Site icon Vistara News

Allergy: ನೆಲಗಡಲೆ ತಿನ್ನುವ ಮೂಲಕ ನೆಲಗಡಲೆಯ ಅಲರ್ಜಿಯಿಂದ ದೂರವಿರಿ!

groundnut

ನಿಮಗೆ ನೆಲಗಡಲೆ ಅಲರ್ಜಿಯೆಂಬ (groundnut Allergy) ಸಮಸ್ಯೆಯ ಬಗ್ಗೆ ಕೇಳಿ ಗೊತ್ತಾ? ನೆಲಗಡಲೆ ಅಲರ್ಜಿಯಾ, ಇದೇನಿದು ಹೊಸ ವಿಷಯ ಎಂದು ಹುಬ್ಬೇರಿಸಬೇಡಿ. ಇಂಥದ್ದೊಂದು ಆರೋಗ್ಯ ಸಮಸ್ಯೆ ಹಲವು ರಾಷ್ಟ್ರಗಳಲ್ಲಿ ಮಕ್ಕಳಿಗೆ ಸಾಮಾನ್ಯ. ಇಂತಹ ಬಹು ವಿಚಿತ್ರವಾದ ತೊಂದರೆಗೆ ಈಗ ನೆಲಗಡಲೆಯೇ ಪರಿಹಾರ ಎಂದು ಸಂಶೋಧನೆಯೊಂದು ಪರಿಹಾರ ಘೋಷಿಸಿದೆ!

ಹೌದು. ಬಡವರ ಬಾದಾಮಿ ನೆಲಕಡಲೆಯನ್ನು ಪುಟಾಣಿ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿದರೆ ಅವುಗಳ ಬಗೆಗಿನ ಅಲರ್ಜಿಯಿಂದ ದೂರವಿರಬಹುದಂತೆ. ಹಾಗಂತ ಸಂಶೋಧನೆಯೊಂದು ದೃಢಪಡಿಸಿದೆ. ಈ ಸಂಶೋಧನೆಯ ಸಾರ ಇಷ್ಟೇ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಅಂತಾರಲ್ಲ, ಹಾಗೆಯೇ, ನೆಲಗಡಲೆಯೇ ಅಲರ್ಜಿಯಾಗುವ ಮಂದಿಗೆ ಸಣ್ಣ ವಯಸ್ಸಿನಲ್ಲಿಯೇ ನೆಲಗಡಲೆಯನ್ನು ತಿನ್ನಿಸುತ್ತಾ ಬಂದಲ್ಲಿ ಇಂತಹ ಅಲರ್ಜಿಯೇ ಇಲ್ಲವಾಗುತ್ತದೆ ಎಂಬುದೇ ಇದರ ತಾತ್ಪರ್ಯ.

ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ ನೆಲಗಡಲೆ ಅಲರ್ಜಿ. ನೆಲಗಡಲೆ ತಿಂದರೆ ಕಾಡುವ ಅಲರ್ಜಿ ಬೆಳೆಯುತ್ತಾ ಹೋದಂತೆ ಉಲ್ಬಣಿಸುತ್ತಾ ಹೋಗುತ್ತದೆ. ನೆಲಗಡಲೆ ತಿಂದ ಕೂಡಲೇ, ಬಾಯಿಯಲ್ಲಿ ಗಂಟಲಲ್ಲಿ ತುರಿಕೆ, ಬಾವು ಗೋಚರಿಸಲಾರಂಭಿಸುತ್ತದೆ. ಕೆಂಪಗೆ ಊದಿಕೊಂಡ ಬಾಯಿ, ನಾಲಗೆ, ಹಾಗೂ ಗಂಟಲು ತೊಂದರೆ ಕೊಟ್ಟರೆ, ಇನ್ನೂ ಕೆಲವರಿಗೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹೊಟ್ಟೆಯಲ್ಲಿ ಕೆಲವೆಡೆ ನೋವು, ವಾಂತಿ, ತಲೆಸುತ್ತು, ತಲೆನೋವು, ಅತಿಸಾರದಂತಹ ತೊಂದರೆಯೂ ಕಾಣಿಸತೊಡಗುತ್ತದೆ. ಇನ್ನೂ ಕೆಲವರಿಗೆ ಉಸಿರು ಕಟ್ಟಿದಂತೆ, ಉಸಿರಾಡಲು ಕಷ್ಟವಾಗುವ ಅನುಭವವೂ ಆಗಬಹುದು. ಉಬ್ಬಸದಂತಹ ಅನುಭವ, ಇದ್ದಕ್ಕಿದ್ದಂತೆ ನೆಗಡಿ ಇತ್ಯಾದಿಗಳ ಅನುಭವವೂ ಆಗುತ್ತದೆ. ದೇಹದ ರೋಗ ನಿರೋಧಕ ವ್ಯವಸ್ಥೆಯೇ ನೆಲಗಡಲೆಯ ಪ್ರೊಟೀನು ದೇಹಕ್ಕೆ ಮಾರಕ ಎಂಬ ನಿರ್ಧಾರವನ್ನು ತಪ್ಪಾಗಿ ತೆಗೆದುಕೊಳ್ಳುವುದರಿಂದ ಆಗುವ ಪರಿಣಾಮವಿದು. ಇದರಿಂದ ಜೀವಮಾನ ಪರ್ಯಂತೆ ನೆಲಗಡಲೆಯೇ ಇವರಿಗೆ ಶಾಪವಾಗಿ ಪರಿಣಮಿಸುತ್ತದೆ. ಇಂಥದ್ದೊಂದು ಆರೋಗ್ಯ ಸಮಸ್ಯೆಗೆ ಯಾವ ಔಷಧಿಯೂ ಇಲ್ಲದೆ ಮಕ್ಕಳು ಜೀವನ ಪರ್ಯಂತ ತೊಂದರೆ ವಹಿಸಬೇಕಾಗುತ್ತದೆ. ತಮ್ಮ ಆಹಾರಕ್ರಮದ ಬಗ್ಗೆ ಜಾಗರೂಕತೆ ವಹಿಸಬೇಕಾಗುತ್ತದೆ.

ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ

ಈ ಸಂಶೋಧನೆಯ ಪ್ರಕಾರ ಬಹಳ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನೆಲಗಡಲೆಯನ್ನು ನಿಯಮಿತವಾಗಿ ಕೊಡುತ್ತಾ ಬಂದಲ್ಲಿ ಇಂತಹ ಅಲರ್ಜಿಯ ಸಮಸ್ಯೆಯೇ ಬರುವುದಿಲ್ಲ ಎಂದು ಹೇಳಲಾಗಿದೆ. ಈ ಸಂಶೋಧನೆಯ ಸಂದರ್ಭ ಸುಮಾರು ಈ ಮೊದಲು ನೆಲಗಡಲೆಯ ಅಲರ್ಜಿಯಿದೆಯೆಂದು ಹೇಳಲಾಗಿದ್ದ ಮೂರು ವರ್ಷದೊಳಗಿನ ೧೪೬ ಮಕ್ಕಳಿಗೆ ನೆಲಗಡಲೆ ಪುಡಿಯನ್ನು ನಿಯಮಿತವಾಗಿ ನೀಡಲಾಗಿದೆ. ಇದರಲ್ಲಿ ೯೬ ಮಕ್ಕಳಿಗೆ ದಿನಕ್ಕೆ ಆರು ನೆಲಗಡಲೆಯ ಪ್ರಮಾಣದ ನೆಲಗಡಲೆ ಪ್ರೊಟೀನ್‌ ಪುಡಿಯನ್ನು ನೀಡಲಾಗಿದ್ದು ಈ ಮಕ್ಕಳಲ್ಲಿ ನಿಧಾನವಾಗಿ ನೆಲಗಡಲೆ ವಿರುದ್ಧದ ಅಲರ್ಜಿ ಕಡಿಮೆಯಾಗುತ್ತಾ ಸಾಗಿದೆ. ೨೦ ಮಕ್ಕಳಲ್ಲಿ ಆರು ತಿಂಗಳಲ್ಲಿ ಅಲರ್ಜಿಯ ಯಾವುದೇ ಪರಿಣಾಮಗಳೂ ಕಂಡು ಬಂದಿಲ್ಲ. ಒಬ್ಬ ಮಗುವಿಗೆ ಮಾತ್ರ ಇದರಿಂದ ಯಾವ ಪ್ರಯೋಜನವೂ ಆಗಿಲ್ಲವಾಗಿದ್ದು ಅಲರ್ಜಿಯೆಂಬ ತೊಂದರೆ ಹಾಗೆಯೇ ಉಳಿದುಕೊಂಡಿದೆ.

ನೆಲಗಡಲೆಯ ಅಂಶಗಳು ಇರುವ ಆಹಾರ ಸೇವನೆಯಿಂದಲೂ ಪಾಶ್ಚಿಮಾಥ್ಯ ಮಕ್ಕಳಲ್ಲಿ ಅಲರ್ಜಿ ಉಲ್ಬಣಿಸಿಬಿಡುತ್ತದೆ. ಹಾಗಾಗಿ ಬಹಳಷ್ಟು ಸಂದರ್ಭಗಳಲ್ಲಿ ಆಆರ ಸೇವನೆಯ ಸಂದರ್ಭ ಜಾಗರೂಕತೆ ಬಯಸುವ ಈ ಪರಿಸ್ಥಿತಿಗೆ ಕೇವಲ ಒಂದು ಇಂಜೆಕ್ಷನ್‌ ಮಾತ್ರದಿಂದ ಪರಿಹಾರ ಲಭ್ಯವಿತ್ತು. ಈಗ, ಚಿಕ್ಕ ಮಗುವಾಗಿದ್ದಾಗಿನಿಂದಲೇ, ನೆಲಗಡಲೆಯನ್ನೇ ಆಹಾರ ಕ್ರಮದಲ್ಲಿ ಸೇರಿಸುವ ಮೂಲಕ ಮಕ್ಕಳ ದೇಹ ನೆಲಗಡಲೆಯ ವಿರುದ್ಧ ಹೋರಾಡುವ ಗುಣವನ್ನು ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ದಿ ಲಾನ್ಸೆಟ್‌ ಎಂಬ ಸಂಶೋಧನಾ ಪತ್ರಿಕೆ ಈ ಸಂಶೋಧನೆಯ ವಿವರವನ್ನು ಪ್ರಕಟ ಮಾಡಿದೆ. 

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

Exit mobile version