD)) ಎಂದು ಕರೆಯಲಾಗುತ್ತದೆ. ಏನೀ ಸಮಸ್ಯೆ? ಏನದರ ಲಕ್ಷಣಗಳು? ಇಲ್ಲಿವೆ ವಿವರಗಳು.

ಲಕ್ಷಣಗಳು:

ಏನೋ ಬೇಸರ, ಸದಾ ಮೂಡಿಲ್ಲದಿರುವುದು, ಕಿರಿಕಿರಿ, ಮುಗಿಯದ ಸೋಮಾರಿತನ, ಸಿಹಿ ಅಥವಾ ಹೊಟ್ಟೆಭಾರಎನಿಸುವ ಆಹಾರ ತಿನ್ನಬೇಕೆಂಬ ಚಪಲ, ಏರುವ ತೂಕ, ಯಾವುದಕ್ಕೂ ಶಕ್ತಿ ಸಾಲವೆಂಬ ಭಾವ, ಯಾವುದರಲ್ಲೂ ಏಕಾಗ್ರತೆ ಇಲ್ಲದಿರುವುದು, ಸರ್ವತ್ರ ನಿರಾಸಕ್ತಿ, ಮುಗಿಯದ ನಿದ್ದೆ, ಖಿನ್ನತೆ ಅಧಿಕವಾಗಿ ಬದುಕು ಸಾಕು ಎನಿಸುವುದು- ಇವೆಲ್ಲ ವಿಂಟರ್‌ ಬ್ಲೂಸ್‌ ಲಕ್ಷಣಗಳು.

ಯಾಕೆ ಹೀಗಾಗುತ್ತದೆ?

ಸೂರ್ಯನ ಬೆಳಕು ಕಡಿಮೆಯಾಗುವುದೇ ಇವೆಲ್ಲದರ ಮುಖ್ಯ ಕಾರಣ. ಇದರಿಂದ ದೇಹದ ಸರ್ಕಾಡಿಯನ್‌ವ್ಯವಸ್ಥೆಯಲ್ಲಿ ಅಥವಾ ದೇಹದ ಆಂತರಿಕ ಗಡಿಯಾರದಲ್ಲಿ ಏರುಪೇರು ಉಂಟಾಗುತ್ತದೆ. ಮೆದುಳಿಗೆ ಸಂದೇಶ ರವಾನಿಸುವ ಸೆರೊಟೋನಿನ್‌ ಚೋದಕಗಳ ಸ್ರವಿಸುವಿಕೆಯಲ್ಲಿ ವ್ಯತ್ಯಾಸ ಆಗುತ್ತಿದ್ದಂತೆ ಇಂಥ ತೊಂದರೆಗಳು ಗಂಟಿಕ್ಕಿಕೊಳ್ಳುತ್ತವೆ. ಹ್ಯಾಪಿ ಹಾರ್ಮೋನ್‌ ಎಂದೇ ಕರೆಯಲಾಗುವ ಸೆರೊಟೋನಿನ್‌ ಕಡಿಮೆಯಾಗುತ್ತಿದ್ದಂತೆ ಖಿನ್ನತೆಯತ್ತ ವಾಲುತ್ತೇವೆ. ಜೊತೆಗೆ, ಸೂರ್ಯನ ಬೆಳಕು ಕಡಿಮೆಯಾದಂತೆ ವಿಟಮಿನ್‌ ಡಿ ಮತ್ತು ಮೆಲಟೋನಿನ್‌ ಮಟ್ಟವೂ ಕುಸಿಯುತ್ತದೆ. ಇದರಿಂದ ಮೂಡಿಲ್ಲದಂಥ ಅವಸ್ಥೆ ಸಾಮಾನ್ಯ. ಅದರಲ್ಲೂ ಮಾನಸಿಕವಾಗಿ ಸೂಕ್ಷ್ಮ ಇರುವವರಲ್ಲಿ ಈ ಅವಸ್ಥೆಗಳು ಹೆಚ್ಚಾಗಿ ಕಂಡುಬರುತ್ತವೆ.

ಪರಿಣಾಮಗಳೇನು?

ಸಾಮಾನ್ಯವಾಗಿ ತೀವ್ರವಾದಂಥ ಪರಿಣಾಮಗಳು ಅಥವಾ ಆರೋಗ್ಯದ ಗಂಭೀರ ಏರುಪೇರುಗಳು ಕಾಣುವುದುಕಡಿಮೆ. ಉದಾ, ದೈನಂದಿನ ಕೆಲಸಗಳಿಗೆ ತೊಂದರೆಯಾಗಬಹುದು, ಸಾಮಾಜಿಕ ಚಟುವಟಿಕೆಗಳು ಏರುಪೇರಾಗಬಹುದು. ಆದರೆ ವ್ಯಕ್ತಿಗತವಾಗಿ ಅಥವಾ ಕೌಟುಂಬಿಕವಾಗಿ ಖಿನ್ನತೆಯ ಚರಿತ್ರೆಯಿದ್ದರೆ ಮಾತ್ರ ವೈದ್ಯಕೀಯವಾಗಿಯೇ ಪರಿಹಾರ ಅರಸಬೇಕಾಗುತ್ತದೆ. ಅದಿಲ್ಲದಿದ್ದರೆ, ಮಾದಕ ವಸ್ತುಗಳ ವ್ಯಸಕ, ಕುಡಿತದಂಥ ಚಟಗಳತ್ತ ಜಾರದಂತೆ ಕುಟುಂಬದವರು ಗಮನಿಸಬೇಕಾಗುತ್ತದೆ.

ಪರಿಹಾರವಿದೆಯೇ?

ಖಂಡಿತ ಈ ಸಮಸ್ಯೆಗೆ ಪರಿಹಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿನದ ಯಾವ ಹೊತ್ತಿಗಾದರೂ ಸರಿ, ಬಿಸಿಲಿಗೆಹೋಗಿ. ಸೂರ್ಯನ ಬೆಳಕು ದೇಹದ ಮೇಲೆ ಬೀಳುವುದು ಅತ್ಯಗತ್ಯ. ಅದಿಲ್ಲದೆಯೇ ಇಷ್ಟೆಲ್ಲಾ ಸಮಸ್ಯೆಗಳು ಬೆನ್ನು ಬೀಳುತ್ತಿವೆ. ಹಾಗಾಗಿ, ಮೋಡದ ಮರೆಯ ಬಿಸಿಲಾದರೂ ಸರಿ, ಗಾಳಿ-ಬಿಸಿಲು ಬೇಕು.
ದಿನದ ಚಟುವಟಿಕೆಗಳಿಗೆ ಸರಿಯಾದ ನಿಯಮ ಮಾಡಿಕೊಳ್ಳಿ. ಅಂದರೆ, ದಿನವೂ ಸಮಯಕ್ಕೆ ಸರಿಯಾಗಿ ಮಲಗುವುದು, ಏಳುವುದು ಅಗತ್ಯ. ಇದರಿಂದ ವ್ಯತ್ಯಾಸವಾಗಿರುವ ದೇಹದ ಆಂತರಿಕ ಗಡಿಯಾರಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ. ದೈಹಿಕ ಚಟುವಟಿಕೆಗಳಿಗೆ ಎಂದಿಗೂ ರಜಾ ಕೊಡಬೇಡಿ. ಬೆಳಗಿನ ವಾಕಿಂಗ್‌ ಮಾಡುವವರು ನೀವಾದರೆ, ಚಳಿಯ ನೆವವನ್ನೊಡ್ಡಿ ತಪ್ಪಿಸಬೇಡಿ. ಹವಾಮಾನ ಚೆನ್ನಾಗಿಲ್ಲದಿದ್ದರೆ ಒಳಾಂಗಣದ್ದೇ ಏನಾದರೂ ಚಟುವಟಿಕೆ ಮಾಡಿ, ಆದರೆ ದೇಹವನ್ನು ಜಡವಾಗಲು ಬಿಡಬೇಡಿ.

ಬಾಯಿ ಬೇಡುತ್ತದೆ ಎನ್ನುವ ನೆವಕ್ಕೆ ಸಿಕ್ಕಿದ್ದೆಲ್ಲಾ ತಿನ್ನಬೇಡಿ. ಸತ್ವಪೂರ್ಣ ಆಹಾರ ಸೇವನೆಯು ಬೇಡದ ಚಪಲಗಳಿಗೆ ಕಡಿವಾಣ ಹಾಕಲು ನೆರವಾಗುತ್ತದೆ. ವಿಟಮಿನ್‌ ಡಿ ಆಹಾರಗಳನ್ನು ಮರೆಯದೆ ಸೇವಿಸಿ. ಪೂರಕ ಮಾತ್ರೆಗಳು ಅಗತ್ಯ ಎನಿಸಿದರೆ ವೈದ್ಯರಲ್ಲಿ ಸಲಹೆ ಪಡೆಯಿರಿ. ಇಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಸ್ನೇಹಿತರನ್ನು ಭೇಟಿ ಮಾಡಿ. ಬಂಧು-ಮಿತ್ರರೊಂದಿಗೆ ಹರಟಿ. ಸಂಗೀತ ಕೇಳುವುದು, ಸಿನೆಮಾ ನೋಡುವುದು, ಪ್ರವಾಸ ಹೋಗುವುದು ಮುಂತಾದ ಚೇತೋಹಾರಿ ಎನಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕೆಲವೇ ದಿನಗಳಲ್ಲಿ ಚಳಿಗಾಲ ಮುಗಿದು ಬೇಸಿಗೆ ಬರುತ್ತದೆ ಎಂಬುದನ್ನು ನಿಮಗೆ ನೀವೆ ಆಗಾಗ ನೆನಪು ಮಾಡಿಕೊಡಿ.

ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!

Exit mobile version