ಭೂಮಿಯ ಮೇಲಿನ ಎಲ್ಲ ಜೀವಿಗಳೂ ಮಳೆ ಬಂದಾಗ ತಮ್ಮದೇ ಆದ ರೀತಿಯಲ್ಲಿ ಪುಳಕಗೊಳ್ಳುತ್ತವೆ. ಮಳೆಗೆ ಒದ್ದೆಯಾದ ತನ್ನ ರೆಕ್ಕೆಪುಕ್ಕಗಳನ್ನು ಕೆದರುತ್ತಾ, ಮಳೆಯಲ್ಲಿ ಮಿಂದ ಖುಷಿಯನ್ನು ಹಕ್ಕಿಯೊಂದು ಅನುಭವಿಸುವ ಹಾಗೆಯೇ ಗಿಡಮರಗಳು ಇದ್ದಕ್ಕಿದ್ದ ಹಾಗೆ ಪುಟಿದೆದ್ದು ಮಳೆಯ ಸಂತಸವನ್ನು ವ್ಯಕ್ತಪಡಿಸುತ್ತವೆ. ಮಣ್ಣಿನೊಳಗೆ ಹೂತುಹೋಗಿ ಎಷ್ಟೋ ಕಾಲವಾದ ಗಡ್ಡೆಯೊಂದು ಎಷ್ಟು ನೀರೆರೆದರೂ ಚಿಗಿತುಕೊಳ್ಳದಿದ್ದರೂ, ಮಳೆಯೊಂದು ಬಂದ ಕೂಡಲೇ, ಮೆಲ್ಲನೆ ಭುವಿಯ ಬಾಯೊಳಗಿಂದ ಚಿಗುರೊಂದನ್ನು ಹೊರಹಾಕುತ್ತದೆ. ಮಳೆಯ ಚಮತ್ಕಾರ ಅದು. ಪ್ರಕೃತಿ ನಿಯಮ ಇದು. ಬೇಸಿಗೆಯ ಬಿಸಿಲಿಗೆ ಬಾಡುವ ಮೈಮನ ಮಳೆ ಬಂದ ಕೂಡಲೇ ಉಲ್ಲಾಸದಿಂದ ಪುಟಿಯುತ್ತದೆ. ಮಳೆ ಬಂದಾಗ ʻಟಿಪ್ ಟಿಪ್ ಬರ್‌ಸಾ ಪಾನೀ..ʼ ಎಂದು ಹಾಡಿಕೊಂಡು ಮಳೆಯಲ್ಲಿ ನೆನೆಯುತ್ತಾ ಕುಣಿಯಬೇಕೆನಿಸುತ್ತದೆ.
ಇವೆಲ್ಲವೂ ನಿಜ. ಆದರೆ, ಹಲವು ಸಲ, ಎಂಥದ್ದೋ ಗಡಿಬಿಡಿಯಲ್ಲಿ ಎಲ್ಲಿಗೋ ಹೊರಟಾಗಲೋ ಅಥವಾ ಆಫೀಸಿನಿಂದಲೋ ಕಾಲೇಜಿನಿಂದಲೋ ಬರುವಾಗ ಬೇಡವೆಂದರೂ ಮಳೆ ನಮ್ಮನ್ನು ಹೈರಾಣಾಗಿಸಿ ಒದ್ದೆ ಮಾಡುತ್ತದೆ. ಇನ್ನೂ ಕೆಲವೊಮ್ಮೆ ಇಷ್ಟ ಪಟ್ಟು ಮಳೆಯಲ್ಲಿ ನೆನೆಯುತ್ತೇವೆ. ಹೀಗೆ ಮಳೆಗಾಲದಲ್ಲಿ ಬೇಕೋ ಬೇಡವೋ ನೆನೆಯುವುದು ಇದ್ದಿದ್ದೇ. ಆದರೆ, ಸೂಕ್ಷ್ಮ ದೇಹ ಪ್ರಕೃತಿಯ ಮಂದಿಗೆ ಮಳೆಯೊಂದರಲ್ಲಿ ನೆನೆದರೆ ಸಾಕು ಶೀತ, ನೆಗಡಿ ಕೆಮ್ಮು ಅಥವಾ ಜ್ವರವೋ ಗ್ಯಾರೆಂಟಿ. ಹೀಗೆ ಮಳೆಯಲ್ಲಿ ನೆನೆದು ಬಂದಾಗ ಶೀತ, ನೆಗಡಿಯಾಗದಿರಲಿ ಎಂದುಕೊಂಡರೆ ಬಂದ ತಕ್ಷಣ ಮೈ ಒರೆಸಿಕೊಂಡು ಈ ಕೆಳಗಿನ ಪೇಯಗಳಲ್ಲಿ ಯಾವುದಾದರೊಂದನ್ನು ಮಾಡಿಕೊಂಡು ಕುಡಿಯಿರಿ. ಇವೇ ಆಗಬೇಕೆಂದೇನಿಲ್ಲ. ಮಳೆಯ ಖುಷಿಯನ್ನು ಅನುಭವಿಸಿದ ಮೇಲೋ, ಮಳೆಯಲ್ಲಿ ನೆನೆದು ಬಂದ ಕೂಡಲೇ ಏನಾದರೊಂದು ಬಿಸಿಬಿಸಿಯಾಗಿ ಕುಡಿಯಿರಿ. ಆಗ ನೀವು ಶೀತ, ನೆಗಡಿಯಾಗುವ ಭಯ ಪಡಬೇಕಿಲ್ಲ.
1. ಮಸಾಲೆ ಚಹಾ: ಚಕ್ಕೆ ಅಥವಾ ದಾಲ್ಚಿನಿ, ನಕ್ಷತ್ರ ಸೋಂಪು, ಏಲಕ್ಕಿ, ಒಣಶುಂಠಿ, ಲವಂಗ ಸೇರಿಸಿ ಕುಟ್ಟಿ ಪುಡಿ ಮಾಡಿ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟುಕೊಂಡರೆ ಈ ಮಸಾಲೆಯನ್ನು ಬೇಕಾದಾಗಲೆಲ್ಲ ಚಹಾಕ್ಕೆ ಬಳಸಬಹುದು. ಮಸಾಲೆ ಮಾಡಿಟ್ಟುಕೊಂಡದ್ದು ಇಲ್ಲದಿದ್ದರೆ, ಈ ಎಲ್ಲ ವಸ್ತುಗಳನ್ನು ಚಿಟಿಕೆಯಷ್ಟು ಹಾಕಬಹುದು. ನೀವು ಹಾಲು ಹಾಕಿದ ಚಹಾವನ್ನು ಮಾಡುವ ವಿಧಾನದಲ್ಲೇ ಚಹಾ ಮಾಡುವಾಗ, ಈ ಮಸಾಲೆಯನ್ನು ಸೇರಿಸಿದರೆ ಅದ್ಭುತವಾದ ಮಸಾಲೆ ಚಹಾವನ್ನು ಕುಡಿಯಬಹುದು. ಮಳೆಯಲ್ಲಿ ಒದ್ದೆಯಾಗಿ ಗುಬ್ಬಿ ಮರಿಯಂತೆ ಮನೆಗೆ ಬಂದ ನಿಮ್ಮ ಮೈಮನವೆಲ್ಲ ಬೆಚ್ಚಗಾಗಿ ಒಂದು ಬಗೆಯ ನೆಮ್ಮದಿ ಸಿಗುತ್ತದೆ. ಬಿಸಿಬಿಸಿಯಾಗಿಯೇ ಕುಡಿದರೆ ಪರಿಣಾಮ ಹೆಚ್ಚು. ಶೀತ ನೆಗಡಿ ಹತ್ತಿರ ಸುಳಿಯದು.
2. ಮಸಾಲೆ ಕಾಫಿ: ನಿಮಗೆ ಚಹಾ ಕುಡಿದು ಅಭ್ಯಾಸವಿಲ್ಲದಿದ್ದರೆ, ಮಸಾಲೆ ಕಾಫಿಯನ್ನೂ ಮಾಡಿಕೊಳ್ಳಬಹುದು. ಕಾಫಿಗೂ ಮಸಾಲೆಯೇ ಎಂದು ಹುಬ್ಬೇರಿಸಬೇಡಿ. ಹೌದು, ಇದೆ. ಕಾಫಿ ಪುಡಿಗೆ ಸ್ವಲ್ಪ ಚಮಚ ಏಲಕ್ಕಿ ಪುಡಿ ಹಾಗೂ ಒಣಶುಂಠಿ ಪುಡಿ ಸೇರಿಸಿ. ಅದಕ್ಕೆ ಬಿಸಿನೀರು ಹೊಯ್ದು ಫಿಲ್ಟರ್ ಆಗಲು ಪಕ್ಕದಲ್ಲಿಡಿ. ಇದಕ್ಕೆ ಒಂದು ಗಂಟೆಯಾದರೂ ಬೇಕು. ಈಗ ಪ್ರತ್ಯೇಕ ಪಾತ್ರೆಯಲ್ಲಿ ಹಾಲು ಕುದಿಯಲು ಇಡಿ. ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ. ಬಿಸಿಬಿಸಿಯಾದ ಹಾಲನ್ನು ಬೇಕಾದಷ್ಟು ಡಿಕಾಕ್ಷನ್ ತೆಗೆದುಕೊಂಡು ಅದಕ್ಕೆ ನಿಮ್ಮ ಹದಕ್ಕೆ ಸರಿಯಾಗಿ ಬೇಕಾಗುವಷ್ಟು ಸುರಿದುಕೊಳ್ಳಿ. ಈ ಕಾಫಿಗೆ ಮೇಲಿನಿಂದ ಕ್ರೀಮ್ ಕೂಡಾ ವಿಪ್ ಮಾಡಿ ಹಾಕಬಹುದು ಅಥವಾ ಹಾಕದೆಯೂ ಇರಬಹುದು. ಬಿಸಿಬಿಸಿ ಕಾಫಿ ಹಾಗೆಯೇ ಹೀರಿಕೊಳ್ಳಿ. ಇನ್ಸ್‌ಟಾಂಟ್ ಕಾಫಿ ಮಾಡುವುದಾದರೆ ಸ್ವಲ್ಪ ನೀರಿನಲ್ಲಿ ಏಲಕ್ಕಿ ಹಾಗೂ ಚಿಟಿಕೆ ಒಣಶುಂಠಿಯನ್ನು ಕುದಿಸಿಕೊಂಡು, ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಹಾಲು ಕುದಿಸಿಕೊಂಡು ಕಾಫಿ ಪುಡಿಗೆ ಇವೆರಡನ್ನೂ ಸೇರಿಸಿಕೊಳ್ಳಬಹುದು.
3. ಕಷಾಯಗಳು: ನೀವು ಕಾಫಿ ಚಹಾ ಪ್ರಿಯರಲ್ಲದಿದ್ದರೆ, ಅರಿಶಿನ ಹಾಲನ್ನೂ ಕುಡಿಯಬಹುದು. ಆದರೆ ಬಿಸಿಬಿಸಿಯಾಗಿ ಕುಡಿಯುವುದ ಮುಖ್ಯ. ಒದ್ದೆಯಾಗಿ ಮನೆಗೆ ಬಂದ ತಕ್ಷಣ ಬಿಸಿ ಹಾಲು ಕುದಿಸಿ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಹಾಕಿಕೊಂಡು ಕುದಿಸಿ ಕುಡಿಯಬಹುದು. ಇದೂ ಕೂಡಾ, ಶೀತ ನೆಗಡಿ ಬರದಂತೆ ಮೊದಲೇ ನಮ್ಮನ್ನು ರಕ್ಷಿಸುತ್ತದೆ. ಇದು ಅತ್ಯುತ್ತಮ ಉಪಾಯ. ಇದೂ ಬೇಡವೆಂದರೆ ಕರಿಮೆಣಸು, ಶುಂಠಿ ಹಾಕಿ ಮಾಡಿದ ಕಷಾಯವನ್ನೂ ಕುಡಿಯಬಹುದು. ಜೀರಿಗೆ ಕೊತ್ತಂಬರಿ ಪುಡಿಯನ್ನು ಕುದಿಸಿಕೊಂಡು ಹಾಲು ಬಿಸಿ ಮಾಡಿ ಅದಕ್ಕೆ ಸೇರಿಸಿಯೂ ಕಷಾಯ ಮಾಡಿ ಕುಡಿಯಬಹುದು. ವೀಳ್ಯದೆಲೆ ನಿಮ್ಮಲ್ಲಿದೆಯೆಂದಾರೆ ಬೇರೆ ಚಿಂತೆಯೇ ಬೇಡ. ಒಂದು ಪುಟ್ಟ ವೀಳ್ಯದೆಲೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿಕೊಂಡು ಸೋಸಿಕೊಳ್ಳಿ. ಈ ಚಹಾಕ್ಕೆ ನಿಂಬೆರಸ ಹಿಂಡಿಕೊಂಡು ಕುಡಿಯಬಹುದು. ಕೆಮ್ಮು, ನೆಗಡಿ ಹತ್ತಿರ ಸುಳಿಯದು. ಮತ್ಯಾಕೆ ಚಿಂತೆ, ಮಳೆಯ ತಾಜಾತನವನ್ನೂ ಅನುಭವಿಸಿಕೊಂಡು ಬೆಚ್ಚಗಿರಿ!
ಇದನ್ನೂ ಓದಿ: Healthy Monsoon Drinks: ಜಿಟಿಜಿಟಿ ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಟ್ಟು ರೋಗನಿರೋಧಕತೆ ಹೆಚ್ಚಿಸುವ ಪೇಯಗಳಿವು!