Site icon Vistara News

Winter Home Remedies: ಚಳಿಗಾಲಕ್ಕೆ ಈ ಮನೆಮದ್ದುಗಳಿರಲಿ ನಿಮ್ಮ ಬತ್ತಳಿಕೆಯಲ್ಲಿ!

Home Remedies

ಚಳಿಗಾಲದಲ್ಲಿ ಒಂದಿಷ್ಟು ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಜ್ವರ, ನೆಗಡಿ, ಕೆಮ್ಮು, ಗಂಟಲು ನೋವಿನಂಥ ಲಕ್ಷಣಗಳು ಬಹಳ ಜನರಲ್ಲಿ ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಸೌಮ್ಯವಾಗಿದ್ದರೆ ಕೆಲವೊಂದು ಸರಳ ಮನೆಮದ್ದುಗಳಿಂದ (Winter Home Remedies) ಉಪಶಮನ ಹೊಂದಬಹುದು. ಆದರೆ ಲಕ್ಷಣಗಳು ತೀವ್ರಗೊಂಡರೆ ವೈದ್ಯರನ್ನು ಕಾಣಲೇಬೇಕಾಗುತ್ತದೆ. ಚಿಕ್ಕ-ಪುಟ್ಟ ನೆಗಡಿ-ಕೆಮ್ಮು-ಜ್ವರದಂಥ ಸಮಸ್ಯೆಗಳನ್ನು ಕಡಿಮೆ ಮಾಡುವಂಥ ಕೆಲವು ಸರಳ ಪರಿಹಾರಗಳು ಇಲ್ಲಿವೆ.

ಕಷಾಯಗಳು

ಕೆಲವು ಸರಳ ಕಷಾಯಗಳಿಂದ ಮುಂದಾಗುವ ದೊಡ್ಡ ಸಮಸ್ಯೆಗಳನ್ನು ಸಣ್ಣದಿದ್ದಾಗಲೇ ತಡೆಯಬಹುದು. ಇವನ್ನೆಲ್ಲಾ ಹೆಚ್ಚು ಕಷ್ಟವಿಲ್ಲದೇ ಮನೆಯಲ್ಲಿ ಮಾಡಿಕೊಳ್ಳಬಹುದು.

ಕಷಾಯ 1

ಅರಿಶಿನ ಪುಡಿ- 1/2 ಚಮಚ, ಒಣಶುಂಠಿ ಪುಡಿ- 1/2 ಚಮಚ, ಕಪ್ಪು ಕಾಳುಮೆಣಸಿನ ಪುಡಿ- 1/4 ಚಮಚ. ಇವುಗಳನ್ನು ಒಂದು ಲೀ. ನೀರಿನಲ್ಲಿ ಕುದಿಸಿ ಆರಿಸಿ ಶೋಧಿಸಿ ಇಟ್ಟುಕೊಳ್ಳಿ. ಊಟಕ್ಕಿಂತ ಒಂದು ಗಂಟೆ ಮೊದಲು ಅಥವಾ ಊಟವಾದ ಒಂದು ಗಂಟೆ ನಂತರ, ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಬಹುದು.

ಕಷಾಯ 2

ತುಳಸಿ ಎಲೆಗಳು- ಅರ್ಧ ಮುಷ್ಟಿ, ಚಕ್ಕೆ- ಒಂದಿಂಚು ಉದ್ದ, ಕರಿ ಕಾಳುಮೆಣಸು- ಏಳೆಂಟು, ಕೊತ್ತಂಬರಿ ಬೀಜ- ಒಂದು ಚಮಚ, ಬೆಲ್ಲ- ಸ್ವಲ್ಪ. ಇವೆಲ್ಲವನ್ನೂ ಒಂದು ದೊಡ್ಡ ಕಪ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಬಿಸಿ ಪೂರ್ತಿ ಆರುವ ಮುನ್ನ, ಉಗುರು ಬಿಸಿಯಿರುವಾಗಲೇ ಇದನ್ನು ಕುಡಿಯಿರಿ.

ಶುಂಠಿ

ನೆಗಡಿ, ಕೆಮ್ಮಿನಂಥ ಸಮಸ್ಯೆಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುವ ಉರಿಯೂತಕ್ಕೆ ಉಮಶಮನ ನೀಡುವಲ್ಲಿ ಶುಂಠಿ ಸಹಕಾರಿ. ದೇಹದ ಪಚನ ಕ್ರಿಯೆಯನ್ನು ಸರಾಗಗೊಳಿಸಿ ಕಟ್ಟಿದ ಗಂಟಲನ್ನು ಸರಿ ಮಾಡುತ್ತದೆ. ಇದನ್ನು ಸೇವಿಸುವುದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ:
ಒಂದು ಲೀ. ನೀರಿಗೆ ಅರ್ಥ ಚಮಚ ಒಣ ಶುಂಠಿ ಪುಡಿಯನ್ನು ಬೆರೆಸಿ. ಒಂದಿಂಚು ಉದ್ದದ ಹಸಿ ಶುಂಠಿಯನ್ನೂ ಇದಕ್ಕೆ ಹಾಕಿ. ಮಧ್ಯಮ ಉರಿಯಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಕುದಿಸಿ. ಇದು ಆರಿದ ನಂತರ, ಶೋಧಿಸಿ ಸ್ಟೀಲಿನ ಬಾಟಲಿಗೆ ತುಂಬಿಟ್ಟುಕೊಂಡು, ದಿನವಿಡೀ ಸ್ವಲ್ಪವೇ ಕುಡಿಯುತ್ತಿರಬಹುದು.

ಈರುಳ್ಳಿ

ನೆಗಡಿಯನ್ನು ತಡೆಯುವಲ್ಲಿ ಈರುಳ್ಳಿ ಪರಿಣಾಮಕಾರಿ. ಅದರಲ್ಲೂ ನೆಗಡಿಯಾಗಿ ಕಫ ಕಟ್ಟಿದಂತಾಗಿದ್ದರೆ ಇದರ ಪ್ರಯೋಜನ ಇನ್ನೂ ಹೆಚ್ಚು. ಈರುಳ್ಳಿಯನ್ನು ಹಸಿಯಾಗಿಯೇ ತಿನ್ನಬಹುದು. ಒಂದೊಮ್ಮೆ ಅದು ಸರಿಹೋಗದಿದ್ದರೆ, ಕಷಾಯವನ್ನೂ ಮಾಡಿ ಕುಡಿಯಬಹುದು. ಅದರ ವಿಧಾನ- ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ತೊಳೆದು ದೊಡ್ಡದಾಗಿ ಹೆಚ್ಚಿ. ಒಂದು ದೊಡ್ಡ ಲೋಟ ನೀರಿಗೆ ಅದನ್ನು ಹಾಕಿ, ಸ್ವಲ್ಪ ಕೆಂಪು ಕಲ್ಲುಸಕ್ಕರೆಯೊಂದಿಗೆ ಚೆನ್ನಾಗಿ ಕುದಿಸಿ. ಉಗುರು ಬಿಸಿಯಿರುವಾಗ ನಾಲ್ಕಾರು ಹನಿ ನಿಂಬೆ ರಸದೊಂದಿಗೆ ಇದನ್ನು ಸೇವಿಸಿ.

ಬಿಸಿ ಆವಿ

ಬಿಸಿನೀರಿನ ಆವಿಯು ಕಟ್ಟಿದ ಗಂಟಲು ಮತ್ತು ಮೂಗಿಗೆ ಉತ್ತಮ ಪರಿಹಾರ. ಸುಮ್ಮನೆ ಬಿಸಿನೀರಿನ ಬದಲು ಹೀಗೂ ಮಾಡಬಹುದು. ಅರ್ಧ ಲೀ.ನೀರಿಗೆ ಒಂದು ಮುಷ್ಟಿ ತುಳಸಿ ದಳಗಳು, ಐದಾರು ಪುದೀನಾ ಎಲೆಗಳು, 1/2 ಚಮಚ ಅಜವಾನದ ಕಾಳು, 1/2 ಚಮಚ ಮೆಂತೆ ಬೀಜ ಮತ್ತು 1/2 ಅರಿಶಿನ ಪುಡಿ ಸೇರಿಸಿ 10 ನಿಮಿಷಗಳವರೆಗೆ ಕುದಿಸಿ. ಈ ಜಲದಿಂದ ಬಿಸಿ ಆವಿ ತೆಗೆದುಕೊಂಡರೆ ಉಪಶಮನ ತ್ವರಿತವಾಗುತ್ತದೆ.

ಗಾರ್ಗಲ್:

ಗಂಟಲಿನ ಬಹುತೇಕ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಬೆಚ್ಚಗಿನ ನೀರಿನ ಗಾರ್ಗಲ್‌ ಪ್ರಯೋಜನಕಾರಿ. ಅರ್ಧ ಲೀ. ನೀರಿಗೆ ಒಂದು ಚಮಚ ತುಂಬಾ ಅರಿಶಿನ ಪುಡಿ ಹಾಕಿ ಕುದಿಸಿ. ಈ ನೀರು ಬೆಚ್ಚಗಿರುವಾಗಲೇ ಸ್ವಲ್ಪ ಉಪ್ಪಿನೊಂದಿಗೆ ಗಾರ್ಗಲ್‌ ಮಾಡುವುದು ಪರಿಣಾಮಕಾರಿ. ಇದನ್ನು ದಿನಕ್ಕೆ ಮೂರು ಸಾರಿಯವರೆಗೂ ಮಾಡಬಹುದು.

ವಿಶ್ರಾಂತಿ

ನೆಗಡಿ-ಕೆಮ್ಮುಗಳು ದಾಳಿಯಿಟ್ಟ ಮೇಲೆ ಹೋಗಲು ಆರೆಂಟು ದಿನ ಬೇಕೆಬೇಕು. ಅಲ್ಲಿಯವರೆಗೂ ನಿದ್ದೆಗೆಟ್ಟರೆ ಆರೋಗ್ಯ ಮತ್ತೂ ಹಾಳು. ಇಷ್ಟೆಲ್ಲ ಮನೆಮದ್ದು ಪ್ರಯತ್ನಿಸಿಯೂ ಮೂಗು ಕಟ್ಟಿ, ಉಸಿರಾಡಲಾಗದೆ ರಾತ್ರಿ ನಿದ್ದೆ ಮಾಡಲು ಕಷ್ಟವಾದರೆ, ದಿಂಬು ಎತ್ತರಿಸಿಕೊಳ್ಳಿ. ರೆಕ್ಲೈನರ್‌ ಬಳಸುವ ಅಭ್ಯಾಸವಿದ್ದರೆ, ಅದರಲ್ಲಿ ನಿದ್ದೆ ಮಾಡಲು ಯತ್ನಿಸಿ. ದೇಹಕ್ಕೆ ವಿಶ್ರಾಂತಿ ಅಗತ್ಯ.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Exit mobile version