Site icon Vistara News

Hair Care: ನುಣುಪಾದ ಹೊಳೆವ ಕೂದಲಿಗೆ ಮನೆಯಲ್ಲೇ ಮಾಡಿ ಅಗಸೆ ಬೀಜದ ಜೆಲ್!

flax seed gel

ಇತ್ತೀಚೆಗಿನ ದಿನಗಳಲ್ಲಿ ಅಗಸೆ ಬೀಜ ಅಂದರೆ ಫ್ಲ್ಯಾಕ್‌ಸೀಡ್‌ ಬಳಕೆ ಹೆಚ್ಚಾಗಿದೆ. ಅಗಸೆ ಬೀಜದಲ್ಲಿರುವ ಆರೋಗ್ಯಕರ ಉಪಯೋಗಗಳನ್ನು ಜನರು ಪಡೆಯಲಾರಂಭಿಸಿದ್ದಾರೆ. ಕೆಲವು ಆಧಾರಗಳ ಪ್ರಕಾರ ಮನುಷ್ಯ ಕಂಡು ಹಿಡಿದ ಆಹಾರಗಳ ಮೂಲಗಳ ಪೈಕಿ ಈ ಅಗಸೆ ಬೀಜ ಅತ್ಯಂತ ಹಳೆಯವುಗಳ ಪೈಕಿ ಒಂದಂತೆ. ಇದರಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ಹಾಗೂ ಒಮೆಗಾ 3 ಫ್ಯಾಟಿ ಆಸಿಡ್‌ ಇದರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅಗಸೆಬೀಜದಲ್ಲಿ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಸಲಾಡ್‌, ಸ್ಮೂದಿ, ಲಡ್ಡು ಹಾಗೂ ಇನ್ನೂ ಅನೇಕ ವಿಧಾನಗಳ ಮೂಲಕ ಸೇವನೆ ಮಾಡಬಹುದು. ಇದು ಅತ್ಯಂತ ಉತ್ತಮ ತೂಕ ಇಳಿಸುವ ಆಹಾರಗಳಲ್ಲಿ ಒಂದು. ಆದರೆ, ಅಗಸೆ ಬೀಜ ಕೇವಲ ಪೋಷಕಾಂಶಯುಕ್ತ ಆಹಾರವಷ್ಟೇ ಅಲ್ಲ, ಅದರಿಂದ ಸೌಂದರ್ಯ ಸಮಸ್ಯೆಗಳಿಗೂ ಸಾಕಷ್ಟು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಈ ಹೊಳೆಯುವ ಬೀಜಗಳು ಕೂದಲ ಹೊಳಪಿಗೂ ಅತ್ಯುತ್ತಮ ಪರಿಹಾರ (Hair Care tips) ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಒಮ್ಮೆ ಪ್ರಯತ್ನಿಸಿ ನೋಡಿ. ಮತ್ತೆ ನೀವು ಅಗಸೆ ಬೀಜದ ಕೈಯನ್ನು ಎಂದಿಗೂ ಬಿಡಲಾರಿರಿ.

ಅಗಸೆ ಬೀಜದ ಜೆಲ್:‌ ಅಗಸೆ ಬೀಜ ಅಥವಾ ಫ್ಲ್ಯಾಕ್‌ ಸೀಡ್‌ ನಮ್ಮ ಕೂದಲು ಹಾಗೂ ಕೂದಲ ಬುಡವನ್ನು ಅತ್ಯುತ್ತಮವಾಗಿ ಪೋಷಣೆ ಮಾಡುತ್ತದೆ. ಫ್ಲ್ಯಾಕ್‌ ಸೀಡ್‌ ಎಣ್ಣೆಯನ್ನು ಮಾಡುವ ಮೂಲಕ ಅಥವಾ ಜೆಲ್‌ ಮಾಡಿ ತಲೆಗೆ ಹಚ್ಚುವ ಮೂಲಕ ಪ್ರಯೋಜನ ಪಡೆಯಬಹುದು. ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಕುದಿಸಿ ಆ ಕುದಿಯುವ ನೀರಿಗೆ ನಾಲ್ಕೈದು  ಚಮಚಗಳಷ್ಟು ಅಗಸೆ ಬೀಜಗಳನ್ನು ಹಾಕಿ ಕುದಿಯಲು ಬಿಡಿ. ಈ ಮಿಶ್ರಣ ಚೆನ್ನಾಗಿ ಕುದಿಯುತ್ತಿರುವಾಗ ಇದು ದಪ್ಪವಾಗುತ್ತಿರುವುದನ್ನು ನೀವು ಗಮನಿಸಬಹುದು. ಇದು ಒಂದು ಹಂತಕ್ಕೆ ಬಂದಾಗ ಅದನ್ನು ಕೆಳಗಿಳಿಸಿ ತಣಿಯಲು ಬಿಡಿ. ನಂತರ ಒಂದು ತೆಳ್ಳನೆಯ ಬಟ್ಟೆಯಲ್ಲಿ ಸೋಸಿಕೊಳ್ಳಿ. ಅಗಸೆ ಬೀಜದಿಂದ ಜೆಲ್‌ ಈಗ ಪ್ರತ್ಯೇಕವಾಗಿರುತ್ತದೆ. ಈ ಸೋಸಿದ ಜೆಲ್‌ಗೆ ಸ್ವಲ್ಪ ಮಾರುಕಟ್ಟೆಯಲ್ಲಿ ದೊರೆಯುವ ಅಲೊವಿರಾ ಅಥವಾ ಲೋಳೆಸರದ ಜೆಲ್ ಮೂರ್ನಾಲ್ಕು ಚಮಚದಷ್ಟು ಸೇರಿಸಿ. ಜೊತೆಗೆ ಅರ್ಗಾನ್‌ ಅಥವಾ ಬಾದಾಮಿ/ತೆಂಗಿನೆಣ್ಣೆ ಅಥವಾ ಯಾವುದಾದರೊಂದು ಎಣ್ಣೆಯನ್ನು ಮೂರ್ನಾಲ್ಕು ಚಮಚದಷ್ಟು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಅಗಸೆ ಬೀಜದ ಜೆಲ್‌ ಸಿದ್ಧ. ಇದನ್ನು ಡಬ್ಬದಲ್ಲಿ ಹಾಕಿಟ್ಟು ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಹಾಗೂ ಪ್ರತಿಸಲ ತಲೆಗೆ ಸ್ನಾನ ಮಾಡುವ ಸಂದರ್ಭ ಹಚ್ಚಿಕೊಂಡು ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡಿಕೊಳ್ಳಿ.

ಇದನ್ನೂ ಓದಿ: Hair Care: ಕೂದಲು ಬೆಳ್ಳಗಾಗುತ್ತಿದೆಯೇ? ಈ ಆಹಾರಗಳು ನೆರವಾಗಬಹುದು!

ನಿಸ್ತೇಜವಾದ, ಕಳೆಯೇ ಇಲ್ಲದ ಕೂದಲನ್ನು ಹೊಳೆಯುವಂತೆ ಮಾಡುವ ಮನೆಯಲ್ಲೇ ಮಾಡಬಹುದಾದ ಇದು, ಮಾರುಕಟ್ಟೆಯ ರಾಸಾಯನಿಕಯುಕ್ತ ಕ್ರೀಂಗಳ ಮೂಲಕ ಕೂದಲನ್ನು ನುಣುಪು ಮಾಡುವ ತಂತ್ರಗಳಿಗೆ ಪರ್ಯಾಯವಾಗಿ ನಿಲ್ಲುತ್ತದೆ. ನಿತ್ಯವೂ ಹೊರಗಡೆ ಸುತ್ತಾಡುವ ಮಂದಿಗೆ ಮಾಲಿನ್ಯದಿಂದ ಕೂದಲು ಹಾನಿಯಾದುದಕ್ಕೂ ಕೂಡಾ ಇದು ಪರಿಹಾರ ನೀಡುತ್ತದೆ. ಆದರೆ ಇದೂ ಕೂಡಾ ಅತಿಯಾಗಂತೆ ನೋಡಿಕೊಳ್ಳಿ. ಅತಿಯಾದರೆ ಅಮೃತವೂ ವಿಷವೇ.

ಕೂದಲಿಗೆ ಬೇಕಾದ ವಿಟಮಿನ್‌ ಇ ಅಗಸೆ ಬೀಜದಲ್ಲಿ ಹೇರಳವಾಗಿದ್ದು ಕೂದಲಿಗೆ ಹಾನಿಯಾಗದಂತೆ ಇದು ರಕ್ಷಿಸುತ್ತದೆ. ಕೂದಲ ಬೆಳವಣಿಗೆಗೂ ಇದು ಪೂರಕವಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದನ್ನು ತಪ್ಪಿಸುತ್ತದೆ. ಇದರಲ್ಲಿರುವ ಒಮೆಗಾ ೩ ಫ್ಯಾಟಿ ಆಸಿಡ್‌ ಕೇವಲ ಕೂದಲಿಗಷ್ಟೇ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಕೂದಲು ಒರಟಾಗುವುದನ್ನು ಇದು ತಪ್ಪಿಸಿ ನುಣುಪಾಗಿರುವಂತೆ ನೋಡಿಕೊಳ್ಳುತ್ತದೆ. ಕೂದಲಿನಲ್ಲಿ ಅಗತ್ಯ ತೇವಾಂಶ ಎಣ್ಣೆಯನ್ನು ಇದು ಉಳಿಸಿ ತಲೆಕೂದಲ ಹೊಟ್ಟಿನಂತಹ ಸಮಸ್ಯೆಗೂ ಪರಿಹಾರ ನೀಡುತ್ತದೆ.

ಇದನ್ನೂ ಓದಿ: Hair Care: ನಿಮ್ಮ ಕೂದಲ ಮೇಲೆ ನಿಮಗೇ ಗೊತ್ತಿಲ್ಲದಂತೆ ನೀವು ಮಾಡುವ 9 ತಪ್ಪುಗಳು!

Exit mobile version