ಋತುಮಾನಕ್ಕೆ ತಕ್ಕ ಹಣ್ಣುಗಳ ಸೇವನೆ ಒಳ್ಳೆಯದು ಎಂಬ ಮಾತುಗಳನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಆಯಾ ಕಾಲಕ್ಕೆ ದೊರೆಯುವ ಹಣ್ಣುಗಳಲ್ಲೂ ಕೆಲವೊಮ್ಮೆ ನಾನಾ ಬಣ್ಣ, ರುಚಿ, ಗಾತ್ರಗಳಲ್ಲಿ ಇರುತ್ತವಲ್ಲ, ಯಾವುದನ್ನು ಆಯ್ದುಕೊಳ್ಳುವುದು ಎಂಬ ಗೊಂದಲ ಉಂಟಾಗಬಹುದು. ಉದಾ, ಸೀಬೆ ಕಾಯಿ, ಚೇಪೆ ಕಾಯಿ ಅಥವಾ ಪೇರಲೆ ಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಈ ಫಲ, ಬಿಳಿ ಅಥವಾ ತಿಳಿ ಹಳದಿ ಮತ್ತು ಕೆಂಪು ಅಥವಾ ತಿಳಿಗುಲಾಬಿ ಬಣ್ಣಗಳಲ್ಲಿ ಬರುತ್ತದೆ. ಯಾವ ಬಣ್ಣದ ಫಲದ ಗುಣಧರ್ಮಗಳೇನು, ಯಾವುದು ಹೆಚ್ಚು ಸೂಕ್ತ ಎಂಬಂಥ ಪ್ರಶ್ನೆಗಳಿದ್ದರೆ, ಇಲ್ಲಿದೆ ಉತ್ತರ.
ಪೇರಲೆ ಹಣ್ಣು ಯಾರಿಗೆ ಬೇಡ? ಇನ್ನೊಬ್ಬರ ಮನೆಯ ಮರದಿಂದ ಕಿತ್ತು/ಕದ್ದು ತಿನ್ನುವುದಕ್ಕೆಂದೇ ಇರುವ ಹಣ್ಣುಗಳ ಪೈಕಿ ಇದೂ ಒಂದಲ್ಲವೇ? ಆದರೆ ಪೇರಲೆಯನ್ನು ತೀರಾ ಮಾಗಿದ್ದು ತಿನ್ನುವುದಕ್ಕಿಂತ ಸ್ವಲ್ಪ ಕಾಯಿದ್ದಾಗಲೇ ತಿನ್ನುವುದು ಸೂಕ್ತ ಎನ್ನುತ್ತಾರೆ ಆಹಾರ ತಜ್ಞರು. ತೀರಾ ಹಣ್ಣಾಗಿದ್ದರೆ ನೆಗಡಿ-ಕೆಮ್ಮಿನಂಥ ಸಮಸ್ಯೆಗಳು ಕೆಲವೊಮ್ಮೆ ಕಾಣಿಸಿಕೊಳ್ಳಬಹುದು. ಸ್ವಲ್ಪ ಸಿಹಿ, ಚೂರು ಹುಳಿ ರುಚಿಯನ್ನು ಹೊಂದಿರುವ ಈ ಫಲ, ಕಾಯಿದ್ದಾಗ ಸ್ವಲ್ಪ ಒಗರು ಇರುವುದಕ್ಕೂ ಸಾಕು. ಪೇರಲೆಯ ಬಣ್ಣ ಯಾವುದೇ ಇರಲಿ, ಈ ಹಣ್ಣಿನಲ್ಲಿ ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವ ಗುಣವಿದೆ. ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಾಂಗದ ಆರೋಗ್ಯಕ್ಕೆ ಸಹಕಾರಿ, ತೂಕ ಇಳಿಸುವವರಿಗೆ ಒಳ್ಳೆಯ ಆಯ್ಕೆ, ಮಾತ್ರವಲ್ಲದೆ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ, ಚರ್ಮದ ಕಾಂತಿಗೂ ನೆರವು ನೀಡುತ್ತದೆ.
ಇಷ್ಟೊಂದು ಗುಣಗಳ ಗಣಿಯಾಗಿರುವ ಈ ಹಣ್ಣು ತನ್ನ ಬಣ್ಣಕ್ಕನುಗುಣವಾಗಿ ಕೆಲವು ಭಿನ್ನ ಗುಣಗಳನ್ನು ಹೊಂದಿದೆ. ಅಂದರೆ, ಕೆಂಪು ಪೇರಲೆಯ ಗುಣಗಳನ್ನು ನೋಡುವುದಾದರೆ- ಇದರಲ್ಲಿ ನೀರಿನ ಪ್ರಮಾಣ ಹೆಚ್ಚು. ವಿಟಮಿನ್ ಸಿ, ಸ್ಟಾರ್ಚ್ ಮತ್ತು ಸಕ್ಕರೆಯ ಅಂಶ ಕಡಿಮೆ. ಬೀಜಗಳು ಕಡಿಮೆ ಇರುವುದರಿಂದ ಪೇಯವಾಗಿ ಬಳಸುವುದಕ್ಕೆ ಹೆಚ್ಚು ಯುಕ್ತ. ಕ್ಯಾರೆಟ್, ಟೊಮೇಟೊದಂಥ ತರಕಾರಿಗಳಲ್ಲಿ ಕೆಂಬಣ್ಣಕ್ಕೆ ಕಾರಣವಾಗುವಂಥ ಅತ್ಯುಪಕಾರಿ ಕೆರೋಟಿನಾಯ್ಡ್‌ಗಳ ಮತ್ತು ಪಾಲಿಫೆನೋಲ್‌ಗಳ ಇರುವಿಕೆಯೇ ಪೇರಲೆಯ ಕೆಂಪು ಬಣ್ಣಕ್ಕೆ ಕಾರಣ. ಕೆರೋಟಿನಾಯ್ಡ್‌ಗಳ ಸಾಂದ್ರತೆ ಹೆಚ್ಚಿದಂತೆ ತಿಳಿಗುಲಾಬಿಯಿಂದ ಪೇರಲೆಯ ಬಣ್ಣ ಕೆಂಪಿನೆಡೆಗೆ ತಿರುಗುತ್ತದೆ. ಒಮೇಗಾ ೩ ಫ್ಯಾಟಿ ಆಮ್ಲ ಸಾಕಷ್ಟು ಪ್ರಮಾಣದಲ್ಲಿದ್ದು, ಆಂಟಿ ಆಕ್ಸಿಡೆಂಟ್‌ಗಳ ಉತ್ತಮ ಮೂಲವಿದು.
ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ
ಇನ್ನು ಬಿಳಿ ಅಥವಾ ತಿಳಿಹಳದಿ ಬಣ್ಣದ ಪೇರಲೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಕ್ಕರೆ ಪ್ರಮಾಣ ಕೆಂಪು ಪೇರಲೆಗಿಂತ ಸ್ವಲ್ಪ ಹೆಚ್ಚು. ಬೀಜವೂ ಹೆಚ್ಚಾಗಿದ್ದು, ವಿಟಮಿನ್ ಸಿ ಮತ್ತು ಸ್ಟಾರ್ಚ್ ಪ್ರಮಾಣವೂ ಅಧಿಕ. ಇದು ಸಹ ಆಂಟಿ ಆಕ್ಸಿಡೆಂಟ್‌ಗಳ ಉತ್ತಮ ಮೂಲ. ಆದರೆ ಕೆಂಪು ಬಣ್ಣಕ್ಕೆ ಕಾರಣವಾಗುವ ಕೆರೋಟಿನಾಯ್ಡ್ ಮತ್ತು ಪಾಲಿಫೆನೋಲ್‌ಗಳು ಬಿಳಿ ಪೇರಲೆಯಲ್ಲಿಲ್ಲ. ಉಳಿದಂತೆ, ನಾರು, ವಿಟಮಿನ್-ಎ ನಂಥ ಅಂಶಗಳು ಎರಡೂ ಬಗೆಯ ಪೇರಲೆಗಳಲ್ಲಿ ಸಮಾನವಾಗಿವೆ. ಒಟ್ಟಿನಲ್ಲಿ, ʻಸೂಪರ್ ಫ್ರೂಟ್ʼ ಎಂಬ ಕಿರೀಟವಿರುವುದು ಕೆಂಪು ಪೇರಲೆಗೆ ಎನ್ನುವುದು ನಿಜ.
ಖರೀದಿಸುವಾಗ ಗಮನಿಸಿ: ಆದಷ್ಟು ಕುಂದಿಲ್ಲದ ಹಣ್ಣುಗಳನ್ನು ಖರೀದಿಸುವುದು ಸೂಕ್ತ. ಸಣ್ಣ ಅಥವಾ ಮಧ್ಯಮ ಗಾತ್ರದ ಹಣ್ಣುಗಳು ನಮ್ಮ ಆಯ್ಕೆಯಾಗಿದ್ದರೆ ಅನುಕೂಲ. ಕಾರಣ, ವಿಟಮಿನ್-ಸಿ ಹೆಚ್ಚಿರುವ ಹಣ್ಣುಗಳನ್ನು ಕತ್ತರಿಸಿ ಇಡುವುದು ಸೂಕ್ತವಲ್ಲದ್ದರಿಂದ, ಒಮ್ಮೆಗೆ ಒಂದು ಹಣ್ಣನ್ನು ತಿಂದು ಮುಗಿಸಲು ಆಗುವಂತಿರಲಿ ಹಣ್ಣುಗಳ ಗಾತ್ರ. ಎಲ್ಲೆಲ್ಲಿಂದಲೋ ಆಮದಾಗಿ ಬರುವ ಪೇರಲೆಗಳಿಗಿಂತ, ಸ್ಥಳೀಯವಾಗಿ ಬೆಳೆಯುವ ಪೇರಲೆಯ ಜಾತಿಯ ಬಳಕೆ ಉತ್ತಮ. ಹಾಗಂತ ರುಚಿಗಾಗಿ ಬೇರೆಬೇರೆ ಊರುಗಳ ಪೇರಲೆ ಖರೀದಿಸುವುದು ತಪ್ಪಲ್ಲ.
ಇದನ್ನೂ ಓದಿ : Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು