Site icon Vistara News

Good Morning: ನೀವು ಕುಂಭಕರ್ಣನ ವಂಶಸ್ಥರೇ? ಬೆಳಗ್ಗೆ ಬೇಗ ಏಳಬೇಕೆಂದರೆ ಈ ಟಿಪ್ಸ್‌ ಪಾಲಿಸಿ!

walking

ಕೆಲವರಿಗೆ ಬದುಕಿನಲ್ಲಿ ದೊಡ್ಡ ಸಮಸ್ಯೆ ಎಂದರೆ ಬೇಗ ಏಳುವುದು. ಹೌದು. ಬೆಳಗ್ಗೆ ಸೂರ್ಯ ಹುಟ್ಟುವ ಸಮಯದಲ್ಲೇ ಅಥವಾ ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಏಳುವುದು ಎಂದರೆ ಜೀವಮಾನದ ಅತ್ಯಂತ ದೊಡ್ಡ ಸಾಧನೆ. ಎಲ್ಲೋ ಆಗೊಮ್ಮೆ ಈಗೊಮ್ಮೆ, ಅಗತ್ಯ, ಸಂದರ್ಭಗಳಿಗೆ ಎದ್ದರೂ, ನಿತ್ಯವೂ ಬೇಗ ಏಳುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಕೆಲವರಿಗೆ ಸಾಧ್ಯವಾಗುವುದೇ ಇಲ್ಲ. ಅಲರಾಂ ಇಟ್ಟುಕೊಂಡು ಬೆಳಗ್ಗೆ ಎದ್ದೇ ತೀರುತ್ತೇನೆ ಎಂದು ಹೇಳಿ ಮಲಗಿದವರು ಬೆಳಗ್ಗೆ ಅಲರಾಂ ಹೊಡೆದುಕೊಳ್ಳುವಾಗ ನಿರಾಯಾಸವಾಗಿ ಆಫ್‌ ಬಟನ್‌ ಒತ್ತಿ ಹೊದಿಕೆ ಎಳೆದುಕೊಳ್ಳುತ್ತಾರೆ. ತಡವಾಗಿ ಎದ್ದ ಮೇಲೆ, ಛೇ ನಾನೇಕೆ ಅಲರಾಂ ಆಫ್‌ ಮಾಡಿದೆ ಎಂದುಕೊಂಡು ತಮ್ಮನ್ನೇ ಶಪಿಸುತ್ತಾ, ಮಾರನೇ ದಿನ ಮರಳಿ ಯತ್ನವ ಮಾಡಿ ಮತ್ತೆ ಸೋಲುಣ್ಣುತ್ತಾರೆ. ಆದರೂ ಇಂಥವರಲ್ಲಿ ಕೆಲವರು ಬದುಕಿನಲ್ಲಿ ನಾನು ಬೇಗ ಏಳುವ ಸಾಹಸ ಮಾಡುವುದಿಲ್ಲ ಎಂದುಕೊಂಡು ಬೆಳಗಿನ ಸಕ್ಕರೆ ನಿದ್ದೆಯನ್ನು ಬಿಡುವ ಮನಸ್ಸು ಮಾಡಲು ಹೊರಡುವುದೇ ಇಲ್ಲ. ಇನ್ನೂ ಕೆಲವರು, ಆಗೀಗ ಮತ್ತೆ ಮತ್ತೆ ಬೇಗ ಎದ್ದು, ವರ್ಕೌಟ್‌ ಅಥವಾ ವಾಕಿಂಗ್‌ ಇತ್ಯಾದಿಗಳ ಅಭ್ಯಾಸ ಬೆಳೆಸಬೇಕು (morning workout) ಎಂದು ಮನಸ್ಸು ಮಾಡುವವರು. ಆದರೆ ದಿನವೂ ಸೋಲುವವರು. ಇಂಥ ಮಂದಿಗಾಗಿ ಬೆಳಗ್ಗೆ ಬೇಗ ಏಳುವ (good morning) ಅಭ್ಯಾಸ ಬೆಳೆಸಿಕೊಳ್ಳಲು ಸುಲಭವಾಗಲು ಇಲ್ಲಿವೆ ಟಿಪ್ಸ್‌.

1. ರಾತ್ರಿ ನಿತ್ಯವೂ ಒಂದು ನಿರ್ಧಿಷ್ಟ ಸಮಯಕ್ಕೇ ಮಲಗಿ. ರಾತ್ರಿ ಮಲಗುವ ಸಮಯ ಪಾಲನೆ ಇಲ್ಲಿ ಅತ್ಯಂತ ಮುಖ್ಯವಾಗುತ್ತದೆ. ಒಂದು ದಿನ ೧೦ ಗಂಟೆಗೆ ಮಲಗಿ, ಮಾರನೇ ದಿನ, ೧೧, ಇನ್ನೊಂದು ದಿನ ೧೨.೩೦ ಹೀಗೆಲ್ಲಾ ಸಮಯದಲ್ಲಿ ಏರುಪೇರುಗಳಿದ್ದರೆ, ಮಾರನೇ ದಿನ ನಿಮ್ಮ ನಿಗದಿತ ಸಮಯಕ್ಕೆ ಏಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಂದು ನಿಗದಿತ ವೇಳಾಪಟ್ಟಿಯಲ್ಲಿ ಆದಷ್ಟೂ ಕೆಲಸಗಳನ್ನು ಮುಗಿಸಿ ಬೇಗನೆ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.

2. ಬೆಳಗ್ಗೆ ಬೇಗ ಎದ್ದ ಕೂಡಲೇ ಏನು ಮಾಡಬೇಕೆಂಬ ಪ್ಲಾನ್‌ ಸಿದ್ಧ ಮಾಡಿಕೊಳ್ಳಿ. ಪಾರ್ಕಿನಲ್ಲಿ ವಾಕಿಂಗ್‌, ಅಥವಾ ಜಿಮ್‌, ಯೋಗಾಭ್ಯಾಸ ಹೀಗೆ ನಿಮಗೆ ಇಷ್ಟವಾಗುವ, ನಿಮ್ಮನ್ನು ಚುರುಕಾಗಿಸುವ ಯಾವುದಾದರೊಂದು ಚಟುವಟಿಕೆಗೆ ನಿತ್ಯವೂ ಎದ್ದ ಕೂಡಲೇ ಸಮಯ ಇಡಿ. ಆಗ, ನಿಮಗೆ ಏಳಲು ಸ್ಪೂರ್ತಿ ಬರುತ್ತದೆ.

3. ಪ್ರತಿದಿನದ ಸಂಜೆ ಶಾಂತ ರೀತಿಯಿಂದ ಮುಗಿಯಲಿ. ಸಂಜೆಗಳಲ್ಲಿ ಏನಾದರೊಂದು ಶಾಂತಿಯಿಂದ ಮಾಡುವ ಕೆಲಸವಿರಲಿ. ಗಡಿಬಿಡಿ, ಒತ್ತಡ, ಕೆಲಸದ ಮೇಲೆ ಕೆಲಸ ಇತ್ಯಾದಿಗಳ ನಾಗಾಲೋಟದ ನಂತರ ಒಂದಷ್ಟು ಸಮಯ ರಾತ್ರಿಯ ಹೊತ್ತು ಮಲಗುವ ಮುನ್ನ ನಿಮಗಾಗಿ ಇಟ್ಟುಕೊಳ್ಳಿ.

4. ನಿಮ್ಮ ಕೈಗೆಟಕುವಂತೆ ಅಲರಾಂ ಅನ್ನು ನಿಮ್ಮ ಪಕ್ಕದಲ್ಲೇ ಇಟ್ಟು ಮಲಗಬೇಡಿ. ರೂಮಿನಲ್ಲಿ ದಿನವೂ ಅಲರಾಂನ ಜಾಗ ಬದಲಾಗುತ್ತಿರಲಿ. ಅಲರಾಂ ಸೌಂಡ್‌ ದೊಡ್ಡದಿರಲಿ. ಆಗ ನೀವು ಉದಾಸೀನತೆ ಮಾಡಿದರೂ ಏಳಲೇ ಬೇಕಾದ ಅನಿವಾರ್ಯತೆ ಬರುತ್ತದೆ. ಎದ್ದ ಮೇಲೆ ಮತ್ತೆ ಮಲಗುವ ಪ್ರಯತ್ನ ಮಾಡಬೇಡಿ. ಒಂದೆಡೆ ಶಾಂತವಾಗಿ ಒಂದೆರಡು ನಿಮಿಷ ಕೂತು, ಅಂದಿನ ಕೆಲಸಗಳ ಬಗ್ಗೆ ಯೋಚಿಸಿ. ನಿಮ್ಮ ಪ್ರಿಯವಾದ ಕೆಲಸಕ್ಕೆ ಕೊಡಬೇಕಾದ ಸಮಯದ ಬಗ್ಗೆ ಯೋಚಿಸಿ.

ಇದನ್ನೂ ಓದಿ: Health Tips For Menstrual Days: ಆ ದಿನಗಳಲ್ಲಿ ಕಾಡುವ ಹೊಟ್ಟೆ ನೋವಿನಿಂದ ಮಹಿಳೆಯರು ಪಾರಾಗುವುದು ಹೇಗೆ?

5. ಬೆಳಗಿನ ಬಿಸಿಲು ನಿಮ್ಮ ಕೋಣೆಯನ್ನು ಪ್ರವೇಶಿಸುವಂತಿರಲಿ. ಗಾಳಿ, ಬೆಳಕಿಗೆ ಸಾಕಷ್ಟು ಸ್ಥಳಾವಕಾಶವಿರಲಿ. ಬೆಳಗಿನ ಹಿತವಾದ ಸೂರ್ಯ ರಶ್ಮಿಗಳು ನಿಮ್ಮ ಮುಖವನ್ನು ಸ್ಪರ್ಶಿಸುವಾಗ ಆಗುವ ಸುಖವನ್ನು ಅನುಭವಿಸಿ.

6. ನಿಮ್ಮ ನಿದ್ದೆಯ ಕಾಳಜಿ ಮಾಡಿ. ಹಗಲು ನಿದ್ದೆ ಮಾಡಲು ಪ್ರಯತ್ನಿಸಬೇಡಿ. ಆದಷ್ಟೂ ನೀವು ಅಗತ್ಯವಾದಷ್ಟು ನಿದ್ದೆಯನ್ನು ರಾತ್ರಿಯೇ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿದ್ದೆ ಸರಿಯಾಗಿ ಆಗಿಲ್ಲ ಎಂಬ ಅನುಭವವಾಗುತ್ತಿದ್ದಲ್ಲಿ, ಇನ್ನೂ ಸ್ವಲ್ಪ ಬೇಗ ಮಲಗಲು ಪ್ರಯತ್ನಿಸಿ, ಬದಲಾಗಿ ಬೇಗ ಏಳುವುದರಿಂದ ತಪ್ಪಿಸಬೇಡಿ.

ಪ್ರಾಮಾಣಿಕವಾಗಿ ಬೇಗ ಏಳಲು ಪ್ರಯತ್ನಿಸಿದರೆ, ಪ್ರಯತ್ನಕ್ಕೆ ಸರಿಯಾಗಿ ಮನಸ್ಸೂ ಮಾಡಿದರೆ ಎಂಥ ಕುಂಭಕರ್ಣರಿಗೂ ಬೇಗ ಏಳಲು ಸಾಧ್ಯವಿದೆ. ಮತ್ತೆ ತಡವೇಕೆ, ಮೇಗ ಮಲಗಿ, ಬೇಗ ಏಳಿ, ಅಷ್ಟೇ!

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

Exit mobile version