ಬೇಸಗೆ ಎಂಬ ಧಗೆ ಮುಗಿದು ಮಳೆ ಶುರುವಾಗುತ್ತಿದ್ದಂತೆ ಮನಸ್ಸು ದೇಹ ಎರಡೂ ಮುದಗೊಂಡು ಉಲ್ಲಾಸಗೊಳ್ಳುತ್ತದೆ. ವಿಪರೀತ ಸೆಖೆಯಿಂದ ಅನುಭವಿಸುತ್ತಿದ್ದ ಕಿರಿಕಿರಿಯಿಂದ ಮುಕ್ತಿ ದೊರೆತು ಖುಷಿ ಸಿಗುತ್ತದೆ. ಆದರೆ, ಕೂದಲ ವಿಷಯಕ್ಕೆ ಬಂದರೆ ಮಾತ್ರ, ಬಹಳಷ್ಟು ಮಂದಿಗೆ ಮಳೆಯೆಂದರೆ ಕಿರಿಕಿರಿಯೇ. ಒದ್ದೆಕೂದಲ ಸಮಸ್ಯೆಗಳು ನೂರಾರು. ಕೂದಲುದುರುವುದರಿಂದ ಹಿಡಿದು, ತನ್ನ ಹೊಳಪನ್ನು ಕಳೆದುಕೊಂಡು ನಿಸ್ತೇಜವಾಗುವುದರವರೆಗೆ ಹತ್ತು ಹಲವು ತೊಂದರೆಗಳು ಇನ್ನಿಲ್ಲದಂತೆ ಕಾಡುತ್ತದೆ. ದಿನನಿತ್ಯ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕೂದಲ ಆರೋಗ್ಯವನ್ನು (Hair care in Monsoon) ಕಾಪಾಡಬಹುದು.
1. ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಳೆಗೆ ಸಿಕ್ಕಿ ಒದ್ದೆಯಾದ ಮೇಲೆ ಕೂದಲನ್ನು ತೊಳೆದು ಮೆದುವಾಗಿ ಒತ್ತಿ ಒರೆಸಿಕೊಳ್ಳಿ. ಕೂದಲ ಬುಡವನ್ನೂ ಚೆನ್ನಾಗಿ ತೊಳೆದುಕೊಳ್ಳಿ. ಹೆಚ್ಚಿನ ಜಿಡ್ಡಿನಂಶ ಕೂದಲೆಡೆಯಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಿ. ನಿಮ್ಮ ಕೂದಲಿಗೆ ಸೂಕ್ತವಾಗುವ ಶಾಂಪೂ ಹಾಗೂ ಕಂಡೀಷನರ್ ಬಳಸಿ.
2. ಮಳೆಗಾಲದಲ್ಲಿ ಕೂದಲನ್ನು ಆಗಾಗ ಕತ್ತರಿಸಿಕೊಳ್ಳಿ. ಟ್ರಿಮ್ ಮಾಡಿಕೊಳ್ಳುವುದರಿಂದ ಸ್ಟೈಲ್ ಕಾಯ್ದುಕೊಳ್ಳುವುದೂ ಸಹಕಾರಿಯಾಗುತ್ತದೆ. ಆ ಮೂಲಕ ಕೂದಲ ಸೀಳುವಿಕೆ ಹಾಗೂ ಒಣಗುವಿಕೆಯಂತಹ ತೊಂದರೆಗಳಿಂದ ಮುಕ್ತರಾಗಬಹುದು.
3. ಮಳೆಗಾಲದ ಸಂದರ್ಭ ಅತಿಯಾದ ಸೆಖೆಯೂ ಇದ್ದರೆ, ವಾತಾವರಣದಲ್ಲಿ ನೀರಿನಂಶ ಜಾಸ್ತಿಯಾಗಿದ್ದರೆ, ಕೂದಲು ಬಡಕಲಾಗಿ ಹಾರಾಡುತ್ತಿರುತ್ತದೆ. ಬೇಕಾದ ಹಾಗೆ ಕೂದಲನ್ನು ಪಳಗಿಸಿ ಸೆಟ್ ಮಾಡಲು ಕಷ್ಟವಾಗುತ್ತದೆ. ಅದಕ್ಕಾಗಿ ಸೀರಮ್ ಬಳಕೆ ಮಾಡಬಹುದು.
4. ಕೂದಲನ್ನು ಹಾಗೇ ಬಿಡುವ ಬದಲು ಮಳೆಗಾಲದಲ್ಲಿ ಕಟ್ಟಿಕೊಳ್ಳಿ. ಒಂದು ಪೋನೀಟೇಲ್, ಬನ್, ಅಥವಾ ಒಂದು ಜಡೆ ಹೆಣೆದುಕೊಳ್ಳುವ ಮೂಲಕ ಟ್ರೆಂಡ್‌ನಲ್ಲಿಯೂ ಇರಬಹುದು.
5. ವಾಹನಗಳಲ್ಲಿ ಪ್ರಯಾಣ ಮಾಡುವ ಸಂದರ್ಭ ಸ್ಕಾರ್ಫ್ ಅಥವಾ ಹುಡ್ ಬಳಸಿಕೊಳ್ಳಬಹುದು. ಗಾಳಿಗೆ ಕೂದಲು ಹಾರಾಡಿ ಗಂಟುಗಳಾಗದಂತೆ ನೋಡಿಕೊಳ್ಳಿ.
6. ಅತಿಯಾದ ಉಷ್ಣತೆಯ ಉಪಕರಣಗಳಿಂದ ಕೂದಲು ಒಣಗಿಸಿಕೊಳ್ಳುವುವು ಸ್ಟೈಲಿಂಗ್ ಮಾಡಿಕೊಳ್ಳುವುದು ಕಡಿಮೆ ಮಾಡಿ. ಒದ್ದೆ ಕೂದಲನ್ನು ಒಣಗಿಸಲು ಪದೇ ಪದೇ ಡ್ರೈಯರ್ ಬಳಸಬೇಡಿ. ಅತಿಯಾದ ಉಷ್ಣತೆಗೆ ಕೂದಲು ಮತ್ತಷ್ಟು ಒಣಗಿಕೊಂಡು ನಿಸ್ತೇಜವಾಗಬಹುದು. ಸ್ಟೈಲಿಂಗ್ ಕ್ರೀಂಗಳು, ಜೆಲ್‌ಗಳಿಂದ ದೂರವಿರಿ. ಮಳೆಗಾಲದಲ್ಲಿ ಅವು ಇನ್ನಷ್ಟು ಹಾನಿ ಮಾಡುತ್ತವೆ.
7. ಮಳೆಗಾಲದಲ್ಲಿ, ಚಳಿಯಿದೆ ಎಂದು ಅತಿಯಾದ ಬಿಸಿನೀರಿಂದ ತಲೆಗೆ ಸ್ನಾನ ಮಾಡಬೇಡಿ. ಮಳೆಯಿರಲಿ, ಚಳಿಯಿರಲಿ, ಸೆಖೆಯಿರಲಿ, ಉಗುರು ಬೆಚ್ಚಗಿನ ನೀರು ಉತ್ತಮ.
ಇದನ್ನೂ ಓದಿ: Monsoon Driving: ಮಳೆಗಾಲದಲ್ಲಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್ ಗಮನದಲ್ಲಿರಲಿ
8. ಸ್ನಾನ ಮಾಡುವ ಒಂದೆರಡು ಗಂಟೆ ಮೊದಲು ಕೂದಲ ಬುಡಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಆಮೇಲೆ ಸ್ನಾನ ಮಾಡಿ. ಕೂದಲಿಗೆ ಬೇಕಾದ ಆರೈಕೆಯ ಅರ್ಧ ಬಾಗ ಇಲ್ಲೇ ಸಿಗುತ್ತದೆ. ಆಗಾಗ, ಮೊಸರು, ಮೊಟ್ಟೆಯ ಬಿಳಿ ಲೋಳೆ, ಅಗಸೆ ಬೀಜಕ್ಕೆ ನೀರು ಸೇರಿಸಿ ಕುದಿಸಿ ಸೋಸಿದರೆ ಮನೆಯಲ್ಲೇ ಮಾಡಿದ ಜೆಲ್, ಅಥವಾ ಅಲೊವೆರಾ ಜೆಲ್ ಜೊತೆಗೆ ಹರಳೆಣ್ಣೆ ಅಥವಾ ಆಲಿವ್ ಎಣ್ಣೆ ಮಿಕ್ಸ್ ಮಾಡಿ ಮಾಡಿದ ಪ್ಯಾಕ್‌ಗಳನ್ನು ಆಗಾಗ ಹಚ್ಚಿ ಗಂಟೆ ಬಿಟ್ಟು ತಲೆ ತೊಳೆಯಿರಿ.
9. ಆಹಾರ ಕ್ರಮದ ಬಗ್ಗೆಯೂ ಗಮನವಿರಲಿ. ಅತಿಯಾದ ಜಿಡ್ಡಿನ ಪದಾರ್ಥಗಳು, ಎಣ್ಣೆ ತಿಂಡಿಗಳಿಂದ ದೂರವಿರಿ. ಪ್ರೊಟೀನ್‌ಯುಕ್ತ ಆಹಾರ, ಮೊಳಕೆ ಕಾಳುಗಳನ್ನು ಅಡುಗೆಯಲ್ಲಿ ಸೇರಿಸಿ. ಕೂದಲು ಆಂತರಿಕವಾಗಿಯೂ ಬಲಗೊಳ್ಳುತ್ತದೆ.
10. ಕೂದಲುದುರುವಿಕೆ ಹೆಚ್ಚಾಗಿದ್ದರೆ, ಈರುಳ್ಳಿಯೊಂದರ ಸಿಪ್ಪೆ ಸುಲಿದು, ಅದರ ರಸ ಹಿಂಡಿ, ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಬಹುದು. ವಾರಕ್ಕೆರಡು ಬಾರಿಯಂತೆ ಒಂದು ತಿಂಗಳು ನಿಯಮಿತವಾಗಿ ಮಾಡಿದಲ್ಲಿ, ಕೂದಲು ಸದೃಢವಾಗಿ ಉದುರುವುದು ಕಡಿಮೆಯಾಗಿ ಮತ್ತೆ ಹೊಳಪನ್ನು ಪಡೆದುಕೊಳ್ಳುತ್ತದೆ. ಇದು ಸಾಧ್ಯವಿಲ್ಲದಿದ್ದರೆ, ಈರುಳ್ಳಿಯನ್ನು ಹೊಂದಿದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ತೊಳೆದುಕೊಳ್ಳುವುದರಿಂದ ಸಮಸ್ಯೆಯಿಂದ ದೂರಾಗಬಹುದು.
ಇದನ್ನೂ ಓದಿ: Monsoon Home Care Tips : ಮಳೆಗಾಲದಲ್ಲಿ ಮನೆಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ?