Site icon Vistara News

Anjeer benefits | ಪೋಷಕಾಂಶಗಳ ಆಗರ ಅಂಜೂರದ 8 ಆರೋಗ್ಯ ಪ್ರಯೋಜನ

anjeer

ಸಾವಿರಾರು ಸಣ್ಣ ಬೀಜದಂಥ ಸಂರಚನೆಗಳಿರುವ, ತಿನ್ನುವುದಕ್ಕೆ ಸಿಹಿಯಾದ, ಮಾನವನ ಚರಿತ್ರೆಯಲ್ಲಿ ತನ್ನದೂ ದೀರ್ಘ ಇತಿಹಾಸ ಹೊಂದಿರುವ ಪುಟ್ಟ ಹಣ್ಣಿದು- ಹೆಸರು ಅಂಜೂರ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸಕಲ ಗುಣಗಣ ಮಣಿ, ಪೌಷ್ಟಿಕಾಂಶದ ಖನಿ. ಕ್ರಿಸ್ತಪೂರ್ವದ ದಿನಗಳಲ್ಲಿ ಈಜಿಪ್ಟ್‌ನ ರಾಣಿಯಾಗಿದ್ದ ಕ್ಲಿಯೋಪಾತ್ರ ಸಹ ಅಂಜೂರ ತಿನ್ನುತ್ತಿದ್ದಳೆಂದು ಪ್ರತೀತಿ. ಹಾಗಾದರೆ ಏನಿದರ ಮಹಿಮೆ? ಇಲ್ಲಿದೆ ಉತ್ತರ-

ತೂಕ ನಿರ್ವಹಣೆ: ಈ ಹಣೆಪಟ್ಟಿಯೊಂದು ಇದ್ದರೆ ಯಾರಿಗೆ ಯಾವ ಆಹಾರವನ್ನಾದರೂ ತಿನ್ನಿಸಬಹುದು ಎಂಬುದು ಹಳೆಯ ವರಸೆ. ಅಂಜೂರದ ವಿಷಯದಲ್ಲಿ ಹಾಗಲ್ಲ; ತೂಕ ನಿಯಂತ್ರಿಸುವಲ್ಲಿ ಒಳ್ಳೆಯ ಪರಿಣಾಮ ಬೀರುವುದು ನಿಜ, ಜೊತೆಗೆ ಉಳಿದ ಪಥ್ಯ-ವ್ಯಾಯಾಮಗಳೂ ಜಾರಿ ಇದ್ದಲ್ಲಿ. ನಾರಿನಂಶ ಹೇರಳವಾಗಿದ್ದು ಸಿಹಿಯೂ ಇರುವುದರಿಂದ, ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಕೊಡುತ್ತವೆ ಈ ಹಣ್ಣುಗಳು. ಇದಲ್ಲದೆ, ತೂಕ ಹೆಚ್ಚಿಸುವಲ್ಲಿಯೂ ಇದರ ಫಲಿತಾಂಶ ಉತ್ತಮವಾಗಿದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸಬೇಕು.

ಮಲಬದ್ಧತೆ ನಿವಾರಣೆ: ಉತ್ತಮ ಪ್ರಮಾಣದಲ್ಲಿ ನಾರಿನಂಶ ಇರುವ ಈ ಹಣ್ಣುಗಳು ಮಲಬದ್ಧತೆ ನಿವಾರಣೆಗೆ ನೆರವಾಗುತ್ತವೆ. ಮೂರು-ನಾಲ್ಕು ಅಂಜೂರಗಳನ್ನು ಚನ್ನಾಗಿ ಅಗಿದು ತಿಂದು, ಬೆಚ್ಚಗಿನ ನೀರನ್ನು ಕುಡಿದರೆ ಸಾಕು, ಹೊಟ್ಟೆ ಸಂತೋಷವಾಗಿರುತ್ತದೆ. ಪೈಲ್ಸ್‌ ಲಕ್ಷಣಗಳನ್ನು ಕಡಿಮೆ ಮಾಡುವಲ್ಲೂ ಇದು ಸಹಕಾರಿ ಎನ್ನಲಾಗಿದೆ.

ಹೃದ್ರೋಗಕ್ಕೆ ತಡೆ: ದೇಹದಲ್ಲಿ ಟ್ರೈಗ್ಲಿಸರೈಡ್‌ ಹೆಚ್ಚಿದಂತೆ ಹೃದ್ರೋಗಗಳ ಸಂಭವ ಹೆಚ್ಚುತ್ತದೆ. ಆದರೆ ಅಂಜೂರದಲ್ಲಿರುವ ಫೀನಾಲ್‌ಗಳು, ಒಮೇಗಾ- ೩ ಮತ್ತು ೬ ಫ್ಯಾಟಿ ಆಮ್ಲಗಳು ಟ್ರೈಗ್ಲಿಸರೈಡ್‌ ಪ್ರಮಾಣವನ್ನು ತಗ್ಗಿಸಬಲ್ಲವು. ಇದಲ್ಲದೆ, ಅಂಜೂರದಲ್ಲಿರುವ ಪೆಕ್ಟಿನ್‌ ಎಂಬ ಕರಗಬಲ್ಲ ನಾರು, ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್‌ ಅಂಶವನ್ನು ಗುಡಿಸಿ ಹಾಕುತ್ತದೆ. ಇದರಿಂದ ನಮ್ಮ ಹೃದಯಾರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಕ್ಯಾನ್ಸರ್‌ ನಿರೋಧಕ: ದೇಹದಲ್ಲಿನ ಮುಕ್ತ ರಾಡಿಕಲ್‌ ಕಣಗಳನ್ನು ನಿರ್ಬಂಧಿಸುವಲ್ಲಿ ಅಂಜೂರ ಪರಿಣಾಮಕಾರಿ. ಮಹಿಳೆಯರಲ್ಲಿ ಋತುಬಂಧದ ನಂತರ ಹಾರ್ಮೋನುಗಳ ಮಟ್ಟ ಕಾಯ್ದುಕೊಳ್ಳಲೂ ಇವು ನೆರವಾಗುತ್ತದೆ. ಹಾಗಾಗಿ ಕೋಲನ್‌ ಮತ್ತು ಸ್ತನ ಕ್ಯಾನ್ಸರ್‌ ನಿರೋಧಿಸುವಲ್ಲಿ ಉತ್ತಮ ಕೆಲಸ ಮಾಡುತ್ತದೆ.

ಇದನ್ನೂ ಓದಿ | Almond benefits | ಬಾದಾಮಿ ಎಷ್ಟು ತಿನ್ನಬೇಕು? ಇಲ್ಲಿದೆ ಉತ್ತರ

ಮಧುಮೇಹಕ್ಕೆ ತಡೆ: ಅಂಜೂರದ ಹಣ್ಣುಗಳು ಮಾತ್ರವಲ್ಲ, ಎಲೆಗೂ ಔಷಧೀಯ ಗುಣಗಳಿವೆ. ಪೊಟಾಶಿಯಂ ಅಧಿಕವಾಗಿರುವ ಈ ಎಲೆಗಳು ದೇಹದಲ್ಲಿ ಸಕ್ಕರೆ ಪ್ರಮಾಣಕ್ಕೆ ಕಡಿವಾಣ ಹಾಕುವಲ್ಲಿ ಗಣನೀಯ ಪಾತ್ರ ವಹಿಸುತ್ತವೆ. ಇದರ ಸೇವನೆಯಿಂದ ಹೆಚ್ಚಿನ ಸರ್ಕಸ್ಸಿಲ್ಲದೆ ನಮ್ಮ ಯಕೃತ್ತನ್ನು ಡಿಟಾಕ್ಸ್‌ ಮಾಡಬಹುದು.

ಅನೀಮಿಯ ಮುಕ್ತ: ನಿಯಮಿತವಾಗಿ ಅಂಜೂರ ಸೇವಿಸುವವರು ಅನೀಮಿಯ ಮುಕ್ತರಾಗಿರಬಹುದು ಎನ್ನುತ್ತದೆ ಆಹಾರ ವಿಜ್ಞಾನ. ಇದರಲ್ಲಿರುವ ಅತ್ಯಧಿಕ ಕಬ್ಬಿಣದಂಶ ದೇಹದಲ್ಲಿನ ಹಿಮೋಗ್ಲೋಬಿನ್‌ ಮಟ್ಟ ಇಳಿಯದಂತೆ ಕಾಪಾಡುತ್ತದೆ.

ಮೂಳೆಗಳ ಆರೋಗ್ಯ: ಈ ಪುಟ್ಟ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ ಖನಿಜಗಳು ಮೂಳೆಗಳ ಸಾಂದ್ರತೆ ಹೆಚ್ಚಿಸಿ, ಪೊಳ್ಳಾಗದಂತೆ ಕಾಪಾಡುತ್ತವೆ. ಅತಿಯಾದ ಉಪ್ಪಿನಂಶ ಸೇವನೆಯಿಂದ ಶರೀರದಿಂದ ಕ್ಯಾಲ್ಸಿಯಂ ಸೋರಿ ಹೋಗುವುದನ್ನು ತಡೆಯುತ್ತದೆ.

ಕೂದಲು-ಚರ್ಮ ರಕ್ಷಣೆ: ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ, ಕಬ್ಬಿಣ, ಎ ಮತ್ತು ಸಿ ಜೀವಸತ್ವಗಳ ಗೋದಾಮಿನಂತಿದೆ ಅಂಜೂರ. ಹಾಗಾಗಿ ನಮ್ಮ ಕೂದಲು, ಚರ್ಮ, ಕಣ್ಣುಗಳ ರಕ್ಷಣೆಗೆ ಇವುಗಳ ನಿಯಮಿತ ಸೇವನೆಯೇ ಸಾಕು. ನಯವಾದ ಕೂದಲ, ನುಣುಪು ಚರ್ಮದ, ಹೊಳಪುಗಣ್ಣಿನವರು ನೀವಾಗಬಹುದು. ಇಷ್ಟು ಕಾರಣಗಳು ಸಾಲದೇ ದಿನಾ ಅಂಜೂರ ತಿನ್ನುವುದಕ್ಕೆ?

ಇದನ್ನೂ ಓದಿ | Avocado benefits | ಹಲವು ಕ್ಯಾನ್ಸರ್‌ಗಳಿಗೆ ಮದ್ದು ಈ ಬೆಣ್ಣೆ ಹಣ್ಣು

Exit mobile version