Site icon Vistara News

Hair Care: ತಲೆಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಸೂಕ್ತ?

hair oil usage

ಬಹಳಷ್ಟು ಸಲ ನಮ್ಮ ಕೂದಲಿಗೆ ಯಾವ ಎಣ್ಣೆ ಹಾಕುವುದು ಎಂಬಲ್ಲಿಂದಲೇ ನಮಗೆ ಸಂದೇಹಗಳು ಶುರುವಾಗುತ್ತವೆ. ಕೂದಲುದುರುವುದು, ಹೊಟ್ಟು, ಒರಟಾಗುವ ಕೂದಲು, ಸೀಳು ಕೂದಲು, ವಯಸ್ಸಾಗುವ ಮೊದಲೇ ಬೆಳ್ಳಗಾಗುವುದು ಹೀಗೆ ಕೂದಲಿನ ಸಮಸ್ಯೆಗಳು ಮುಗಿಯುವುದೇ ಇಲ್ಲ. ಹೊಸ ಆವಿಷ್ಕಾರಗಳು, ಔಷಧಿಗಳು ಏನೇ ಇರಲಿ, ತಲೆತಲಾಂತರಗಳಿಂದ ಬಂದ ನಂಬಿಕೆಯಂತೆ ತಲೆಗೆ ಎಣ್ಣೆ ಹಚ್ಚಿ ಬುಡಕ್ಕೆ ಮಸಾಜು ಮಾಡಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವಂಥ, ಹಾಗೂ ನಿತ್ಯ ಎಣ್ಣೆಯನ್ನು ಕೂದಲಿಗೆ ಹಚ್ಚಿ ತಲೆಕೂದಲನ್ನು ಹೆಚ್ಚು ಒಣ ಹಾಗೂ ಒರಟಾಗದಂತೆ ಕಾಪಾಡಿಕೊಳ್ಳುವಂಥ ಅಭ್ಯಾಸಗಳು ಕೂದಲನ್ನು ಎಂದೆಂದಿಗೂ ಕಾಪಾಡುತ್ತವೆ ಎಂಬುದು ನೆನಪಿರಲಿ. ಹಾಗಾದರೆ, ಯಾವ ಎಣ್ಣೆಗಳನ್ನು ತಲೆಗೆ ನಿಯಮಿತವಾಗಿ ಹಚ್ಚುವುದರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು (Hair Care tips) ಎಂಬುದನ್ನು ನೋಡೋಣ.

ತೆಂಗಿನೆಣ್ಣೆ: ದಕ್ಷಿಣ ಭಾರತೀಯರಿಗೆ ತೆಂಗಿನೆಣ್ಣೆಯ (coconut oil) ಬಗ್ಗೆ ಬಿಡಿಸಿ ಹೇಳುವ ಅಗತ್ಯವೇ ಇಲ್ಲ. ಸಂಶೋಧನೆಗಳ ಪ್ರಕಾರ ತೆಂಗಿನೆಣ್ಣೆ ಕೂದಲಲ್ಲಿ ಪ್ರೋಟೀನ್‌ ನಷ್ಟವಾಗದಂತೆ ತಡೆಯುತ್ತದೆ. ಕೂದಲನ್ನು ಒಣ, ನಿಸ್ತೇಜವಾಗದಂತೆ ನೋಡಿಕೊಳ್ಳುತ್ತದೆ. ಕೂದಲಿನ ಹೊಳಪನ್ನು ಹಾಗೆಯೇ ಉಳಿಸುತ್ತದೆ. ಗುಂಗುರು ಕೂದಲಿಗೆ ಇದು ಅತ್ಯುತ್ತಮ ಎಣ್ಣೆ.

ಬಾದಾಮಿ ಎಣ್ಣೆ: ನೇರವಾದ ಕೂದಲುಳ್ಳ ಮಂದಿಗೆ ಇದು ಅತ್ಯುತ್ತಮ. ತುಂಬ ಹಗುರವಾದ ಎಣ್ಣೆ ಇದಾಗಿದ್ದು ಕೂದಲನ್ನು ನಯವಾಗಿರಿಸುವುದಲ್ಲದೆ, ಶಕ್ತಿಯನ್ನೂ ನೀಡುತ್ತದೆ. ಕೂದಲಿನ ಮೇಲೆ ಅತಿ ಉಷ್ಣತೆಯ ಉಪಕರಣಗಳನ್ನು ಪದೇ ಪದೇ ಬಳಸಿ, ನೇರವಾಗಿಸುವುದು ಗುಂಗುರಾಗಿಸುವುದು ಮಾಡುವ ಮೂಲಕ ಹಾನಿಯಾಗಿದ್ದರೆ, ಅಂಥ ಕೂದಲಿಗೆ ಮರಳಿ ಚೈತನ್ಯ ನೀಡಲು ಬಾದಾಮಿ ಎಣ್ಣೆ ಉಪಯುಕ್ತ.

ಹರಳೆಣ್ಣೆ: ಜಿಗುಟು ಜಿಗುಟಾದ ಎಣ್ಣೆಯಾದರೂ ಕೂದಲಿಗೆ ಬಲು ಉತ್ತಮ. ಪ್ರತಿದಿನವೂ ಇದರ ಬಳಕೆ ಕಷ್ಟವಾದರೂ, ಮನೆಯಲ್ಲೇ ಇರುವ ವಾರಾಂತ್ಯಗಳಲ್ಲಿ, ಈ ಎಣ್ಣೆಯನ್ನು ಹಚ್ಚಿ ಮಸಾಜು ಮಾಡಿ ಸ್ನಾನ ಮಾಡಬಹುದು. ಕೂದಲನ್ನು ದಟ್ಟವಾಗಿಸುವ ಆಸೆ ಇದ್ದವರಿಗೆ ಇದು ಅತ್ಯುತ್ತಮ. ರೆಪ್ಪೆಗೂದಲು, ಹುಬ್ಬನ್ನು ದಟ್ಟವಾಗಿಸಲೂ ಇದನ್ನು ನಿತ್ಯ ಬಳಕೆ ಮಾಡಬಹುದು. ಬೇರೆ ಎಣ್ಣೆಗಳೊಂದಿಗೆ ಇದನ್ನು ಬೆರೆಸಿ, ಕೇವಲ ಬುಡಕ್ಕೆ ಹಚ್ಚಿಕೊಂಡು ಮಸಾಜ್‌ ಮಾಡಿ.

ದಾಸವಾಳದ ಎಣ್ಣೆ: ಕೆಂಪು ಬಣ್ಣದ ದಾಸವಾಳದ ಎಣ್ಣೆಯೂ ಕೂಡಾ ಕೂದಲು ಸೊಂಪಾಗಿ ಬೆಳೆಯಲು ಸೂಕ್ತ ಎಣ್ಣೆ. ತಲೆಹೊಟ್ಟಿಗೂ ಇದು ರಾಮಬಾಣ. ಕೆಂಪು ದಾಸವಾಳಗಳ ಹೂವನ್ನು ಬಳಸಿ ಮನೆಯಲ್ಲೇ ಎಣ್ಣೆಯನ್ನು ಮಾಡಬಹುದು. ಬಹಳ ಹಿಂದಿನಿಂದಲೇ ಭಾರತೀಯರ ಮನೆಗಳಲ್ಲಿ ಕೂದಲ ಆರೋಗ್ಯಕ್ಕೆ ನಿಯಮಿತವಾಗಿ ಬಳಸ್ಪಡುತ್ತಿದ್ದ ಎಣ್ಣೆಯಿದು. ದಾಸವಾಳದ ಎಲೆಯ ಎಣ್ಣೆ ಹೂವಿಗಿಂತಲೂ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಈರುಳ್ಳಿ ಎಣ್ಣೆ: ಈರುಳ್ಳಿಯನ್ನು ಬಳಸಿ ಮಾಡಿದ ಎಣ್ಣೆ, ಕೂದಲುದುರುವಿಕೆಯ ಸಮಸ್ಯೆ ಇದ್ದವರಿಗೆ ಹೇಳಿ ಮಾಡಿಸಿದ ಎಣ್ಣೆ. ಮನೆಯಲ್ಲಿಯೇ ಈರುಳ್ಳಿ ಬಳಸಿಯೂ ಇದನ್ನು ಮಾಡಿಕೊಳ್ಳಬಹುದು. ಇದರ ನಿಯಮಿತ ಬಳಕೆಯಿಂದ ಕೂದಲುದುರುವುದು ಕಡಿಮೆಯಾಗುವುದಲ್ಲದೆ, ಹೊಸ ಕೂದಲುಗಳೂ ಮೊಳೆಯಲು ಶುರುವಾಗುತ್ತವೆ.

ಇದನ್ನೂ ಓದಿ: Hair Care: ಕೂದಲಿಗೆ ಕಂಡೀಷನರ್‌ ಹಚ್ಚುವಾಗ ನೀವು ಈ ತಪ್ಪುಗಳನ್ನು ಮಾಡ್ಬೇಡಿ!

ನೆಲ್ಲಿಕಾಯಿ ಹಾಗೂ ಕರಿಬೇವಿನ ಎಣ್ಣೆ: ನೆಲ್ಲಿಕಾಯಿ ಹಾಗೂ ಕರಿಬೇವು ಎರಡೂ ಭಾರತೀಯರ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಕೂದಲಿನ ಕಪ್ಪುಬಣ್ಣವನ್ನು ಉಳಿಸಿಕೊಳ್ಳುವಲ್ಲಿ ಬಳಸುತ್ತಾ ಬಂದ ಮನೆಮದ್ದುಗಳು. ನೆಲ್ಲಿಕಾಯಿ ಹಾಗೂ ಕರಿಬೇವನ್ನು ಬಳಸಿ ಮಾಡಿದ ಎಣ್ಣೆಯಿಂದ ಕೂದಲು ವಯಸ್ಸಾಗುವ ಮೊದಲೇ ಕಪ್ಪಾಗುವುದನ್ನು ತಡೆದು ಕೂದಲಿನ ನಿಸರ್ಗದತ್ತ ಬಣ್ಣವನ್ನು ಉಳಿಸುವಲ್ಲಿ ಸಹಾಯ ಮಾಡುತ್ತವೆ ಹಾಗೂ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.

ಜೊಜೋಬಾ ಎಣ್ಣೆ: ಕೂದಲ ತುದಿ ಸೀಳಾಗುವ ತೊಂದರೆ ಇರುವ ಮಂದಿಗೆ ಈ ಎಣ್ಣೆ ಉತ್ತಮ. ಇದು ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಿ, ಕೂದಲ ಬುಡದಲ್ಲಿರುವ ತುರಿಕೆ ಕಜ್ಜಿಗಳನ್ನು ನಿವಾರಿಸುತ್ತದೆ.

ಅರ್ಗಾನ್‌ ಎಣ್ಣೆ: ಬಹಳ ಹಗುರವಾದ ಎಣ್ಣೆಯಿದು. ಒಣವಾಗಿ ನಿಸ್ತೇಜವಾಗಿರುವ ಕೂದಲಿಗೆ ಸೂಕ್ತ ಚೈತನ್ಯ ನೀಡಿ ಮೃದುವಾಗಿಸುತ್ತದೆ.

ಇದನ್ನೂ ಓದಿ: Hair care in Monsoon: ಮಳೆಗಾಲದಲ್ಲಿ ತಲೆಕೂದಲು ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

Exit mobile version