ʻಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು/ ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂಬರು/ ಮಳೆ ಬಿತ್ತೋ? ಎಂಬ ಟೀಕೆ/ ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!ʼ ಎಂಬ ಜನಪ್ರಿಯ ಕವಿವಾಣಿ ಅಕ್ಷರಶಃ ಸತ್ಯ ಎನಿಸುತ್ತದೆ. ಕಾರಣ, ಚಳಿಗಾಲದಲ್ಲಿ ಮೈಯೆಲ್ಲಾ ಬಿರಿದು, ಉರಿಯುತ್ತಿರುತ್ತದೆ; ಕೂದಲು ಉದುರಿ ತಲೆಯೆಲ್ಲಾ ಹೊಟ್ಟು; ತುಟಿಯೊಡೆದು, ಹಿಮ್ಮಡಿ ತರಿಯಾಗುತ್ತದೆ ಎಂಬ ದೂರು. ಅದೆಲ್ಲಾ ಮುಗಿದು ಬೇಸಿಗೆ ಬಂದರೆ- ಹಾಳು ಬಿಸಿಲಿನಿಂದ ಬೆವರುಸಾಲೆ, ಚರ್ಮವೆಲ್ಲಾ ಸುಟ್ಟು ಕೆಂಪಾಗುತ್ತಿದೆ, ಕೂದೆಲೆಲ್ಲಾ ಒಣಗಿ ಹುಲ್ಲಿನಂತಾಗಿದೆ- ಹೀಗೆ ಮುಂದುವರಿಯುತ್ತದೆ ತಕರಾರು. ಇನ್ನೊಂದು ತಿಂಗಳಿಗೆ ಮತ್ತೆ ಮಳೆಗಾಲದ ಕಂಪ್ಲೇಂಟು ಶುರು ಆಗುತ್ತದೆ.
ಇರಲಿ, ನಾವಿದ್ದಲ್ಲಿಗೆ ನಮ್ಮ ತಕರಾರುಗಳೂ ಇದ್ದದ್ದೇ. ಆದರೆ ಬೇಸಿಗೆಯ ಹೊಡೆತಕ್ಕೆ ಸಿಲುಕಿ ನಲುಗದಂತೆ ನಮ್ಮ ಕೂದಲನ್ನು (Hair care habits) ಕಾಪಾಡಿಕೊಳ್ಳುವುದು ಹೇಗೆ? ಬೆವರಿನಿಂದ ತಲೆಯ ಚರ್ಮ ಪದೇಪದೆ ಕೊಳಕಾಗಿ, ನವೆಯುಂಟಾಗಿ, ಹೊಟ್ಟಾಗಿ ತೊಂದರೆ ಕೊಡುತ್ತದೆ. ಉರಿಯುತ್ತಿರುವ ಗೋಳದಂಥ ಸೂರ್ಯನ ಅತಿನೇರಳೆ ಕಿರಣಗಳಿಂದ ಕೂದಲಿಗೆ ಹಾನಿಯಾಗಬಹುದು, ಒಣಗಿ ತುಂಡಾಗಬಹುದು. ಬೇಸಿಗೆಯಲ್ಲಿ ಪೋಷಕಾಂಶಗಳ ಕೊರತೆಯಾಗಿ ಕೂದಲು ಸಿಕ್ಕಾಪಟ್ಟೆ ಉದುರಲೂಬಹುದು. (Hair care habits) ಇಂಥ ಸಂದರ್ಭದಲ್ಲಿ ಏನು ಮಾಡಬಹುದು?
ತಲೆಸ್ನಾನ
ಬೆವರಿನಿಂದ ಕೂದಲು ಒದ್ದೆಯಾಗುತ್ತಿರುವಾಗ ಪದೇಪದೆ ತಲೆಸ್ನಾನ ಮಾಡಬೇಕೆನ್ನಿಸಿದರೆ ಸ್ವಲ್ಪ ತಾಳಿ. ಅತಿಯಾದ ಕ್ಲೋರಿನ ಅಂಶವೂ ಕೂದಲಿಗೆ ತೊಂದರೆ ಕೊಡುತ್ತದೆ. ಅಷ್ಟೇ ಅಲ್ಲ, ದಿನದಿನವೂ ತಲೆಸ್ನಾನ ಮಾಡುವುದು ತಲೆಶೂಲೆಯಂಥ ಸಮಸ್ಯೆಗಳನ್ನು ತರಬಹುದು. ತಲೆ ಸ್ನಾನದ ಹೊತ್ತಿನಲ್ಲಿ ಸೌಮ್ಯವಾದ ಶಾಂಪೂ ಬಳಸಿ, ಕಂಡೀಶನರ್ ಉಪಯೋಗಿಸಬಹುದು. ರಾಸಾಯನಿಕ ಕಂಡೀಶನರ್‌ಗಳು ಬೇಡವೆಂದಿದ್ದರೆ ಮದರಂಗಿ, ಭೃಂಗರಾಜವನ್ನು ಬಳಸಬಹುದು.
ಕೇಶಾಲಂಕಾರ
ಯಾವುದೋ ಮದುವೆಮನೆಗೆಂದು ಅಲಂಕರಿಸಿಕೊಳ್ಳುತ್ತಿದ್ದೀರಾದರೆ, ಸ್ವಲ್ಪ ಜಾಗ್ರತೆ ಮಾಡಿ. ಹೀಟ್ ಸ್ಟೈಲಿಂಗ್, ಅಂದರೆ ಡ್ರೈಯರ್, ಸ್ಟ್ರೇಟ್ನರ್, ಕೂದಲು ಸುರುಳಿ ಮಾಡುವುದು ಮುಂತಾದ ಹೀಟೀಂಗ್ ಉಪಕರಣಗಳನ್ನು ಬೇಸಿಗೆಯಲ್ಲಿ ಆದಷ್ಟೂ ಬಳಸಬೇಡಿ. ಸಾಮಾನ್ಯ ಜೆಲ್‌ಗಳಿಂದಲೂ ಸುಂದರ ಕೇಶಾಲಂಕಾರ ಸಾಧ್ಯವಿದೆ.
ಪರದೆ ಬಳಸಿ
ಹೌದು, ತಲೆಗೂದಲಿಗೂ ಪರದೆ ಬಳಸಬಹುದು. ಬಿಸಿಲಿಗೆ ಹೋಗುವಾದ ತೆಳುವಾದ ಸ್ಕಾರ್ಫ್ ಅಥವಾ ಕ್ಯಾಪ್ ಬಳಸುವುದರಿಂದ ಅತಿನೇರಳೆ ಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳಬಹುದು. ಮಾತ್ರವಲ್ಲ, ಕೂದಲು ಒಣಗಿ, ಬಣ್ಣಗೆಟ್ಟು ತುಂಡಾಗುವುದನ್ನೂ ತಪ್ಪಿಸಬಹುದು.
ಕತ್ತರಿಸಿ
ಸಾಮಾನ್ಯವಾಗಿ ಕೂದಲ ತುದಿಗಳು ಸಪೂರಾಗಿ, ಕವಲೊಡೆದು ಹೋಗುವ ಸಂಭವವಿರುತ್ತದೆ. ಇವುಗಳನ್ನು ಕಾಲಕಾಲಕ್ಕೆ ಕತ್ತರಿಸಿ. ಇದರಿಂದ ಕೂದಲು ಸಿಕ್ಕಾಗಿ, ಬಾಚುವಷ್ಟರಲ್ಲಿ ಇನ್ನಷ್ಟು ಉದುರುವುದನ್ನು ತಡೆಯಬಹುದು.
ಮಸಾಜ್ ಮತ್ತು ಹೇರ್‌ಪ್ಯಾಕ್
ಕೂದಲ ಬುಡಗಳಿಗೆ ಮಸಾಜ್ ಬೇಕೆಬೇಕು. ಶುದ್ಧ ಕೊಬ್ಬರಿ ಎಣ್ಣೆಯೂ ಈ ಕೆಲಸಕ್ಕೆ ಅನುಕೂಲವೇ. ಅದಿಲ್ಲದಿದ್ದರೆ ನಿಮ್ಮಷ್ಟದ ಯಾವುದಾದರೂ ಕೇಶ ತೈಲ ಬಳಸಿ ತಲೆಗೆ ಮಸಾಜ್ ಮಾಡಿ. ಇದರಿಂದ ಕೂದಲ ಬುಡಕ್ಕೆ ಚೆನ್ನಾಗಿ ರಕ್ತಸಂಚಾರವಾಗಿ, ಬೆಳವಣಿಗೆ ಹೆಚ್ಚುತ್ತದೆ. ಜೊತೆಗೆ, ಮೆಂತೆ, ಮೊಸರು, ಮೊಟ್ಟೆ ಮುಂತಾದ ವಸ್ತುಗಳಿಂದ ಹೇರ್‌ಪ್ಯಾಕ್ ಮಾಡುವುದರಿಂದ ಕೂದಲು ಒಣಗಿ ತುಂಡಾಗುವುದನ್ನು ತಪ್ಪಿಸಬಹುದು.
ಆಹಾರ
ತಿನ್ನುವ ಆಹಾರ ಸಮತೋಲಿತವಾಗಿರಬೇಕು. ಸಾಕಷ್ಟು ಪ್ರೊಟೀನ್, ಖನಿಜ ಮತ್ತು ಜೀವಸತ್ವಗಳು ಇಲ್ಲದಿದ್ದರೆ ಕೂದಲುದುರುವುದನ್ನು ತಡೆಯಲು ಸಾಧ್ಯವಿಲ್ಲ. ಆಹಾರದಲ್ಲಿ ಸಾಕಷ್ಟು ಬೀಜಗಳು, ಸೊಪ್ಪು, ಇಡೀ ಧಾನ್ಯಗಳನ್ನು ಸೇರಿಸಿಕೊಳ್ಳಿ. ಕುಡಿಯುವ ನೀರಿನ ಪ್ರಮಾಣ ಕಡಿಮೆಯಾದರೂ ಕೂದಲಿಗೆ ಹಾನಿಯಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ನಿರ್ಜಲೀಕರಣವಂತೂ ಕೂದಲಿಗೆ ಸಿಕ್ಕಾಪಟ್ಟೆ ತೊಂದರೆ ನೀಡುತ್ತದೆ. ಹಾಗಾಗಿ ನೀರು-ಆಹಾರ ಎರಡೂ ಗಮನಿಸಬೇಕಾದ ಅಂಶಗಳು
ನಿದ್ದೆ
ದೇಹದ ಯಾವುದೇ ಭಾಗಕ್ಕೆ ಆಗುವ ಹಾನಿಯನ್ನು ರಿಪೇರಿ ಮಾಡುವ ಸಮಯವೆಂದರೆ ನಿದ್ದೆ. ದಿನವಿಡೀ ನಾವು ಮಾಡುವ ಕೆಲಸಗಳಿಂದ ಉಂಟಾಗುವ ಮಾನಸಿಕ, ದೈಹಿಕ ಒತ್ತಡಗಳನ್ನು ನಿವಾರಿಸಿ ದೇಹವನ್ನು ಸಮಸ್ಥಿತಿಗೆ ತರುವಲ್ಲಿ ನಿದ್ದೆ ಮಹತ್ವದ ಪಾತ್ರ ವಹಿಸುತ್ತದೆ. ಇದರಿಂದ ಹಾರ್ಮೋನುಗಳ ಏರುಪೇರನ್ನೂ ಸರಿದೂಗಿಸಬಹುದು. ಹಾಗಾಗಿ ಪ್ರತಿದಿನ ಕಣ್ತುಂಬಾ ನಿದ್ದೆ ಮಾಡಿ.
ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!