Site icon Vistara News

Grapes For Diabetics: ಮಧುಮೇಹಿಗಳು ದ್ರಾಕ್ಷಿ ತಿನ್ನಬಹುದೇ? ತಿಂದರೆ ಏನಾಗುತ್ತದೆ?

Grapes For Diabetics

Grapes For Diabetics

ಸಭರಿತ ದ್ರಾಕ್ಷಿ ಗೊಂಚಲನ್ನು ಕಾಣುತ್ತಿದ್ದಂತೆ ಬಾಯಿಗೆಸೆದುಕೊಳ್ಳಬೇಕೆಂದು ಯಾರಿಗನ್ನಿಸುವುದಿಲ್ಲ? ಎಷ್ಟೇ ಹೊಟ್ಟೆ ತುಂಬಿದ್ದರೂ, ಇಂಥ ರಸಫಲಗಳಿಗೆ ಹೊಟ್ಟೆಯಲ್ಲಿ ಬೇರೆಯೇ ಜಾಗವಿರುತ್ತದೆ. ʻಹಣ್ಣು ತಾನೇ! ಎಷ್ಟು ತಿಂದರೂ ಹಾನಿಯಿಲ್ಲʼ ಎಂಬ ನಂಬಿಕೆಯಲ್ಲಿ ಬೊಗಸೆಗಟ್ಟಲೆ ದ್ರಾಕ್ಷಿಗಳು ನಿರಾಯಾಸವಾಗಿ ಹೊಟ್ಟೆ ಸೇರುತ್ತವೆ. ಆದರೆ ಆಹಾರ ತಜ್ಞರ ಪ್ರಕಾರ, ದ್ರಾಕ್ಷಿಯನ್ನು ತಿನ್ನುವ ಕ್ರಮ ಇದಲ್ಲ. ʻಭಗವಂತಾ! ದ್ರಾಕ್ಷಿ ತಿನ್ನುವುದಕ್ಕೂ ಕ್ರಮವುಂಟೇ?ʼ ಎಂದು ನಗುವ ಮಾತಲ್ಲ ಇದು. ಹೀಗೇಕೆ ಹೇಳುತ್ತಾರೆ ಪರಿಣತರು?

ನಮ್ಮ ಆಹಾರದ ಒಟ್ಟೂ ಪಿಷ್ಟದ ಪಾಲಿನಲ್ಲಿ ದ್ರಾಕ್ಷಿಯನ್ನೂ ಸೇರಿಸಿಕೊಳ್ಳಬೇಕು ಎಂಬುದು ತಜ್ಞರ ಮಾತು. ಏನು ಹಾಗೆಂದರೆ? ಉದಾ, ಒಂದು ಊಟದಲ್ಲಿ 300 ಗ್ರಾಂ ಪಿಷ್ಟವನ್ನು ತಿನ್ನುತ್ತೀರಿ ಎಂದಿಟ್ಟುಕೊಳ್ಳಿ. ಊಟದ ನಂತರ ಒಂದು ಕಪ್‌ ದ್ರಾಕ್ಷಿ ತಿನ್ನುವ ಉದ್ದೇಶವಿದೆ ಎಂದಾದರೆ, ಅದೇ ದ್ರಾಕ್ಷಿಯನ್ನು ಊಟದ ಮೊದಲೇ ತಿನ್ನಿ. ಇದರಿಂದ ಸುಮಾರು 70 ಗ್ರಾಂನಷ್ಟು ಪಿಷ್ಟ ಈಗಾಗಲೇ ಹೊಟ್ಟೆ ಸೇರುತ್ತದೆ. ಜೊತೆಗೆ, ಹೆಚ್ಚು ನಾರಿನಂಶವಿರುವ ಈ ಹಣ್ಣುಗಳು ಹೊಟ್ಟೆ ತುಂಬಿದ ಅನುಭವವನ್ನು ಸಹ ನೀಡುತ್ತವೆ. ಆಗ ಊಟದಲ್ಲಿ ಮಾಮೂಲಿಗಿಂತ ಒಂದು ಚಪಾತಿಯನ್ನು ಅಥವಾ ಸ್ವಲ್ಪ ಅನ್ನವನ್ನು ಕಡಿಮೆ ತಿನ್ನಿ ಎಂಬುದು ತಜ್ಞರ ಸಲಹೆ. ಅದರಲ್ಲೂ, ಮಧುಮೇಹಿಗಳ ಆಹಾರದಲ್ಲಂತೂ ಈ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಅವರ ಇಂಗಿತ.

ಹೀಗೇಕೆ ಮಾಡಬೇಕು?

ಹೀಗೆ ಹೇಳುವುದಕ್ಕೂ ಕಾರಣವಿದೆ. ಮಧುಮೇಹಿಗಳು ಅಹಾರ ಸೇವಿಸುವಾಗ ಎರಡು ವಿಷಯಗಳ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ. ಒಂದು, ಆಹಾರದ ಒಟ್ಟು ಕ್ಯಾಲರಿ; ಎರಡು, ಅದರ ಜಿಐ ಅಂಶ. ಹಾಗಾಗಿ ಯಾವುದೇ ಹಣ್ಣುಗಳನ್ನು ತಿನ್ನುವಾಗ, ಊಟದ ನಂತರ ಅವುಗಳನ್ನು ಹೊಟ್ಟೆ ಸೇರಿಸುವಂತಿಲ್ಲ. ಹಸಿದಾಗಲೇ ತಿನ್ನಬೇಕು ಮತ್ತು ಊಟದಲ್ಲಿ ಈ ಪ್ರಮಾಣದ ಕ್ಯಾಲರಿಯನ್ನು ಕಡಿಮೆ ಮಾಡಬೇಕು- ಇದು ಅವರ ತರ್ಕ. ಒಂದು ಅಂದಾಜಿನ ಪ್ರಕಾರ, ಒಂದು ಮಧ್ಯಮ ಗಾತ್ರದ ದ್ರಾಕ್ಷಿ ಹಣ್ಣಿನಲ್ಲಿ ಒಂದು ಗ್ರಾಂ ನಷ್ಟು ಪಿಷ್ಟ ದೊರೆಯುತ್ತದೆ. ಹಾಗಾಗಿ 100 ಗ್ರಾಂ ದ್ರಾಕ್ಷಿಯಿಂದ (ಅಂದಾಜು 20 ದ್ರಾಕ್ಷಿಗಳು- ನಾನಾ ಗಾತ್ರದ್ದು) ಸುಮಾರು 80 ಗ್ರಾಂ ನಷ್ಟು ಪಿಷ್ಟ ದೊರೆಯಬಹುದು. ಇದಕ್ಕೆ ಸಮನಾದ ಪ್ರಮಾಣದಲ್ಲಿ ಊಟದಲ್ಲಿ ಪಿಷ್ಟವನ್ನೇ (ಅನ್ನ, ಚಪಾತಿ, ರಾಗಿಮುದ್ದೆ ಇತ್ಯಾಗಿ) ಕಡಿಮೆ ಮಾಡಬೇಕು, ಪ್ರೊಟೀನ್‌ ಅಥವಾ ಇತರ ಅಂಶಗಳನ್ನಲ್ಲ.

ಹಾಗೆಂದು ದ್ರಾಕ್ಷಿಯ ಜಿಐ (ಗ್ಲೈಸೆಮಿಕ್‌ ಇಂಡೆಕ್ಸ್) ಅಂಶ ತೀರಾ ಹೆಚ್ಚೇನಿಲ್ಲ ಎನ್ನುತ್ತಾರೆ ಪರಿಣತರು. ಆದರೆ ದ್ರಾಕ್ಷಿ ಮಾತ್ರ ತಿನ್ನುವುದರಿಂದ ಹಾನಿ ಇಲ್ಲದಿದ್ದರೂ, ಇಡೀ ದಿನದ ಆಹಾರದಲ್ಲಿನ ಒಟ್ಟಾರೆ ಜಿಐ ಹೊರೆ ಹೊಟ್ಟೆಯ ಮೇಲೆ ಎಷ್ಟಾಗುತ್ತದೆ ಎಂಬುದರ ಲೆಕ್ಕಾಚಾರ ಇರಲೇಬೇಕೆಂಬುದು ಅವರ ಅಂಬೋಣ. ಸರಳವಾಗಿ ಹೇಳುವುದಾದರೆ, ಒಂದು ಸರ್ವಿಂಗ್‌ ದ್ರಾಕ್ಷಿಯಲ್ಲಿ ೫೩ ರಷ್ಟು ಜಿಐ ಅಂಶವಿದ್ದರೆ, ಇನ್ನುಳಿದ ಆಹಾರದಲ್ಲಿ ಇನ್ನೂ ಕಡಿಮೆ ಜಿಐ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಹನಿಹನಿಗೂಡಿಯೇ ಹಳ್ಳವಾಗುವ ಅಪಾಯವಿದೆ. ದ್ರಾಕ್ಷಿಯಲ್ಲಿರುವ ಅಧಿಕ ಫ್ರಕ್ಟೋಸ್‌ಅಂಶವು ರಕ್ತದಲ್ಲಿ ಸಕ್ಕರೆ ಅಂಶ ಉಕ್ಕೇರದಂತೆ ನೋಡಿಕೊಳ್ಳುತ್ತದೆ. ಮಾತ್ರವಲ್ಲ, ಅಧಿಕ ನಾರು ಪಚನಕ್ಕೆ ಹೆಚ್ಚು ಕಾಲ ತೆಗೆದುಕೊಂಡು, ಹೊಟ್ಟೆಯನ್ನು ಹಗುರವಾಗಿಡುವಲ್ಲಿ ಸಹಕರಿಸುತ್ತದೆ. ಹಾಗಾಗಿ ಮಧುಮೇಹಿಗಳಿಗೂ ದ್ರಾಕ್ಷಿ ಹಣ್ಣು ಬೇಕು, ಆದರೆ ಸರಿಯಾದ ಕ್ರಮದಲ್ಲಿ ಸೇವಿಸಬೇಕು.

ಇನ್ನಷ್ಟು ಪ್ರಶ್ನೆಗಳು…

ಜಿಐ ಅಂಶದ ಬಗ್ಗೆ ಹೇಳುವುದಾದರೆ, 50ರ ಲೆಕ್ಕದೊಳಗಿರುವ ಆಹಾರಗಳು ಕಡಿಮೆ ಜಿಐ ಇರುವಂಥವು ಎಂದೇ ಪರಿಗಣಿತವಾಗುತ್ತವೆ. ಅಂದರೆ, ಸೇಬು, ಅವಕಾಡೊ, ಚೆರ್ರಿ, ಸ್ಟ್ರಾಬೆರ್ರಿ, ಪೇರಳೆ, ಪೀಚ್‌, ಪೇರ್‌ನಂಥ ಹಣ್ಣುಗಳು ಈ ಲೆಕ್ಕದವು.50-69ರ ನಡುವೆ ಬರುವ ಆಹಾರಗಳು ಮಧ್ಯಮ ಜಿಐ ಇರುವಂಥವು. ಉದಾ, ಅಂಜೂರ, ದ್ರಾಕ್ಷಿ, ಕಿತ್ತಳೆಯಂಥವು. ಈ ಲೆಕ್ಕಾಚಾರದ ಮಾಹಿತಿಯನ್ನು ಮಧುಮೇಹಿಗಳು ಸರಿಯಾಗಿ ಅರಿತುಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ, ಆಹಾರದ ಮೇಲೆ ಹಿಡಿತ ಇರಿಸಿಕೊಂಡು, ಆ ಮೂಲಕ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಣದಲ್ಲಿ ಇಡಬಹುದು.

ಯಾವ ಬಣ್ಣದ ದ್ರಾಕ್ಷಿ ಒಳ್ಳೆಯದು ಎನ್ನುವುದು ಎದುರಾಗುವ ಇನ್ನೊಂದು ಪ್ರಶ್ನೆ. ತಜ್ಞರ ಪ್ರಕಾರ, ಬಣ್ಣದಿಂದ ಗುಣ-ದೋಷ ಬದಲಾಗುವುದಿಲ್ಲ. ಹಸಿರು, ಕೆಂಪು, ಕಪ್ಪು ಬಣ್ಣಗಳು ಬರುವುದು ಅದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳಿಂದ. ಬಣ್ಣ ಗಾಢವಾದಷ್ಟೂ ಅಂಟಿ ಆಕ್ಸಿಡೆಂಟ್‌ಗಳ ಪ್ರಮಾಣವೂ ಗಾಢವಾಗುತ್ತದೆ. ಉಳಿದಂತೆ ಯಾವುದೇ ಬದಲಾವಣೆಗಳು ಬಣ್ಣದಿಂದಾಗಿ ಆಗುವುದಿಲ್ಲ. ಹಾಗಾಗಿ ಯಾವುದೇ ಬಣ್ಣದ ದ್ರಾಕ್ಷಿಯನ್ನೂ, ಕ್ರಮ ತಪ್ಪದಂತೆ, ತಿನ್ನಬಹುದು.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

Exit mobile version