ಚಂದದ ಕೂದಲು ಯಾರಿಗೆ ಬೇಡ ಹೇಳಿ! ಮಹಿಳೆಯರಂತೆ ಪುರುಷರೂ ಹೆಚ್ಚು ತಲೆಕೆಡಿಸುವ ಏಕೈಕ ಸೌಂದರ್ಯ ಸಮಸ್ಯೆ ಎಂದರೆ ಬಹುಶಃ ಅದು ಕೂದಲ ಸಮಸ್ಯೆ. ಮುಖದ ಚರ್ಮದಂತೆ ಕೂದಲೂ ಕೂಡಾ ಬಾಹ್ಯ ಸೌಂದರ್ಯದ ಪ್ರಮುಖ ಭಾಗ. ಚಂದನೆಯ ಚರ್ಮದ ಒಳಗುಟ್ಟು ನಾವು ಸೇವಿಸುವ ಆಹಾರದಲ್ಲಿಯೂ ಇರುವಂತೆಯೂ ಕೂದಲ ಆರೋಗ್ಯವೂ ನಮ್ಮ ಆಹಾರಕ್ರಮವನ್ನು ಅವಲಂಬಿಸಿದೆ. ಚೆನ್ನಾಗಿ ಆರೈಕೆ ಮಾಡಿದ ಕೂದಲು ಆರೋಗ್ಯದಿಂದ ಪಳಪಳನೆ ಹೊಳೆಯುತ್ತಿರುತ್ತದೆ. ಕೇವಲ ಹೊರಗಿನ ಆರೈಕೆ ಮಾತ್ರ ಸಾಲದು. ಆಂತರಿಕವಾಗಿಯೂ ನಮ್ಮ ಆಹಾರ ಕೂದಲ ಆರೋಗ್ಯಕ್ಕೆ ಪೂರಕವಾಗಿರಬೇಕು. ಆದರೆ, ನಾವು ಸೇವಿಸುವ ಕೆಲವು ನಿತ್ಯದ ಆಹಾರಗಳೇ ನಮ್ಮ ಕೂದಲ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ. ಇದರಿಂದ ಕೂದಲು ಬಡಕಲಾಗಿ, ಕಳಾಹೀನವಾಗಿ ಕಾಣತೊಡಗುತ್ತದೆ. ಹಾಗಾದರೆ ಬನ್ನಿ, ಕೂದಲು ಸೊಂಪಾಗಿ ಆರೋಗ್ಯವಾಗಿರಲು ಹಾಗೂ ಯಾವ ಸಮಸ್ಯೆಗಳೂ ಕೂದಲ ಬಳಿ ಸುಳಿಯದಂತೆ ಮಾಡಲು ಯಾವೆಲ್ಲ ಆಹಾರಗಳಿಂದ ನಾವು ದೂರವಿರಬೇಕು (Hair Care tips) ನೋಡೋಣ.
೧. ಸಕ್ಕರೆ: ಹೌದು, ಸಕ್ಕರೆ ನಮ್ಮ ಆರೋಗ್ಯಕ್ಕೆ ಹೇಗೆ ಒಳ್ಳೆಯದಲ್ಲವೋ ಹಾಗೆಯೇ ಕೂದಲಿಗೂ ಒಳ್ಳೆಯದಲ್ಲ. ಬೊಜ್ಜು, ಮಧುಮೇಹದಂತಹ ತೊಂದರೆ ಇರುವ ಮಂದಿಗೆ ಸಕ್ಕರೆತಿನ್ನುವುದರಿಂದ ಕೂದಲು ಉದುರುವಿಕೆ, ಬೊಕ್ಕತಲೆ ಮುಂತಾದ ಸಮಸ್ಯೆಯೂ ಉಂಟಾಗಬಹುದು. ಇದರ ಹಿಂದಿನ ಹಲವು ಕಾರಣಗಳ ಪೈಕಿ ಇನ್ಸುಲಿನ್ ನಿರೋಧಕ ಶಕ್ತಿಯೂ ಒಂದು. ಸಕ್ಕರೆ, ಸ್ಟಾರ್ಚ್ ಹಾಗೂ ರಿಫೈನ್ಡ್ ಕಾರ್ಬೋಹೈಡ್ರೇಟ್‌ಗಳಂತ ಆಹಾರಗಳಲ್ಲಿ ಇದು ಹೆಚ್ಚಾಗಿರುವುದೂ ಕೂಡಾ ಪ್ರಮುಖ ಕಾರಣ.
೨. ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಇರುವ ಆಹಾರ: ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಇರುವ ಆಹಾರಗಳಾದ ಬ್ರೆಡ್, ಸಕ್ಕರೆ, ಮೈದಾದ ಆಹಾರ ತಿಂಡಿಗಳು ಇತ್ಯಾದಿಗಳು ಹಾರ್ಮೋನಿನ ಏರುಪೇರಿಗೆ ಕಾರಣವಾಗುತ್ತದೆ. ಇದರಿಂದ ಕೂದಲುರುವಿಕೆ ಆರಂಭವಾಗುತ್ತದೆ.
೩. ಆಲ್ಕೋಹಾಲ್: ಕೂದಲು ಕೆರಾಟಿನ್ ಎಂಬ ಪ್ರೊಟೀನಿನಿಂದ ಮಾಡಲ್ಪಟ್ಟಿದೆ. ಅದು ಕೂದಲಿಗೆ ಆಕಾರ ಕೊಡುತ್ತದೆ. ಆದರೆ ಆಲ್ಕೋಹಾಲ್ ಈ ಪ್ರೊಟೀನ್ ಸಿಂಥೆಸಿಸ್ ಮೇಲೆ ಆಲ್ಕೋಹಾಲ್ ಕೆಟ್ಟ ಪರಿಣಾಮಗಳನ್ನು ಬೀರಿ ಕೂದಲು ತೆಳುವಾಗುತ್ತಾ ಬರುತ್ತದೆ. ಕೂದಲಲ್ಲಿ ಹೊಳಪು ಕಡಿಮೆಯಾಗಿ ಬಡಕಲಾಗುತ್ತದೆ. ಹೆಚ್ಚು ಕುಡಿದರೆ, ಕೂದಲ ಬೇರುಗಳು ಸತ್ತು ಹೋಗಿ ಬೊಕ್ಕತಲೆಗೂ ಕಾರಣವಾಗುತ್ತದೆ.
೪. ಡಯಟ್ ಸೋಡಾ: ಡಯಟ್ ಸೋಡಾ ಹೆಸರಿನಲ್ಲಿ ಬರುವ ಕಾರ್ಬೋನೇಟೆಡ್ ಡ್ರಿಂಕ್‌ಗಳಲ್ಲಿ ಆಸ್ಪರ್ಟೇಮ್ ಎಂಬ ಕೃತಕ ಸಕ್ಕರೆ ಇರುವುದರಿಂದ ಇದು ಕೂದಲ ಬೇರಿಗೆ ಅತ್ಯಂತ ಅಪಾಯಕಾರಿಯಾಗಿದೆ. ಕೂದಲುರುವಿಕೆ ಆರಂಭವಾಘಿದ್ದರೆ, ಇಂತಹ ಆಹಾರಗಳಿಂದ ದೂರವಿರುವುದು ಒಳ್ಳೆಯದು.
ಇದನ್ನೂ ಓದಿ: Hair Care: ನುಣುಪಾದ ಹೊಳೆವ ಕೂದಲಿಗೆ ಮನೆಯಲ್ಲೇ ಮಾಡಿ ಅಗಸೆ ಬೀಜದ ಜೆಲ್!
೫. ಜಂಕ್ ಫುಡ್: ಜಂಕ್‌ಫುಡ್‌ನಲ್ಲಿರುವ ಸ್ಯಾಚುರೇಟೆಡ್ ಹಾಗೂ ಮೋನೋಸ್ಯಾಚುರೇಟೆಡ್ ಕೊಬ್ಬು ಕೇವಲ ನಿಮ್ಮ ಬೊಜ್ಜು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ಕೂದಲ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಹಾರ್ಮೋನಿನ ಏರುಪೇರಿಗೆ ನೇರವಾಗಿ ಕಾರಣವಾಗುವ ಮೂಲಕ ಕೂದಲು ಸಮಸ್ಯೆ ತಂದೊಡ್ಡುತ್ತದೆ.
೬. ಹಸಿ ಮೊಟ್ಟೆಯ ಬಿಳಿ ಭಾಗ: ಮೊಟ್ಟೆ ದೇಹಕ್ಕೆ ಅತ್ಯಂತ ಒಳ್ಳೆಯದು ಎಂಬುದು ನಿಜವಾದರೂ ಹಸಿ ಮೊಟ್ಟೆಯ ಬಿಳಿ ಭಾಗ ಬಯೋಟಿನ್ ಕೊರತೆಗೆ ಕಾರಣವಾಗುತ್ತದೆ. ಬಯೋಟಿನ್ ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುವುದರಿಂದ ಹಸಿಯಾಗಿ ತಿನ್ನುವುದರಿಂದ ದೂರವಿರಿ.
೭. ಮೀನು: ಪಾದರಸವು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಸಮುದ್ರದಲ್ಲಿ ಇತ್ತೀಚಿನ ದಶಕಗಳಲ್ಲಿ ಪಾದರಸದ ಪ್ರಮಾಣ ಹೆಚ್ಚಿರುವುದರಿಂದ ಇದು ಮೀನಿನ ದೇಹಕ್ಕೆ ಸೇರಿರುವ ಸಂಭವ ಹೆಚ್ಚು. ಸಮುದ್ರದ ಮೀನುಗಳಾದ ಸ್ವೋರ್ಡ್ ಫಿಶ್, ಮಕೆರೆಲ್, ಶಾರ್ಕ್ ಹಾಗೂ ಇತರ ಹಲವು ಮೀನಗಳಲ್ಲಿ ಪಾದರಸ ಅತ್ಯಂತ ಹೆಚ್ಚಿದೆ.
ಇದನ್ನೂ ಓದಿ: Hair Care: ಕೂದಲನ್ನು ಸೊಂಪಾಗಿಸುವ ಕೆಲವು ಮಾರ್ಗಗಳಿವು